

ಜಾಗತಿಕ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಹೊಸ ಸಮೀಕರಣಗಳು ರೂಪುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತ ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ 18 ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಭಾರತ ಮಂಡಪಂನಲ್ಲಿ ನಡೆಯಲಿರುವ ಈ ಸಭೆಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು, ಪಾಲುದಾರ ರಾಷ್ಟ್ರಗಳು ಮತ್ತು ಆಹ್ವಾನಿತ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
2026 ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಬ್ರಿಕ್ಸ್ ಎನ್ನುವುದು ಕೇವಲ ಐದು ದೇಶಗಳ ಹೆಸರಿನ ಮೊದಲನೇ ಪದವಾಗಿ ಉಳಿದುಕೊಂಡಿಲ್ಲ , ಬದಲಿಗೆ ಬ್ರಿಕ್ಸ್ ಎಂದರೆ “Building for Resilience, Innovation, Cooperation and Sustainability” ಎಂದಿದೆ. ಬ್ರಿಕ್ಸ್ ಹೆಸರಿನ ನಿಜಾರ್ಥವಿದು ಎನ್ನುತ್ತಲೆ ಭಾರತ ಚೀನಾಗೆ ಒಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದೆ.
ಅದೇ ಕಲೆಕ್ಟಿವ್ ಇಂಟರೆಸ್ಟ್. ಎಲ್ಲಾ ಸದಸ್ಯ ದೇಶಗಳ ಒಳಿತಿಗಾಗಿ ಕೆಲಸ ಮಾಡುವುದಾದರೆ ಮಾತ್ರ ನಾವು ಗೆಲ್ಲಲು ಸಾಧ್ಯ. ನಾವು ಪಾಶ್ಚಾತ್ಯ ಶಕ್ತಿಗಳ ವಿರುದ್ದದ ಕೂಟವಾದರೆ ಆ ಕೂಟ ಸೋಲುತ್ತದೆ. ನಾವು ಯಾರನ್ನೂ ದ್ವೇಷಿಸುವ ಅಥವಾ ವಿರೋಧಿಸುವ ಅವಶ್ಯಕತೆಯಿಲ್ಲ ಎನ್ನುವುದನ್ನು ಜೈ ಶಂಕರ್ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಸಭೆ ಶುರುವಾಗುವುದಕ್ಕೆ ಮುಂಚೆಯೇ ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ನಾವು ಜಗತ್ತಿನ ಎಲ್ಲಾ ದೇಶಗಳೊಂದಿಗೆ ಒಂದೊಳ್ಳೆ ಸಂಬಂಧ ಹೊಂದಬೇಕು. ಎಲ್ಲರೊಂದಿಗೂ ವ್ಯಾಪಾರ ಮಾಡುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು. ಯಾವ ದೇಶದ ವಿರುದ್ದವೂ ನಾವು ಹೋಗಬಾರದು. ಆದರೆ ನ್ಯಾಷನಲ್ ಇಂಟರೆಸ್ಟ್ ಫಸ್ಟ್!
ಇದು ಕೇವಲ ಮತ್ತೊಂದು ಅಂತಾರಾಷ್ಟ್ರೀಯ ಶೃಂಗಸಭೆಯಾಗಿ ಉಳಿದುಕೊಳ್ಳುವ ಸಾಧ್ಯತೆ ಕಡಿಮೆ. 2026 ರಲ್ಲಿ ಬ್ರಿಕ್ಸ್ ತನ್ನ 20ನೇ ವರ್ಷವನ್ನು ಪೂರೈಸುತ್ತಿರುವುದೂ ವಿಶೇಷ. 2006 ರಲ್ಲಿ ಆರಂಭವಾದ ಈ ವೇದಿಕೆ, ಮೂಲತಃ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾವನ್ನು ಒಳಗೊಂಡ ‘BRIC’ ಆಗಿತ್ತು. ನಂತರ ದಕ್ಷಿಣ ಆಫ್ರಿಕಾ ಸೇರ್ಪಡೆಯಾಗಿ BRICS ಆಯಿತು. 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ ಸೇರ್ಪಡೆಯಾದವು. 2025 ರಲ್ಲಿ ಇಂಡೋನೇಷ್ಯಾ ಪೂರ್ಣ ಸದಸ್ಯವಾಯಿತು. ಹೀಗಾಗಿ ಇಂದು ಬ್ರಿಕ್ಸ್ 11 ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ವೇದಿಕೆಯಾಗಿದೆ.
ಈ ಸಭೆ ಏಕೆ ಮಹತ್ವದ್ದು?
ವಿಶ್ವದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಈಗ ಏಕಧ್ರುವೀಯವಾಗಿಲ್ಲ. ಅಮೆರಿಕ–ಚೀನಾ ಸ್ಪರ್ಧೆ, ರಷ್ಯಾ–ಪಶ್ಚಿಮ ಸಂಘರ್ಷ, ವ್ಯಾಪಾರ ನಿರ್ಬಂಧಗಳು, ಸರಬರಾಜು ಸರಪಳಿಯ ಅಸ್ಥಿರತೆ, ಇಂಧನ ಭದ್ರತೆ ಮತ್ತು ಡಾಲರ್‌ನ ಪ್ರಾಬಲ್ಯದ ಕುರಿತು ಚರ್ಚೆಗಳು ಜೋರಾಗಿವೆ.ಅತ್ತ ಪಾಕಿಸ್ತಾನ , ಟರ್ಕಿ ಮತ್ತು ಸೌದಿ ಇಸ್ಲಾಮಿಕ್ ನ್ಯಾಟೋ ಒಪ್ಪಂದವನ್ನು ಮಾಡಿಕೊಂಡಿವೆ.
ಈ ಕೂಟಕ್ಕೆ ಮತ್ತಷ್ಟು ದೇಶಗಳು ಸೇರುವ ಉತ್ಸಾಹ ತೋರಿವೆ.ಆದರೆ ಇರಾನ್ ಮತ್ತು ಯುಎಇ ಬ್ರಿಕ್ಸ್ ಜೊತೆಯಿವೆ. ಹೀಗಾಗಿ ಸಮೀಕರಣ ಇನ್ನಷ್ಟು ಜಟಿಲವಾಗುತ್ತ ಹೋಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಮತ್ತು ವಿಶ್ವ ಆರ್ಥಿಕತೆಯ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪುಟ್ಟ ರಾಷ್ಟ್ರಗಳು ಬ್ರಿಕ್ಸ್ ತೆಕ್ಕೆಗೆ ಬರಬಹುದು. ಹೀಗಾಗಿ ಚೀನಾ ಇಲ್ಲಿ ತನ್ನ ಅಧಿಪತ್ಯವನ್ನು ಸಾಧಿಸಲು ಪ್ರಯತ್ನಿಸುತ್ತದೆ. ವಿಶ್ವ ನಾಯಕನ ಪಟ್ಟಕ್ಕೆ ಬ್ರಿಕ್ಸ್ ಅಧಿನಾಯಕ ಪಟ್ಟ ಬಹಳ ಮುಖ್ಯವಾದ ಮೆಟ್ಟಿಲಾಗಿದೆ.
ಚೀನಾ ತನ್ನ ಪರಮಾಪ್ತ ಮಿತ್ರ ರಷ್ಯಾ ಜೊತೆಗೆ ಸೇರಿ ಭಾರತವನ್ನು ಕಟ್ಟಿಹಾಕುವ ಪ್ರಯತ್ನವನ್ನು ಖಂಡಿತ ಮಾಡುತ್ತದೆ. ಗಮನಿಸಿ ಇತ್ತೀಚಿನ ದಿನಗಳಲ್ಲಿ ರಷ್ಯಾ , ಚೀನಾದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಂಡಿದೆ. ಚೀನಾವನ್ನು ಹೊರತುಪಡಿಸಿ ರಷ್ಯಾದ ಆರ್ಥಿಕತೆ ಭದ್ರವಾಗಿ ನಿಲ್ಲುವುದು ಕೂಡ ಸಾಧ್ಯವಿಲ್ಲ. ಭಾರತ ಅತ್ತ ಅಮೆರಿಕವೂ ಬೇಕು , ಇತ್ತ ಚೀನಾ ಮತ್ತು ರಷ್ಯಾ ಕೂಡ ಬೇಕು ಎನ್ನುವ ಡಿಪ್ಲೊಮೆಸಿ ಅನುಸರಿಸುತ್ತಿದೆ. ಈ ಸಭೆಯಲ್ಲಿ ರಷ್ಯಾ ಮತ್ತು ಚೀನಾ ಒಟ್ಟಾಗಿ ಭಾರತ ಒಂದು ಸ್ಪಷ್ಟ ನಿಲುವು ತಳೆಯುವಂತೆ ಒತ್ತಾಯಿಸುವುದು ಗ್ಯಾರಂಟಿ.
ಭಾರತದ ಮುಖ್ಯ ಅಜೆಂಡಾ ಏನು?
ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ಮೂರು ಪ್ರಮುಖ ಸ್ತಂಭಗಳ ಮೇಲೆ ಒತ್ತು ನೀಡಲಾಗಿದೆ. ರಾಜಕೀಯ ಮತ್ತು ಭದ್ರತೆ, ಆರ್ಥಿಕ ಮತ್ತು ಹಣಕಾಸು ಸಹಕಾರ ಹಾಗೂ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕ. ವರ್ಷವಿಡೀ ಭಾರತದಲ್ಲಿ 25 ಕ್ಕೂ ಹೆಚ್ಚು ನಗರಗಳಲ್ಲಿ 350 ಕ್ಕೂ ಅಧಿಕ ಸಭೆಗಳು ಮತ್ತು ಉನ್ನತ ಮಟ್ಟದ ಕಾರ್ಯಕ್ರಮಗಳು ನಡೆದಿವೆ.
ಆರ್ಥಿಕ ಕ್ಷೇತ್ರದಲ್ಲಿ ಸರಬರಾಜು ಸರಪಳಿಯನ್ನು(ಸಪ್ಲೈ ಚೈನ್ ) ಬಲಪಡಿಸುವುದು ಪ್ರಮುಖ ವಿಷಯ. ಕೋವಿಡ್ ನಂತರ ಹಾಗೂ ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಒಂದೇ ದೇಶ ಅಥವಾ ಒಂದು ಪ್ರದೇಶದ ಮೇಲೆ ಅವಲಂಬಿತವಾಗಿರುವ ಸರಬರಾಜು ವ್ಯವಸ್ಥೆಯ ಅಪಾಯ ಸ್ಪಷ್ಟವಾಗಿದೆ. ಭಾರತವು ಬ್ರಿಕ್ಸ್ ರಾಷ್ಟ್ರಗಳ ನಡುವೆ ಹೆಚ್ಚು ವೈವಿಧ್ಯಮಯ ಮತ್ತು ಸ್ಥಿರವಾದ ಸಪ್ಲೈ ಚೈನ್ ನಿರ್ಮಿಸುವತ್ತ ಗಮನ ಹರಿಸುತ್ತಿದೆ. ಶೃಂಗಸಭೆಯಲ್ಲಿ ಸಪ್ಲೈ ಚೈನ್ ಸಹಕಾರ ಕುರಿತ ಚೌಕಟ್ಟನ್ನು ಅಂಗೀಕರಿಸುವ ನಿರೀಕ್ಷೆಯೂ ಇದೆ.ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ತನ್ನ ಸದಸ್ಯ ದೇಶವಾದ ಇರಾನ್ ಬ್ರಿಕ್ಸ್ ದೇಶಗಳ ಸಪ್ಲೈ ಗೆ ಅಡ್ಡಿ ಮಾಡದಂತೆ ಅದನ್ನು ಮನ ಒಲಿಸುವ ಕೆಲಸ ಮಾಡುವ ಉದ್ದೇಶವಿದೆ. ಇದರ ಜೊತೆಗೆ ಸ್ಟಾರ್ಟ್‌ಅಪ್‌ಗಳು, ಹೊಸ ಆವಿಷ್ಕಾರಗಳು, ಹಸಿರು ಇಂಧನ, ಡಿಜಿಟಲ್ ಆರ್ಥಿಕತೆ, MSMEಗಳು ಮತ್ತು ತಂತ್ರಜ್ಞಾನ ಸಹಕಾರ ಕೂಡ ಪ್ರಮುಖ ವಿಷಯಗಳಾಗಿವೆ.
ಡಾಲರ್‌ಗೆ ಪರ್ಯಾಯವೇ?
ಬ್ರಿಕ್ಸ್ ಸಭೆ ಎಂದಾಕ್ಷಣ ಜಾಗತಿಕ ಗಮನ ಸೆಳೆಯುವ ವಿಷಯವೆಂದರೆ ಡಾಲರ್‌ಗೆ ಪರ್ಯಾಯ ಹಣಕಾಸು ವ್ಯವಸ್ಥೆ.ಆದರೆ ಭಾರತ ಈ ವಿಷಯವನ್ನು ಹೆಚ್ಚು ಪ್ರಾಯೋಗಿಕವಾಗಿ ನೋಡುತ್ತಿದೆ. ಹೊಸ ಸಾಮಾನ್ಯ ಬ್ರಿಕ್ಸ್ ಕರೆನ್ಸಿ ತಕ್ಷಣವೇ ಹುಟ್ಟಬೇಕು ಎಂಬುದಕ್ಕಿಂತ, ಸದಸ್ಯ ರಾಷ್ಟ್ರಗಳ ನಡುವೆ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ, ವೇಗವಾದ ಪಾವತಿ ವ್ಯವಸ್ಥೆಗಳು ಮತ್ತು Central Bank Digital Currency (CBDC) ಸಂಪರ್ಕಕ್ಕೆ ಭಾರತ ಒತ್ತು ನೀಡುತ್ತಿದೆ.
RBI ಗವರ್ನರ್ ಸಂಜಯ್ ಮಲ್ಹೋತ್ರಾ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ನಡುವೆ fast-payment systems ಮತ್ತು CBDC ಗಳನ್ನು ಸಂಪರ್ಕಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದರ ಉದ್ದೇಶ ಗಡಿಯಾಚೆಗಿನ ಪಾವತಿಗಳನ್ನು ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುವುದು.ಇದು ಯಶಸ್ವಿಯಾದರೆ ಭಾರತದ UPI ಮಾದರಿ ಜಾಗತಿಕ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗಬಹುದು.
ರೂಪಾಯಿ ಅಂತಾರಾಷ್ಟ್ರೀಯ ಬಳಕೆಯನ್ನು ಹೆಚ್ಚಿಸುವ ಭಾರತದ ಪ್ರಯತ್ನಕ್ಕೂ ಇದು ಸಹಕಾರಿಯಾಗಬಹುದು. ಚೀನಾ ಬ್ರಿಕ್ಸ್ ಕರೆನ್ಸಿ ಗೆ ಹೆಚ್ಚು ಒತ್ತು ನೀಡುತ್ತಿದೆ. ಬ್ರಿಕ್ಸ್ ಕರೆನ್ಸಿ ಚಾಲನೆಗೆ ಬಂದರೆ ಚೀನಾಗೆ ಹೆಚ್ಚು ಲಾಭವಾಗುತ್ತದೆ. ಹೀಗಾಗಿ ಹಗ್ಗ ಜಗ್ಗಾಟ ಮುಂದುವರಿಯಲಿದೆ. ಡಾಲರ್ ಗೆ ಪರ್ಯಾಯ ಈ ಸಭೆಯಲ್ಲಿ ಸಿಗುವುದು ಕಷ್ಟಸಾಧ್ಯ. ಆದರೆ ರಷ್ಯಾ ಮತ್ತು ಚೀನಾ ಒಂದಾಗಿ ಈ ವಿಚಾರದಲ್ಲಿ ಭಾರತದ ಮೇಲೆ ಇನ್ನಿಲ್ಲದ ಒತ್ತಡ ಹಾಕುವುದು ಮಾತ್ರ ತಪ್ಪಿಸಲಾಗುವುದಿಲ್ಲ.
ಚೀನಾ–ಭಾರತ ಸಂಬಂಧ: ಸಭೆಯ ಕುತೂಹಲದ ಕೇಂದ್ರ !
ಈ ಬಾರಿಯ ಬ್ರಿಕ್ಸ್ ಸಭೆಯ ಅತ್ಯಂತ ಕುತೂಹಲಕಾರಿ ಅಂಶಗಳಲ್ಲಿ ಒಂದು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡುತ್ತಾರೆ ಎನ್ನುವುದೇ ಆಗಿದೆ. ಅವರು 2026 ರ ಸೆಪ್ಟೆಂಬರ್ 12/13 ರ ಸಭೆಗೆ ಬರುವ ನಿರೀಕ್ಷೆಯಿದ್ದು, ಅದು 2019 ರ ನಂತರ ಅವರ ಮೊದಲ ಭಾರತ ಭೇಟಿಯಾಗಲಿದೆ. ಸುಮಾರು 400 ಅಧಿಕಾರಿಗಳ ದೊಡ್ಡ ನಿಯೋಗದೊಂದಿಗೆ ಅವರು ಬರಬಹುದು ಎನ್ನುವ ಸುದ್ದಿ ಹಬ್ಬಿದೆ. ಚೀನಾದೊಂದಿಗೆ ಗಡಿ ವಿವಾದ ಪರಿಹಾರಕ್ಕೆ ಅಜಿತ್ ದೋವಲ್ ಅವರು ಚೀನಾಕ್ಕೆ ಭೇಟಿ ಕೊಟ್ಟಿದ್ದು ನೆನಪಿಸಿಕೊಳ್ಳಬಹುದು.
ಶಿ ಅವರು ಬ್ರಿಕ್ಸ್ ಸಭೆಗೆ ಬಂದಾಗ ಮಾತುಕತೆ ಬೇರೆಕಡೆಗೆ ಸಾಗ ಬಾರಾದು ಎನ್ನುವ ಉದ್ದೇಶದಲ್ಲಿ ಮತ್ತು ಮೋದಿ ಮತ್ತು ಶಿ ಅವರ ನಡುವೆ ಇನ್ನಷ್ಟು ಉತ್ತಮ ಬಾಂಧವ್ಯ ಉಂಟಾಗಲಿ ಎನ್ನುವ ಕಾರಣಕ್ಕೆ ಯಾವುದೆಲ್ಲಾ ತಗಾದೆಗಳಿವೆ ಅವುಗಳನ್ನು ಇಲ್ಲಿ ಎತ್ತದೆ ಅವುಗಳನ್ನು ರಾಜ ತಾಂತ್ರಿಕ ಮಾರ್ಗದಿಂದ ಪರಿಹರಿಸಿಕೊಳ್ಳುವ ಯೋಜನೆಯನ್ನು ಹಾಕಿ ಕೊಂಡಿರುತ್ತಾರೆ. ಹೀಗಾಗಿ ಮೋದಿ–ಶಿ ಭೇಟಿ ನಡೆದರೆ, ಅದರ ಪರಿಣಾಮ ಬ್ರಿಕ್ಸ್ ವೇದಿಕೆಯನ್ನು ಮೀರಿ ಹೋಗದೆ , ಆದರೆ ಗಡಿ ಶಾಂತಿ, ವ್ಯಾಪಾರ, ಹೂಡಿಕೆ ಮತ್ತು ನೇರ ಸಂಪರ್ಕದ ಬಗ್ಗೆ ಮಾತುಕತೆಗೆ ಹೊಸ ಅವಕಾಶ ಸಿಗುವ ಸಾಧ್ಯತೆಯಿದೆ.
ಮತ್ತೊಂದು ಸವಾಲು: ಬ್ರಿಕ್ಸ್ ಒಳಗಿನ ಭಿನ್ನಾಭಿಪ್ರಾಯಗಳು
ಬ್ರಿಕ್ಸ್ ದೊಡ್ಡದಾಗಿರುವುದು ಅದರ ಶಕ್ತಿ. ಅದೇ ಸಮಯದಲ್ಲಿ ಅದರ ದೌರ್ಬಲ್ಯವೂ ಹೌದು.ಚೀನಾ ಮತ್ತು ಭಾರತಕ್ಕೆ ತಮ್ಮದೇ ಆದ ಹಿತಾಸಕ್ತಿಗಳಿವೆ. ರಷ್ಯಾ ಮತ್ತು ಪಶ್ಚಿಮದ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳ ನಿಲುವು ಒಂದೇ ಆಗಿಲ್ಲ. ಮಧ್ಯಪ್ರಾಚ್ಯದಲ್ಲಿಯೂ ಇರಾನ್ ಮತ್ತು ಯುಎಇ ಸೇರಿದಂತೆ ಕೆಲವು ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಎಲ್ಲರೂ ಒಪ್ಪುವ ಸಾಮಾನ್ಯ ಘೋಷಣೆ ರೂಪಿಸುವುದೇ ಭಾರತದ ಪ್ರಮುಖ ರಾಜತಾಂತ್ರಿಕ ಪರೀಕ್ಷೆ ಆಗುತ್ತದೆ.
ಇದರಿಂದ ಬ್ರಿಕ್ಸ್ ಒಂದು NATO ಮಾದರಿಯ ರಾಜಕೀಯ ಅಥವಾ ಸೈನಿಕ ಮೈತ್ರಿಯಾಗಿ ಬದಲಾಗುವುದು ಸಾಧ್ಯವಿಲ್ಲ. ಬದಲಿಗೆ, ವಿಭಿನ್ನ ಹಿತಾಸಕ್ತಿಗಳಿರುವ ರಾಷ್ಟ್ರಗಳು ಕೆಲವು ಸಾಮಾನ್ಯ ಆರ್ಥಿಕ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ವೇದಿಕೆಯಾಗಿಯೇ ಅದು ಮುಂದುವರಿಯುವ ಸಾಧ್ಯತೆ ಹೆಚ್ಚು.
ಭಾರತಕ್ಕೆ ಏನು ಲಾಭ?
ಮೊದಲನೆಯದಾಗಿ, ಜಾಗತಿಕ ದಕ್ಷಿಣದ ನಾಯಕತ್ವದಲ್ಲಿ ಭಾರತದ ಸ್ಥಾನ ಬಲವಾಗಲಿದೆ.
ಎರಡನೆಯದಾಗಿ, ಚೀನಾ, ರಷ್ಯಾ, ಬ್ರೆಜಿಲ್, ಮಧ್ಯಪ್ರಾಚ್ಯದ ಇಂಧನ ರಾಷ್ಟ್ರಗಳು ಮತ್ತು ಆಫ್ರಿಕಾ ರಾಷ್ಟ್ರಗಳೊಂದಿಗೆ ಒಂದೇ ವೇದಿಕೆಯಲ್ಲಿ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಅವಕಾಶ ಸಿಗುತ್ತದೆ.
ಮೂರನೆಯದಾಗಿ, ಸ್ಥಳೀಯ ಕರೆನ್ಸಿ ವ್ಯಾಪಾರ ಹೆಚ್ಚಾದರೆ ಭಾರತದ ವಿದೇಶಿ ವಿನಿಮಯ ವೆಚ್ಚ ಮತ್ತು ಡಾಲರ್ ಅವಲಂಬನೆಯ ಕೆಲವು ಭಾಗವನ್ನು ಕಡಿಮೆ ಮಾಡಬಹುದು.
ನಾಲ್ಕನೆಯದಾಗಿ, ಸಪ್ಲೈ ಚೈನ್ ಡೈವರ್ಸಿಫಿಕೇಷನ್ ಮೂಲಕ ಭಾರತವನ್ನು ಪರ್ಯಾಯ ಉತ್ಪಾದನಾ ಕೇಂದ್ರವನ್ನಾಗಿ ಬೆಳೆಸುವ ಅವಕಾಶ ದೊರೆಯಬಹುದು.
ಐದನೆಯದಾಗಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, UPI, fintech, ಸ್ಟಾರ್ಟ್‌ಅಪ್ ಮತ್ತು AI ಸಾಮರ್ಥ್ಯಗಳಿಗೆ ದೊಡ್ಡ ಮಾರುಕಟ್ಟೆ ಸಿಗಬಹುದು.
ಹಾಗಾದರೆ ನಿರೀಕ್ಷಿತ ಫಲಿತಾಂಶ ಏನು?
ಶೃಂಗಸಭೆಯ ನಂತರ ತಕ್ಷಣವೇ ಹೊಸ BRICS ಕರೆನ್ಸಿ ಅಥವಾ ಡಾಲರ್‌ಗೆ ಪರ್ಯಾಯ ವ್ಯವಸ್ಥೆ ಹುಟ್ಟುವ ಸಾಧ್ಯತೆ ಕಡಿಮೆ. ಆದರೆ ಸಣ್ಣ ಸಣ್ಣ ಹೆಜ್ಜೆಗಳು ಹೆಚ್ಚು ಮಹತ್ವ ಪಡೆಯಯುತ್ತವೆ . ಸ್ಥಳೀಯ ಕರೆನ್ಸಿ ವ್ಯಾಪಾರ, CBDC ಸಂಪರ್ಕ, ಡಿಜಿಟಲ್ ಪಾವತಿ ವ್ಯವಸ್ಥೆ, ಸಪ್ಲೈ ಚೈನ್ ಸಹಕಾರ , MSME ,ಹಣಕಾಸು, ಹಸಿರು ಇಂಧನ ಮತ್ತು ತಂತ್ರಜ್ಞಾನ ಸಹಕಾರ ಹೆಚ್ಚಾಗಲಿದೆ. ಇದರ ಜೊತೆಗೆ ಭಾರತ ಮತ್ತು ಚೀನಾ ಸಂಬಂಧದಲ್ಲಿ ಸಂವಾದ ಪುನರಾರಂಭವಾಗುವುದು ಬಹುಶಃ ಈ ಸಭೆಯ ಅತ್ಯಂತ ಗಮನಾರ್ಹ ರಾಜತಾಂತ್ರಿಕ ಫಲಿತಾಂಶವಾಗಬಹುದು.
ಕೊನೆಯ ಮಾತು : ಭಾರತ ಒಂದೆಡೆ ಅಮೆರಿಕ ಮತ್ತು ಪಶ್ಚಿಮದೊಂದಿಗೆ ಆಳವಾದ ಆರ್ಥಿಕ–ತಂತ್ರಜ್ಞಾನ ಸಂಬಂಧಗಳನ್ನು ಬೆಳೆಸುತ್ತಿದೆ. ಮತ್ತೊಂದೆಡೆ ರಷ್ಯಾ, ಚೀನಾ ಮತ್ತು Global South ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದೆ. ಇದೇ ಭಾರತದ strategic autonomyಯ ಮೂಲ.ಹೀಗಾಗಿ ದೆಹಲಿಯ ಬ್ರಿಕ್ಸ್ ಸಭೆ “ಪಶ್ಚಿಮದ ವಿರುದ್ಧದ ಮೈತ್ರಿ”ಯ ಘೋಷಣೆಯಾಗುವ ಸಾಧ್ಯತೆ ಕಡಿಮೆ. ಬದಲಿಗೆ “ಯಾರ ವಿರುದ್ಧವೂ ಅಲ್ಲ. ಭಾರತದ ಹಿತಾಸಕ್ತಿಗಾಗಿ ಎಲ್ಲರೊಂದಿಗೆ” ಎಂಬ ನಿಲುವಿಗೆ ಅದು ಮತ್ತಷ್ಟು ಬಲ ನೀಡುತ್ತದೆ.
ಚೀನಾ ಮತ್ತು ರಷ್ಯಾ ದೇಶದ ಒತ್ತಡಗಳನ್ನು ಭಾರತ ಹೇಗೆ ನಿಭಾಯಿಸುತ್ತದೆ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ. ಆದರೆ ಭಾರತ ತನ್ನ ವಸುದೈವ ಕುಟುಂಬಕಮ್ ಎನ್ನುವ ನೀತಿಯನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ. ಭಾರತವೂ ಅಭಿವೃದ್ಧಿ ಹೊಂದಬೇಕು ಸದಸ್ಯ ರಾಷ್ಟ್ರಗಳೂ ಅಭಿವೃದ್ಧಿ ಹೊಂದಬೇಕು. ಜಾಗತಿಕ ರಾಜಕೀಯದ ಆಟಗಳು ಸಬ್ ಜೀರೋ ಸಂ ಗೇಮ್ ಆಗಬಾರದು ಎನ್ನುವುದು ಭಾರತದ ಸ್ಪಷ್ಟ ನಿಲುವು.