

ದಿನ ನಿತ್ಯದ ಬದುಕಿನಲ್ಲಿ ನಾವೆಷ್ಟು ಬ್ಯುಸಿ ಎಂದರೆ ಅವಶ್ಯಕವಾಗಿ ಮಾಡಬೇಕಾದ ಕೆಲಸಗಳ ಬಗ್ಗೆಯೂ ಅಸಡ್ಡೆ , ಅಥವಾ ಸಮಯವಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ಮಾಡದೆ ಗುಡ್ಡೆ ಹಾಕಿಕೊಂಡು ಕುಳಿತು ಬಿಟ್ಟಿರುತ್ತೇವೆ. ಇನ್ನು ಬದುಕಿನ ಯಾವುದೂ ಒಂದು ಹಂತದಲ್ಲಿ ಬೇಕಾಗುಬಹುದಾದ ಅಂಶಗಳ ಬಗ್ಗೆ ನಮಗೆ ಆಲೋಚನೆ ಕೂಡ ಬಂದಿರುವುದಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವ ಹಾಗೆ ನಾವು ಅವತ್ತಿಗೆ ಪರದಾಡಲು ಶುರು ಮಾಡುತ್ತೇವೆ. ಅದು ಇನ್ನೊಂದು ರೀತಿಯ ಒತ್ತಡಕ್ಕೂ ಕಾರಣವಾಗುತ್ತದೆ. ಇದರ ಬದಲು ಒಂದಷ್ಟು ಸಮಯ ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
ನಿಮಗೆಲ್ಲಾ ಒಂದು ಅಂಶವನ್ನು ಹೇಳುತ್ತೇನೆ . ಜೆನ್ ಜಿ ಮತ್ತು ಆಲ್ಫಾ ಮಕ್ಕಳಿಗೆ ನಾವು ಆಸ್ತಿಯನ್ನು ಬಿಟ್ಟು ಹೋದರೂ ಅದನ್ನು ಅವರು ಲಿಯಬಿಲಿಟಿ ಎಂದುಕೊಳ್ಳುವ ಅಯ್ಯೋ ಇದನ್ನು ಯಾರು ಸಂಭಾಳಿಸುತ್ತಾರೆ ಎನ್ನುವ ಮನಸ್ಥಿತಿಯವರು . ಅವರಿಗೆ ನಾವು ಎಲ್ಲವನ್ನೂ ಡಿಜಿಟಲ್ ರೂಪದಲ್ಲಿ ಬಿಟ್ಟು ಹೋಗಬೇಕು. ಈ ವರ್ಗದ ಮಕ್ಕಳಲ್ಲಿ ಬಹುತೇಕರು ನಮ್ಮ ನಿಮ್ಮಂತೆ ಬೀದಿಗಿಳಿದು ವ್ಯವಹಾರ ಮಾಡಲಾರರು. ನಾವು ಕಷ್ಟ ಪಟ್ಟು ಸಂಪಾದಿಸಿದ ಹಣವಿರುಬಹುದು ಅಥವಾ ಆಸ್ತಿ , ಅವುಗಳ ಬಗ್ಗೆ ಸರಿಯಾಗಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಇಡದೆ ಹೋದರೆ ಅವೆಲ್ಲವೂ ಗಾಳಿಯಲ್ಲಿ ಆವಿಯಾಗಿ ಹೋಗುತ್ತವೆ. ಹೀಗಾಗಿ ಎಲ್ಲವನ್ನೂ ಒಂದೆಡೆ ಬರೆದಿಡುವುದು ಒಳಿತು.
ಇಲ್ಲಿ ಬದುಕಿನುದ್ದಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೆ, ಅವರ ಬದುಕು ಸರಾಗವಾಗುತ್ತದೆ. ನಿಮೆಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ , ಇನ್ಶೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ ೭೮ ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್ ಹಣವನ್ನು ಯಾರೂ ಕ್ಲೇಮ್ ಮಾಡಿಲ್ಲ! ಇನ್ನು ೧೪ ಸಾವಿರ ಕೋಟಿ ರೂಪಾಯಿ ಇನ್ಶೂರೆನ್ಸ್ ಕಂಪೆನಿಗಳಲ್ಲಿ ಕ್ಲೇಮ್ ಮಾಡದೆ ಉಳಿದಿರುವ ಹಣ ! ಅಂದರೆ ಈ ರೀತಿಯ ಡೆತ್ ಫೋಲ್ಡರ್ ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಡೆತ್ ಫೋಲ್ಡರ್ ಸೃಷ್ಟಿಸುವುದು ಚಾಯ್ಸ್ ಅಲ್ಲ. ಅದು ಕಡ್ಡಾಯ.
ಹದಿನೆಂಟು ವರ್ಷ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಇದನ್ನು ತಯಾರಿಸಬಹುದು.ಆದರೆ ಆ ವಯಸ್ಸಿನಲ್ಲಿ ಡೆತ್ ಫೋಲ್ಡರ್ ತಯಾರಿಸಲು ಬೇಕಾಗುವ ವಿಷಯಗಳನ್ನು ಹೊಂದಿಲ್ಲದ ಕಾರಣ ಇದರ ಅವಶ್ಯಕತೆ ೧೮ ರಲ್ಲಿ ಬೀಳದೆ ಹೋಗಬಹುದು. ಆದರೆ ಒಂದಷ್ಟು ಜವಾಬ್ದಾರಿ , ಸಂಸಾರ , ಹಣ ಸೇರುತ್ತಾ ಹೋದಂತೆ ಇದನ್ನು ತಯಾರಿಸಿಡುವುದು ಮಾಡಲೇ ಬೇಕಾದ ಕೆಲಸ. ನೆನಪಿರಲಿ ಸಣ್ಣ ವಯಸ್ಸಿನವರು ಇದನ್ನು ಡೆತ್ ಫೋಲ್ಡರ್ ಎಂದುಕೊಳ್ಳ ಬೇಕಾಗಿಲ್ಲ. ಇದನ್ನು ರೆಸ್ಪಾನ್ಸಿಬಿಲಿಟಿ ಫೋಲ್ಡರ್ ಎಂದುಕೊಳ್ಳಬೇಕು. ಇದು ವ್ಯಕ್ತಿಯ ಸಾವಿನ ನಂತರ ಅನುಕೂಲವಾಗುವ ಕಾರಣ ಡೆತ್ ಫೋಲ್ಡರ್ ಎಂದಿದ್ದೇನೆ. ಆದರೆ ನಿಜವಾಗಿಯೂ ಇದು ರೆಸ್ಪಾನ್ಸಿಬಿಟಿ ಫೋಲ್ಡರ್ !
ಹೀಗಾಗಿ ಇದು ವೃದ್ಧರ ವಿಷಯ ಮಾತ್ರ ಅಲ್ಲ. ಅದು ಎಲ್ಲರೂ ಸೃಷ್ಟಿಸಬೇಕಾದ ಫೋಲ್ಡರ್ ಎನ್ನುವುದನ್ನು ಎಂದಿಗೂ ಮರೆಯಬಾರದು .
ವಿಶೇಷವಾಗಿ:
• ವಿವಾಹಿತರು
• ಪೋಷಕರು
• ಮನೆಯ ಏಕೈಕ ಆದಾಯ ಗಳಿಸುವವರು
• NRI / ವಿದೇಶ ಆಸ್ತಿ ಹೊಂದಿರುವವರು
• ಉದ್ಯಮಿಗಳು
• ಬ್ಯಾಂಕ್ ಖಾತೆ, ವಿಮೆ, ಹೂಡಿಕೆ, ಸಾಲ ಇರುವವರು
ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿರುವ ಬಹುತೇಕರು ಇದರಿಂದ ಒಂದಷ್ಟು ಕಾಲ ಹೊರಗಿರಬಹುದು. ಆದರೆ ಕೆಲವೊಮ್ಮೆ ಅತಿ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಯಶಸ್ಸು ಪಡೆದುಕೊಂಡ ವ್ಯಕ್ತಿಗಳನ್ನು ಕೂಡ ನಾವು ಸಮಾಜದಲ್ಲಿ ಕಾಣುತ್ತೇವೆ. ಅಂತಹವರಿಗೆ ಕೂಡ ಇದು ಜಾರಿಯಾಗುತ್ತದೆ.
ಹೌದು ಇಷ್ಟೆಲ್ಲಾ ಏಕೆ ಮಾಡಬೇಕು ? ಅದೂ ಬದುಕಿರುವಾಗಲೇ ಏಕೆ ತಯಾರಿಸಬೇಕು? ವಿಲ್ ಮಾಡಿಟ್ಟರೆ ಸಾಕಲ್ಲವೇ ? ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡಿರುತ್ತದೆ.
ಅಂತವರಿಗೆ ಕೆಳಗಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನವಿದೆ.
ಕುಟುಂಬವನ್ನು ಗೊಂದಲದಿಂದ ಕಾಪಾಡಲು ಇದು ಅವಶ್ಯಕ . ಮರಣಾನಂತರ ಕುಟುಂಬದವರು:
• ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ
• ದಾಖಲೆಗಳ ಅರಿವು ಇರುವುದಿಲ್ಲ
• ಏನು ಮಾಡಬೇಕು ಗೊತ್ತಾಗುವುದಿಲ್ಲ
ಹೀಗಾಗಿ ಡೆತ್ ಫೋಲ್ಡರ್:
• ಸ್ಪಷ್ಟತೆ ನೀಡುತ್ತದೆ
• ಪ್ಯಾನಿಕ್ ತಪ್ಪಿಸುತ್ತದೆ
• ತಿಂಗಳು/ವರ್ಷಗಳ ಕೋರ್ಟು ,ಕಚೇರಿ ಅಲೆದಾಟ ತಪ್ಪಿಸುತ್ತದೆ.
ಕಾನೂನು ಮತ್ತು ಹಣಕಾಸಿನ ನಷ್ಟ ತಪ್ಪಿಸಲು ಇದು ಸಹಾಯಕ . ಸ್ಪಷ್ಟ ದಾಖಲೆಗಳಿಲ್ಲದಿದ್ದರೆ:
• ಬ್ಯಾಂಕಿನಲ್ಲಿರುವ ನಮ್ಮದೇ ಹಣ ತೆಗೆದುಕೊಳ್ಳಲು ಆಗುವುದಿಲ್ಲ
• ವಿಮೆ ಕ್ಲೇಮ್ ವಿಳಂಬ/ನಿರಾಕರಣೆ ಆಗುವ ಸಾಧ್ಯತೆ ಇರುತ್ತದೆ.
• ಆಸ್ತಿ ವಿಚಾರ ಕೋರ್ಟ್ ಕೇಸ್ ಆಗುವ ಸಂಭಾವ್ಯತೆ ಇರುತ್ತದೆ.
ನೆನಪಿರಲಿ ಅನೇಕ ಕುಟುಂಬಗಳು ಹಣ ಕಳೆದುಕೊಳ್ಳುವುದು ಬಡತನದಿಂದಲ್ಲ ,ಸಿದ್ಧತೆ ಮತ್ತು ಮಾಹಿತಿ ಇಲ್ಲದ ಕಾರಣದಿಂದ
ವ್ಯಕ್ತಿಯ ಇಚ್ಛೆಗಳು ಗೌರವಿಸಲ್ಪಡಲು ಇದು ಸಹಾಯ ಮಾಡುತ್ತದೆ.
• ದಹನ / ಸಮಾಧಿ ವಿಧಾನ
• ಧಾರ್ಮಿಕ ವಿಧಿಗಳು
• ಅಂಗದಾನ
• ಆಸ್ತಿ ಹಂಚಿಕೆ
ಬರೆಯದೇ ಇದ್ದಲ್ಲಿ
• ಇತರರು ನಿರ್ಧಾರ ಮಾಡುತ್ತಾರೆ
• ಕೆಲವೊಮ್ಮೆ ನಿಮ್ಮ ಮೌಲ್ಯಗಳಿಗೆ ವಿರುದ್ಧವಾಗಿ ನಿರ್ಧಾರ ಮಾಡಬಹುದು.
ಕುಟುಂಬ ಕಲಹ ತಪ್ಪಿಸಲು ಇದು ಸಹಕಾರಿ. ಬಹುತೇಕ ಕುಟುಂಬ ಜಗಳಗಳು ಆರಂಭವಾಗುವುದು:
• ಸ್ಪಷ್ಟತೆ ಇಲ್ಲದ ಆಸ್ತಿ
• ಕಳೆದುಹೋದ ದಾಖಲೆಗಳು
• ಮಾತಿನ ಭರವಸೆಗಳು
ಬರಹದ ಸ್ಪಷ್ಟತೆ:
• ಜಗಳ ತಡೆದು
• ಸಂಬಂಧ ಉಳಿಸುತ್ತದೆ
ಮರಣ ಖಚಿತ ಆದರೆ ಸಮಯ ಮಾತ್ರ ಅನಿಶ್ಚಿತ. ಸಾವು
• ಅಪಘಾತ
• ಅಕಸ್ಮಿಕ ಅನಾರೋಗ್ಯ
• ಊಹಿಸಲಾಗದ ಘಟನೆಗಳ ಮೂಲಕ ಬರಬಹುದು.
ಸಿದ್ಧತೆ ನಕಾರಾತ್ಮಕತೆ ಅಲ್ಲ.ಸಾಯಬೇಕು ಎನ್ನುವ ಕಾರಣಕ್ಕೆ ಡೆತ್ ಫೋಲ್ಡರ್ ತಯಾರಿಸಬೇಕಿಲ್ಲ. ಅದು ಸಕಾರತ್ಮಕ ಪ್ರಕ್ರಿಯೆ. ನಮ್ಮವರಿಗೆ ನಾವು ಮಾಡುವ ಸಹಾಯ.
ಡೆತ್ ಫೋಲ್ಡರ್‌ನಲ್ಲಿ ಸಾಮಾನ್ಯವಾಗಿ ಏನಿರುತ್ತದೆ? ಅಥವಾ ಯಾವೆಲ್ಲಾ ಅಂಶಗಳನ್ನು ಸೇರಿಸಬೇಕು ಎನ್ನುವುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಈ ಫೋಲ್ಡರಿನಲ್ಲಿ ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಸೇರಿಸಬೇಕಾಗುತ್ತದೆ.
• ಗುರುತಿನ ದಾಖಲೆಗಳು
• ಬ್ಯಾಂಕ್ &ಹೂಡಿಕೆ ವಿವರ
• ವಿಮೆ ಪಾಲಿಸಿಗಳು
• ಆಸ್ತಿ ದಾಖಲೆಗಳು
• ವಿಲ್ / ನಾಮಿನೇಷನ್
• ಡಿಜಿಟಲ್ ವಿವರಗಳು (ಸುರಕ್ಷಿತವಾಗಿ)
• ತುರ್ತು ಸಂಪರ್ಕಗಳು
• ಅಂತಿಮ ಇಚ್ಛೆಗಳ ಪತ್ರ
ಇದನ್ನು ತಯಾರಿಸುವುದರಿಂದ ಯಾರಿಗೆ ಹೆಚ್ಚು ಲಾಭ?
ಖಂಡಿತ ಇದನ್ನು ತಯಾರಿಸುವ ವ್ಯಕ್ತಿಯ ಕುಟುಂಬಕ್ಕೆ ಇದು ಸಹಾಯವಾಗುತ್ತದೆ. ಇದು ವ್ಯಕ್ತಿಯೊಬ್ಬ ತಾನಿಲ್ಲದ ಸಮಯದಲ್ಲಿ ತನ್ನ ಕುಟುಂಬಕ್ಕೆ ನೀಡಬಹುದಾದ ದೊಡ್ಡ ಕೊಡುಗೆ. ಇದೆಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವುದಕ್ಕೆ ಇವುಗಳಲ್ಲಿ ಒಂದು ಅಥವಾ ಎರಡು ವಿಚಾರದಲ್ಲಿ ಮಾಹಿತಿ ಇಲ್ಲದೆ ಹೋದ ಸಮಯದಲ್ಲಿ ಸಮಯ ಮತ್ತು ಹಣ ಹೇಗೆ ಪೋಲಾಗುತ್ತದೆ ಎನ್ನುವುದನ್ನು ನನ್ನ ಹೊಸ ಪುಸ್ತಕ ಡೆತ್ ಫೋಲ್ಡರಿನಲ್ಲಿ ವಿವರವಾಗಿ ಬರೆದಿದ್ದೇನೆ. ಹೀಗಾಗಿ ನಾವು ನಮ್ಮ ಕುಟುಂಬಕ್ಕೆ ನೀಡುವ ಎಲ್ಲಾ ಉಡುಗೊರೆಗಳಿಗಿಂತ ಅತಿ ದೊಡ್ಡ ಉಡುಗೊಡೆ ಡೆತ್ ಫೋಲ್ಡರ್ ಅಥವಾ ರೆಸ್ಪಾನ್ಸಿಬಿಲಿಟಿ ಫೋಲ್ಡರ್. ನೆನಪಿರಲಿ ಇದು ನಮಗೆ ನಾವು ಕೊಟ್ಟುಕೊಳ್ಳುವ ಉಡುಗೊರೆ ಕೂಡ ಹೌದು !
ನೆನಪಿರಲಿ : ಇವುಗಳಲ್ಲಿ ಬಹಳಷ್ಟು ಅಂಶಗಳನ್ನು ತಯಾರಿಸಿರುತ್ತಾರೆ. ಆದರೆ ಅವುಗಳನ್ನು ಶಿಸ್ತುಬದ್ಧವಾಗಿ ಆರ್ಗನೈಸ್ ಮಾಡಿರುವುದಿಲ್ಲ. ಮೇಲಿನ ಅಧ್ಯಯಗಳಲ್ಲಿ ಹೇಳಿದಂತೆ ಕ್ರಮವಾಗಿ ಆರ್ಗನೈಸ್ ಮಾಡಿಟ್ಟುಕೊಳ್ಳುವುದು ಇದರ ಅವಶ್ಯಕತೆ ಬಿದ್ದಾಗ ಹೆಚ್ಚು ಸಮಯ , ಹಣ ಪೋಲಾಗದಂತೆ ತಡೆಯುತ್ತದೆ. ಕುಟುಂಬವನ್ನು ಪ್ಯಾನಿಕ್ ನಿಂದ ತಡೆಯುತ್ತದೆ. ಆರ್ಥಿಕ ಭದ್ರತೆ ಜೊತೆಗೆ ಮನಃಶಾಂತಿಯನ್ನು ಕೂಡ ಕದಡದಂತೆ ಕಾಪಾಡುತ್ತದೆ . ಹೀಗಾಗಿ ಇದು ಎಲ್ಲರೂ ತಪ್ಪದೆ ಸೃಷ್ಟಿಸಬೇಕಾದ ಫೋಲ್ಡರ್!
Advertisement