ಚಿನ್ನ ಮತ್ತು ಬೆಳ್ಳಿ, ಹೊಸ ಸೂಪರ್‌ ಸೈಕಲ್‌ನ ಆರಂಭವೇ? (ಹಣಕ್ಲಾಸು)

ಚಿನ್ನದ ಬೆಲೆ ಏರಿದಾಗ ಸಾಮಾನ್ಯವಾಗಿ ಬಡ್ಡಿದರ ಕಡಿಮೆಯಾಗಬಹುದು, ಡಾಲರ್ ದುರ್ಬಲವಾಗಿದೆ, ಯುದ್ಧದ ಭೀತಿ ಇದೆ ಎಂಬ ಕಾರಣಗಳನ್ನು ಕೇಳುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ...
Silver- Gold new super cycle (file photo)
ಚಿನ್ನ, ಬೆಳ್ಳಿ, ಹೊಸ ಸೂಪರ್ ಸೈಕಲ್ (ಸಂಗ್ರಹ ಚಿತ್ರ)online desk
Updated on

ಒಂದು ಕಾಲದಲ್ಲಿ ಚಿನ್ನ ಎಂದರೆ ಭಾರತೀಯ ಕುಟುಂಬಗಳಿಗೆ ಆಭರಣ, ಉಳಿತಾಯ ಮತ್ತು ಸಂಕಷ್ಟದ ಸಮಯದಲ್ಲಿ ನೆರವಾಗುವ ಆಸ್ತಿ. ಬೆಳ್ಳಿ ಎಂದರೆ ಪೂಜಾ ಸಾಮಗ್ರಿ, ಆಭರಣ ಅಥವಾ ಸಾಂಪ್ರದಾಯಿಕ ಬಳಕೆಯ ಲೋಹವಾಗಿತ್ತು ಅಷ್ಟೇ . ಆದರೆ ಇವತ್ತು  ಜಾಗತಿಕ ಆರ್ಥಿಕತೆಯ ಸ್ವರೂಪ ಬದಲಾಗುತ್ತಿದ್ದಂತೆ ಈ ಎರಡು ಲೋಹಗಳ ಪಾತ್ರವೂ ವೇಗವಾಗಿ ಬದಲಾಗುತ್ತಿದೆ. ಇಂದು ಚಿನ್ನ ಕೇವಲ ಆಭರಣದ ಲೋಹವಲ್ಲ. ಅದು ಕೇಂದ್ರ ಬ್ಯಾಂಕ್‌ಗಳ ಮೀಸಲು (ರಿಸೆರ್ವ್ ಅಸೆಟ್ )ಆಸ್ತಿಯಾಗಿದೆ. ಬೆಳ್ಳಿ ಕೇವಲ ಅಮೂಲ್ಯ ಲೋಹವಲ್ಲ. ಅದು ಸೌರ ವಿದ್ಯುತ್, ಎಲೆಕ್ಟ್ರಾನಿಕ್ಸ್, ವಿದ್ಯುತ್ ವಾಹನಗಳು, ಪವರ್ ಗ್ರಿಡ್‌ಗಳು ಮತ್ತು ಹಲವು ಹೊಸ ತಂತ್ರಜ್ಞಾನಗಳ ಪ್ರಮುಖ ಕೈಗಾರಿಕಾ ಕಚ್ಚಾ ವಸ್ತುವಾಗಿದೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ಏರಿಳಿತವನ್ನು ಕೇವಲ “ಬೆಲೆ ಏರಿತು–ಬೆಲೆ ಇಳಿಯಿತು” ಎಂಬ ದೃಷ್ಟಿಯಿಂದ ನೋಡಿದರೆ ಸಾಕಾಗುವುದಿಲ್ಲ. ಇದರ ಹಿಂದೆ ಜಾಗತಿಕ ಹಣಕಾಸು ವ್ಯವಸ್ಥೆಯ ಬದಲಾವಣೆ, ಕೇಂದ್ರ ಬ್ಯಾಂಕ್‌ಗಳ ನೀತಿ, ಭೌಗೋಳಿಕ ರಾಜಕೀಯ, ಡಾಲರ್, ಬಡ್ಡಿದರ, ಕೈಗಾರಿಕಾ ಬೇಡಿಕೆ ಮತ್ತು ಹೂಡಿಕೆದಾರರ ಮನೋಭಾವ ಹೀಗೆ ಬಹಳಷ್ಟುಅಂಶಗಳು ಕೆಲಸ ಮಾಡುತ್ತಿವೆ. ಮಾಡುತ್ತವೆ.

ಚಿನ್ನದ ಕಥೆ ಬದಲಾಗುತ್ತಿದೆ

ಚಿನ್ನದ ಬೆಲೆ ಏರಿದಾಗ ಸಾಮಾನ್ಯವಾಗಿ ಬಡ್ಡಿದರ ಕಡಿಮೆಯಾಗಬಹುದು, ಡಾಲರ್ ದುರ್ಬಲವಾಗಿದೆ, ಯುದ್ಧದ ಭೀತಿ ಇದೆ ಎಂಬ ಕಾರಣಗಳನ್ನು ಕೇಳುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೊಂದು ಪ್ರಮುಖ ಅಂಶ  ಖರೀದಿದಾರನ ಪಾತ್ರ ಹೆಚ್ಚಾಗಿರುವುದು.  ಅನೇಕ ದೇಶಗಳ ಕೇಂದ್ರ ಬ್ಯಾಂಕ್‌ಗಳು ತಮ್ಮ ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲನ್ನು ಹೆಚ್ಚಿಸುವತ್ತ ಗಮನಹರಿಸುತ್ತಿವೆ. ಜಾಗತಿಕ ರಾಜಕೀಯದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ, ವಿವಿಧ ದೇಶಗಳ ಮೇಲೆ ಇರುವ ಹಣಕಾಸು ನಿರ್ಬಂಧಗಳು, ವಿದೇಶಿ ಕರೆನ್ಸಿ ಆಸ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನ ಮತ್ತು ಮೀಸಲು ಆಸ್ತಿಗಳ ವೈವಿಧ್ಯೀಕರಣ ಇವು ಚಿನ್ನದ ಕಥೆ ಬದಲಾಗಲು ಇರುವ ಪ್ರಮುಖ ಕಾರಣಗಳಾಗಿವೆ. ಚಿನ್ನ ಜಾಗತಿಕ ಹಣಕಾಸು ವ್ಯವಸ್ಥೆಯ ಒಂದು ರೀತಿಯ ವಿಮಾ ಪಾಲಿಸಿಯಂತಾಗಿದೆ. ಯಾವುದೇ ಒಂದು ದೇಶದ ಸರ್ಕಾರದ ಸಾಲ ಅಥವಾ ಒಂದು ನಿರ್ದಿಷ್ಟ ಕರೆನ್ಸಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರದ ಆಸ್ತಿಯಾಗಿ ಚಿನ್ನಕ್ಕೆ ಇರುವ ಸ್ಥಾನ ಮತ್ತಷ್ಟು ಗಟ್ಟಿಯಾಗುತ್ತಿದೆ.

ಡಾಲರ್‌ನ ಕಥೆಯೂ ಇಲ್ಲಿ ಮುಖ್ಯ

ಚಿನ್ನದ ಬೆಲೆ ಮತ್ತು ಅಮೆರಿಕನ್ ಡಾಲರ್ ನಡುವೆ ದೀರ್ಘಕಾಲದಿಂದ ಗಮನಾರ್ಹ ಸಂಬಂಧವಿದೆ. ಸಾಮಾನ್ಯವಾಗಿ ಡಾಲರ್ ದುರ್ಬಲವಾದಾಗ ಚಿನ್ನ ಇತರ ಕರೆನ್ಸಿಗಳನ್ನು ಹೊಂದಿರುವ ಹೂಡಿಕೆದಾರರಿಗೆ  ಆಕರ್ಷಕವಾಗುತ್ತದೆ. ಅದೇ ಸಮಯದಲ್ಲಿ ಅಮೆರಿಕದ ಬಡ್ಡಿದರ ಕಡಿಮೆಯಾಗುವ ನಿರೀಕ್ಷೆ ಮೂಡಿದರೆ ಬಡ್ಡಿ ನೀಡದ ಚಿನ್ನವನ್ನು ಹೊಂದುವ ಅವಕಾಶ ವೆಚ್ಚವೂ ಕಡಿಮೆಯಾಗುತ್ತದೆ.ಆದರೆ ಇಂದಿನ ಪರಿಸ್ಥಿತಿ ಹಿಂದಿನ ಚಕ್ರಗಳಿಗಿಂತ ಹೆಚ್ಚು ಸಂಕೀರ್ಣವಾಗಿದೆ. ಒಂದು ಕಡೆ ಅಮೆರಿಕದ ಹಣಕಾಸು ಕೊರತೆ ಮತ್ತು ಸಾಲದ ಪ್ರಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಹಲವು ದೇಶಗಳು ತಮ್ಮ ಮೀಸಲು ಆಸ್ತಿಗಳನ್ನು ಡೈವರ್ಸಿಫೈ ಮಾಡುತ್ತಿದ್ದಾರೆ.  ಆದರೆ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಒಂದೇ ಕರೆನ್ಸಿ ಮತ್ತು ಒಂದೇ ಆಸ್ತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ಗಮನಿಸಬೇಕಾಗಿದೆ. ಈ ಬದಲಾವಣೆಯ ಪ್ರಮುಖ ಫಲಾನುಭವಿಗಳಲ್ಲಿ ಚಿನ್ನವೂ ಒಂದಾಗಿದೆ. ನಿಧಾನವಾಗಿಯಾದರೂ ಸರಿ , ಡಾಲರ್ ಕಥೆ ನೇಪಥ್ಯಕ್ಕೆ ಸರಿಯುವುದು ಮಾತ್ರ ಗ್ಯಾರಂಟಿ.

 ಬೆಳ್ಳಿ ಏಕೆ ವಿಶೇಷ?

ಚಿನ್ನದ ಬೇಡಿಕೆಯ ದೊಡ್ಡ ಭಾಗ ಹೂಡಿಕೆ ಮತ್ತು ಆಭರಣಕ್ಕೆ ಸಂಬಂಧಿಸಿದ್ದರೆ, ಬೆಳ್ಳಿಯ ಕಥೆ ಸ್ವಲ್ಪ ವಿಭಿನ್ನವಾಗಿದೆ. ಬೆಳ್ಳಿಗೆ ಎರಡು ಮುಖಗಳಿವೆ. ಒಂದು ಅಮೂಲ್ಯ ಲೋಹದ ಮುಖ. ಇನ್ನೊಂದು ಕೈಗಾರಿಕಾ ಲೋಹದ ಮುಖ. ಇದೇ ಕಾರಣಕ್ಕೆ ಬೆಳ್ಳಿ ಜಾಗತಿಕ ಕಮಾಡಿಟಿ ಮಾರುಕಟ್ಟೆಯಲ್ಲಿ  ವಿಶಿಷ್ಟ ಸ್ಥಾನ ಹೊಂದಿದೆ.ಸೌರ ಫಲಕಗಳಲ್ಲಿ ವಿದ್ಯುತ್ ಸಾಗಿಸಲು ಬೆಳ್ಳಿಯ ಬಳಕೆಯಾಗುತ್ತದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅದರ ಅತ್ಯುತ್ತಮ ವಿದ್ಯುತ್ ವಾಹಕತೆ ಪ್ರಮುಖವಾಗಿದೆ. ವಿದ್ಯುತ್ ವಾಹನಗಳು, ಚಾರ್ಜಿಂಗ್ ವ್ಯವಸ್ಥೆಗಳು, ಪವರ್ ಗ್ರಿಡ್‌ಗಳು ಮತ್ತು ವಿವಿಧ ಎಲೆಕ್ಟ್ರಾನಿಕ್ ಸಾಧನಗಳಲ್ಲಿಯೂ ಬೆಳ್ಳಿಗೆ ಬೇಡಿಕೆ ಇದೆ. ಹೀಗಾಗಿ ಜಗತ್ತು ಹೆಚ್ಚು ವಿದ್ಯುದೀಕರಣಗೊಳ್ಳುತ್ತಿದ್ದಂತೆ ಬೆಳ್ಳಿಯ ಕೈಗಾರಿಕಾ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಇಲ್ಲಿಯೇ ಚಿನ್ನ ಮತ್ತು ಬೆಳ್ಳಿಯ ನಡುವಿನ ಪ್ರಮುಖ ವ್ಯತ್ಯಾಸ ಕಾಣಿಸುತ್ತದೆ. ಚಿನ್ನದ ಬೆಲೆಯನ್ನು ಹೆಚ್ಚಿಸುವ ಶಕ್ತಿಗಳಲ್ಲಿ ಭಯ, ಹಣಕಾಸು ಅನಿಶ್ಚಿತತೆ ಮತ್ತು ರಿಸೆರ್ವ್ ಡಿಮ್ಯಾಂಡ್  ಪ್ರಮುಖವಾಗಿದ್ದರೆ, ಬೆಳ್ಳಿಗೆ ಹಣಕಾಸು ಬೇಡಿಕೆಯ ಜೊತೆಗೆ ಕೈಗಾರಿಕಾ ಬೇಡಿಕೆಯೂ ಇದೆ. ಇದರಿಂದ ಬೆಳ್ಳಿಯ ಬೆಲೆ ಕೆಲವೊಮ್ಮೆ ಚಿನ್ನಕ್ಕಿಂತ ಹೆಚ್ಚು ವೇಗವಾಗಿ ಏರುತ್ತದೆ.  ಆದರೆ ಇದೇ ಕಾರಣಕ್ಕೆ ಅದು ಹೆಚ್ಚು ವೇಗವಾಗಿ ಕುಸಿಯುವ ಸಾಧ್ಯತೆಯೂ ಇದೆ.

ಇಂದಿನ ಜಗತ್ತು ಫಾಸಿಲ್ ಫ್ಯುಯೆಲ್ ನಿಂದ ರಿನ್ಯೂವೆಬಲ್ ಎನೆರ್ಜಿ  ಕಡೆಗೆ ಸಾಗುತ್ತಿದೆ. ಸೌರ ವಿದ್ಯುತ್ ಈ ಬದಲಾವಣೆಯ ಪ್ರಮುಖ ಭಾಗವಾಗಿದೆ. ಸೌರ ಫಲಕಗಳ ಉತ್ಪಾದನೆ ಹೆಚ್ಚಾದಂತೆ ಬೆಳ್ಳಿಯ ಕೈಗಾರಿಕಾ ಬಳಕೆಯ ಮೇಲೂ ಗಮನ ಹೆಚ್ಚಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ಸಾಧನದಲ್ಲಿನ ಬೆಳ್ಳಿಯ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿದ್ದರೂ, ಒಟ್ಟಾರೆ ಸೌರ ಸಾಮರ್ಥ್ಯದ ವಿಸ್ತರಣೆ ಆ ಬೇಡಿಕೆಯನ್ನು ಸಮತೋಲನಗೊಳಿಸುವ ಸಾಧ್ಯತೆಯಿದೆ.

ಬೆಳ್ಳಿಯ ಭವಿಷ್ಯದ ಕಥೆಯಲ್ಲಿ ಇದು ಅತ್ಯಂತ ಪ್ರಮುಖ ಅಂಶ. ಜಗತ್ತಿನ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಡೇಟಾ ಸೆಂಟರ್‌ಗಳಿಂದ ಹಿಡಿದು ವಿದ್ಯುತ್ ವಾಹನಗಳವರೆಗೆ ಎಲ್ಲವೂ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಸೃಷ್ಟಿಸುತ್ತಿವೆ. ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಅದನ್ನು ಸಾಗಿಸುವ ಮತ್ತು ಬಳಸುವ ಸಂಪೂರ್ಣ ವ್ಯವಸ್ಥೆಯ ವಿಸ್ತರಣೆಯೂ ಅಗತ್ಯವಾಗುತ್ತಿದೆ. ಈ ಬದಲಾವಣೆಯಲ್ಲಿ ಬೆಳ್ಳಿ ಸೇರಿದಂತೆ ಹಲವು ಲೋಹಗಳ ಪಾತ್ರ ಹೆಚ್ಚಾಗಬಹುದು.

Silver- Gold new super cycle (file photo)
ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಬೆಳ್ಳಿ ಏಕೆ ಚಿನ್ನಕ್ಕಿಂತ ಹೆಚ್ಚು ಅಸ್ಥಿರ?

ಹೂಡಿಕೆದಾರರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಿನ್ನವನ್ನು ಸಾಮಾನ್ಯವಾಗಿ ಸೇಫ್ ಹೆವನ್  ಆಸ್ತಿಯಾಗಿ ನೋಡಲಾಗುತ್ತದೆ. ಬೆಳ್ಳಿಯ ಸ್ವಭಾವ ಅದಕ್ಕಿಂತ ಹೆಚ್ಚು ಚಂಚಲ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೆ ಕೈಗಾರಿಕಾ ಬೇಡಿಕೆ ಹೆಚ್ಚಬಹುದು. ಆದರೆ ಜಾಗತಿಕ ರಿಸೆಶನ್  ಬಂದರೆ ಕೈಗಾರಿಕಾ ಬಳಕೆಯ ಬೇಡಿಕೆ ಕುಸಿಯಬಹುದು. ಅದರ ಜೊತೆಗೆ ಹೂಡಿಕೆದಾರರ ಹಣವೂ ಬೆಳ್ಳಿಯ ಮಾರುಕಟ್ಟೆಗೆಯಲ್ಲಿ ಸಿಲುಕಿ ಕೊಳ್ಳುವ ಸಂಭಾವ್ಯತೆ ಹೆಚ್ಚು.

ಯುದ್ಧ, ರಾಜಕೀಯ ಮತ್ತು ಚಿನ್ನ

ಜಗತ್ತಿನ ಯಾವುದೇ ಭಾಗದಲ್ಲಿ ದೊಡ್ಡ ಭೌಗೋಳಿಕ ರಾಜಕೀಯ ಸಂಘರ್ಷ ಆರಂಭವಾದಾಗ ಮಾರುಕಟ್ಟೆಗಳಲ್ಲಿ ಮೊದಲ ಪ್ರತಿಕ್ರಿಯೆ ಸಾಮಾನ್ಯವಾಗಿ ಅಪಾಯ ಕಡಿಮೆ ಮಾಡುವುದಾಗಿರುತ್ತದೆ. ಷೇರುಗಳಲ್ಲಿ ಮಾರಾಟ ಹೆಚ್ಚಾಗಬಹುದು. ಕರೆನ್ಸಿಗಳಲ್ಲಿ ಚಂಚಲತೆ ಹೆಚ್ಚಬಹುದು. ಬಾಂಡ್ ಮಾರುಕಟ್ಟೆಯಲ್ಲಿ ಹಣದ ಹರಿವು ಬದಲಾಗಬಹುದು. ಈ ಸಂದರ್ಭದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಇವತ್ತಿನ ದಿನದಲ್ಲಿ  ಪ್ರತಿಯೊಂದು ಯುದ್ಧ ಅಥವಾ ರಾಜಕೀಯ ಘಟನೆ ಚಿನ್ನವನ್ನು ನಿರಂತರವಾಗಿ ಏರಿಸುತ್ತದೆ ಎಂದು ಹೇಳುವುದು ತಪ್ಪು ಎನ್ನುವುದನ್ನು ಕೂಡ ಸಾಬೀತು ಮಾಡಿದೆ.  ಆರಂಭಿಕ ಭಯದ ನಂತರ ಬಡ್ಡಿದರ, ಡಾಲರ್, ಲಿಕ್ವಿಡಿಟಿ  ಮತ್ತು ಆರ್ಥಿಕ ಬೆಳವಣಿಗೆ ಮುಂತಾದ ಅಂಶಗಳು ಮತ್ತೆ ಪ್ರಭಾವ ಬೀರುತ್ತವೆ. ಹೀಗಾಗಿ ಒಂದು ಸುದ್ದಿಯನ್ನು ನೋಡಿ ಚಿನ್ನ ಖರೀದಿಸುವುದು ಹೂಡಿಕೆ ತಂತ್ರವಾಗಿ ಇಂದಿಗೆ ಉಳಿದಿಲ್ಲ.

ಕಮಾಡಿಟಿ ಸೂಪರ್ ಸೈಕಲ್ ಎಂದರೇನು?

ಕಮಾಡಿಟಿ ಸೂಪರ್ ಸೈಕಲ್  ಎಂದರೆ ಸರಕುಗಳ ಬೆಲೆಗಳಲ್ಲಿ ಸಾಮಾನ್ಯ ಬಿಸಿನೆಸ್ ಸೈಕಲ್ ಗಿಂತ ದೀರ್ಘಕಾಲ ನಡೆಯುವ ದೊಡ್ಡ ಏರಿಕೆಯ ಅವಧಿ. ಇದು ಸಾಮಾನ್ಯವಾಗಿ ಬೇಡಿಕೆ ಮತ್ತು ಪೂರೈಕೆಯ ನಡುವೆ ದೀರ್ಘಕಾಲದ ಅಸಮತೋಲನದಿಂದ ಉಂಟಾಗುತ್ತದೆ.ಹೊಸ ತಂತ್ರಜ್ಞಾನಕ್ಕೆ ದೊಡ್ಡ ಪ್ರಮಾಣದಲ್ಲಿ ಲೋಹಗಳು ಬೇಕಾಗುತ್ತದೆ. ಆದರೆ ಗಣಿಗಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ವರ್ಷಗಳು ಬೇಕಾಗಬಹುದು. ಬೇಡಿಕೆ ವೇಗವಾಗಿ ಏರಿದರೆ ಪೂರೈಕೆ ಅದನ್ನು ತಕ್ಷಣ ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದ ಬೆಲೆಗಳಲ್ಲಿ ದೀರ್ಘಾವಧಿಯ ಏರಿಕೆ ಉಂಟಾಗಬಹುದು.ಚಿನ್ನದ ಸಂದರ್ಭದಲ್ಲಿ ಇದು ಸ್ವಲ್ಪ ವಿಭಿನ್ನ. ಇಲ್ಲಿ ಗಣಿಗಾರಿಕೆ ಮಾತ್ರವಲ್ಲದೆ ಕೇಂದ್ರ ಬ್ಯಾಂಕ್‌ಗಳ ಖರೀದಿ, ಹೂಡಿಕೆ ಬೇಡಿಕೆ ಮತ್ತು ರಿಸೈಕಲಿಂಗ್ ಕೂಡ ಪ್ರಮುಖ. ಬೆಳ್ಳಿಯಲ್ಲಿ ಕೈಗಾರಿಕಾ ಬೇಡಿಕೆ ಹೆಚ್ಚು ಮಹತ್ವ ಪಡೆಯುತ್ತದೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿಯನ್ನು ಒಂದೇಕಮಾಡಿಟಿ ಸೈಕಲ್ ನಲ್ಲಿ ನೋಡಿದರೂ ಅವುಗಳ ಬೆಲೆ ಬದಲಾವಣೆ ಕಾರಣ ಒಂದೇ ಆಗಿರುವುದಿಲ್ಲ ಎನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕು.

ಭಾರತೀಯ ಹೂಡಿಕೆದಾರರಿಗೆ ಇದರ ಅರ್ಥವೇನು?

ಭಾರತದಲ್ಲಿ ಚಿನ್ನಕ್ಕೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಆದರೆ ಆಧುನಿಕ ಹೂಡಿಕೆದಾರರಿಗೆ ಪ್ರಶ್ನೆ ಬದಲಾಗಿದೆ. ಚಿನ್ನವನ್ನು ಎಷ್ಟು ಪ್ರಮಾಣದಲ್ಲಿ ಹೊಂದಬೇಕು ಎಂಬುದು ವೈಯಕ್ತಿಕ ಹಣಕಾಸಿನ ಗುರಿ, ಅಪಾಯ ಸ್ವೀಕಾರ ಸಾಮರ್ಥ್ಯ ಮತ್ತು ಒಟ್ಟಾರೆ ಪೋರ್ಟ್ಫೋಲಿಯೋ ಮೇಲೆ ಅವಲಂಬಿತವಾಗಿದೆ.

ಚಿನ್ನವನ್ನು ಈಕ್ವಿಟಿಗೆ ಪರ್ಯಾಯವಾಗಿ ನೋಡುವುದಕ್ಕಿಂತ  ಪೋರ್ಟ್ಫೋಲಿಯೋ ಡೈವರ್ಸಿಫಿಕೇಷನ್ ನಲ್ಲಿ ಒಂದು ಭಾಗವಾಗಿ ನೋಡುವ ದೃಷ್ಟಿಕೋನ ಹೆಚ್ಚು ಸಾಮಾನ್ಯವಾಗಿದೆ. ಗೋಲ್ಡ್ ಈಟಿಫ್ ಗಳು, ಗೋಲ್ಡ್ ಮ್ಯೂಚುಯಲ್ ಫಂಡ್ , ಭೌತಿಕ ಚಿನ್ನ ಮತ್ತು ಇತರ ಮಾರ್ಗಗಳಿಗೆ ತಮ್ಮದೇ ಆದ ಲಿಕ್ವಿಡಿಟಿ, ವೆಚ್ಚ ಮತ್ತು ತೆರಿಗೆ ಅಂಶಗಳಿವೆ. ಬೆಳ್ಳಿಯಲ್ಲಿಯೂ ಇದೇ ರೀತಿಯ ಆಯ್ಕೆಗಳಿವೆ.ಆದರೆ ಒಂದು ವಿಷಯ ಸ್ಪಷ್ಟ. ಬೆಲೆ ಏರುತ್ತಿದೆ ಎಂಬ ಕಾರಣಕ್ಕೆ ಸಂಪೂರ್ಣ ಹಣವನ್ನು ಒಂದೇ ಕಮಾಡಿಟಿ ಗೆ ಹಾಕುವುದು ಡೈವರ್ಸಿಫಿಕೇಷನ್  ಅಲ್ಲ. ಚಿನ್ನ ಅಥವಾ ಬೆಳ್ಳಿ ದೊಡ್ಡ ಪ್ರಮಾಣದಲ್ಲಿ ಏರಿದ ನಂತರ ಕೆಲವು ದಿನಗಳು ಅಥವಾ ವಾರಗಳಲ್ಲಿ ತೀವ್ರವಾಗಿ ಕುಸಿಯುವುದು ಅಸಾಮಾನ್ಯವಲ್ಲ. ಆದ್ದರಿಂದ ಒಂದು ದಿನದಲ್ಲಿ ೩ ಅಥವಾ ೫ ಪ್ರತಿಶತ ಕುಸಿತವನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವುದು ತಪ್ಪು.,ಹಾಗೆ  ಒಂದು ದಿನದ ದೊಡ್ಡ ಏರಿಕೆಯನ್ನು ನೋಡಿ ಇನ್ನು ಬೆಲೆ ಎಂದಿಗೂ ಇಳಿಯುವುದಿಲ್ಲ ಎನ್ನುವುದೂ ಅಷ್ಟೇ ಅಪಾಯಕಾರಿ. ಕಮಾಡಿಟಿ  ಮಾರುಕಟ್ಟೆಯಲ್ಲಿ ಏರಿಳಿತ ಸಹಜ ಸಂಗತಿ.ಅದರಲ್ಲೂ ಇವತ್ತಿನ ಅನಿಶ್ಚಿತ ಸಂದರ್ಭದಲ್ಲಿ ಇದು ಹೆಚ್ಚು ಪ್ರಸ್ತುತ.

Silver- Gold new super cycle (file photo)
ಸಾಲವಿಲ್ಲದೆ ಬದುಕಲು ಸಾಧ್ಯವಿದೆಯೇ..? (ಹಣಕ್ಲಾಸು)

ಮುಂದಿನ ವರ್ಷಗಳಲ್ಲಿ ಗಮನಿಸಬೇಕಾದ ದಿಕ್ಕುಗಳು

ಚಿನ್ನ ಮತ್ತು ಬೆಳ್ಳಿಯ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಅಮೆರಿಕದ ಬಡ್ಡಿದರ, ಡಾಲರ್‌ನ ದಿಕ್ಕು, ಕೇಂದ್ರ ಬ್ಯಾಂಕ್‌ಗಳ ಚಿನ್ನದ ಖರೀದಿ, ಸೌರಶಕ್ತಿ ಮತ್ತು ವಿದ್ಯುತ್ ವಾಹನಗಳ ವಿಸ್ತರಣೆ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳನ್ನು ಗಮನಿಸಬೇಕಾಗುತ್ತದೆ. ಇವುಗಳಲ್ಲಿ ಒಂದೇ ಒಂದು ಅಂಶವನ್ನು ನೋಡಿ ಚಿನ್ನ ಅಥವಾ ಬೆಳ್ಳಿಯ ಮುಂದಿನ ಬೆಲೆಯನ್ನು ನಿರ್ಧರಿಸುವುದು ಸಾಧ್ಯವಿಲ್ಲ.ವಿಶೇಷವಾಗಿ ಬೆಳ್ಳಿಯ ವಿಷಯದಲ್ಲಿ ಸಪ್ಲೈ  ಕೂಡ ಮುಖ್ಯ. ಹೊಸ ಗಣಿಗಾರಿಕೆ ಯೋಜನೆಗಳು, ಉತ್ಪಾದನಾ ವೆಚ್ಚ,ರಿಸೈಕಲಿಂಗ್  ಮತ್ತು ಕೈಗಾರಿಕಾ ತಂತ್ರಜ್ಞಾನದಲ್ಲಿನ ಬದಲಾವಣೆಗಳು ದೀರ್ಘಾವಧಿಯ ಬೆಲೆ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಹಾಗಾದರೆ ಹೊಸ ಸೂಪರ್ ಸೈಕಲ್  ನಿಜವಾಗಿಯೂ ಆರಂಭವಾಗಿದೆಯೇ?

ಇದಕ್ಕೆ ಈಗಲೇ ಖಚಿತ ಉತ್ತರ ನೀಡುವುದು ಕಷ್ಟ. ಚಿನ್ನದ ಪರವಾಗಿ ಕೇಂದ್ರ ಬ್ಯಾಂಕ್‌ಗಳ ಬೇಡಿಕೆ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ರಿಸೆರ್ವ್ ಡೈವರ್ಸಿಫಿಕೇಷನ್  ಮುಂತಾದ ದೀರ್ಘಾವಧಿಯ ಅಂಶಗಳಿವೆ. ಮೊದಲು ಬೇಡಿಕೆ, ಪೂರೈಕೆ ಮತ್ತು ಹಣಕಾಸು ಪರಿಸ್ಥಿತಿಗಳ ದೀರ್ಘಾವಧಿಯ ಬದಲಾವಣೆ ನಿಜವಾಗಿಯೂ ಎಷ್ಟು ಸ್ಥಿರವಾಗಿದೆ ಎಂಬುದನ್ನು ನೋಡಬೇಕಾಗಿದೆ. ಹೀಗಿದ್ದೂ ಈ ಸೂಪರ್ ಸೈಕಲ್ ಆರಂಭವಾಗುವ ಲಕ್ಷಣಗಳು ಮಾರುಕಟ್ಟೆಯಲ್ಲಿ ಸದ್ಯಕ್ಕೆ ನಾವು ಕಾಣಬಹುದು.

ಕೊನೆಯ ಮಾತು : ಚಿನ್ನ ಮತ್ತು ಬೆಳ್ಳಿಯ ಇಂದಿನ ಕಥೆ ವಾಸ್ತವವಾಗಿ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದರ ಕಥೆ. ಒಂದು ಲೋಹ ಹಣಕಾಸು ಜಗತ್ತಿನ ಭಯವನ್ನು ಪ್ರತಿಬಿಂಬಿಸುತ್ತಿದ್ದರೆ, ಮತ್ತೊಂದು ಲೋಹ ಭವಿಷ್ಯದ ತಂತ್ರಜ್ಞಾನ ಜಗತ್ತಿನ ಅಗತ್ಯವನ್ನು ಪ್ರತಿಬಿಂಬಿಸುತ್ತಿದೆ. ಆದ್ದರಿಂದ ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಗಮನಿಸುವುದು ಎಂದರೆ ಕೇವಲ ಕಮಾಡಿಟಿ ಮಾರ್ಕೆಟ್ ನೋಡುವುದಲ್ಲ, ಕೇವಲ ಹೂಡಿಕೆ , ಲಾಭ ನಷ್ಟದ ವಿಚಾರವೂ ಆಗಿ ಉಳಿಯುವುದಿಲ್ಲ.  ಅದು ಜಾಗತಿಕ ಆರ್ಥಿಕತೆ ಯಾವ ದಿಕ್ಕಿಗೆ ಹೊರಟಿದೆ ಎನ್ನುವುದನ್ನು ಹೇಳುವ ಮಾಪಕವಾಗುವ ಸಾಧ್ಯೆತೆಗಳು ಹೆಚ್ಚು. ಹೊಸ ಕಮಾಡಿಟಿ ಸೂಪರ್ ಸೈಕಲ್ ಈಗಾಗಲೇ ಆರಂಭವಾಗಿದೆಯೇ ಅಥವಾ ನಾವು ಅದರ ಆರಂಭಿಕ ಹಂತದಲ್ಲಿದ್ದೇವೆಯೇ  ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ ,ಚಿನ್ನ ಮತ್ತು ಬೆಳ್ಳಿಯನ್ನು ಹಳೆಯ ದೃಷ್ಟಿಕೋನದಿಂದ ನೋಡುವ ಕಾಲ ಮುಗಿದು ಹೋಗಿದೆ.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com