

ವಿಶ್ವ ರಾಜಕಾರಣದಲ್ಲಿ ಕೆಲವು ಘಟನೆಗಳು ಮುಗಿದ ತಕ್ಷಣವೇ ಮರೆತುಹೋಗುತ್ತವೆ. ಇನ್ನೂ ಕೆಲವು ಘಟನೆಗಳ ನಿಜವಾದ ಪರಿಣಾಮ ಅವು ಮುಗಿದ ನಂತರವೇ ಗೋಚರಿಸಲು ಆರಂಭಿಸುತ್ತದೆ. ಸೆಪ್ಟೆಂಬರ್ 12/13 ರಂದು ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯನ್ನು ಎರಡನೇ ವರ್ಗದಲ್ಲಿ ನೋಡಬೇಕಾಗಿದೆ.
ಏಕೆಂದರೆ ಈ ಸಭೆಯ ಮಹತ್ವ ಕೇವಲ ಕೆಲವು ಒಪ್ಪಂದಗಳು ಅಥವಾ ಘೋಷಣೆಗಳಾಗಿ ನೋಡಲು ಸಾಧ್ಯವಿಲ್ಲ. ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ತನ್ನ ಸ್ಥಾನವನ್ನು ಹೇಗೆ ರೂಪಿಸಿಕೊಳ್ಳುತ್ತಿದೆ ಎನ್ನುವುದನ್ನು ಇದು ಸಾರುತ್ತಿದೆ. ಒಂದು ಕಾಲದಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಎಂಬ ನಾಲ್ಕು ದೇಶಗಳ ಆರ್ಥಿಕ ಪರಿಕಲ್ಪನೆಯಾಗಿ ಆರಂಭವಾದ ಬ್ರಿಕ್ಸ್ ಇಂದು ವಿಸ್ತರಿಸಿರುವ ಬಹುರಾಷ್ಟ್ರೀಯ ವೇದಿಕೆಯಾಗಿದೆ. ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಿದಂತೆ ಅದರ ವ್ಯಾಪ್ತಿಯೂ ಹೆಚ್ಚಿದೆ. ಆದರೆ ಅದರೊಳಗಿನ ಭಿನ್ನಾಭಿಪ್ರಾಯಗಳೂ ಹೆಚ್ಚಿವೆ.
ಭಾರತ ಮತ್ತು ಚೀನಾ ಸ್ಪರ್ಧೆ, ರಷ್ಯಾ ಮತ್ತು ಪಶ್ಚಿಮ ಸಂಘರ್ಷ, ಮಧ್ಯಪ್ರಾಚ್ಯದ ಉದ್ವಿಗ್ನತೆ, ವ್ಯಾಪಾರ ಸುಂಕಗಳು, ಡಾಲರ್ ಪ್ರಾಬಲ್ಯ ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ನಡೆಯುತ್ತಿರುವ ಜಾಗತಿಕ ಪೈಪೋಟಿ ಇವೆಲ್ಲದರ ನಡುವೆ ಒಂದೇ ಘೋಷಣೆಯಡಿ ಇಷ್ಟು ರಾಷ್ಟ್ರಗಳನ್ನು ಒಟ್ಟಿಗೆ ತರುವುದು ಸುಲಭದ ಕೆಲಸವಲ್ಲ. ಆದರೂ ನವದೆಹಲಿಯಲ್ಲಿ ಸದಸ್ಯ ರಾಷ್ಟ್ರಗಳು ಜಂಟಿ ಘೋಷಣೆಯನ್ನು ಅಂಗೀಕರಿಸಿದವು. ಅದೇ ಈ ಶೃಂಗಸಭೆಯ ಮೊದಲ ಪ್ರಮುಖ ಸಂದೇಶ,ಗೆಲುವು.
ಬ್ರಿಕ್ಸ್‌ನ ವಿಸ್ತರಣೆ ಅದರ ಸ್ವರೂಪವನ್ನೇ ಬದಲಿಸಿದೆ. ಆರಂಭದಲ್ಲಿ ಇದು ವೇಗವಾಗಿ ಬೆಳೆಯುತ್ತಿದ್ದ ಕೆಲವು ದೊಡ್ಡ ಆರ್ಥಿಕತೆಗಳ ವೇದಿಕೆಯಾಗಿತ್ತು. ಇಂದು ಇದು ಜಾಗತಿಕ ದಕ್ಷಿಣದ ವಿವಿಧ ಧ್ವನಿಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವಾಗಿದೆ. ಆದರೆ ಇಲ್ಲಿ ಒಂದು ಸೂಕ್ಷ್ಮ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಬ್ರಿಕ್ಸ್ ಅನ್ನು ಕೇವಲ ಪಶ್ಚಿಮ ವಿರೋಧಿ ಮೈತ್ರಿಕೂಟ ಎಂದು ನೋಡುವುದು ಬೇಡ ಎಂದು ಭಾರತ ಪದೇಪದೇ ಹೇಳುತ್ತಿದೆ. ಸದಸ್ಯ ರಾಷ್ಟ್ರಗಳೆಲ್ಲವೂ ಅಮೆರಿಕ ಅಥವಾ ಯುರೋಪ್‌ನೊಂದಿಗೆ ಒಂದೇ ರೀತಿಯ ಸಂಬಂಧ ಹೊಂದಿಲ್ಲ.
ಕೆಲವು ರಾಷ್ಟ್ರಗಳಿಗೆ ಪಶ್ಚಿಮದೊಂದಿಗೆ ಗಾಢವಾದ ವ್ಯಾಪಾರ ಸಂಬಂಧಗಳಿವೆ. ಕೆಲವು ರಾಷ್ಟ್ರಗಳು ಪಶ್ಚಿಮದ ನಿರ್ಬಂಧಗಳನ್ನು ಎದುರಿಸುತ್ತಿವೆ. ಇನ್ನೂ ಕೆಲವು ದೇಶಗಳು ಎರಡೂ ಬದಿಗಳೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತವೆ. ಹೀಗಾಗಿ ಬ್ರಿಕ್ಸ್‌ನ ನಿಜವಾದ ಶಕ್ತಿ ಯಾರೊಬ್ಬರನ್ನೂ ವಿರೋಧಿಸುವುದಕ್ಕಿಂತ, ವಿಭಿನ್ನ ಹಿತಾಸಕ್ತಿಗಳನ್ನು ಹೊಂದಿರುವ ರಾಷ್ಟ್ರಗಳನ್ನು ಒಂದೇ ಮೇಜಿನ ಬಳಿ ಕೂರಿಸುವ ಸಾಮರ್ಥ್ಯದಲ್ಲಿದೆ ಎನ್ನುವ ಭಾರತದ ನಿಲುವಿಗೆ ಜಯ ಸಿಕ್ಕಿದೆ.
ಬ್ರಿಕ್ಸ್ ಕುರಿತು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕೇಳಿಬರುತ್ತಿರುವ ಪ್ರಶ್ನೆ ಡಾಲರ್‌ಗೆ ಪರ್ಯಾಯವಾಗಿ ಬ್ರಿಕ್ಸ್ ತನ್ನದೇ ಆದ ಸಾಮಾನ್ಯ ಕರೆನ್ಸಿಯನ್ನು ತರುತ್ತದೆಯೇ ಎಂಬುದು. ನವದೆಹಲಿಯ ಶೃಂಗಸಭೆ ಈ ವಿಷಯದಲ್ಲಿ ಯಾವುದೇ ಕ್ರಾಂತಿಕಾರಿ ಘೋಷಣೆ ಮಾಡಲಿಲ್ಲ. ಸಾಮಾನ್ಯ ಬ್ರಿಕ್ಸ್ ಕರೆನ್ಸಿ ಘೋಷಣೆಯಾಗಲಿಲ್ಲ. ಬದಲಾಗಿ ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವುದು ಮತ್ತು ಗಡಿಯಾಚೆಯ ಪಾವತಿಗಳನ್ನು ಹೆಚ್ಚು ಸುಲಭಗೊಳಿಸುವ ಪ್ರಯತ್ನಗಳಿಗೆ ಒತ್ತು ನೀಡಲಾಯಿತು. ಸಾಮಾನ್ಯ ಕರೆನ್ಸಿ ರೂಪಿಸುವುದು ಕೇವಲ ರಾಜಕೀಯ ಘೋಷಣೆಯಿಂದ ಸಾಧ್ಯವಾಗುವುದಿಲ್ಲ.
ಹಣದುಬ್ಬರ, ಬಡ್ಡಿದರ, ವಿನಿಮಯ ದರ, ಹಣಕಾಸು ನೀತಿ ಮತ್ತು ಕೇಂದ್ರ ಬ್ಯಾಂಕುಗಳ ಕಾರ್ಯವಿಧಾನಗಳಲ್ಲಿ ಅಪಾರ ಸಮನ್ವಯ ಬೇಕಾಗುತ್ತದೆ. ಯೂರೋ ರೂಪುಗೊಳ್ಳಲು ಯುರೋಪಿಗೆ ದಶಕಗಳ ಸಾಂಘಿಕ ಪ್ರಯತ್ನ ಬೇಕಾಯಿತು. ಬ್ರಿಕ್ಸ್ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಗಳು ಪರಸ್ಪರ ಬಹಳ ವಿಭಿನ್ನವಾಗಿರುವ ಸಂದರ್ಭದಲ್ಲಿ ತಕ್ಷಣವೇ ಸಾಮಾನ್ಯ ಕರೆನ್ಸಿ ರೂಪಿಸುವುದು ಅತ್ಯಂತ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ನೋಡಿದಾಗ ಕೂಡ ಭಾರತಕ್ಕೆ ಜಯ ಸಿಕ್ಕಿದೆ.
ಡಾಲರಿನ ಮೇಲೆ ಹೇಗೆ ಅಮೆರಿಕಾದ ಹಿಡಿತವಿದೆ ,ಹಾಗೆ ನಾಳೆ ಬ್ರಿಕ್ಸ್ ಕರೆನ್ಸಿ ಮೇಲೆ ಯಾವೊಂದು ದೇಶದ ಹಿಡಿತ ಇರಬಾರದು ಅದು ಸಮೂಹದ ಎಲ್ಲಾ ಸದಸ್ಯ ದೇಶಗಳ ಹಿತ ಕಾಪಾಡಬೇಕು ಎನ್ನುವುದು ಭಾರತದ ನಿಲುವು. ಹೀಗಾಗಿ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಹೆಚ್ಚಿಸುವುದು ಹೆಚ್ಚು ಪ್ರಾಯೋಗಿಕ ಮಾರ್ಗ. ಇದರರ್ಥ ನಾಳೆಯಿಂದ ಡಾಲರ್‌ನ ಪ್ರಾಬಲ್ಯ ಮುಗಿಯುತ್ತದೆ ಎಂದಲ್ಲ. ಆದರೆ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಮೇಲಿನ ಅವಲಂಬನೆಯನ್ನು ನಿಧಾನವಾಗಿ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳಬಹುದು.
ವ್ಯಾಪಾರ ಯುದ್ಧದ ನಡುವೆ ಬ್ರಿಕ್ಸ್‌ನ ಸಂದೇಶ
ವ್ಯಾಪಾರ ಕ್ಷೇತ್ರದಲ್ಲಿಯೂ ಬ್ರಿಕ್ಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಏಕಪಕ್ಷೀಯ ಸುಂಕಗಳು, ವ್ಯಾಪಾರ ನಿರ್ಬಂಧಗಳು ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ದುರ್ಬಲತೆಯ ಬಗ್ಗೆ ಧ್ವನಿ ಎತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಮುಕ್ತ ವ್ಯಾಪಾರದ ಯುಗದಿಂದ ರಕ್ಷಣಾತ್ಮಕ ವ್ಯಾಪಾರದತ್ತ ಸಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ದೊಡ್ಡ ರಾಷ್ಟ್ರಗಳು ತಮ್ಮ ಕೈಗಾರಿಕೆಗಳನ್ನು ರಕ್ಷಿಸಲು ಸುಂಕಗಳನ್ನು ಬಳಸುತ್ತಿವೆ. ಒಂದು ದೇಶ ಸುಂಕ ವಿಧಿಸಿದರೆ ಮತ್ತೊಂದು ದೇಶ ಪ್ರತಿಸುಂಕ ವಿಧಿಸುತ್ತದೆ. ಕೊನೆಗೆ ಇದರ ಪರಿಣಾಮ ಸರಬರಾಜು ಸರಪಳಿಗಳ ಮೇಲೆ, ಕೈಗಾರಿಕೆಗಳ ಮೇಲೆ ಮತ್ತು ಗ್ರಾಹಕರ ಮೇಲೆ ಬೀಳುತ್ತದೆ.
ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ವ್ಯಾಪಾರ ವ್ಯವಸ್ಥೆಯ ಸ್ಥಿರತೆ ನೇರವಾಗಿ ಉದ್ಯೋಗ, ರಫ್ತು ಮತ್ತು ಹೂಡಿಕೆಗೆ ಸಂಬಂಧಿಸಿದೆ. ಹೀಗಾಗಿ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಪರವಾಗಿ ಬ್ರಿಕ್ಸ್‌ನ ನಿಲುವು ವ್ಯಕ್ತಪಡಿಸಿದೆ.
ಈ ಶೃಂಗಸಭೆಯ ಅತ್ಯಂತ ಸೂಕ್ಷ್ಮ ಬೆಳವಣಿಗೆ ಬಹುಶಃ ಭಾರತ ಮತ್ತು ಚೀನಾದ ನಡುವಿನ ಸಂವಾದ. ಕಳೆದ ಕೆಲವು ವರ್ಷಗಳಿಂದ ಗಡಿ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಎರಡೂ ದೇಶಗಳ ಸಂಬಂಧದಲ್ಲಿ ಉದ್ವಿಗ್ನತೆ ಇತ್ತು. ಆದರೆ ಇದೇ ಎರಡು ದೇಶಗಳು ಬ್ರಿಕ್ಸ್‌ನ ಪ್ರಮುಖ ಕಂಬಗಳೂ ಹೌದು.ನವದೆಹಲಿಯಲ್ಲಿ ಎರಡೂ ದೇಶಗಳ ನಾಯಕರು ಸಂಬಂಧಗಳನ್ನು ಸ್ಥಿರಗೊಳಿಸುವುದು ಮತ್ತು ಸಂವಾದ ಮುಂದುವರಿಸುವ ಅಗತ್ಯದ ಬಗ್ಗೆ ಚರ್ಚಿಸಿರುವುದು ಗಮನಾರ್ಹ. ಆದರೆ ಇದನ್ನು ಸಂಬಂಧಗಳು ಸಂಪೂರ್ಣವಾಗಿ ಸಾಮಾನ್ಯವಾಗಿವೆ ಎಂದು ಅರ್ಥೈಸುವುದು ತಪ್ಪು. ರಾಜತಾಂತ್ರಿಕತೆಯಲ್ಲಿ ಮಾತುಕತೆ ಎಂದರೆ ಸಮಸ್ಯೆ ಪರಿಹಾರವಾಗಿದೆ ಎಂದಲ್ಲ. ಆದರೆ ಮಾತುಕತೆ ನಡೆಯುತ್ತಿದೆ ಎಂದರೆ ಸಮಸ್ಯೆಗಳನ್ನು ರಾಜತಾಂತ್ರಿಕ ಮಾರ್ಗದಲ್ಲಿ ನಿರ್ವಹಿಸುವ ಬಾಗಿಲು ತೆರೆದಿದೆ ಎಂದರ್ಥ.
ಭಾರತದ ದೃಷ್ಟಿಯಿಂದ ಭಯೋತ್ಪಾದನೆಯ ಪ್ರಶ್ನೆಯೂ ಮಹತ್ವದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ಭದ್ರತಾ ಚಿಂತೆಗಳನ್ನು ಜಾಗತಿಕ ವೇದಿಕೆಗಳಲ್ಲಿ ಹೆಚ್ಚು ಬಲವಾಗಿ ಮಂಡಿಸುತ್ತಿದೆ. ಬ್ರಿಕ್ಸ್ ಘೋಷಣೆಯಲ್ಲಿ ಭಯೋತ್ಪಾದನೆ ವಿರುದ್ಧದ ನಿಲುವಿಗೆ ಒತ್ತು ನೀಡಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಪ್ರಮುಖ ಅಂಶವಾಗಿದೆ.ಭಾರತದ ಉದ್ದೇಶ ಭಯೋತ್ಪಾದನೆಯನ್ನು ಕೇವಲ ದ್ವಿಪಕ್ಷೀಯ ವಿವಾದದ ವಿಷಯವಾಗಿ ನೋಡದೆ, ಜಾಗತಿಕ ಭದ್ರತೆಯ ಪ್ರಶ್ನೆಯಾಗಿಸುವುದು ಮುಖ್ಯವಾಗಿತ್ತು. ಇವತ್ತು ಒಂದು ದೇಶಕ್ಕೆ ಆದ ತೊಂದರೆ ನಾಳೆ ಬೇರೊಂದು ದೇಶಕ್ಕೂ ಆಗುತ್ತದೆ. ಹೀಗಾಗಿ ಭಯೋದ್ಪಾದನೆ ಎನ್ನುವುದು ಜಾಗತಿಕ ಪಿಡುಗು ಎನ್ನುವ ಭಾರತದ ವಿಚಾರಕ್ಕೆ ಕೂಡ ಬ್ರಿಕ್ಸ್ ಸಭೆಯಲ್ಲಿ ಮನ್ನಣೆ ಸಿಕ್ಕಿದೆ.
ಮಧ್ಯಪ್ರಾಚ್ಯದ ಪರಿಸ್ಥಿತಿ ಬ್ರಿಕ್ಸ್‌ಗೆ ಮತ್ತೊಂದು ದೊಡ್ಡ ಪರೀಕ್ಷೆ. ಸದಸ್ಯ ರಾಷ್ಟ್ರಗಳೆಲ್ಲವೂ ಮಧ್ಯಪ್ರಾಚ್ಯದ ಸಂಘರ್ಷಗಳನ್ನು ಒಂದೇ ದೃಷ್ಟಿಕೋನದಿಂದ ನೋಡುವುದಿಲ್ಲ. ಇರಾನ್‌ನಂತಹ ರಾಷ್ಟ್ರವೊಂದೆಡೆ ಇದ್ದರೆ ಗಲ್ಫ್ ರಾಷ್ಟ್ರಗಳು ಮತ್ತೊಂದೆಡೆ ಇವೆ. ರಷ್ಯಾ ಮತ್ತು ಚೀನಾಗೆ ತಮ್ಮದೇ ಆದ ತಂತ್ರಾತ್ಮಕ ಹಿತಾಸಕ್ತಿಗಳಿವೆ. ಭಾರತವೂ ತನ್ನದೇ ಆದ ಇಂಧನ, ವ್ಯಾಪಾರ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದೆ.ಇಂತಹ ಸಂದರ್ಭದಲ್ಲಿ ಎಲ್ಲರೂ ಒಪ್ಪಿಕೊಳ್ಳಬಹುದಾದ ಭಾಷೆಯಲ್ಲಿ ಘೋಷಣೆ ರೂಪಿಸುವುದು ಬ್ರಿಕ್ಸ್‌ನ ರಾಜತಾಂತ್ರಿಕ ಸಾಮರ್ಥ್ಯದ ಪರೀಕ್ಷೆ. ಆದ್ದರಿಂದ ಘೋಷಣೆಯ ಭಾಷೆ ಎಚ್ಚರಿಕೆಯದ್ದಾಗಿದೆ. ಗರಿಷ್ಠ ಸಂಯಮ, ರಾಜತಾಂತ್ರಿಕ ಪರಿಹಾರ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಗೌರವ ಇಂತಹ ಪದಗಳು ಸಂಘರ್ಷದ ನಡುವೆ ಕನಿಷ್ಠ ಸಾಮಾನ್ಯ ನೆಲೆಯನ್ನು ಹುಡುಕುವ ಪ್ರಯತ್ನವನ್ನು ತೋರಿಸುತ್ತವೆ.ಈ ನಿಟ್ಟಿನಲ್ಲಿ ನೋಡಿದಾಗ ಕೂಡ ಭಾರತ ಗೆದ್ದಿದೆ.
ಈ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆಗೂ ಪ್ರಮುಖ ಸ್ಥಾನ ದೊರೆತಿರುವುದು ಭವಿಷ್ಯದ ದೃಷ್ಟಿಯಿಂದ ಗಮನಾರ್ಹ. ಇಪ್ಪತ್ತು ವರ್ಷಗಳ ಹಿಂದೆ ಜಾಗತಿಕ ರಾಜಕೀಯದ ಕೇಂದ್ರದಲ್ಲಿ ತೈಲ, ಅಣ್ವಸ್ತ್ರಗಳು ಮತ್ತು ಸಾಂಪ್ರದಾಯಿಕ ಸೈನಿಕ ಶಕ್ತಿ ಇದ್ದವು. ಇಂದು ಅದರ ಜೊತೆಗೆ ಡೇಟಾ, ಸೆಮಿಕಂಡಕ್ಟರ್‌ಗಳು, ಕಂಪ್ಯೂಟಿಂಗ್ ಶಕ್ತಿ ಮತ್ತು AI ಕೂಡ ಸೇರಿವೆ.AI ಮುಂದಿನ ದಶಕದ ಆರ್ಥಿಕ ಶಕ್ತಿಯ ಪ್ರಮುಖ ಮೂಲವಾಗುತ್ತದೆ. ಈ ಕಾರಣದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ಇದನ್ನು ಬಳಸುವುದು ಮಾತ್ರವಲ್ಲದೆ AI ನಿರ್ಮಿಸುವ ಸಾಮರ್ಥ್ಯ ಪಡೆಯಬೇಕಿದೆ. ಇಲ್ಲವಾದಲ್ಲಿ ನಾವು ಕೇವಲ ಕನ್ಸೂಮರ್ ದೇಶಗಳಾಗಿ ಉಳಿದುಕೊಳ್ಳುತ್ತೇವೆ.
ರೈತ ಮತ್ತು ಸಣ್ಣ ಉದ್ಯಮದವರೆಗೆ ಬ್ರಿಕ್ಸ್ ತಲುಪುತ್ತದೆಯೇ?
ಕೃಷಿ, ಆಹಾರ ಭದ್ರತೆ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಂತಹ ವಿಷಯಗಳಿಗೂ ಬ್ರಿಕ್ಸ್ ಗಮನ ನೀಡಿದೆ. ಇದು ಅತ್ಯಂತ ಮುಖ್ಯವಾದ ಅಂಶ. ಜಾಗತಿಕ ರಾಜಕೀಯದ ದೊಡ್ಡ ಪದಗಳು ಸಾಮಾನ್ಯ ಜನರ ಜೀವನದಿಂದ ದೂರದಲ್ಲಿರುವಂತೆ ಕಾಣುತ್ತವೆ. ಆದರೆ ಒಂದು ರೈತನಿಗೆ ಹೊಸ ರಫ್ತು ಮಾರುಕಟ್ಟೆ ದೊರೆತರೆ ಅದರ ಅರ್ಥ ಬೇರೆ. ಸಣ್ಣ ಉದ್ಯಮಿಗೆ ಅಂತರರಾಷ್ಟ್ರೀಯ ಹಣಕಾಸು ಸುಲಭವಾದರೆ ಅದರ ಅರ್ಥ ಬೇರೆ. ಆಹಾರ ಸರಬರಾಜು ಸ್ಥಿರವಾದರೆ ಅದರ ಪರಿಣಾಮ ನೇರವಾಗಿ ಕುಟುಂಬದ ಅಡುಗೆಮನೆಯವರೆಗೆ ತಲುಪುತ್ತದೆ.ಇದಾಗುತ್ತದೆಯೇ ಎನ್ನವ ಕುತೂಹಲವನ್ನು ಖಂಡಿತ ಈ ಸಭೆ ಸೃಷ್ಟಿಸಿದೆ. ಕಾಯ್ದು ನೋಡಬೇಕು.
ಭಾರತಕ್ಕೆ ಸಿಕ್ಕದ್ದು ಏನು?
ಭಾರತದ ದೃಷ್ಟಿಯಿಂದ ಈ ಶೃಂಗಸಭೆಯ ಫಲಿತಾಂಶವನ್ನು ಒಂದೇ ಸಾಲಿನಲ್ಲಿ ಹೇಳುವುದು ಕಷ್ಟ. ಆದರೆ ಕೆಲವು ಸಂಗತಿಗಳು ಸ್ಪಷ್ಟವಾಗಿವೆ. ವಿಸ್ತರಿಸಿರುವ ಬ್ರಿಕ್ಸ್ ವೇದಿಕೆಯಲ್ಲಿ ಭಾರತ ತನ್ನ ರಾಜತಾಂತ್ರಿಕ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸಿದೆ. ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರತಿನಿಧಿತ್ವ ಮತ್ತು ಧ್ವನಿ ಬೇಕೆಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಚೀನಾದೊಂದಿಗೆ ಸಂವಾದ ಮುಂದುವರಿಸುವ ಅವಕಾಶವನ್ನೂ ಬಳಸಿಕೊಂಡಿದೆ. ಹೀಗಾಗಿ ಶೃಂಗಸಭೆಯ ಫಲಿತಾಂಶವನ್ನು ತಕ್ಷಣದ ರಾಜಕೀಯ ಗೆಲುವು ಅಥವಾ ಸೋಲಿನ ಅಳತೆಯಲ್ಲಿ ನೋಡುವುದಕ್ಕಿಂತ ದೀರ್ಘಕಾಲೀನ ರಾಜತಾಂತ್ರಿಕ ಪ್ರಕ್ರಿಯೆಯ ಭಾಗವಾಗಿ ನೋಡುವುದು ಹೆಚ್ಚು ಅರ್ಥಪೂರ್ಣ.
ನವದೆಹಲಿಯ ಘೋಷಣೆಯಲ್ಲಿರುವ ಮಾತುಗಳು ಎಷ್ಟು ಬೇಗ ಕಾರ್ಯರೂಪಕ್ಕೆ ಬರುತ್ತವೆ ಎಂಬುದೇ ಅದರ ನಿಜವಾದ ಪರೀಕ್ಷೆ. ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಎಷ್ಟು ಹೆಚ್ಚುತ್ತದೆ? ಗಡಿಯಾಚೆಯ ಪಾವತಿ ವ್ಯವಸ್ಥೆಗಳು ಎಷ್ಟು ಪರಿಣಾಮಕಾರಿಯಾಗುತ್ತವೆ? AI, ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಜವಾದ ಸಹಕಾರ ಮೂಡಬಹುದೇ? ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳು ಕಡಿಮೆಯಾಗಬಹುದೇ? ಭಾರತ ಮತ್ತು ಚೀನಾ ಸಂಬಂಧಗಳು ಎಷ್ಟು ಸ್ಥಿರವಾಗುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಈ ಶೃಂಗಸಭೆಯ ಹೇಳಿಕೆಗಳಿಗೆ ಜೀವ ಬರಲಿದೆ.
ಕೊನೆಯ ಮಾತು: ಇತಿಹಾಸದಲ್ಲಿ ದೊಡ್ಡ ಬದಲಾವಣೆಗಳು ಯಾವಾಗಲೂ ಸದ್ದು ಮಾಡಿಕೊಂಡು ಬರುವುದಿಲ್ಲ. ಕೆಲವೊಮ್ಮೆ ಅವು ಒಂದು ಘೋಷಣೆಯಲ್ಲಿ ಆರಂಭವಾಗುತ್ತವೆ. ನಂತರ ಒಂದು ವ್ಯಾಪಾರ ಒಪ್ಪಂದದಲ್ಲಿ ಕಾಣಿಸುತ್ತವೆ. ನಂತರ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜಾಗ ಪಡೆಯುತ್ತವೆ. ಆಮೇಲೆ ನಿಧಾನವಾಗಿ ಜನರ ದೈನಂದಿನ ಬದುಕಿನ ಭಾಗವಾಗುತ್ತವೆ.
ನವದೆಹಲಿ ಬ್ರಿಕ್ಸ್ ಶೃಂಗಸಭೆ ಅಂತಹ ಬದಲಾವಣೆಯ ಆರಂಭವೇ ಅಥವಾ ಕೇವಲ ಮತ್ತೊಂದು ರಾಜತಾಂತ್ರಿಕ ಅಧ್ಯಾಯವೇ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ. ಜಗತ್ತು ಈಗ ಒಂದೇ ಕೇಂದ್ರದ ಸುತ್ತ ತಿರುಗುವ ಹಳೆಯ ವ್ಯವಸ್ಥೆಯಲ್ಲಿ ಉಳಿದಿಲ್ಲ. ಅನೇಕ ಕೇಂದ್ರಗಳು ರೂಪುಗೊಳ್ಳುತ್ತಿವೆ. ಬ್ರಿಕ್ಸ್ ಆ ಹೊಸ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಹುಡುಕುತ್ತಿದೆ.ನನ್ನ ಪ್ರಕಾರ ಬ್ರಿಕ್ಸ್‌ನ ನಿಜವಾದ ಕಥೆ ಈಗ ಆರಂಭವಾಗಿದೆ.