

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ನಡೆಸಿದ ಯುರೋಪ್ ಪ್ರವಾಸವು ಭಾರತದ ಆರ್ಥಿಕ, ತಾಂತ್ರಿಕ ಹಾಗೂ ಜಾಗತಿಕ ರಾಜತಾಂತ್ರಿಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಈ ಪ್ರವಾಸದ ವೇಳೆ ಅವರು ನೆದರ್ಲ್ಯಾಂಡ್ , ಸ್ವೀಡನ್ , ನಾರ್ವೆ , UAE ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಿ ಅನೇಕ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಜಾಗತಿಕ ಮಟ್ಟದಲ್ಲಿ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನ, ಹೊಸ ಸಪ್ಲೈ ಚೈನ್ (ಸರಬರಾಜು ಸರಪಳಿಗಳ) ನಿರ್ಮಾಣ, ಗ್ರೀನ್ ಎನೆರ್ಜಿ (ಹಸಿರು ಇಂಧನ), ಸೆಮಿಕಂಡಕ್ಟರ್ ತಂತ್ರಜ್ಞಾನ, ರಕ್ಷಣಾ ಉತ್ಪಾದನೆ ಮತ್ತು ಹೂಡಿಕೆಗಳ ಆಕರ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಭಾರತ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದದ್ದು ಎನ್ನುವುದರಲ್ಲಿ ಯಾವುದೇ ಮಾತಿಲ್ಲ.
ಈ ಫಾರಿನ್ ಟ್ರಿಪ್ ವೈಯಕ್ತಿಕ ಉದ್ದೇಶದ್ದು, ನಾಡಿನ ಜನತೆಗೆ ಫಾರಿನ್ ಟ್ರಿಪ್ ಮಾಡಬೇಡಿ ಎನ್ನುತ್ತಾರೆ ಅವರೇ ಹೋಗುತ್ತಾರೆ ಎನ್ನುವವರಿಗೆ , ಈ ಟ್ರಿಪ್ ಪ್ರಮುಖ ಉದ್ದೇಶ ಭಾರತವನ್ನು ಕೇವಲ ದೊಡ್ಡ ಮಾರುಕಟ್ಟೆಯಾಗಿ ಅಲ್ಲದೆ, ವಿಶ್ವದ ಉತ್ಪಾದನಾ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವುದಾಗಿತ್ತು. ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ಚರ್ಚೆಗೂ ಈ ಭೇಟಿಗಳು ಹೊಸ ವೇಗ ನೀಡಿವೆ.
ನೆದರ್‌ಲ್ಯಾಂಡ್ಸ್ ಭೇಟಿ ಆರ್ಥಿಕವಾಗಿ ಬಹಳ ಮಹತ್ವದ್ದಾಗಿತ್ತು. ಈ ದೇಶವು ಜಗತ್ತಿನ ಅತ್ಯಾಧುನಿಕ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ವಿಶೇಷವಾಗಿ ಚಿಪ್ ತಯಾರಿಕಾ ಯಂತ್ರೋಪಕರಣಗಳ ಕ್ಷೇತ್ರದಲ್ಲಿ ನೆದರ್‌ಲ್ಯಾಂಡ್ಸ್ ಕಂಪನಿಗಳ ಪ್ರಭಾವ ವಿಶ್ವಮಟ್ಟದಲ್ಲಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು ವಿಸ್ತರಿಸಲು ಈ ಸಹಕಾರ ಅತ್ಯಗತ್ಯವಾಗಿದೆ. ಈ ಭೇಟಿಯ ವೇಳೆ ರಕ್ಷಣಾ ಕ್ಷೇತ್ರ, ಅಪರೂಪದ ಖನಿಜಗಳು (critical minerals), ಹಸಿರು ಇಂಧನ, ಜಲ ನಿರ್ವಹಣೆ ಮತ್ತು ತಂತ್ರಜ್ಞಾನ ಸಹಕಾರ ಕುರಿತಂತೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಒಟ್ಟು 17 ಒಪ್ಪಂದಗಳು ನಡೆದಿದ್ದು, ಅವು ಭಾರತಕ್ಕೆ ಭವಿಷ್ಯದ ಕೈಗಾರಿಕಾ ಬೆಳವಣಿಗೆಗೆ ಆಧಾರವಾಗಬಹುದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವುದು ಸೆಮಿ ಕಂಡಕ್ಟರ್ ಗಳಿಗೆ. ಯಾರಿಗೆ ಇದನ್ನು ತಯಾರಿಸುವ ತಂತ್ರಜ್ಞಾನ ಸಿದ್ದಿಸಿರುತ್ತೆ ಅವರೇ ಮುಂದಿನ ಜಗತ್ತಿನ ಹಿರಿಯಣ್ಣ. ಅಮೇರಿಕಾ ತನ್ನ ವ್ಯಾಪಾರಿಗಳನ್ನು ಒಟ್ಟಾಗಿಸಿ ಚೀನಾ ಪ್ರವಾಸ ಮಾಡಿದ್ದು ಕುಗ್ಗಿದ ಅಮೇರಿಕಾ ಶಕ್ತಿಯ ಪ್ರತೀಕ. ಅಮೇರಿಕಾ 9,500 ಕಿಲೋಮೀಟರ್ ತೈವಾನ್ ರಕ್ಷಣೆಗೆ ಪ್ರಯಾಣ ಮಾಡುವುದಿಲ್ಲ ಎನ್ನುವ ಟ್ರಂಪ್ ಹೇಳಿಕೆ ಚೀನಾದ ಪ್ರಾಬಲ್ಯಕ್ಕೆ ಹಿಡಿದ ಕನ್ನಡಿ.
ಇದರರ್ಥ ಅತಿ ಶೀಘ್ರದಲ್ಲಿ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡುತ್ತೆ. ತೈವಾನ್ ಮೇಲೆ ಹಿಡಿತ ಸಾಧಿಸುತ್ತೆ .ಅಂದರೆ ಸೆಮಿ ಕಂಡಕ್ಟರ್ ಮೇಲೆ ಹಿಡಿತ, ಜಗತ್ತಿನ ಮೇಲೆ ಹಿಡಿತ. ನಿಮಗೆಲ್ಲಾ ಗೊತ್ತಿರಲಿ ತೈವಾನ್ ವಿಶ್ವಕ್ಕೆ ಸೆಮಿ ಕಂಡಕ್ಟರ್ ಚಿಪ್ ತಯಾರಿಸಿ ಕಳಿಸುವ ಏಕೈಕ ಪ್ರಮುಖ ದೇಶ. 75 ರಿಂದ 90 ಪ್ರತಿಶತ ಚಿಪ್ಪುಗಳು ತಯಾರಾಗುವುದು ಇಲ್ಲಿ ! ಬಟ್ ಇಂತಹ ಚಿಪ್ ತಯಾರಿಸಲು ಬೇಕಾಗುವ ಯಂತ್ರ ತಯಾರಿಸುವುದು ನೆದರ್ಲ್ಯಾಂಡ್ !
ಜಗತ್ತಿನ ಬಹಳಷ್ಟು ದೇಶಗಳು ಹಣದ ಥೈಲಿ ಹಿಡಿದು ಬೇಡಿ ಕೊಂಡರೂ ಮೆಷಿನರಿ, ತಂತ್ರಜ್ಞಾನ ನೆದರ್ಲ್ಯಾಂಡ್ ನೀಡಿರುವುದು ಬೆರಳೆಣಿಕೆ ಸಂಸ್ಥೆಗಳಿಗೆ, ದೇಶಗಳಿಗೆ ಮಾತ್ರ! ಮೇಲೆ ಹೇಳಿದ 17 ಒಪ್ಪಂದದಲ್ಲಿ ಈ ಚಿಪ್ ತಯಾರಿಸುವ ಮಷೀನ್ ನೀಡುವ ಬಗ್ಗೆಯೂ ಒಂದು ಒಪ್ಪಂದವಿದೆ ! ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು, AI, ಡಿಜಿಟಲ್ ಉತ್ಪಾದನೆ ಮತ್ತು ಹೈಟೆಕ್ ಉತ್ಪನ್ನಗಳ ಬೆಳವಣಿಗೆಗೆ ಈ ಸಹಕಾರ ನೆರವಾಗಲಿದೆ.
ಸ್ವೀಡನ್ ಭೇಟಿಯ ಪ್ರಮುಖ ಉದ್ದೇಶ ಹಸಿರು ತಂತ್ರಜ್ಞಾನ, ಸ್ವಚ್ಛ ಇಂಧನ ಮತ್ತು ನವೀನ ಕೈಗಾರಿಕೆಗಳಲ್ಲಿ ಸಹಭಾಗಿತ್ವ ವೃದ್ಧಿಸುವುದಾಗಿತ್ತು. ಸ್ವೀಡನ್ ವಿಶ್ವದ ಅತ್ಯಾಧುನಿಕ ಮತ್ತು ಪರಿಸರ ಸ್ನೇಹಿ ಕೈಗಾರಿಕಾ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಮತ್ತು ಸ್ವೀಡನ್ ನಡುವೆ ಹಸಿರು ಉಕ್ಕು ಉತ್ಪಾದನೆ, ಕ್ಲೀನ್ ಎನರ್ಜಿ, AI, 5G, ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಚರ್ಚೆ ನಡೆಯಿತು. ಜಾಗತಿಕ ಮಟ್ಟದಲ್ಲಿ ಕಾರ್ಬನ್ ಉಳಿತಾಯ ಕಡಿಮೆ ಮಾಡುವ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತ ತನ್ನ ಕೈಗಾರಿಕಾ ವಿಸ್ತರಣೆಯನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಯುರೋಪಿನ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬಯಸುತ್ತಿದೆ. ಈ ಸಂಬಂಧ ಸ್ವೀಡನ್‌ನ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಭಾರತದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ಪಾದನಾ ಸಾಮರ್ಥ್ಯದ ವೃದ್ಧಿ ಸಾಧ್ಯವಾಗುತ್ತದೆ.
ನಾರ್ವೇ ಭೇಟಿಯೂ ಎನೆರ್ಜಿ ಪಾಲಿಸಿ ಮತ್ತು ಹಸಿರು ಆರ್ಥಿಕತೆಯ ದೃಷ್ಟಿಯಿಂದ ಬಹಳ ಪ್ರಮುಖವಾಗಿತ್ತು. ನಾರ್ವೇ ಯುರೋಪಿನ ಪ್ರಮುಖ ತೈಲ ಮತ್ತು ಅನಿಲ ರಫ್ತು ದೇಶವಾಗಿದ್ದು, ಜಾಗತಿಕ ಇಂಧನ ಅಸ್ಥಿರತೆಯ ಸಂದರ್ಭದಲ್ಲಿ ಭಾರತಕ್ಕೆ ಪರ್ಯಾಯ ಇಂಧನ ಸಹಕಾರ ಅತ್ಯಂತ ಅಗತ್ಯವಾಗಿದೆ. ಭಾರತ ತನ್ನ ಇಂಧನ ಸುರಕ್ಷತೆಯನ್ನು ಬಲಪಡಿಸಲು ನಾರ್ವೇ ಜೊತೆ ಸಹಕಾರ ವೃದ್ಧಿಸಲು ಮುಂದಾಗಿದೆ. ವಿಶೇಷವಾಗಿ ಗ್ರೀನ್ ಹೈಡ್ರೋಜನ್, ಸಮುದ್ರ ಆರ್ಥಿಕತೆ, ನವೀಕರಿಸಬಹುದಾದ ಇಂಧನ ಮತ್ತು ಸಮುದ್ರ ಸಾರಿಗೆ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ತಂತ್ರಜ್ಞಾನ ವಿನಿಮಯ ಕುರಿತು ಚರ್ಚೆಗಳು ನಡೆದವು. ನಾರ್ವೇ ಸೇರಿದಂತೆ ನಾರ್ಡಿಕ್ ರಾಷ್ಟ್ರಗಳು ವಿಶ್ವದ ಅತ್ಯುತ್ತಮ ಜೀವನಮಟ್ಟ ಮತ್ತು ತಂತ್ರಜ್ಞಾನ ಸಾಮರ್ಥ್ಯ ಹೊಂದಿರುವುದರಿಂದ, ಭಾರತವು ಇವರೊಂದಿಗೆ ಸಹಕಾರ ವೃದ್ಧಿಸುವ ಮೂಲಕ ತನ್ನ “ವಿಕಸಿತ ಭಾರತ” ಗುರಿಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ.
ಇಟಲಿ ಭೇಟಿ ಈ ಪ್ರವಾಸದ ಅತ್ಯಂತ ಗಮನಾರ್ಹ ಭಾಗವಾಗಿತ್ತು. ಮೆಲನಿ ಮತ್ತು ಮೋದಿ ಅವರ ಭೇಟಿಯ ವೇಳೆ ಭಾರತ–ಇಟಲಿ ಸಂಬಂಧವನ್ನು “Special Strategic Partnership” ಮಟ್ಟಕ್ಕೆ ಏರಿಸಲಾಯಿತು. ಇದು ಕೇವಲ ರಾಜತಾಂತ್ರಿಕ ಘೋಷಣೆ ಮಾತ್ರ ಆಗಿರದೆ ನಿಜವಾದ ರಕ್ಷಣಾ ಉತ್ಪಾದನೆ, ಸಮುದ್ರ ಮೂಲಸೌಕರ್ಯ, ಕ್ರಿಟಿಕಲ್ ಮಿನರಲ್ಸ್, ಆರೋಗ್ಯ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೀರ್ಘಕಾಲಿಕ ಸಹಭಾಗಿತ್ವ ನಿರ್ಮಿಸುವ ದಿಕ್ಕಿನ ಮಹತ್ವದ ಹೆಜ್ಜೆಯಾಗಿದೆ. ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ ಸಂಯುಕ್ತ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕುರಿತು ಹೊಸ ಮಾರ್ಗಸೂಚಿ ರೂಪಿಸಲಾಯಿತು. ಭಾರತ ತನ್ನ ರಕ್ಷಣಾ ಉತ್ಪಾದನೆಯನ್ನು ಸ್ವದೇಶೀಕರಣಗೊಳಿಸುವ “ಮೇಕ್ ಇನ್ ಇಂಡಿಯಾ ” ಗುರಿಗೆ ಅನುಗುಣವಾಗಿ ಇಟಲಿಯ ತಂತ್ರಜ್ಞಾನ ಮತ್ತು ಉತ್ಪಾದನಾ ಅನುಭವವನ್ನು ಬಳಸಿಕೊಳ್ಳಲು ಬಯಸುತ್ತಿದೆ. ಜೊತೆಗೆ ಭಾರತ–ಇಟಲಿ ವ್ಯಾಪಾರವನ್ನು ಮುಂದಿನ ಕೆಲವು ವರ್ಷಗಳಲ್ಲಿ ಬಹಳ ಮಟ್ಟಿಗೆ ಹೆಚ್ಚಿಸುವ ಗುರಿಯನ್ನೂ ಎರಡೂ ರಾಷ್ಟ್ರಗಳು ಘೋಷಿಸಿವೆ.
ಈ ಯುರೋಪ್ ಪ್ರವಾಸದ ಹಿಂದೆ ಮತ್ತೊಂದು ಪ್ರಮುಖ ಆರ್ಥಿಕ ಉದ್ದೇಶವೂ ಇತ್ತು. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಅನೇಕ ಪಾಶ್ಚಾತ್ಯ ರಾಷ್ಟ್ರಗಳು ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಯಸುತ್ತಿವೆ. “China Plus One” ಎಂಬ ತಂತ್ರದ ಭಾಗವಾಗಿ ಭಾರತವನ್ನು ಪರ್ಯಾಯ ಉತ್ಪಾದನಾ ಕೇಂದ್ರವಾಗಿ ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆ ಭಾರತ ತನ್ನ ಯುವ ಜನಸಂಖ್ಯೆ, ದೊಡ್ಡ ಮಾರುಕಟ್ಟೆ, ಡಿಜಿಟಲ್ ಸಾಮರ್ಥ್ಯ ಮತ್ತು ಕಡಿಮೆ ಉತ್ಪಾದನಾ ವೆಚ್ಚಗಳನ್ನು ಬಳಸಿಕೊಂಡು ಜಾಗತಿಕ ಕಂಪನಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಮೋದಿ ಅವರ ಈ ಪ್ರವಾಸವು ಭಾರತವನ್ನು ವಿಶ್ವಾಸಾರ್ಹ ಆರ್ಥಿಕ ಪಾಲುದಾರ ಎಂದು ಯುರೋಪ್‌ಗೆ ತೋರಿಸುವ ಪ್ರಯತ್ನವಾಗಿತ್ತು. ವಿಶೇಷವಾಗಿ ಸೆಮಿಕಂಡಕ್ಟರ್, ರಕ್ಷಣಾ ಉತ್ಪಾದನೆ, ಎಲೆಕ್ಟ್ರಿಕ್ ವಾಹನಗಳು, ಹಸಿರು ಇಂಧನ ಮತ್ತು AI ಕ್ಷೇತ್ರಗಳಲ್ಲಿ ಭಾರತ ಮುಂದಿನ ದಶಕದಲ್ಲಿ ದೊಡ್ಡ ಬೆಳವಣಿಗೆಯನ್ನು ಸಾಧಿಸಲು ಬಯಸುತ್ತಿದೆ.
ಈ ಭೇಟಿಯ ಮತ್ತೊಂದು ಮಹತ್ವದ ಅಂಶ ಎಂದರೆ ಹೂಡಿಕೆ ಆಕರ್ಷಣೆ. ವಿವಿಧ ವರದಿಗಳ ಪ್ರಕಾರ, ಈ ಐದು ರಾಷ್ಟ್ರಗಳ ಪ್ರವಾಸದಿಂದ ಭಾರತಕ್ಕೆ ಬಹುಬಿಲಿಯನ್ ಡಾಲರ್ ಮಟ್ಟದ ಹೂಡಿಕೆ ಭರವಸೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚೆಗಳು ನಡೆದಿವೆ. ಭಾರತದಲ್ಲಿ ಮೂಲಸೌಕರ್ಯ, ಹಸಿರು ಶಕ್ತಿ, ಲಾಜಿಸ್ಟಿಕ್ಸ್, ಡಿಜಿಟಲ್ ತಂತ್ರಜ್ಞಾನ ಮತ್ತು ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಯುರೋಪಿನ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಉದ್ಯೋಗ ಸೃಷ್ಟಿ, ರಫ್ತು ವೃದ್ಧಿ ಮತ್ತು ರೂಪಾಯಿ ಮೌಲ್ಯಕ್ಕೆ ದೀರ್ಘಕಾಲಿಕ ಬೆಂಬಲ ದೊರಕಬಹುದು.
ಒಟ್ಟಿನಲ್ಲಿ ನೋಡಿದರೆ, ಮೋದಿ ಅವರ ಯುರೋಪ್ ಪ್ರವಾಸವು ಕೇವಲ ರಾಜಕೀಯ ಅಥವಾ ಸಾಂಪ್ರದಾಯಿಕ ರಾಜತಾಂತ್ರಿಕ ಕಾರ್ಯಕ್ರಮವಾಗಿರಲಿಲ್ಲ.ಕೆಲವರು ಹೇಳುವಂತೆ ವೈಯಕ್ತಿಕ ಮೋಜಿಗೂ ಹೋದದ್ದಲ್ಲ. ಇದು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ರೂಪಿಸುವ ದೀರ್ಘಕಾಲಿಕ ತಂತ್ರದ ಭಾಗವಾಗಿತ್ತು. ಸೆಮಿಕಂಡಕ್ಟರ್‌ಗಳಿಂದ ಹಸಿರು ಇಂಧನದವರೆಗೆ, ರಕ್ಷಣೆಯಿಂದ ಡಿಜಿಟಲ್ ತಂತ್ರಜ್ಞಾನವರೆಗೆ ಅನೇಕ ಕ್ಷೇತ್ರಗಳಲ್ಲಿ ಭಾರತ ಯುರೋಪಿನ ಸಹಕಾರವನ್ನು ಪಡೆದುಕೊಳ್ಳಲು ಮುಂದಾಗಿದೆ. ಈ ಒಪ್ಪಂದಗಳು ತಕ್ಷಣದ ಫಲಿತಾಂಶ ನೀಡುವುದಿಲ್ಲ. ಮುಂದಿನ ವರ್ಷದಿಂದ ಇದನ್ನು ಕಾರ್ಯರೂಪಕ್ಕೆ ತರಲು ಶುರು ಮಾಡಿದರೆ ಮುಂದಿನ ಒಂದು ದಶಕದಲ್ಲಿ ಭಾರತದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಬಲವಾದ ನೆಲೆಯನ್ನು ಸೃಷ್ಟಿಸಬಹುದಾಗಿದೆ. ಜಾಗತಿಕ ರಾಜಕೀಯ ಮತ್ತು ವ್ಯಾಪಾರದಲ್ಲಿ ಭಾರತ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಈ ಯುರೋಪ್ ಪ್ರವಾಸವನ್ನು ಭಾರತದ ಭವಿಷ್ಯದ ಆರ್ಥಿಕ ದಿಕ್ಕನ್ನು ನಿರ್ಧರಿಸುವ ಮಹತ್ವದ ಹೆಜ್ಜೆಯಾಗಿ ನೋಡಬಹುದು.
ಕೊನೆಮಾತು: ಒಟ್ಟಾರೆ ಈ ಪ್ರವಾಸಗಳಿಂದ ಭಾರತಕ್ಕೆ 40 ಬಿಲಿಯನ್ ಡಾಲರ್ ಬಂಡವಾಳ ಹರಿದು ಬರಲಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಮೂರುವರೆ ಲಕ್ಷ ಕೋಟಿ ರೂಪಾಯಿ. ಜಾಗತಿಕ ವಿತ್ತ ಜಗತ್ತು ಆರ್ಥಿಕ ಕುಸಿತಕ್ಕೆ ತುತ್ತಾಗುವ ಸಂಭಾವ್ಯತೆ ಹೆಚ್ಚಾಗಿರುವ ಈ ದಿನಗಳಲ್ಲಿ ಇದೆಷ್ಟು ದೊಡ್ಡ ಮೊತ್ತ ಎನ್ನುವ ಪರಿಕಲ್ಪನೆ ಇರುವವರಿಗೆ ಖಂಡಿತ ಅರ್ಥವಾಗಿರುತ್ತದೆ. ಚೀನಾ , ಪಾಕಿಸ್ತಾನವನ್ನು ತನ್ನ ನಂಬಿಕಸ್ಥ ಪಾರ್ಟ್ನರ್ ಎಂದು ಪದೇಪದೇ ಹೇಳುವ ಸಮಯದಲ್ಲಿ ರಾಜತಾಂತ್ರಿಕ ದೃಷ್ಟಿಯಲ್ಲಿ ಕೂಡ ಈ ಪ್ರವಾಸ ಭಾರತಕ್ಕೆ ಬಹಳಷ್ಟು ಲಾಭವನ್ನೇ ಮಾಡಿಕೊಟ್ಟಿದೆ.
Advertisement