

ಬೇಸಿಗೆ ಕಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ಅತಿಯಾದ ಬಿಸಿಲು ಮತ್ತು ಬೆವರಿನಿಂದಾಗಿ ಬೆವರು ಸಾಲೆ, ಅಲರ್ಜಿ, ತುರಿಕೆ, ಫಂಗಲ್ ಸೋಂಕು, ಉರಿ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಬೆವರು ಸಾಲೆ ಚರ್ಮದ ಮೇಲೆ ಸಣ್ಣ ಕೆಂಪು ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಂಡು ವಿಪರೀತ ತುರಿಕೆ ಮತ್ತು ಉರಿಯನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಬೆವರಿನ ಗ್ರಂಥಿಗಳು ಧೂಳು ಅಥವಾ ಕೊಳೆಯಿಂದ ಮುಚ್ಚಿಹೋದಾಗ ಸಂಭವಿಸುತ್ತದೆ.
ಬೆವರು ಸಾಲೆಗೆ ಅತ್ಯಂತ ಸರಳ ಪರಿಹಾರವೆಂದರೆ ದೇಹವನ್ನು ಸದಾ ತಂಪಾಗಿರಿಸಿಕೊಳ್ಳುವುದು. ದಿನಕ್ಕೆ ಎರಡು ಬಾರಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಮತ್ತು ಬೆವರಿನ ಅಂಶವನ್ನು ಹೀರಿಕೊಳ್ಳುವ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಅತಿಯಾದ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ ಮತ್ತು ಸದಾ ಗಾಳಿಯಾಡುವ ಜಾಗದಲ್ಲಿ ಇರಿ. ಸ್ನಾನದ ನಂತರ ಚರ್ಮವನ್ನು ಪೂರ್ಣವಾಗಿ ಒಣಗಿಸಿ, ನಂತರವಷ್ಟೇ ಬಟ್ಟೆ ಧರಿಸಬೇಕು. ಮುಲ್ತಾನಿ ಮಿಟ್ಟಿ ಲೇಪನವು ಬೆವರು ಸಾಲೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಚರ್ಮದ ಅಲರ್ಜಿಯು ಕೂಡ ಸಾಮಾನ್ಯವಾಗಿದ್ದು ಸೂರ್ಯನ ತೀಕ್ಷ್ಣವಾದ ಅತಿನೇರಳೆ (ಯುವಿ) ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮ ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ. ಇದಲ್ಲದೇ ಶುಷ್ಕ ವಾತಾವರಣದಿಂದ ಬೆವರು ಸುಲಭವಾಗಿ ಒಣಗದ ಕಾರಣ ಫಂಗಲ್ ಸೋಂಕು ಉಂಟಾಗಿ ಚರ್ಮದ ಮಡಿಕೆಗಳಲ್ಲಿ ತುರಿಕೆ ಕಾಣಿಸಿಕೊಳ್ಳಬಹುದು. ಚರ್ಮದ ತುರಿಕೆ ಕಾಣಿಸಿಕೊಳ್ಳಲು ಮುಖ್ಯವಾಗಿ ಬೆವರು, ಧೂಳು ಮತ್ತು ಸೂರ್ಯನ ತಾಪವೇ ಕಾರಣವಾಗಿರುತ್ತದೆ. ಬೆವರು ಚರ್ಮದ ಮೇಲೆ ದೀರ್ಘಕಾಲ ಉಳಿದಾಗ ಅಥವಾ ಒಣಗಿದಾಗ ಚರ್ಮದ ರಂಧ್ರಗಳು ಮುಚ್ಚಿಹೋಗಿ ಕಿರಿಕಿರಿ ಉಂಟಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕುತ್ತಿಗೆ, ಬೆನ್ನು ಮತ್ತು ಕಂಕುಳಿನ ಭಾಗಗಳಲ್ಲಿ ಸಣ್ಣ ಗುಳ್ಳೆಗಳಾಗಿ ತುರಿಕೆ ಪ್ರಾರಂಭವಾಗುತ್ತದೆ.
ಇದಕ್ಕೆ ಸರಳವಾದ ಮನೆಮದ್ದು ಎಂದರೆ ತಣ್ಣೀರಿನ ಸ್ನಾನ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಬೇವಿನ ಎಲೆಗಳನ್ನು ಹಾಕಿಕೊಂಡರೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ತುರಿಕೆ ಕಡಿಮೆಯಾಗುತ್ತದೆ. ಲೋಳೆಸರದ (ಅಲೋವೆರಾ) ತಿರುಳು ಅಥವಾ ಶ್ರೀಗಂಧದ ಲೇಪನವನ್ನು ಹಚ್ಚುವುದರಿಂದ ಚರ್ಮದ ಉರಿ ಮತ್ತು ತುರಿಕೆ ತಕ್ಷಣ ಕಡಿಮೆಯಾಗುತ್ತದೆ. ಏಕೆಂದರೆ ಇದು ಚರ್ಮವನ್ನು ತಂಪುಗೊಳಿಸುತ್ತದೆ. ಹಾಗೆಯೇ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಶುಷ್ಕತೆ ಕಡಿಮೆಯಾಗಿ ತುರಿಕೆ ನಿಯಂತ್ರಣಕ್ಕೆ ಬರುತ್ತದೆ. ಆದಷ್ಟು ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು ಗಾಳಿಯಾಡುವ ಹತ್ತಿ ಬಟ್ಟೆಗಳನ್ನು ಬಳಸಬೇಕು. ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಚರ್ಮವು ಒಳಗಿನಿಂದಲೇ ಆರೋಗ್ಯವಾಗಿರುತ್ತದೆ, ಆದ್ದರಿಂದ ಹೆಚ್ಚು ನೀರು ಮತ್ತು ಮಜ್ಜಿಗೆಯನ್ನು ಕುಡಿಯಿರಿ.
ಈ ಸಮಸ್ಯೆಗಳನ್ನು ನಿವಾರಿಸಲು ವೈಯಕ್ತಿಕ ಸ್ವಚ್ಛತೆ ಅತಿ ಅವಶ್ಯಕವಾಗಿದೆ. ಪ್ರತಿದಿನ ಕನಿಷ್ಠ ಎರಡು ಬಾರಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಮೇಲಿರುವ ಬೆವರು ಮತ್ತು ಬ್ಯಾಕ್ಟೀರಿಯಾಗಳು ದೂರವಾಗುತ್ತವೆ.
ಆಹಾರ ಪದ್ಧತಿಯೂ ಸಹ ಚರ್ಮದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಚರ್ಮವು ಒಣಗಿದಂತೆ ಕಾಣುತ್ತದೆ ಮತ್ತು ಕಿರಿಕಿರಿ ಉಂಟಾಗುತ್ತದೆ ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಎಳನೀರಿನಂತಹ ನೈಸರ್ಗಿಕ ಪಾನೀಯಗಳು ದೇಹದ ಒಳಗಿನ ಉಷ್ಣತೆಯನ್ನು ಸಮತೋಲನದಲ್ಲಿಡುತ್ತವೆ.
ಹಗಲಿನಲ್ಲಿ ಹೊರಹೋಗುವಾಗ ಚರ್ಮವನ್ನು ಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಅಥವಾ ಚರ್ಮಕ್ಕೆ ಮೃದು ಮುಲಾಮನ್ನು ಲೇಪಿಸುವುದು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸುಗಂಧಭರಿತ ಸೋಪುಗಳ ಬದಲಿಗೆ ಮೃದುವಾದ ಅಥವಾ ನೈಸರ್ಗಿಕ ಪದಾರ್ಥಗಳಿಂದ ಮಾಡಿದ ಸೋಪುಗಳನ್ನು ಬಳಸುವುದು ಅಲರ್ಜಿಯನ್ನು ತಡೆಯಲು ಸಹಕಾರಿ.
ಇನ್ನು ಕೆಲವರಿಗೆ ಬಿಸಿಲಿನಲ್ಲಿ ಹೋಗಿ ಬಂದರೆ ಸೂಕ್ಷ್ಮ ಅಂಗವಾದ ಚರ್ಮ ಉರಿಯುವುದು ಉಂಟು. ಆಗ ಸೌತೆಕಾಯಿ ರಸ ಅಥವಾ ತುರಿದ ಸೌತೆಕಾಯಿಯನ್ನು ಲೇಪಿಸುವುದು ಚರ್ಮಕ್ಕೆ ಹಿತ ನೀಡುತ್ತದೆ. ತೆಳುವಾದ ಹತ್ತಿ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ಉರಿ ಇರುವ ಭಾಗದ ಮೇಲೆ ಇರಿಸಬಹುದು. ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಮೃದುವಾಗಿ ತೊಂದರೆ ಇರುವ ಭಾಗಕ್ಕೆ ಸವರಿದರೂ ಆದೀತು. ಸಾಕಷ್ಟು ಸಮಾಧಾನ ಆಗುತ್ತದೆ.
ಬೇಸಿಗೆಯಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಮುಖದ ಮೇಲಿನ ಧೂಳು ಮತ್ತು ಜಿಡ್ಡನ್ನು ತೆಗೆಯಲು ಮೃದುವಾದ ಆಯುರ್ವೇದೀಯ ಮುಲಾಮನ್ನು ಬಳಸಿ. ವಾರಕ್ಕೊಮ್ಮೆ ನೈಸರ್ಗಿಕ ಸ್ಕ್ರಬ್ ಬಳಸಿ ಸತ್ತ ಚರ್ಮದ ಕೋಶಗಳನ್ನು ನಿವಾರಿಸಬೆಕು. ತಣ್ಣನೆಯ ಹಾಲನ್ನು ಹತ್ತಿಯ ಸಹಾಯದಿಂದ ಚರ್ಮಕ್ಕೆ ಹಚ್ಚುವುದು ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರದ ಬದಲು ಹಸಿರು ಸೊಪ್ಪು, ಋತುಕಾಲಿಕ ಹಣ್ಣು ಮತ್ತು ತಾಜಾ ತರಕಾರಿಗಳನ್ನು ಸೇವಿಸಿ ಮತ್ತು ಒತ್ತಡವಿಲ್ಲದೇ ದಿನವೂ ರಾತ್ರಿ ಎಂಟು ಗಂಟೆಗಳ ಕಾಲ ಗಾಢ ನಿದ್ರೆಯನ್ನು ಮಾಡಬೇಕು.
Advertisement