

ಸಾಲವು ವ್ಯಕ್ತಿಯ ಆರ್ಥಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಇವತ್ತಿನ ದಿನದಲ್ಲಿ ಸೈಟು, ಮನೆ , ಕಾರು ಇತ್ಯಾದಿ ಯಾವುದೇ ರೀತಿಯ ಆಸ್ತಿಯನ್ನು ಹೊಂದಲು ಸಾಲ ಮಾಡಲೇ ಬೇಕಾಗುತ್ತದೆ. ಸಾಲ ಮಾಡದೆ ಇವತ್ತಿನ ಬೆಲೆಯಲ್ಲಿ ಆಸ್ತಿಯನ್ನು ನಿರ್ಮಿಸುವುದು ಅಸಾಧ್ಯ. ಅಥವಾ ಅದು ಕೇವಲ ಒಂದು ಪ್ರತಿಶತ ಜನರಿಗೆ ಮಾತ್ರ ಸಾಧ್ಯವಾಗುವ ವಿಚಾರವಾಗಿದೆ. ಹೀಗಾಗಿ ಅಭಿವೃದ್ಧಿ ಹೊಂದಲು ಸಾಲ ಮಾಡದೆ ವಿಧಿಯಿಲ್ಲ ಎನ್ನುವಂತಾಗಿದೆ.
ಒಂದೊಳ್ಳೆ ಬಿಸಿನೆಸ್ ಐಡಿಯಾ ಇದೆ. ಆದರೆ ಹಣವಿಲ್ಲ. ನಮಗೆ ಬೇಕಾಗುವಷ್ಟು ಹಣವನ್ನು ಜೋಡಿಸಿಕೊಳ್ಳುವ ಸಮಯದಲ್ಲಿ ಆ ಬಿಸಿನೆಸ್ ಐಡಿಯಾ ಹಳತಾಗಿರುತ್ತದೆ. ಅಥವಾ ಬೇರೆ ಯಾರೋ ಅದನ್ನು ಮಾಡಿರುತ್ತಾರೆ. ಇಂತಹ ಸಮಯದಲ್ಲಿ ಕೂಡ ಬಂಡವಾಳವನ್ನು ಸಾಲದ ರೂಪದಲ್ಲಿ ಎತ್ತದೆ ಅನ್ಯ ಮಾರ್ಗವಿಲ್ಲ. ಸಾಲ ಮಾಡಿ ಅದರಿಂದ ಸಾಮ್ರಾಜ್ಯ ಕಟ್ಟಿದವರ ಸಂಖ್ಯೆ ಅಸಂಖ್ಯ.
ನಮ್ಮ ಮುಂದೆ ಕಾಣುವುದು , ಕೇಳುವುದು ಗೆದ್ದ ಕಥೆಗಳು ಮಾತ್ರ. ಗೆದ್ದವರು ಸಾವಿರವಾದರೆ ಸೋತವರು ಲಕ್ಷ. ಹೀಗಾಗಿ ಸಾಲ ಮುನ್ನ ನಾವು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಅಧ್ಯಾಯದಲ್ಲಿ ಅದೇನು ಎನ್ನುವುದನ್ನು ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ಇಲ್ಲಿಯವರೆಗೂ ಯಾರೂ ಹೇಳಿರದ ಒಂದಂಶವನ್ನು ಕೂಡ ನಿಮಗೆ ಹೇಳುವೆ. ಈ ಅಂಶವನ್ನು ಒಂದಷ್ಟು ನಿಗಾವಹಿಸಿ ವಿಶ್ಲೇಷಿಸಿ. ಆ ನಂತರ ಸಾಲ ಮಾಡುವ ಮುನ್ನ ಪರಿಗಣಿಸಬೇಕಾದ ಅಂಶಗಳನ್ನು ಕೂಡ ಅಷ್ಟೇ ಬದ್ಧತೆಯಿಂದ ಗಮನಿಸಿ. ಇಲ್ಲಿ ಹೇಳುವ ಅಂಶಗಳು ತಾಳೆಯಾಗುತ್ತಿಲ್ಲ ಎಂದರೆ ಸಾಲ ಮಾಡಬಾರದು ಎಂದರ್ಥ.
ಸಾಲದ ಡೆಫಿನಿಷನ್ ಮತ್ತೊಮ್ಮೆ ಜ್ಞಾನಪಿಸುವೆ. ನೀವು ಮುಂದಿನ ಹತ್ತಾರು ವರ್ಷದಲ್ಲಿ ದುಡಿಯಬಹುದಾದ ಸಂಭಾವ್ಯ ಹಣವನ್ನು ಇವತ್ತಿಗೆ ಮುಂಗಡವಾಗಿ ಪಡೆಯುವುದು ಎಂದರ್ಥ. ಹೀಗಾಗಿ ಸಾಲದ ಹಣ ಯಾರೋ ನಿಮಗೆ ಅಯ್ಯೋ ಪಾಪ ಎಂದು ಕರುಣೆಯಿಂದ ಕೊಟ್ಟದ್ದಲ್ಲ. ಅದು ನಿಮ್ಮದೇ ಹಣ, ಮುಂಗಡವಾಗಿ ಪಡೆಯುತ್ತಿದ್ದಿರಿ ಮತ್ತು ಅದಕ್ಕೆ ನೀವು ಬಡ್ಡಿಯನ್ನು ಸಹ ನೀಡಲು ಸಿದ್ಧರಿದ್ದೀರಿ. ಹೀಗಾಗಿ ಎಚ್ಚರ ! ಸಾಲವನ್ನು ಸರಿಯಾಗಿ ಉಪಯೋಗಿಸಿ ಕೊಳ್ಳುವುದು ಅತಿ ಮುಖ್ಯ.
ವಿಶೇಷವಾಗಿ ಗಮನಿಸಬೇಕಾದ ಎರಡು ಅಂಶಗಳು :
ಸಾಲ ಮಾಡುವ ಮುನ್ನ ಯಾವುದೆಲ್ಲರದ ಬಗ್ಗೆ ನಾವು ಚಿಂತಿಸಬೇಕು ? ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ?ಪರಿಗಣಿಸಬೇಕು ? ಎನ್ನುವುದು ಇವತ್ತಿಗೆ ಬಹಳಷ್ಟು ಜನರಿಗೆ ಗೊತ್ತಿದೆ. ಅವೇನು ಎನ್ನುವುದನ್ನು ಹೇಳುವೆ. ಅದಕ್ಕೆ ಮುಂಚೆ ಎರಡು ವಿಶೇಷ ಅಂಶಗಳನ್ನು ಗಮನಿಸೋಣ.
ಎಲ್ಲಕ್ಕಿಂತ ಮೊದಲಿಗೆ ಮಾಹಿತಿಯ ಹರಿವು . ಇದನ್ನು ನಾವು ಇಂಗ್ಲೀಷಿನಲ್ಲಿ ಫ್ಲೋ ಆಫ್ ಇನ್ಫಾರ್ಮಶನ್ ಎನ್ನಬಹುದು. ಗಮನಿಸಿ ಒಂದು ಮಾಹಿತಿ ಸೃಷ್ಟಿಯಾದ ಮೂಲದಿಂದ ಹರಿಯುತ್ತಾ ಬರುತ್ತದೆ. ಅದು ಸಾಮಾನ್ಯ ಜನರಿಗೆ ತಲುಪುವುದಕ್ಕೆ ಮುಂಚೆ ಅನೇಕ ಹಂತಗಳನ್ನು ದಾಟಿ ಬಂದಿರುತ್ತದೆ. ಪಬ್ಲಿಕ್ ಡೊಮೈನ್ಗಳಲ್ಲಿ , ಸಾರ್ವಜನಿಕರಿಗೆ ಅದು ರೀಲ್ಸ್ ಮೂಲಕ , ವಿಡಿಯೋ ಗಳ ಮೂಲಕ , ಪತ್ರಿಕೆಯ ಸುದ್ದಿಗಳ ಮೂಲಕ ತಲುಪುವ ವೇಳೆಗೆ ಅದು ಸಾಕಷ್ಟು ತನ್ನ ಮಹತ್ವ ಮತ್ತು ಶಕ್ತಿಯನ್ನು ಕಳೆದುಕೊಂಡಿರುತ್ತದೆ. ನಾವು ಈ ಮಾಹಿತಿಯನ್ನು ನಂಬಿಕೊಂಡು ಇದರಿಂದ ಬಿಸಿನೆಸ್ ಪ್ಲಾನ್ ಸಿದ್ದಪಡಿಸಿ ಅದಕ್ಕಾಗಿ ಸಾಲ ಮಾಡುತ್ತೇವೆ.
ಈ ವೇಳೆಗೆ ಮಾಹಿತಿಯನ್ನು ಸೃಷ್ಟಿಯ ಸಮಯದಲ್ಲಿ ಅಂದರೆ ಅದರ ಮೂಲದಲ್ಲಿ ಪಡೆದುಕೊಂಡವರು ದೊಡ್ಡ ಸಾಮ್ರಾಜ್ಯ ಸೃಷ್ಟಿಸಿಕೊಂಡು ಬಿಟ್ಟಿರುತ್ತಾರೆ. ಉದಾಹರಣೆಯನ್ನು ನೋಡೋಣ. ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರ ಮಕ್ಕಳಿ ನಿಖಿಲ್ ಮತ್ತು ಸಾರಂಗ್ ಗಡ್ಕರಿ ಅವರು ಆಗ್ರೋ ಇಂಡಸ್ಟ್ರೀಸ್ ತೆರೆದಿದ್ದಾರೆ. ಪೆಟ್ರೋಲಿಯಂ ಪದಾರ್ಥದಲ್ಲಿ ಎಥನಾಲ್ ಬಳಕೆ ಮಾಡಬೇಕು ಎನ್ನುವುದನ್ನು ಗಡ್ಕರಿ ಅವರು ಬಹಳ ವರ್ಷಗಳಿಂದ ಹೇಳುತ್ತಾ ಬರುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಈ ಮಾತು ಮಾರುಕಟ್ಟೆಯಲ್ಲಿ ಚಾಲನೆಯಲ್ಲಿತ್ತು. ಅಂದರೆ ಈ ಮಾಹಿತಿ ಹುಟ್ಟಿ ಹತ್ತು ವರ್ಷವಾಯ್ತು. ಅವತ್ತಿಗೆ ಈ ಮಾಹಿತಿಯ ಮೇಲೆ ಬಂಡವಾಳ ಹೂಡಿದಿದ್ದರೆ ಏನಾಗುತ್ತಿತ್ತು ?
2023 ರಲ್ಲಿ ನೂರು ಕೋಟಿ ಸಂಸ್ಥೆ ಇವತ್ತು ನಾಲ್ಕು ಸಾವಿರ ಕೋಟಿ ರೂಪಾಯಿಗೂ ಮೀರಿದ ವ್ಯಾಲ್ಯೂವೇಷನ್ ಹೊಂದಿದೆ. ಇವತ್ತಿಗೆ ಎಥನಾಲ್ ಬಳಕೆ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿದೆ. ಈಗ ಇಂತಹ ಸಂಸ್ಥೆಯನ್ನು ಕಟ್ಟಲು ದೊಡ್ಡ ಮಟ್ಟದ ಸಾಲ ಮಾಡುವುದು ಮೂರ್ಖತನವಾಗುತ್ತದೆ. ಇದರರ್ಥ ಗಡ್ಕರಿಯವರು ತಪ್ಪು ಮಾಡಿದ್ದಾರೆ ಎಂದಲ್ಲ.
ಅವರಿಗೆ ಮಾಹಿತಿಯನ್ನು ಪ್ರಥಮ ಹಂತದಲ್ಲಿ ಹಿಡಿಯುವ ಕ್ಷಮತೆ ಇತ್ತು. ಈ ಕೆಲಸವನ್ನು ಬೇರೆ ಯಾರು ಬೇಕಾದರೂ ಮಾಡಬಹುದಿತ್ತು. ಮಾಹಿತಿಯನ್ನು ಯಾವ ಹಂತದಲ್ಲಿ ನಾವು ಸೇವಿಸುತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ನಾವು ಬಂಡವಾಳ ಹೂಡಬೇಕೆ ? ಸಾಲ ಮಾಡಬೇಕೆ ? ಎನ್ನುವ ಪ್ರಶ್ನೆಯನ್ನು ಹಾಕ್ಕಿಕೊಳ್ಳಬೇಕು. ಬಹುತೇಕ ಸಾಲ ಮಾಡುವವರು ಈ ಅಂಶವನ್ನು ಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಟ್ರೆಂಡ್ ನಲ್ಲಿರುವುದರ ಮೇಲೆ ಸಾಲ ಮಾಡಿ ಬಂಡವಾಳ ಹೂಡುತ್ತಾರೆ. ಮಾಹಿತಿ 'ತಾಜಾ ಮತ್ತು ಯಂಗ್ ' ಆಗಿದ್ದಾಗ ಗ್ರಹಿಸಬೇಕು.
ಮಾಹಿತಿಯನ್ನು ನಾವು ಯಾವ ಹಂತದಲ್ಲಿ ಕಾನ್ಸುಮ್ ಮಾಡುತ್ತಿದ್ದೇವೆ. ಯಾವ ಹಂತದಲ್ಲಿ ಅದು ನಮ್ಮನ್ನು ತಲುಪಿದೆ ಎನ್ನುವುದು ಬಹಳ ಮುಖ್ಯ. ಜಗತ್ತಿನ 95 ಪ್ರತಿಶತಕ್ಕೂ ಹೆಚ್ಚು ಜನ ಮಾಹಿತಿಯ ಕೊನೆಯ ಬಳಕೆದಾರರಾಗಿರುತ್ತದೆ , ಅಂದರೆ ಎಂಡ್ user ಆಗಿರುತ್ತಾರೆ.ಹೀಗಾಗಿ ಅವರು ಸಾಲ ಮಾಡಿದರೂ ಅದರಿಂದ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಉಳಿದ ಐದು ಪ್ರತಿಶತದಲ್ಲಿ ಕೂಡ ಕೇವಲ ಒಂದು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತದ ಜನರು ಮಾತ್ರ ಮಾಹಿತಿಯನ್ನು ಮೂಲದಲ್ಲಿ ಗ್ರಹಿಸಕೊಳ್ಳುತ್ತಾರೆ. ಹೀಗಾಗಿ ಅವರು ಸಾಲ ಮಾಡಿ ಹೂಡಿಕೆ ಮಾಡಿ ಅದರಿಂದ ಸಂಪತ್ತು ಸೃಷ್ಟಿಸಿಕೊಳ್ಳುತ್ತಾರೆ. ಡೆಟ್ ಲಿವರೇಜ್ ಎನ್ನುವ ಪದವನ್ನು ನಾವು ಬಹಳಷ್ಟು ಕೇಳಿದ್ದೇವೆ. ಡೆಟ್ ಲಿವರೇಜ್ ಮಾಡಿಕೊಳ್ಳಲು ಮಾಹಿತಿಯನ್ನು ಲಿವರೇಜ್ ಮಾಡಿಕೊಳ್ಳುವ ಶಕ್ತಿ ಇರಬೇಕು. ಇಲ್ಲವಾದಲ್ಲಿ ಅವರು ಮಾಡಿದರು ಎಂದು ನಾವು ಅದನ್ನು ಮಾಡಲು ಹೋದರೆ ಡೆಟ್ ಟ್ರ್ಯಾಪ್ ನಲ್ಲಿ ಸಿಗುವುದು ನಿಶ್ಚಿತ.
ಎರಡನೆಯದಾಗಿ ಹಣದ ಹರಿವು. ಇದನ್ನು ನಾವು ಮನಿ ಫ್ಲೋ ಎನ್ನಬಹುದು. ಹಣ ಸೃಷ್ಟಿಯಾದ ನಂತರ ಸಾಮಾನ್ಯ ಜನರ ಕೈಗೆ ಬಂದು ತಲುಪುವಷ್ಟರಲ್ಲಿ ಬಹಳಷ್ಟು ಹಂತಗಳನ್ನು ದಾಟಿ ಬರುತ್ತದೆ. ಯಾವ ಹಂತದಲ್ಲಿ ಹಣ ನಮ್ಮ ಕೈಸೇರಿದೆ ಎನ್ನುವುದರ ಅರಿವು ಕೂಡ ಈ ಜಗತ್ತಿನ ೯೫ ಪ್ರತಿಶತಕ್ಕೂ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೊನೆಯ ಹಂತದಲ್ಲಿ ಹಣವನ್ನು ಪಡೆದುಕೊಂಡವರು ಸಾಲ ಮಾಡಬಾರದು. ಆದರೆ ಇವತ್ತಿನ ದಿನದಲ್ಲಿ ಮನೆ ,ಸೈಟು , ಕಾರು ಎನ್ನುವ ಕಾರಣಕ್ಕೆ ಸಾಲ ಮಾಡುತ್ತಿರುವವರು ಈ ರೀತಿ ಕೊನೆಯ ಹಂತದಲ್ಲಿ ಹಣವನ್ನು ಪಡೆದುಕೊಂಡವರು ಎನ್ನುವುದು ನಿರ್ವಿವಾದ. ಹಣದ ಉಗಮವಾದ ತಕ್ಷಣ ಅದನ್ನು ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದು ರಿಸೆರ್ವ್ ಬ್ಯಾಂಕಿನ ಮೂಲಕ ಬ್ಯಾಂಕುಗಳನ್ನು ತಲುಪುತ್ತದೆ. ಆ ನಂತರ ಕಾರ್ಪೊರೇಟ್ ಹೌಸುಗಳಿಗೆ ಆ ನಂತರ ಸಣ್ಣ ಪುಟ್ಟ ವ್ಯಾಪಾರಗಳಿಗೆ ಕೊನೆಗೆ ಅದು ಮೆಜಾರಿಟಿ ಜನರನ್ನು ತಲುಪುವುದು ವೇತನ ಅಥವಾ ಸಂಬಳದ ಮೂಲದ ಮೂಲಕ .
ವಾಣಿಜ್ಯ ಕಾರಣಗಳಿಗೆ ಹಣವನ್ನು ಸಾಲದ ರೂಪದಲ್ಲಿ ಪಡೆಯುವ ಬ್ಯಾಂಕುಗಳು , ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳು , ಬಿಸಿನೆಸ್ ಹೌಸುಗಳು , ಡಿಜಿಟಲ್ ವಾಲೆಟ್ ಸಂಸ್ಥೆಗಳು , ಹೀಗೆ ಒಟ್ಟಾರೆ ಯಾರೆಲ್ಲಾ ಸಾಲದ ಹಣವನ್ನು ಮತ್ತೆ ಸಾಲವನ್ನಾಗಿ ಕೊಟ್ಟು ಲಾಭವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರೆಲ್ಲರೂ ಸಾಲ ಮಾಡಬಹುದು. ಕೊನೆಯದಾಗಿ ಹಣವನ್ನು ವೇತನದ ಮೂಲಕ ಅಥವಾ ಅತಿ ಸಣ್ಣ ವ್ಯಾಪಾರದ ಮೂಲಕ ಪಡೆದುಕೊಳ್ಳುವ ಜನರ ಕೈಗೆ ಹಣ ಸಾಲದ ರೂಪದಲ್ಲಿ ತಲುಪುವ ವೇಳೆಗೆ ಕಾಸ್ಟ್ ಆಫ್ ಡೆಟ್ ದುಪ್ಪಟ್ಟಾಗಿರುತ್ತದೆ. ಡೆಟ್ ಲೀವೆರೇಜ್ ಮಾಡಿಕೊಳ್ಳುವುದು ಈ ಜನರಿಂದ ಸಾಧ್ಯವೇ ಇಲ್ಲದ ಮಟ್ಟಿಗೆ ಬಡ್ಡಿ ಇರುತ್ತದೆ.
ಇಂತಹ ಸಮಯದಲ್ಲಿ ಉತ್ಪನ್ನವಾಗುವ ಪ್ರಶ್ನೆ , ಹಾಗಾದರೆ ನಾವು ಸಾಲ ಮಾಡಬಾರದೇ ? ಸಾಲ ಮಾಡುವುದು ತಪ್ಪೇ ? ಇದಕ್ಕೆ ಉತ್ತರವನ್ನು ಎಲ್ಲರಿಗೂ ಸಮವಾಗಿ , ಒಂದೇ ಎನ್ನುವಂತೆ ಹೇಳಲಾಗುವುದಿಲ್ಲ. ಆದರೆ ಎಲ್ಲರಿಗೂ ಒಂದಂಶವನ್ನು ಖಂಡಿತ ಹೇಳಬಹುದು. ನೀವು ನೀಡುವ ಬಡ್ಡಿಗಿಂತ ಹೆಚ್ಚಿನ ಉತ್ಪತ್ತಿಯನ್ನು ನೀವು ತೆಗೆಯಬಲ್ಲಿರಾ ? ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಿ. ಹೌದು ಎಂದಾದರೆ , ಎಷ್ಟು ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಿ. ಹೀಗೆ ಬಂದ ಉತ್ತರದಿಂದ ಅಪರ್ಚುನಿಟಿ ಕಾಸ್ಟ್ ತೆಗೆಯಿರಿ. ಇದಾದ ಮೇಲೆ ನಿಮಗೆ ಉತ್ತರ ಧನಾತ್ಮಕ ಎನ್ನಿಸಿದರೆ , ಅದನ್ನು ಪಡೆದುಕೊಳ್ಳಲು ಹಾಕುವ ಪರಿಶ್ರಮ ಸರಿ ಎನ್ನಿಸಿದರೆ ಸಾಲ ಧಾರಾಳವಾಗಿ ಮಾಡಬಹುದು. ಇಲ್ಲವಾದಲ್ಲಿ ಸಾಲ ಮಾಡಬಾರದು . ಎಚ್ಚರ!