

ಒಂದು ಮನೆಯಲ್ಲಿ ಹೇಗೆ ಬದುಕಬೇಕು? ಸದಸ್ಯರ ನಡಾವಳಿಗಳು ಹೇಗಿರಬೇಕು? ಎನ್ನುವುದಕ್ಕೆ ನಿಯಮಗಳಿರುತ್ತವೆ. ಒಂದು ಕುಟುಂಬದಲ್ಲಿ ಕೂಡ ಅಲಿಖಿತ ನಿಯಮಗಳು ಜಾರಿಯಲ್ಲಿರುತ್ತವೆ. ಸಮಾಜ, ಊರು, ರಾಜ್ಯ, ದೇಶದಲ್ಲಿ ಸಹ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ. ಕೆಲವು ಲಿಖಿತ ಮತ್ತು ಅವುಗಳನ್ನು ಪಾಲಿಸದಿದ್ದರೆ ದಂಡ ಹಾಕಲಾಗುತ್ತದೆ. ದೊಡ್ಡ ತಪ್ಪುಗಳಿಗೆ ಜೈಲು ಶಿಕ್ಷೆ ಕೂಡ ಇರುತ್ತದೆ. ಇವೆಲ್ಲವೂ ದೊಡ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಮತ್ತು ವ್ಯವಸ್ಥೆ ಸರಿಯಾಗಿ ತೊಂದರೆಯಿಲ್ಲದೆ ನಡೆದುಕೊಂಡು ಹೋಗಲು ಸಹಕಾರಿ.
ಇನ್ನಷ್ಟು ಅಲಿಖಿತ ನಿಯಮಗಳಿರುತ್ತವೆ. ಅವುಗಳನ್ನು ಸಮಾಜ ಸೃಷ್ಟಿ ಮಾಡಿಕೊಂಡಿರುತ್ತದೆ. ಅದನ್ನು ತಲೆತಲಾಂತರದಿಂದ ಪಾಲಿಸಕೊಂಡು ಬಂದಿರುತ್ತಾರೆ. ಹೀಗಾಗಿ ಅವು ಕೂಡ ಪಾಲನೆಯಾಗುತ್ತವೆ. ಇವೆಲ್ಲವೂ ಆರೋಗ್ಯಕರ ಸಮಾಜಕ್ಕೆ ಅವಶ್ಯಕ. ಇವುಗಳನ್ನು ತಪ್ಪಿದಲ್ಲಿ ದಂಡ, ಜೈಲು, ಸಾಮಾಜಿಕ ಬಹಿಷ್ಕಾರ ಜಾರಿಯಲ್ಲಿವೆ.
ಇದೆ ರೀತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಆಗುತ್ತದೆ. ಅಂತರರಾಷ್ಟ್ರೀಯ ಕಚ್ಚಾಟಗಳನ್ನು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಇಂಟರ್ನ್ಯಾಷನಲ್ ಕೋರ್ಟು, ಎಲ್ಲರ ಸಹಾಯಕ್ಕೆ ವರ್ಲ್ಡ್ ಬ್ಯಾಂಕು, ದೇಶಗಳ ನಡುವೆ ಸಂಯಮ ಕಾಪಾಡಲು ಯುನೈಟೆಡ್ ನೇಶನ್, ಆರೋಗ್ಯದ ಕಾಳಜಿಗೆ ವರ್ಲ್ಡ್ ಹೆಲ್ತ್ ಆರ್ಗನೈಸಷನ್ ಹೀಗೆ ಹತ್ತಾರು ಸಂಸ್ಥೆಗಳಿವೆ. ಎಲ್ಲವೂ ಒಂದು ನಿಗದಿತ ಫ್ರೇಮ್ ವರ್ಕಿನಲ್ಲಿ ಸಾಗುತ್ತಿದ್ದರೆ ಇವೆಲ್ಲಕ್ಕೂ ಒಂದು ಮೌಲ್ಯವಿರುತ್ತದೆ. ಆದರೆ ದಶಕಗಳಿಂದ ಇವುಗಳ ಮೇಲೆ ಅಮೇರಿಕಾ ಬೇರೆ ರೀತಿಯ ನಿಯಂತ್ರಣವನ್ನು ಹೊಂದಿರುವುದು ಗೊತ್ತಿರುವ ವಿಷಯ. ತನಗೆ ಬೇಕಾದದ್ದು ಮಾಡಿ ಅಧಿಕೃತ ಮುದ್ರೆಯನ್ನು ಒತ್ತಿಸಿಕೊಳ್ಳುತಿತ್ತು. ಆದರೆ ವಾರದ ಹಿಂದೆ ಈ ಎಲ್ಲಾ ಸಂಸ್ಥೆಗಳು, ಕಾನೂನು ಎಲ್ಲವೂ ನನಗೆ ಲೆಕ್ಕಕ್ಕಿಲ್ಲ ಎನ್ನುವಂತೆ ವೆನಿಜುವೆಲಾ ದೇಶದ ಮೇಲೆ ಅತಿಕ್ರಮಣ ಮಾಡಿ ಆ ದೇಶದ ಅಧ್ಯಕ್ಷನನ್ನು ಕಿಡ್ನಾಪ್ ಮಾಡಿಕೊಂಡು ಬಂದಿದೆ. ಹೀಗಾಗಿ ಜಾಗತಿಕ ಕಾನೂನು ಎನ್ನುವ ಸರಪಳಿ ತುಂಡಾಗಿದೆ. ಈಗ ಬಲಿಷ್ಠ ರಾಷ್ಟ್ರಗಳು ತಮಗಿಷ್ಟ ಬಂದ ಸಣ್ಣಪುಟ್ಟ ರಾಷ್ಟ್ರಗಳ ಮೇಲೆ ದಾಳಿ ಮಾಡಿ ಅವುಗಳನ್ನು ಕಬಳಿಸಲು ಅಮೇರಿಕಾ ತನ್ನ ನಡವಳಿಕೆಯಿಂದ ದಾರಿ ಮಾಡಿಕೊಟ್ಟಿದೆ.
ಇದರ ಮಾದರಿಯನ್ನು ಅನುಸರಿಸಿದರೆ ರಷ್ಯಾ, ಉಕ್ರೈನ್ ದೇಶವನ್ನು ಪೂರ್ಣ ಕಬಳಿಸಬಹುದು ಮತ್ತು ಹಳೆಯ ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ ಎಲ್ಲಾ ದೇಶಗಳನ್ನು ತನ್ನದು ಎನ್ನಬಹುದು. ನೆನಪಿರಲಿ ರಷ್ಯಾ ವಿಶ್ವದ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದಿದೆ. ಪರಮಾಣು ಅಸ್ತ್ರವನ್ನು ಕೂಡ ಹೊಂದಿದೆ. ಇನ್ನು ಚೀನಾ ಸದಾ ತಾನು ಬಯಸುವ ತೈವಾನ್ ದೇಶವನ್ನು ಕ್ಷಣ ಮಾತ್ರದಲ್ಲಿ ತನ್ನದಾಗಿಸಿಕೊಳ್ಳಬಹುದು. ಇಸ್ರೇಲ್ ಇದೆ ಸಮಯವನ್ನು ಬಳಸಿಕೊಂಡು ಇರಾನ್ ಮೇಲೆ ದಾಳಿ ಮಾಡಿ ಅವರನ್ನು ಮತ್ತು ಪ್ಯಾಲಿಸ್ತೇನ್ ಗಳನ್ನೂ ಪೂರ್ಣವಾಗಿ ತಣ್ಣಗಾಗಿಸಿಬಿಡಬಹುದು. ಇಂತಹ ಘಟನೆಗಳು ನಡೆಯುವಾಗ ಬೇರೆ ದೊಡ್ಡ ದೇಶಗಳು ಮಧ್ಯ ಪ್ರವೇಶಿಸದೆ ಇದ್ದರೆ ಆಗ ಅದು ವಿಶ್ವ ಯುದ್ಧಕ್ಕೆ ತಿರುಗುವುದಿಲ್ಲ. ಯಾರೊಬ್ಬರು ಇನ್ನೊಬ್ಬರ ಮಧ್ಯೆ ಬಂದರೂ ಅದು ವಿಶ್ವ ಯುದ್ಧಕ್ಕೆ ತಿರುಗುವುದು ತಪ್ಪಿಸಲಾಗುವುದಿಲ್ಲ.
ಇಂತಹ ಸಾಧ್ಯತೆಗಳ ನಡುವೆ ಡೊನಾಲ್ಡ್ ಟ್ರಂಪ್ ನಿನ್ನೆ ಅಂದರೆ 7/01/2026 ರಂದು ಡೆನ್ಮಾರ್ಕಿನ ಅಧ್ಯಕ್ಷರಿಗೆ ಕರೆ ಮಾಡಿ ಗ್ರೀನ್ ಲ್ಯಾಂಡ್ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ. ಡೆನ್ಮಾರ್ಕ್ ಅಧ್ಯಕ್ಷೆ ಅದು ಸಾಧ್ಯವಿಲ್ಲ ಎನ್ನುವ ಮಾತನ್ನು ಆಡಿದ್ದಾರೆ. ಇದರ ಜೊತೆಗೆ ಅಮೆರಿಕಾವನ್ನು ತಮ್ಮ ದೇಶದ ನ್ಯಾಷನಲ್ ಇಂಟರೆಸ್ಟ್ ವಿರೋಧಿ ಎಂದು ಕೂಡ ಘೋಷಿಸಿದ್ದಾರೆ. NATO ಸ್ಥಾಪಕ ದೇಶಗಳಲ್ಲಿ ಒಂದಾದ ಡೆನ್ಮಾರ್ಕ್ ಪರಿಸ್ಥಿತಿ ಹೀಗಾಗಿದೆ. ಇದರರ್ಥ ಡೊನಾಲ್ಡ್ ಟ್ರಂಪಿಗೆ ನಮ್ಮವರು, ಬೇರೆಯವರು ಎನ್ನುವ ಯಾವ ವ್ಯತ್ಯಾಸವೂ ಇಲ್ಲ. ಅಲ್ಲಿ ಕಾಣುವುದು ಕೇವಲ ಲಾಭ. ಅದರಲ್ಲೂ ತನ್ನ ಸಂಸ್ಥೆಗಳು ಮತ್ತು ತನ್ನ ಹಿಂದಿರುವ ಬಂಡವಾಳಶಾಹಿಗಳ ಹಣವನ್ನು ದುಪ್ಪಟ್ಟು ಗೊಳಿಸುವ ಹುನ್ನಾರ ಬಿಟ್ಟು ಬೇರೇನೂ ಕಾಣುತ್ತಿಲ್ಲ.
ಡೊನಾಲ್ಡ್ ಟ್ರಂಪ್ ನ ಈ ನಡವಳಿಕೆಯಿಂದ NATO ಒಕ್ಕೊಟ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ. ಯೂರೋಪಿಯನ್ ಒಕ್ಕೊಟದಲ್ಲಿ ತಳಮಳ ಹೆಚ್ಚಾಗಿದೆ. ಜರ್ಮನಿ ಸರಕಾರ ತುರ್ತು ಸಭೆ ಕರೆದು ತನ್ನ ಡಿಫೆನ್ಸ್ ಬಜೆಟ್ ಹೆಚ್ಚು ಮಾಡಿದೆ. ಫ್ರಾನ್ಸ್ ಈ ವರ್ಷ ಯುದ್ಧವಾಗುವುದು ಗ್ಯಾರಂಟಿ, ದೊಡ್ಡ ಪ್ರಮಾಣದ ಸಾವುನೋವುಗಳಿಗೆ, ಮಕ್ಕಳನ್ನು ಕಳೆದುಕೊಳ್ಳಲು ಸಿದ್ಧರಾಗಿರಿ ಎಂದು ತನ್ನ ನಾಗರಿಕರಿಗೆ ಓಪನ್ ಆಗಿ ಹೇಳಿದೆ. ಸ್ಕ್ಯಾಂಡಿನೇವಿಯನ್ ದೇಶಗಳು ಕೂಡ ಪೂರ್ಣ ಅಲರ್ಟ್ ಸ್ಥಿತಿಯಲ್ಲಿವೆ. ಬಹುತೇಕ ಯೂರೋಪಿಯನ್ ದೇಶಗಳು ತನ್ನ ಪ್ರಜೆಗಳಿಗೆ ಯುದ್ಧವಾದರೆ ಹೇಗೆ ನಡೆದುಕೊಳ್ಳಬೇಕು, ಯುದ್ಧದ ಸಮಯದಲ್ಲಿ ಪ್ರಜೆಗಳು ಪಾಲಿಸಬೇಕಾದ ನಿಯಮಗಳೇನು ಎನ್ನುವುದನ್ನು ವಿತರಿಸಲು ಶುರು ಮಾಡಿವೆ. ಸಾಕಷ್ಟು ದೇಶಗಳು ಈಗಾಗಲೇ 30/20/15 ಪುಟಗಳ ನಿಯಮಾವಳಿಗಳನ್ನು ಬಿಡುಗಡೆ ಮಾಡಿವೆ.
ಮೂರನೇ ವಿಶ್ವ ಯುದ್ಧ ಯಾವ ಕ್ಷಣದಲ್ಲಿ ಕೂಡ ಶುರುವಾಗಬಹುದು ಎನ್ನವುದಕ್ಕೆ ಮೇಲಿನ ಕೆಲವು ಅಂಶಗಳು ಪುಷ್ಟಿ ನೀಡುತ್ತವೆ. ಇದರ ಜೊತೆಗೆ ವೆನಿಜುವೆಲಾ ದೇಶದಲ್ಲಿ ಚೀನಾ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿದೆ. ರಸ್ತೆಗಳು, ಬಂದರು ಹೀಗೆ ಅಲ್ಲಿನ ಮೂಲ ಸೌಕರ್ಯಕ್ಕೆ ಅಷ್ಟೊಂದು ಹಣವನ್ನು ಸುರಿದು, ವಾರ್ಷಿಕ ಇಷ್ಟು ಬಡ್ಡಿ ನೀಡಬೇಕು ಎನ್ನುವ ಒಪ್ಪಂದವನ್ನು ಮಾಡಿಕೊಂಡಿತ್ತು. ಇದೀಗ ಬಡ್ಡಿ ಮತ್ತು ಅಸಲು ಎರಡೂ ಸಂಶಯ ಎನ್ನುವ ಪರಿಸ್ಥಿತಿ ಉಂಟಾಗಿದೆ. ಚೀನಾ ಸುಮ್ಮನೆ ಕೂರುವುದಿಲ್ಲ. ಅದು ಸೌತ್ ಅಮೆರಿಕನ್ ದೇಶಗಳ ಜೊತೆಗೆ ಮೀಟಿಂಗ್ ಮಾಡುತ್ತಿದೆ. ತನ್ನ ಯುದ್ಧ ವಿಮಾನಗಳನ್ನು ವೆನಿಜುವೆಲಾಗೆ ಕಳುಹಿಸಿ ಕೊಟ್ಟಿದೆ. ಚೀನಾದ ಮಿತ್ರ ರಷ್ಯಾ ಕೂಡ ಆಗಲೇ ಪರಮಾಣು ಸಿಡಿಮದ್ದು ಹೊತ್ತ ಸಬ್ ಮೆರೀನ್ ಗಳನ್ನು ವೆನಿಜುವೆಲಾಕ್ಕೆ ಕಳುಹಿಸಿ ಕೊಟ್ಟಿದೆ, ಈ ಸಬ್ ಮೆರೀನ್ ಗಳು ಅಲ್ಲಿಂದ ಹೊರಡುವ ತೈಲ ಹೊತ್ತ ಹಡಗುಗಳಿಗೆ ರಕ್ಷಣೆ ನೀಡುತ್ತಿದೆ. ಚೀನಾ ಮತ್ತು ರಷ್ಯಾ ಈ ಮೂಲಕ ನೇರವಾಗಿ ಅಮೆರಿಕಾವನ್ನು ಯುದ್ಧಕ್ಕೆ ಆಹ್ವಾನಿಸುತ್ತಿವೆ. ಅಮೇರಿಕಾ ವೆನಿಜುವೆಲಾದ ಅಧ್ಯಕ್ಷನನ್ನು ಸೆರೆ ಹಿಡಿದಿರಬಹುದು, ಆದರೆ ಚೀನಾ ಅಲ್ಲಿಂದ ತೈಲವನ್ನು ಅಭಾದಿತವಾಗಿ ಸಾಗಿಸುತ್ತಿದೆ. ರಷ್ಯನ್ ಸಬ್ ಮೆರೀನ್ ಗಳು ರಕ್ಷಣೆ ನೀಡುತ್ತಿವೆ.
ನಿಧಾನವಾಗಿ ಒಂದೊಂದು ದೇಶಗಳು ಒಂದೊಂದು ಕಡೆಗೆ ವಾಲುತ್ತಿವೆ. ಅದು ಸಹಜ . ಭಾರತ ಮಾತ್ರ ಎಲ್ಲೆಡೆ ಸಮಾನ ಅಂತರ ಕಾಯ್ದುಕೊಳ್ಳುತ್ತಿದೆ. ಯಾವುದೇ ದೇಶದ ಪರ ಅಥವಾ ವಿರೋಧ ಹೇಳಿಕೆ ನೀಡುವುದು ಅಥವಾ ಜೊತೆಗೆ ನಿಲ್ಲುವುದು ಭಾರತದ ಆಂತರಿಕ ಬೆಳವಣಿಗೆಗೆ ಒಳ್ಳೆಯದಲ್ಲ. ನಾವಿನ್ನೂ ಬೆಳವಣಿಗೆಯ ಹಂತದಲ್ಲಿದ್ದೇವೆ. ಚೀನಾ ಬಳಿ ರೇರ್ ಅರ್ಥ್ ಮೆಟಿರಿಯಲ್ ಇದೆ. ಅದನ್ನು ನೀಡುವುದಿಲ್ಲ ಎಂದರೆ ಅಮೇರಿಕಾ ಸ್ಥಬ್ದವಾಗುತ್ತದೆ. ಅದರ ಬಳಿ ಅಷ್ಟರ ಮಟ್ಟಿನ ಲಿವರೇಜ್ ಇದೆ. ಇನ್ನು ರಷ್ಯಾ ಮಿಲಿಟರಿ ಬಲಾಢ್ಯ ದೇಶ. ಇಸ್ರೇಲ್ ಅಮೇರಿಕಾದಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೊಂದಿದೆ. ಅಲ್ಲದೆ ಅದು ತಂತ್ರಜ್ಞಾನದಲ್ಲಿ ಮುಂದುವರಿದೆ. ಹೀಗೆ ಎಲ್ಲಾ ದೊಡ್ಡ ದೇಶಗಳು ಒಂದು ಕಡೆ ವಾಲುತ್ತಿವೆ, ಏಕೆಂದರೆ ಅವುಗಳ ಬಳಿ ಅದನ್ನು ಅರಗಿಸಿಕೊಳ್ಳುವ ಶಕ್ತಿಯಿದೆ. ಇನ್ನು ಪುಟ್ಟ ದೇಶಗಳು ಎಲ್ಲಾದರೂ ಒಂದು ಕಡೆ ಆಶ್ರಯ ಪಡೆದುಕೊಳ್ಳಬೇಕು, ಬೇರೆ ದಾರಿಯಿಲ್ಲ. ಭಾರತ ಮಾತ್ರ ಎತ್ತಕಡೆಯೂ ನಿಖರವಾಗಿ ಹೋಗಲಾಗದ ಸ್ಥಿತಿಯಲ್ಲಿದೆ.
ಭಾರತ ಈ ರೀತಿ ಅಂತರ ಕಾಯ್ದು ಕೊಳ್ಳುವುದರಲ್ಲಿ ಹೆಚ್ಚಿನ ಲಾಭವಿದೆ. ಅಕಸ್ಮಾತ್ ಈ ಘಟನೆಗೆಳು ಮೂರನೇ ವಿಶ್ವ ಯುದ್ಧಕ್ಕೆ ತಿರುಗಿದರೆ ಆಗ ಭಾರತದ ಈ ನಿಲುವು ಭಾರತದ ಪ್ರಜೆಗಳ ಹಿತ ದೃಷ್ಟಿಯಿಂದ ಅತ್ಯುತ್ತಮ ಎನ್ನಿಸಿಕೊಳ್ಳುತ್ತದೆ.
ಸರಿ ಇಷ್ಟೆಲ್ಲಾ ಏಕೆ ಆಗುತ್ತಿದೆ ಎನ್ನುವುದನ್ನು ನೀವು ಕೇಳಿದರೆ ನಂಬುವುದಿಲ್ಲ. ಇಷ್ಟೆಲ್ಲಾ ಆಗುತ್ತಿರುವುದಕ್ಕೆ 'ಸಾಲ' ಕಾರಣ. ಹೌದು ಅಮೇರಿಕಾ ತೀರಿಸಲಾಗದ ಸಾಲ ಮಾಡಿಕೊಂಡಿದೆ. ಪ್ರತಿ ವರ್ಷ ತನ್ನ ದೇಶವನ್ನು ನಡೆಸಲು ಬೇಕಾಗುವ ಟ್ರಿಲಿಯನ್ ಗಟ್ಟಲೆ ಹಣವನ್ನು ಅದು ಬಾಂಡ್ ಮಾರಾಟದ ಮೂಲಕ ಪಡೆದುಕೊಳ್ಳುತ್ತಿತ್ತು. ಬೇರೆ ದೇಶಗಳು ಅದನ್ನು ಕೊಳ್ಳುತ್ತಿದ್ದವು. ವಾಪಸ್ಸು ಕೊಡುವ ಸಮಯದಲ್ಲಿ ಬೇಕಾಬಿಟ್ಟಿ ಡಾಲರ್ ಪ್ರಿಂಟ್ ಮಾಡಿ ವಾಪಸ್ಸು ನೀಡುತ್ತಿದ್ದರು. ಹೀಗೆ ಸುಮ್ಮನೆ ಪ್ರಿಂಟ್ ಮಾಡುವ ಡಾಲರಿಗೆ ಕವಡೆ ಕಾಸಿಗೂ ಬೆಲೆಯಿಲ್ಲ, ನಾವು ಮೂರ್ಖರಾದೆವು ಎನ್ನುವುದು ಗೊತ್ತಾಗುತ್ತಿದಂತೆ ಡಾಲರಿಗೆ ಬದಲಿ ಹಣವನ್ನು ಹುಡುಕಲು ವಿಶ್ವ ಸಿದ್ಧವಾಯ್ತು. ಅಮೇರಿಕಾ ಬಳಿ ಜಗತ್ತಿನ ಮೇಲೆ ಹುಕುಮತ್ತು ನಡೆಸಲು ಇರುವ ಆಯುಧ ಡಾಲರ್ . ಅದನ್ನೇ ಕಿತ್ತುಕೊಂಡರೆ ಅದು ನಿರಾಯುಧವಾಗುತ್ತದೆ. ಹೀಗಾಗಿ ಅದು ತನ್ನ ಅಸ್ತಿತ್ವದ ಉಳಿವಿಗೆ ಅಂತಿಮ ಹೋರಾಟವನ್ನು ಶುರುವಿಟ್ಟು ಕೊಂಡಿದೆ. ಒಟ್ಟಾರೆ ವಿಶ್ವ ಶಾಂತಿಯನ್ನು ಅದು ಕದಡುತ್ತಿದೆ.
ಕೊನೆಮಾತು: ಭಾರತದ ಅಲಿಪ್ತ ನೀತಿ ಒಂದರ್ಥದಲ್ಲಿ, ಈ ಸಮಯಕ್ಕೆ ಸರಿಯಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಭಾರತ ಕೂಡ ಯಾವುದಾದರೊಂದು ಪಕ್ಷದ ಕಡೆಗೆ ವಾಲಬೇಕಾಗುತ್ತದೆ. ಪೂರ್ಣವಾಗಿ ಅಲ್ಲದಿದ್ದರೆ, ತನ್ನ ನೆಲದಲ್ಲಿ ಫೈಟರ್ ಜೆಟ್ ಇತ್ಯಾದಿಗಳಿಗೆ ಇಂಧನ ತುಂಬಿಸುವುದು, ಲಾಜಿಸ್ಟಿಕ್ ಸಪ್ಪೋರ್ಟ್ ನೀಡುವುದು ಮಾಡಬೇಕಾಗುತ್ತದೆ. ಅಂತಹ ದಿನ ಬಾರದಿರಲಿ. ಆದರೆ ಅಂತಹ ದಿನಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಭಾರತ ಇರಾನಿಗೆ ಪ್ರಯಾಣ ಮಾಡುವುದು ಬೇಡ ಎಂದು ತನ್ನ ನಾಗರಿಕರಿಗೆ ಟ್ರಾವೆಲ್ ಆಡ್ವೈಸರಿ ಹೊರಡಿಸಿದೆ. ಇಸ್ರೇಲ್ ರಷ್ಯಾದ ಅಧ್ಯಕ್ಷರಿಗೆ ಕರೆ ಮಾಡಿ ಇರಾನಿಗೆ ಸುಮ್ಮನಿರುವಂತೆ, ಪ್ರಚೋದನೆ ಮಾಡದಂತೆ ಇರಲು ಹೇಳಿ ಎಂದಿದೆ. ಇರಾನ್ ಯುದ್ಧ ಶುರು ಮಾಡಿದರೆ ಅದರ ಪರಿಣಾಮ ಘನಘೋರ ವಾಗಿರುತ್ತದೆ ಎಚ್ಚರ ಎನ್ನುವ ಮಾತನ್ನೂ ಸೇರಿಸಿದೆ. ಒಟ್ಟಾರೆ ಮೂರನೇ ವಿಶ್ವಯುದ್ಧದ ಕಿಡಿ ಎಲ್ಲಿಂದ, ಯಾವ ದೇಶದಿಂದ ಶುರುವಾಗಲಿದೆ ಎನ್ನುವುದಷ್ಟೆ ಬಾಕಿಯಿದೆ. ಡಿಪ್ಲೊಮೆಸಿ, ಮಾತುಕತೆಯಿಂದ ಜಗತ್ತು ಬಹುದೂರ ಸಾಗಿಬಂದಿದೆ.
Advertisement