ಡಿ-ಕೋಡ್: ಐಪಿಎಲ್‌ ಟಿಕೆಟ್‌ಗೆ ಸದನದ ಮಾನ ಹರಾಜು!

"ಕುಟುಂಬದವರು ಟಿಕೆಟ್ ಕೇಳುತ್ತಾರೆ" ಎಂದು ಶಾಸಕ ಕಾಶಪ್ಪನವರ್ ವಾದಿಸಿದ್ದಾರೆ. ಆದರೆ ವಿಐಪಿಗಳು ಹೀಗೆ ತಮ್ಮ ಕುಟುಂಬದವರನ್ನು ಕರೆತಂದು ನುಗ್ಗಿದ್ದರ ಪರಿಣಾಮ ಏನಾಗಿತ್ತು ಎಂಬುದು ಕರಾಳ ಇತಿಹಾಸ.
Chinnaswamy Stadium - MLA Vijayananda Kashappanavar
ಚಿನ್ನಸ್ವಾಮಿ ಸ್ಟೇಡಿಯಂ- ಶಾಸಕ ವಿಜಯಾನಂದ ಕಾಶಪ್ಪನವರ್ online desk
Updated on

ಮಾರ್ಚ್ 26ರಂದು ಕರ್ನಾಟಕ ವಿಧಾನಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆಯ ವೇಳೆ ನಡೆದ ವಿದ್ಯಮಾನಗಳು ಶಾಸನಸಭೆಗಳ ಘನತೆ ಮತ್ತು ಜನಪ್ರತಿನಿಧಿಗಳ ಆದ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮುಂಬರುವ ಐಪಿಎಲ್ (IPL) ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತಮಗೆ ಅಗೌರವ ತೋರುತ್ತಿದೆ ಎಂದು ಆರೋಪಿಸಿ ಪಕ್ಷಾತೀತವಾಗಿ ಶಾಸಕರು ತಮಗೆ ಐಪಿಎಲ್ ಟಿಕೆಟ್‌ಗಳನ್ನು ನೀಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, "ಕ್ರೀಡಾಂಗಣಕ್ಕಾಗಿ ನಾವು 16.32 ಎಕರೆ ಜಾಗವನ್ನು ತಿಂಗಳಿಗೆ ಕೇವಲ 1,600 ರೂ. ಬಾಡಿಗೆಗೆ ನೀಡಿದ್ದೇವೆ. ಆದರೆ ಅವರು ಒಂದು ಟಿಕೆಟ್‌ಗಾಗಿ ನಮ್ಮನ್ನು ಬೇಡುವಂತೆ ಮಾಡುತ್ತಾರೆ. ಶಾಸಕರಿಗೆ ಟಿಕೆಟ್ ನೀಡುವುದಿಲ್ಲ, ನೀಡಿದರೂ 20,000 ರೂ. ಶುಲ್ಕ ವಿಧಿಸುತ್ತಾರೆ. ಅವರ ಬಳಿ ಸಾವಿರಾರು ಕೋಟಿ ರೂ. ಇದೆ, ಅವರಿಗೆ ತಕ್ಕ ಪಾಠ ಕಲಿಸಬೇಕು" ಎಂದರು. ಅಲ್ಲದೆ, ಕೇವಲ ಕ್ರಿಕೆಟ್‌ಗೆಂದು ಅನುಮತಿ ಪಡೆದ KSCAಗೆ ಮದ್ಯ ಮಾರಾಟದ (ಎಕ್ಸೈಸ್) ಲೈಸೆನ್ಸ್ ಏಕೆ ನೀಡಲಾಗಿದೆ? ಅದನ್ನು ಬಿಗಿಗೊಳಿಸಿದರೆ ಅವರು ದಾರಿಗೆ ಬರುತ್ತಾರೆ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಪ್ರತಿ ಶಾಸಕರಿಗೆ 5 ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. "ಅವರು ಕೇವಲ ಒಂದು ಟಿಕೆಟ್ ಕೊಟ್ಟು ನಮ್ಮನ್ನು ಎಲ್ಲೋ ಕೆಳಗಡೆ ಕೂರಿಸುತ್ತಾರೆ. ನಮ್ಮ ಮಕ್ಕಳು ಮತ್ತು ಕುಟುಂಬದವರಿಗೂ ಕ್ರಿಕೆಟ್ ನೋಡುವ ಆಸೆ ಇರುತ್ತದೆ. ಶಾಸಕರಿಗೆ ಪ್ರತ್ಯೇಕ ಲಾಂಜ್ (Lounge) ಇರಲಿ. ಶಾಸಕರಿಗೆ ಬೆಲೆಯೇ ಇಲ್ಲವೇ?" ಎಂದರು. ಮಾರ್ಚ್ 28 ರಂದು ನಡೆಯುವ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಕೊಡಿಸುವಂತೆ ಸಭಾಪತಿಯವರನ್ನು ಒತ್ತಾಯಿಸಿದರು. ಬೆಳಗಾವಿ ದಕ್ಷಿಣದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಟಿಕೆಟ್ ಕಾಳಸಂತೆ ಮಾರಾಟದ ಬಗ್ಗೆ ತನಿಖೆಗೆ ಆಗ್ರಹಿಸಿ, "ಅವರು (KSCA) ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರುತ್ತಾರೆ. ಆದರೆ ನಾವು ಹಣ ಕೊಡುತ್ತೇವೆ ಎಂದರೂ ಶಾಸಕರಿಗೆ ಟಿಕೆಟ್ ಸಿಗುತ್ತಿಲ್ಲ" ಎಂದರು.

ಶಾಸಕರ ಈ ಎಲ್ಲ ಬೇಡಿಕೆಗಳಿಗೆ ಸಮ್ಮತಿಸಿದ ಸಭಾಪತಿ ಯು.ಟಿ. ಖಾದರ್, "ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಅವರು ಸಾಮಾನ್ಯ ಟಿಕೆಟ್ ನೀಡುತ್ತಾರೆ. ಶಾಸಕರು ಸರದಿಯಲ್ಲಿ ನಿಲ್ಲಬೇಕಾಗುತ್ತದೆ ಮತ್ತು ಅಲ್ಲಿನ ಭದ್ರತಾಸಿಬ್ಬಂದಿಗೆ ಶಾಸಕರು ಯಾರೆಂದು ತಿಳಿಯದೆ ಅಗೌರವ ತೋರುತ್ತಾರೆ. ಈ ಕಾರಣಕ್ಕಾಗಿಯೇ ಬಹುತೇಕ ಶಾಸಕರು ಪಂದ್ಯ ನೋಡಲು ಹೋಗುವುದಿಲ್ಲ. ಆದ್ದರಿಂದ ವಿಐಪಿ ಸ್ಟ್ಯಾಂಡ್‌ನಲ್ಲಿ ಪ್ರತಿ ಶಾಸಕರಿಗೆ ಕನಿಷ್ಠ 4 ಟಿಕೆಟ್ ಸಿಗುವಂತೆ ನೋಡಿಕೊಳ್ಳಬೇಕು" ಎಂದು ಸರ್ಕಾರಕ್ಕೆ ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ, "ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ, ಅವರಿಗೂ ಕೆಲವು ಸೌಲಭ್ಯಗಳು ಸಿಗಬೇಕು" ಎಂದು ಹೇಳಿ, KSCA ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ್ ತಮ್ಮ ವಾದವನ್ನು ಮತ್ತಷ್ಟು ಸಮರ್ಥಿಸಿಕೊಂಡರು. "ನಾವು ವಿಐಪಿಗಳು. ನಾವು ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲ. ಕಳೆದ ಬಾರಿ ನಾವು ಸರದಿಯಲ್ಲಿ ನಿಂತಿದ್ದಾಗ ನಮ್ಮನ್ನು ಸಾರ್ವಜನಿಕರ ಗ್ಯಾಲರಿಗೆ ಕಳುಹಿಸಿದ್ದರು. ಅದು ಸಾಧ್ಯವಿಲ್ಲ" ಎಂದರು. ಅಲ್ಲದೆ, "ಬುಕ್ಕಿಗಳು 5,000 ರೂ. ಮುಖಬೆಲೆಯ ಟಿಕೆಟ್‌ಗಳನ್ನು 35,000 ರೂ. ಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

ವಿಐಪಿ ಸಂಸ್ಕೃತಿಯ ದುರಂತ

"ಕುಟುಂಬದವರು ಟಿಕೆಟ್ ಕೇಳುತ್ತಾರೆ" ಎಂದು ಶಾಸಕ ಕಾಶಪ್ಪನವರ್ ವಾದಿಸಿದ್ದಾರೆ. ಆದರೆ ವಿಐಪಿಗಳು ಹೀಗೆ ತಮ್ಮ ಕುಟುಂಬದವರನ್ನು ಕರೆತಂದು ನುಗ್ಗಿದ್ದರ ಪರಿಣಾಮ ಏನಾಗಿತ್ತು ಎಂಬುದು ಕರಾಳ ಇತಿಹಾಸ. ಹೀಗೆ ಕುಟುಂಬದವರನ್ನು ಕರೆತಂದು ಮಿತಿಮೀರಿ ನುಗ್ಗಿಸಿದ್ದರಿಂದಲೇ, ಐಪಿಎಲ್ ಟಿ20 ಗೆದ್ದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಉಂಟಾಗಿ 11 ಜನರು ಪ್ರಾಣ ಕಳೆದುಕೊಂಡರು. 2025ರ ಜೂನ್ 4 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 18 ವರ್ಷಗಳ ಬಳಿಕ ತನ್ನ ಮೊದಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಮೈದಾನದ ಸಾಮರ್ಥ್ಯ ಮೀರಿ ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಮರದ ಮೇಲೆ ಕುಳಿತು ಅಪಾಯಕಾರಿಯಾಗಿ ದೂರದಿಂದ ತಮ್ಮ ಸ್ಟಾರ್‌ಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಇತ್ತ ಶಾಸಕರು, ಸಚಿವರು, ಅವರ ಆಪ್ತವಲಯದವರ ಕುಟುಂಬ ಹಾಗೂ ಸ್ನೇಹಿತರು ಹಿಂಬಾಗಿಲಿನಿಂದ ಆಗಮಿಸಿ ಕ್ರಿಕೆಟಿಗರ ಜೊತೆ ಸೆಲ್ಫಿ ತೆಗೆದುಕೊಂಡು ಸೇಫಾಗಿ ಮನೆಗೆ ಹೋದರು. ಇತ್ತ ಉಂಟಾದ ಭೀಕರ ಕಾಲ್ತುಳಿತಕ್ಕೆ 11 ಅಮಾಯಕ ಜೀವಗಳು ಬಲಿಯಾದವು ಮತ್ತು 50ಕ್ಕೂ ಹೆಚ್ಚು ಜನ ಗಾಯಗೊಂಡರು. ಈ ದುರಂತ ಸಂಭವಿಸಿ ಒಂದು ವರ್ಷವೂ ಕಳೆಯುವ ಮುನ್ನವೇ, ಈಗ ಮತ್ತೆ ರಾಜಕಾರಣಿಗಳು ಕ್ರೀಡೆಯಲ್ಲಿ ವಿಐಪಿ ಸವಲತ್ತುಗಳನ್ನು ಕೇಳಲು ಮುಂದಾಗಿದ್ದಾರೆ.

ಶಾಸನ ಸಭೆಯ ಉದ್ದೇಶ ಹಾಗೂ ವಾಸ್ತವ

ಮುಖ್ಯವಾಗಿ ಶಾಸನ ಸಭೆಯಲ್ಲಿ ಚರ್ಚೆ ಆಗಬೇಕಾದ ಹಿನ್ನೆಲೆಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಸಂವಿಧಾನವು ಶಾಸಕರಿಗೆ ವಿಶೇಷ ಹಕ್ಕುಗಳನ್ನು (Privileges) ನೀಡಿರುವುದು ಅವರು ಜನಪರ ಕಾನೂನುಗಳನ್ನು ಮುಕ್ತವಾಗಿ ರಚಿಸುವಾಗ ಯಾವುದೇ ಅಡ್ಡಿಯಾಗದಿರಲಿ ಎಂಬ ಕಾರಣಕ್ಕೇ ಹೊರತು, ಕ್ರಿಕೆಟ್ ಪಂದ್ಯಗಳನ್ನು ನೋಡಲು ವಿಐಪಿ ಸವಲತ್ತು ಪಡೆಯಲಿ ಎಂದಲ್ಲ. ಶಾಸಕಾಂಗವು ಸಮಾಜವನ್ನು ಮುನ್ನಡೆಸುವ ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವ ಅತ್ಯುನ್ನತ ವೇದಿಕೆಯಾಗಬೇಕು ಎಂಬುದು ಅವರ ಆಶಯವಾಗಿತ್ತು.

Chinnaswamy Stadium - MLA Vijayananda Kashappanavar
ಡಿ-ಕೋಡ್: ನ್ಯಾಯಾಂಗ ವ್ಯವಸ್ಥೆಯ ‘ಭ್ರಷ್ಟಾಚಾರ’ ಚರ್ಚೆಯ ವಿಷಯವಲ್ಲ; ಏಕೆಂದರೆ...

ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯ ಅಂತಿಮ ಭಾಷಣದಲ್ಲಿ 1949ರ ನವೆಂಬರ್‌ 25ರಂದು ಮಾತನಾಡುತ್ತ, “ಸಂವಿಧಾನವು ಕೇವಲ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತಹ ಪ್ರಭುತ್ವದ ಅಂಗಗಳನ್ನು ಮಾತ್ರವೇ ಒದಗಿಸಬಲ್ಲದು. ಆ ಅಂಗಗಳ ಕಾರ್ಯನಿರ್ವಹಣೆಯು ಜನರನ್ನು ಮತ್ತು ತಮ್ಮ ಆಶಯಗಳನ್ನು ಹಾಗೂ ರಾಜಕೀಯವನ್ನು ಕಾರ್ಯಗತಗೊಳಿಸಲು ಸಾಧನಗಳಾಗಿ ಜನರು ಹುಟ್ಟುಹಾಕುವ ರಾಜಕೀಯ ಪಕ್ಷಗಳನ್ನು ಅವಲಂಬಿಸಿರುತ್ತದೆ” ಎಂದಿದ್ದರು. ಬಹುಶಃ ಅವರ ಆತಂಕದಂತೆಯೇ ಇಂದು ಸದನಗಳು ನಡೆಯುತ್ತಿವೆ.

ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ರಾಜ್ಯ ವಿಧಾನಸಭೆಗಳು ವರ್ಷದಲ್ಲಿ ಸರಾಸರಿ ಕೇವಲ 20 ರಿಂದ 25 ದಿನಗಳು ಮಾತ್ರ ನಡೆಯುತ್ತವೆ. ಈ ಅಲ್ಪ ಸಮಯದಲ್ಲಿ ಬಹುಪಾಲು ಸಮಯವು ಶೂನ್ಯವೇಳೆ, ರಾಜ್ಯಪಾಲರ ಭಾಷಣದ ಮೇಲಿನ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮತ್ತು ಗದ್ದಲಗಳಿಗೇ ವ್ಯಯವಾಗುತ್ತದೆ. ನಿಜವಾಗಿ ಹೊಸ ಶಾಸನ ಅಥವಾ ಕಾನೂನಿನ ರಚನೆಗೆ (Legislative Business) ನಡೆಯುವ ಚರ್ಚೆಯ ಸಮಯ ಕೇವಲ ಶೇ. 15-20 ರಷ್ಟು ಮಾತ್ರ. ಬಹುತೇಕ ಪ್ರಮುಖ ಮಸೂದೆಗಳು ಯಾವುದೇ ವಿಸ್ತೃತ ಚರ್ಚೆಯಿಲ್ಲದೆ ಕೆಲವೇ ನಿಮಿಷಗಳಲ್ಲಿ ಅಂಗೀಕಾರಗೊಳ್ಳುತ್ತವೆ. ತಾವು ಮಾಡಬೇಕಾದ ‘ಶಾಸನ ರಚನೆ’ ಕೆಲಸಕ್ಕೆ ಗಮನ ನೀಡುವ ಬದಲಿಗೆ, ಸದನದ ಅಮೂಲ್ಯ ಸಮಯವನ್ನು ಹೀಗೆ ‘ಹಕ್ಕು’ ಎನ್ನುವ ನೆಪದಲ್ಲಿ ಕ್ರಿಕೆಟ್ ಟಿಕೆಟ್‌ಗಾಗಿ ಚರ್ಚಿಸಲು ಬಳಸುವುದು ಪ್ರಜಾಪ್ರಭುತ್ವದ ವಿಪರ್ಯಾಸ.

ಸ್ವಾಗತಾರ್ಹ ನಿಲುವು

ಇದೆಲ್ಲದರ ನಡುವೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ರೀತಿ ಶಾಸಕರು ಐಪಿಎಲ್ ಟಿಕೆಟ್ ಕೇಳುವುದನ್ನು ಬೆಂಬಲಿಸುವುದಿಲ್ಲ ಎಂದಿರುವುದು ಸಂತಸದ, ಸ್ವಾಗತಾರ್ಹ ವಿಚಾರ. "ನಾವು ಶಾಸಕರು ಸಾಮಾನ್ಯ ಜನರಿಗಿಂತ ದೊಡ್ಡವರೂ ಅಲ್ಲ, ಅವರಿಗಿಂತ ಭಿನ್ನರೂ ಅಲ್ಲ. ನಾವು ವಿಶೇಷ ಸವಲತ್ತುಗಳನ್ನು ಕೇಳಬಾರದು. ಶಾಸಕರು ಐಪಿಎಲ್ ಟಿಕೆಟ್ ಕೇಳುವ ಈ ಕಲ್ಪನೆಯನ್ನು ನಾನು ವಿರೋಧಿಸುತ್ತೇನೆ” ಎಂದಿರುವುದು ಸರಿಯಾಗಿದೆ.

ಸರ್ಕಾರಿ ಜಾಗವನ್ನು ಕ್ರೀಡಾಭಿವೃದ್ಧಿಗಾಗಿ ನೀಡಲಾಗಿದೆಯೇ ಹೊರತು ಶಾಸಕರಿಗೆ ವಿಐಪಿ ಆತಿಥ್ಯ ನೀಡಲು ಅಲ್ಲ. ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಜನರ ಸಂಕಷ್ಟಗಳಿಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸದನದಲ್ಲಿ ಧ್ವನಿಯಾಗಬೇಕೇ ಹೊರತು, ವಿಐಪಿ ಟ್ರೀಟ್‌ಮೆಂಟಿಗಾಗಿ, ತಮ್ಮ ಕುಟುಂಬಕ್ಕೆ ಐಪಿಎಲ್‌ ಟಿಕೆಟ್‌ ಕೊಡಿಸಲಾಗಲಿ ಎಲ್ಲ. ಸಂವಿಧಾನವು ನೀಡಿರುವ ಸೌಲಭ್ಯವನ್ನು ಹೀಗೆ ದುರುಪಯೋಗಪಡಿಸಿಕೊಂಡು ಶಾಸನಸಭೆಯ ಘನತೆಯನ್ನು ಕುಗ್ಗಿಸಬಾರದು

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com