

ಪರಮೇಶ್ ಅವರು ಬೆಂಗಳೂರಿನ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಹಿರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು ಎಂಟು-ಒಂಬತ್ತು ಗಂಟೆಗಳ ಕಾಲ ಸತತವಾಗಿ ಕುಳಿತು ಕೆಲಸ ಮಾಡುತ್ತಾರೆ.
ಒಂದು ದಿನ ಸಂಜೆ ಅವರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ ಕೆಲವು ವಾರಗಳಿಂದ ಸೊಂಟದ ಬಲ ಭಾಗದಲ್ಲಿ ನೋವು ಬರುತ್ತಿದೆ. ಸಾಮಾನ್ಯ ಬೆನ್ನು ನೋವು ಎಂದು ನಾನು ನಿರ್ಲಕ್ಷಿಸಿದೆ. ಆದರೆ ಕೆಲ ದಿನಗಳಲ್ಲಿ ಆ ನೋವು ಕೇವಲ ಸೊಂಟಕ್ಕೆ ಸೀಮಿತವಾಗದೇ ಬಲಗಾಲಿನ ಹಿಂಭಾಗದ ಮೂಲಕ ಪಾದದವರೆಗೆ ವಿದ್ಯುತ್ ಸಂಚಲನವಾದಂತೆ ಹರಿಯತೊಡಗಿತು. ಮೆಟ್ಟಿಲು ಹತ್ತುವಾಗ ಅಥವಾ ಕಾರ್ ಡ್ರೈವಿಂಗ್ ಮಾಡುವಾಗ ಈ ನೋವು ತೀವ್ರವಾಗುತ್ತಿತ್ತು, ಕೆಲವೊಮ್ಮೆ ಕಾಲು ಮರಗಟ್ಟಿದ ಅನುಭವವಾಗುತ್ತಿತ್ತು.” ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಸರಿಯಾಗಿ ಅವರ ಸಮಸ್ಯೆಯನ್ನು ಪರಿಶೀಲಿಸಿ ನೋಡಿದಾಗ ಅದು ಬೆನ್ನುಮೂಳೆಯ ಸಮಸ್ಯೆಯಲ್ಲ, ‘ಪಿರಿಫಾರ್ಮಸ್ ಸಿಂಡ್ರೋಮ್' ಎಂಬ ಸ್ನಾಯುವಿನ ಸಮಸ್ಯೆ ಎಂದು ತಿಳಿದುಬಂತು.
ಪಿರಿಫಾರ್ಮಸ್ ಸಿಂಡ್ರೋಮ್ ಎನ್ನುವುದು ನಮ್ಮ ಸೊಂಟದ ಆಳದಲ್ಲಿರುವ ಪಿರಿಫಾರ್ಮಸ್ ಎಂಬ ಸಣ್ಣ ಸ್ನಾಯುವು ಸಿಯಾಟಿಕಾ ಎಂಬ ನರದ ಮೇಲೆ ಅನಗತ್ಯ ಒತ್ತಡವನ್ನು ಹೇರಿದಾಗ ಉಂಟಾಗುವ ಸಮಸ್ಯೆಯಾಗಿದೆ. ಈ ಸ್ನಾಯು ಸೊಂಟದ ಚಲನೆಗೆ ಮತ್ತು ಸ್ಥಿರತೆಗೆ ಅತ್ಯಂತ ಮುಖ್ಯವಾದುದು. ಸಿಯಾಟಿಕ್ ನರವು ಈ ಸ್ನಾಯುವಿನ ತೀರಾ ಹತ್ತಿರದಲ್ಲಿ ಹಾದುಹೋಗುವುದರಿಂದ ಸ್ನಾಯುವು ಬಿಗಿಯಾದಾಗ ಅಥವಾ ಸೆಳೆತಕ್ಕೆ ಒಳಗಾದಾಗ ನರವು ಹಿಸುಕಿದಂತಾಗಿ ತೀವ್ರ ನೋವು ಉಂಟಾಗುತ್ತದೆ.
ಪರಮೇಶ್ ಅವರ ವಿಷಯದಲ್ಲಿ ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಅವರ ಪಿರಿಫಾರ್ಮಸ್ ಸ್ನಾಯುವನ್ನು ಬಿಗಿಗೊಳಿಸಿತ್ತು. ಇದು ಇಂದಿನ ಆಧುನಿಕ ಜೀವನಶೈಲಿಯಲ್ಲಿ, ವಿಶೇಷವಾಗಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆದರೆ ಕಿರಿಕಿರಿ ಉಂಟುಮಾಡುವ ಸಮಸ್ಯೆಯಾಗಿದೆ. ಸರಿಯಾದ ಸ್ಟ್ರೆಚಿಂಗ್ ವ್ಯಾಯಾಮಗಳು ಮತ್ತು ಜೀವನಶೈಲಿಯ ಬದಲಾವಣೆಯಿಂದ ಈ ನೋವಿನಿಂದ ಬಿಡುಗಡೆ ಪಡೆಯುವುದು ಸಾಧ್ಯವಿದೆ.
ಇದರ ಲಕ್ಷಣಗಳು ಹೆಚ್ಚಾಗಿ ನರಗಳ ನೋವನ್ನೇ ಹೋಲುತ್ತವೆ. ಸಾಮಾನ್ಯವಾಗಿ ಪೃಷ್ಠದ ಮಧ್ಯಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಈ ನೋವು ಸೊಂಟದಿಂದ ಪ್ರಾರಂಭವಾಗಿ ಕಾಲಿನ ಹಿಂಭಾಗದ ಮೂಲಕ ಪಾದದವರೆಗೆ ಹರಡಬಹುದು. ದೀರ್ಘಕಾಲ ಕುಳಿತುಕೊಂಡಾಗ, ಮೆಟ್ಟಿಲು ಹತ್ತುವಾಗ ಅಥವಾ ಓಡುವಾಗ ಈ ನೋವು ಉಲ್ಬಣಗೊಳ್ಳುತ್ತದೆ.
ಈ ಸಮಸ್ಯೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು. ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಅಥವಾ ಹೆಚ್ಚು ಕಾಲ ವಾಹನ ಚಾಲನೆ ಮಾಡುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಅತಿಯಾದ ವ್ಯಾಯಾಮ ಮಾಡುವ ಓಟಗಾರರು ಅಥವಾ ಸೈಕ್ಲಿಸ್ಟ್ಗಳಲ್ಲಿ ಸ್ನಾಯುವಿನ ಮೇಲೆ ಒತ್ತಡ ಹೆಚ್ಚಾಗಿ ಈ ಸಮಸ್ಯೆ ಸಂಭವಿಸಬಹುದು. ಅಲ್ಲದೆ, ಸೊಂಟಕ್ಕೆ ಬಿದ್ದ ಏಟು ಅಥವಾ ಸ್ನಾಯುವಿನ ಸೆಳೆತ ಕೂಡ ಇದಕ್ಕೆ ಕಾರಣವಾಗಬಹುದು. ಹಿಂದಿನ ಜೇಬಿನಲ್ಲಿ ದಪ್ಪನೆಯ ಪರ್ಸ್ ಇಟ್ಟುಕೊಂಡು ದೀರ್ಘಕಾಲ ಕುಳಿತುಕೊಳ್ಳುವುದು ಸಹ ಈ ಸ್ನಾಯುವಿನ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತದೆ.
ಪಿರಿಫಾರ್ಮಸ್ ಸಿಂಡ್ರೋಮನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ದೈಹಿಕ ಪರೀಕ್ಷೆಗಳನ್ನು ಮಾಡುತ್ತಾರೆ. ಚಿಕಿತ್ಸೆಯಲ್ಲಿ ವಿಶ್ರಾಂತಿ ಮೊದಲ ಹೆಜ್ಜೆಯಾಗಿದೆ. ಉರಿಯೂತ ಕಡಿಮೆ ಮಾಡಲು ಐಸ್ ಪ್ಯಾಕ್ ಮತ್ತು ಸ್ನಾಯು ಸಡಿಲಗೊಳಿಸಲು ಹೀಟ್ ಪ್ಯಾಕ್ ಬಳಸುವುದು ಉಪಯುಕ್ತ. ಫಿಸಿಯೋಥೆರಪಿ ಈ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿ ಮಾರ್ಗ. ಪಿರಿಫಾರ್ಮಸ್ ಸ್ನಾಯುವನ್ನು ಸಡಿಲಗೊಳಿಸುವ ಸ್ಟ್ರೆಚಿಂಗ್ ವ್ಯಾಯಾಮಗಳು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ರೋಗಿಗಳಿಗೆ ಕಲಿಸಲಾಗುತ್ತದೆ. ನೋವು ತೀವ್ರವಾಗಿದ್ದಾಗ ವೈದ್ಯರ ಸಲಹೆಯಂತೆ ಉರಿಯೂತ ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಅಥವಾ ಸ್ನಾಯುವನ್ನು ಸಡಿಲಗೊಳಿಸಲು ಚುಚ್ಚುಮದ್ದನ್ನು ಪಡೆಯಬಹುದು.
ಈ ಸಮಸ್ಯೆಯನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಅಗತ್ಯ. ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸವಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆ ಎದ್ದು ಸ್ವಲ್ಪ ದೂರ ನಡೆಯಬೇಕು. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ ಸರಿಯಾದ ರೀತಿಯಲ್ಲಿ ವಾರ್ಮ್ ಅಪ್ ಮತ್ತು ಸ್ಟ್ರೆಚಿಂಗ್ ಮಾಡುವುದು ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಕುಳಿತುಕೊಳ್ಳುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಮತ್ತು ಸೊಂಟದ ಮೇಲೆ ಒತ್ತಡ ಬೀಳದಂತೆ ಜಾಗರೂಕರಾಗಿರುವುದು ಅವಶ್ಯಕ. ಸರಿಯಾದ ಕಾಳಜಿ ಮತ್ತು ನಿಯಮಿತ ವ್ಯಾಯಾಮದಿಂದ ಪಿರಿಫಾರ್ಮಸ್ ಸಿಂಡ್ರೋಮನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಮಲಗುವಾಗ ಮೊಣಕಾಲುಗಳ ನಡುವೆ ಸಣ್ಣ ದಿಂಬನ್ನು ಇಟ್ಟುಕೊಳ್ಳುವುದು ಸೊಂಟದ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ನೋವು ದೀರ್ಘಕಾಲ ಮುಂದುವರಿದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.
ಆಹಾರ ಪದ್ಧತಿಯೂ ಸಹ ಈ ಸ್ನಾಯುಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶಗಳ ಕೊರತೆಯಾದಾಗ ಸ್ನಾಯುಗಳ ಸೆಳೆತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಸಿರು ಎಲೆಕೋಸು, ಬಾಳೆಹಣ್ಣು ಮತ್ತು ನಟ್ಸ್ ಸೇವನೆಯು ಸ್ನಾಯುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ವ್ಯಾ
ವ್ಯಾಯಾಮದ ವಿಚಾರಕ್ಕೆ ಬಂದರೆ, ಪಾರಿವಾಳದ ಭಂಗಿ (ಪಿಜನ್ ಪೋಸ್ ಅಥವಾ ಮಲಗಿದ ಸ್ಥಿತಿಯಲ್ಲಿ ಕಾಲುಗಳನ್ನು ಎದೆಯ ಹತ್ತಿರಕ್ಕೆ ಎಳೆದುಕೊಳ್ಳುವ ಸ್ಟ್ರೆಚ್‌ಗಳು ಪಿರಿಫಾರ್ಮಿಸ್ ಸ್ನಾಯುವಿಗೆ ಹೆಚ್ಚಿನ ಆರಾಮ ನೀಡುತ್ತವೆ. ಈ ವ್ಯಾಯಾಮಗಳನ್ನು ಮಾಡುವಾಗ ಸ್ನಾಯುಗಳ ಮೇಲೆ ಅತಿಯಾದ ಬಲ ಪ್ರಯೋಗ ಮಾಡದೆ ನಿಧಾನವಾಗಿ ಮಾಡುವುದು ಮುಖ್ಯ.
ಸ್ನಾಯುವಿನ ಈ ಸ್ಥಿತಿಯು ಮಾನಸಿಕ ಒತ್ತಡದಿಂದಲೂ ಹೆಚ್ಚಾಗಬಹುದು ಎಂಬುದು ಗಮನಾರ್ಹ. ಏಕೆಂದರೆ ಒತ್ತಡವು ದೇಹದ ಸ್ನಾಯುಗಳನ್ನು ಸಹಜವಾಗಿ ಬಿಗಿಗೊಳಿಸುತ್ತದೆ. ಹೀಗಾಗಿ ಯೋಗ ಮತ್ತು ಪ್ರಾಣಾಯಾಮದಂತಹ ಅಭ್ಯಾಸಗಳು ಸ್ನಾಯುಗಳ ವಿಶ್ರಾಂತಿಗೆ ಪೂರಕವಾಗಿವೆ.
ಸರಿಯಾದ ಪಾದರಕ್ಷೆಗಳ ಬಳಕೆ ಮತ್ತು ನಡಿಗೆಯ ಶೈಲಿಯ ಬಗ್ಗೆ ಜಾಗೃತಿ ವಹಿಸುವುದರಿಂದ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ತಡೆಯಬಹುದು. ಅಂತಿಮವಾಗಿ ಹೇಳುವುದಾದರೆ ಈ ಸಮಸ್ಯೆಯು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆಯೇ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಶಿಸ್ತುಬದ್ಧ ಜೀವನಶೈಲಿ ಮತ್ತು ಸರಿಯಾದ ಫಿಸಿಯೋಥೆರಪಿಯಿಂದ ಗುಣವಾಗುತ್ತದೆ.
ಆಯುರ್ವೇದದಲ್ಲಿ ಪಿರಿಫಾರ್ಮಸ್ ಸಿಂಡ್ರೋಮ್ ಅನ್ನು 'ಗೃಧ್ರಸಿ' ಎಂಬ ವಾತವ್ಯಾಧಿಗೆ ಹೋಲಿಸಲಾಗುತ್ತದೆ. ದೇಹದಲ್ಲಿ ವಾತ ದೋಷ ಪ್ರಕೋಪಗೊಂಡಾಗ ಸ್ನಾಯುಗಳು ಬಿಗಿಯಾಗಿ, ಸಿಯಾಟಿಕಾ ನರದ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಇದನ್ನು ವಿಶ್ಲೇಷಿಸಲಾಗುತ್ತದೆ.
ಇದಕ್ಕೆ ಮುಖ್ಯವಾಗಿ ಕಟಿ ಬಸ್ತಿ (ಸೊಂಟದ ಭಾಗದಲ್ಲಿ ತೈಲವನ್ನು ನಿಲ್ಲಿಸುವುದು), ಸ್ನೇಹನ (ಔಷಧೀಯ ತೈಲ ಮಸಾಜ್) ಮತ್ತು ಸ್ವೇದನ (ಹಬೆ ಚಿಕಿತ್ಸೆ) ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇವು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಿ ನರಗಳಿಗೆ ಶಕ್ತಿ ನೀಡುತ್ತವೆ. ಮಹಾನಾರಾಯಣ ತೈಲದಂತಹ ವಾತಹರ ತೈಲಗಳ ಬಳಕೆ ಇಲ್ಲಿ ಹೆಚ್ಚು ಪರಿಣಾಮಕಾರಿ. ಜೊತೆಗೆ, ಶುಂಠಿ ಮತ್ತು ಬೆಳ್ಳುಳ್ಳಿಯಂತಹ ವಾತನಿವಾರಕ ಆಹಾರ ಸೇವನೆಯು ಒಳಗಿನಿಂದ ಗುಣಪಡಿಸಲು ಸಹಕಾರಿ. ಆಯುರ್ವೇದವು ಕೇವಲ ನೋವು ಕಡಿಮೆ ಮಾಡುವುದಲ್ಲದೆ, ಸ್ನಾಯು ಮತ್ತು ನರಗಳ ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತದೆ.
Advertisement