

ಭಾರತದ ಮೇಲಿರುವ ಆಕಾಶ ಇಂದು ಕೇವಲ ಒಂದು ಖಾಲಿ ಸ್ಥಳವಾಗಿ ಉಳಿದಿಲ್ಲ. ಅದು ಈಗಾಗಲೇ ನಿಬಿಡವಾದ, ಅಸ್ನೇಹಿಯಾದ ನೆರೆಹೊರೆಯಾಗಿ ರೂಪುಗೊಂಡಿದ್ದು, ಈ ವಾರ ವಾಷಿಂಗ್ಟನ್ ನೀಡಿರುವ ಹೇಳಿಕೆ ಒಂದು ಹಳೆಯ ಪಾಠವನ್ನು ತುರ್ತಾಗಿಸಿದೆ. ಅದೇನೆಂದರೆ, ಕಕ್ಷೆಯಲ್ಲಿನ ತನ್ನ ಕಣ್ಣುಗಳನ್ನು ಕಳೆದುಕೊಳ್ಳುವ ದೇಶ ಅರ್ಧ ಕುರುಡಾಗಿ ಯುದ್ಧ ನಡೆಸುತ್ತದೆ.
ಭಾರತ ತಾನು ಕಕ್ಷೆಯಲ್ಲಿ ಯಾವುದೇ ಆಯುಧ ಹೊಂದಿಲ್ಲ ಎಂದಿದ್ದು, ಇದರ ಪರಿಣಾಮವಾಗಿ ಬಾಹ್ಯಾಕಾಶ ಶಕ್ತಿಗಳ ಮುಂಚೂಣಿಯಿಂದ ಹಿಂದೆ ಸರಿದಿದೆ. ಅಷ್ಟಾದರೂ, 2019ರಲ್ಲಿ ಭಾರತ ಕೇವಲ ವೀಕ್ಷಕನಾಗಿ ಉಳಿಯುವುದನ್ನು ತಪ್ಪಿಸಿ, ತನ್ನ ಮಿಷನ್ ಶಕ್ತಿ ಯೋಜನೆಯಡಿ ಕೆಳ ಕಕ್ಷೆಯಲ್ಲಿದ್ದ ಒಂದು ಹಳೆಯ ಉಪಗ್ರಹವನ್ನು ಹೊಡೆದುರುಳಿಸಿತು. ಈ ಪರೀಕ್ಷೆ, ಅಮೆರಿಕ, ರಷ್ಯಾ, ಮತ್ತು ಚೀನಾಗಳ ಬಳಿಕ ಪ್ರಸ್ತುತ ಸಾಮರ್ಥ್ಯವನ್ನು ಸಂಪಾದಿಸಿದ ಕೇವಲ ನಾಲ್ಕನೇ ದೇಶ ಎನ್ನುವ ಕೀರ್ತಿಯನ್ನು ಭಾರತಕ್ಕೆ ಸಂಪಾದಿಸಿತು. ಚೂರಾದ ಉಪಗ್ರಹಗಳು ಸಣ್ಣ ತುಣುಕುಗಳನ್ನು ಬಾಹ್ಯಾಕಾಶದಲ್ಲೇ ಉಳಿಸುತ್ತವೆ. ಇಂತಹ ತುಣುಕುಗಳು ಹಲವಾರು ವರ್ಷಗಳ ಕಾಲ ಅಪಾಯಕಾರಿಯಾಗಿ ಉಳಿದುಬಿಡುತ್ತವೆ. ಆದ್ದರಿಂದಲೇ ಭಾರತೀಯ ಯೋಜಕರು ಇಂತಹ ಪರಿಣಾಮಗಳನ್ನು ಇಲ್ಲವಾಗಿಸುವಂತಹ ಕ್ರಮಗಳನ್ನು ಆರಿಸಿದ್ದಾರೆ. ಇವುಗಳಲ್ಲಿ ಜಾಮಿಂಗ್ ಸಹ ಸೇರಿದ್ದು, ಇದು ಸಂಕೇತವನ್ನು ಇಲೆಕ್ಟ್ರಾನಿಕ್ ಗದ್ದಲದ ಅಡಿಯಲ್ಲಿ ಬಚ್ಚಿಡುತ್ತದೆ. ಇದರೊಡನೆ, ಸೈಬರ್ ವಿಧಾನಗಳು ಮತ್ತು ಭೂಮಿಯಿಂದ ಪ್ರಯೋಗಿಸುವ ಲೇಸರ್‌ಗಳನ್ನೂ ಬಳಸಲಾಗುತ್ತದೆ.
2025ರಲ್ಲಿ, ಒಂದು ಜಂಟಿ ಮಿಲಿಟರಿ ಬಾಹ್ಯಾಕಾಶ ಸಿದ್ಧಾಂತ ಮತ್ತು ಬಾಹ್ಯಾಕಾಶ ಆಧಾರಿತ ಕಣ್ಗಾವಲು ಹಂತ - 3 ಜಾರಿಗೆ ಬಂದವು. ಇವು ಬಹುತೇಕ 27,000 ಕೋಟಿ ರೂಪಾಯಿ ವೆಚ್ಚದಲ್ಲಿ, 52 ಮಿಲಿಟರಿ ಉಪಗ್ರಹಗಳ ಸರಣಿ ಯೋಜನೆಯಾಗಿದ್ದವು. ಇವುಗಳ ಪೈಕಿ ಬಹುತೇಕ ಉಪಗ್ರಹಗಳನ್ನು ಖಾಸಗಿ ಕಂಪನಿಗಳು 2029ರ ವೇಳೆಗೆ ನಿರ್ಮಿಸಲಿವೆ. ಭಾರತದ್ದೇ ನ್ಯಾವಿಗೇಶನ್ (ಸಂಚರಣಾ) ವ್ಯವಸ್ಥೆಯಾದ ನಾವಿಕ್, ರಾಷ್ಟ್ರದ ಗಡಿಯಾರವನ್ನು ಚಲಿಸುವಂತೆ ಮಾಡಿದ್ದು, ರಕ್ಷಣಾ ಬಾಹ್ಯಾಕಾಶ ಸಂಸ್ಥೆ ಮಿಲಿಟರಿ ಬಾಹ್ಯಾಕಾಶ ಕೆಲಸಗಳನ್ನು ನಿರ್ವಹಿಸುತ್ತದೆ. ಇದರ ಗುರಿ ಸರಳ: ಹಿಮಾಲಯದ ಎತ್ತರದಲ್ಲಿರುವ ಯೋಧರು, ಹಿಂದೂ ಮಹಾಸಾಗರದಲ್ಲಿರುವ ನಾವಿಕರು, ಎಂದಿಗೂ ಕುರುಡಾಗಿ ಯುದ್ಧ ಮಾಡುವಂತಾಗಬಾರದು.
ಪ್ರತಿಯೊಬ್ಬ ಭಾರತೀಯರೂ ಏಕೆ ಇದಕ್ಕೆ ಮಹತ್ವ ನೀಡಬೇಕು? ಉಪಗ್ರಹಗಳು ಎಂದರೆ ಎತ್ತರದ ವೀಕ್ಷಣಾ ಗೋಪುರದಲ್ಲಿ ಕಾವಲು ಕಾಯುತ್ತಿರುವ ಕಾವಲುಗಾರರು ಎಂದುಕೊಳ್ಳಿ. ಯಾವಾಗೆಲ್ಲ ಒಂದು ಬ್ಯಾಂಕ್ ವ್ಯವಹಾರ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೋ, ಅಥವಾ ದಟ್ಟ ಮಂಜಿನ ನಡುವೆಯೂ ಒಂದು ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸುತ್ತದೋ, ಆಗೆಲ್ಲ ಯಾವುದಾದರೂ ಒಂದು ಉಪಗ್ರಹವೇ ನೆರವಾಗಿರುತ್ತದೆ. ಕೆಲವು ಉಪಗ್ರಹಗಳು ಭೂಮಿಯ ಛಾಯಾಚಿತ್ರಗಳನ್ನು ತೆಗೆದರೆ, ಕೆಲವು ತಮ್ಮ ರೇಡಾರ್ ಮೂಲಕ ಭೂಮಿಯ ನಕ್ಷೆ ರಚಿಸುತ್ತವೆ. ಕೆಲವು ಉಪಗ್ರಹಗಳು ಕರೆಗಳು ಮತ್ತು ಮಿಲಿಟರಿ ಆದೇಶಗಳನ್ನು ನಿರ್ವಹಿಸುತ್ತವೆ. ಕೆಲವು ಉಪಗ್ರಹಗಳು ಸಮಯವನ್ನು ಅತ್ಯಂತ ನಿಖರವಾಗಿ ಇಡುವುದರಿಂದ, ಯೋಧರಿಗೆ, ಮೀನಾಗಾರಿಕಾ ಬೋಟ್, ಮತ್ತು ಕೊರಿಯರ್ ವಾಹನಗಳಿಗೆ ತಮ್ಮ ನಿಖರವಾದ ಸ್ಥಾನ ತಿಳಿಯುತ್ತದೆ. ಕೆಲವು ಉಪಗ್ರಹಗಳಂತೂ ಉಡಾವಣೆಗೊಳ್ಳುವ ಕ್ಷಿಪಣಿಗಳ ಬಿಸಿಯ ಸಂಕೇತಗಳನ್ನು ಹುಡುಕುತ್ತಿರುತ್ತವೆ. ಒಂದು ವಿಶೇಷ ವಿಧದ ಉಪಗ್ರಹ ಇನ್ನೊಂದು ದೇಶದ ಉಪಗ್ರಹದ ಸನಿಹದಲ್ಲಿ ಸಾಗುತ್ತದೆ. ಇದು ಒಂದು ರೀತಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿ ನೆರೆಮನೆಯೊಂದರ ಗೇಟ್ ಬಳಿ ನಿಂತಂತಾಗುತ್ತದೆ. ಇಂತಹ ಬೆಳವಣಿಗೆಗಳು ಎಲ್ಲ ಸರ್ಕಾರಗಳಿಗೂ ಎಚ್ಚರಿಕೆಯಂತೆ ತೋರುತ್ತದೆ. ಏಕೆಂದರೆ, ಇಂದು ತನ್ನ ದೇಶದ ಉಪಗ್ರಹವನ್ನು ವೀಕ್ಷಿಸುವಷ್ಟು ಹತ್ತಿರ ಬಂದಿರುವ ಬಾಹ್ಯಾಕಾಶ ನೌಕೆ, ನಾಳೆ ಅದನ್ನು ಜಾಮ್ ಮಾಡುವುದಿಲ್ಲ, ಕುರುಡಾಗಿಸುವುದಿಲ್ಲ, ಅಥವಾ ವಶಪಡಿಸಿಕೊಳ್ಳುವುದಿಲ್ಲ, ನಾಶಪಡಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ.
1967ರ ಬಾಹ್ಯಾಕಾಶ ಒಪ್ಪಂದ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಬಾಹ್ಯಾಕಾಶದ ಕಕ್ಷೆಯಲ್ಲಿ ಇರಿಸುವುದನ್ನು ನಿಷೇಧಿಸಿದೆ. ಆದರೆ, ಮಿಕ್ಕೆಲ್ಲ ಆಯುಧಗಳ ಕುರಿತೂ ಮೌನ ತಳೆದಿದೆ. ಈ ಮೌನದ ಲಾಭ ಪಡೆದಿರುವ ದೇಶಗಳು, ಭೂಮಿಯಿಂದಲೇ ಉಡಾವಣೆಗೊಳಿಸಿ ಉಪಗ್ರಹಗಳನ್ನು ನಾಶಪಡಿಸುವ ಕ್ಷಿಪಣಿಗಳು, ಜಾಮರ್‌ಗಳು, ಕ್ಯಾಮರಾ ಲೆನ್ಸ್‌ಗಳನ್ನು ನಾಶಪಡಿಸುವ ಲೇಸರ್‌ಗಳು, ಮತ್ತು ವಿದೇಶೀ ಬಾಹ್ಯಾಕಾಶ ನೌಕೆಯ ಬಳಿ ಅಳವಡಿಕೆಗೊಳ್ಳುವ ತಪಾಸಣಾ ನೌಕೆಗಳನ್ನು ಬಳಸುತ್ತಿವೆ.
ರಷ್ಯಾ ಮತ್ತು ಚೀನಾಗಳು ಹಲವಾರು ವರ್ಷಗಳಿಂದ ಈ ಅಭ್ಯಾಸವನ್ನು ಅನುಸರಿಸುತ್ತಿವೆ. ರಷ್ಯಾ ತನ್ನ ನ್ಯಾವಿಗೇಶನ್ ಸೇವೆಗಾಗಿ ಗ್ಲೋನಾಸ್ ಉಪಗ್ರಹಗಳನ್ನು ಬಳಸುತ್ತಿದೆ. ಇದರ 'ಲಚ್' ಮಾದರಿ ಉಪಗ್ರಹಗಳು ಸಮಭಾಜಕ ವೃತ್ತದ ಸಾಕಷ್ಟು ಎತ್ತರದಲ್ಲಿ ವಿದೇಶೀ ಬಾಹ್ಯಾಕಾಶ ನೌಕೆಗಳ ಬಳಿ ಹಾರಾಟ ನಡೆಸಿವೆ. ಇನ್ನು ಅಮೆರಿಕನ್ ಅಧಿಕಾರಿಗಳು ಕೆಳ ಕಕ್ಷೆಯ ಪಥದಲ್ಲಿ ಸಾಗುವ ಅಮೆರಿಕನ್ ಗುಪ್ತಚರ ಉಪಗ್ರಹಗಳಿಗೆ ನಿವೆಲಿರ್ ಎನ್ನುವ ಪ್ರೋಗ್ರಾಮ್ ಅನ್ನು ಜೋಡಿಸುತ್ತಾರೆ. ಒಂದು ರಷ್ಯನ್ ಕ್ಷಿಪಣಿ 2021ರಲ್ಲಿ ಹಳೆಯ ಉಪಗ್ರಹವೊಂದನ್ನು ಸ್ಫೋಟಿಸಿದ್ದು, ಅದರ ಅವಶೇಷಗಳು ಎಲ್ಲೆಡೆ ಚದುರಿದ್ದವು. ಈ ವರ್ಷದ ಒಂದಷ್ಟು ವರದಿಗಳ ಪ್ರಕಾರ, ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ, ರಷ್ಯನ್ ಉಪಗ್ರಹಗಳು ಕನಿಷ್ಠ 12 ಯುರೋಪಿಯನ್ ಉಪಗ್ರಹಗಳ ಸಂಕೇತಗಳನ್ನು ಕದ್ದಾಲಿಸಿರುವ ಆರೋಪಗಳಿವೆ. ಆದರೆ, ಈ ಕುರಿತು ಮಾಸ್ಕೋ ಮಾತ್ರ ಮೌನ ತಳೆದಿದೆ.
ಚೀನಾ ಸಂಚರಣೆಗಾಗಿ ಬೈದು, ಕಣ್ಗಾವಲಿಗೆ ಯಾವೊಗಾನ್, ಮತ್ತು ಎತ್ತರದ ಕಕ್ಷೆಯಲ್ಲಿ ಟಿಜೆಎಸ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತಿದ್ದು, ಇದರ ಕಾರ್ಯಗಳು ಇನ್ನೂ ಸ್ಪಷ್ಟವಾಗಿಲ್ಲ. 2007ರಲ್ಲಿ ತನ್ನದೇ ಹವಾಮಾನ ಉಪಗ್ರಹವನ್ನು ನಾಶಪಡಿಸಿದ ಚೀನಾ, ಬಳಿಕ ಇನ್ನಷ್ಟು ಕೌಶಲಗಳನ್ನು ಪಡೆದುಕೊಂಡಿತು. ಅವೆಂದರೆ, ಉಪಗ್ರಹಗಳ ಬಳಿ ಸಾಗುವುದು, ಕಾರ್ಯಾಚರಣೆ ಸ್ಥಗಿತಗೊಳಿಸಿದ ಉಪಗ್ರಹಗಳನ್ನು ಬದಿಗೆ ಎಳೆದೊಯ್ಯುವುದು, ಮತ್ತು ವಿಶ್ಲೇಷಕರ ಪ್ರಕಾರ, ಶಿಜಿಯಾನ್-21 ಮತ್ತು ಶಿಜಿಯಾನ್-25 ಉಪಗ್ರಹಗಳ ನಡುವೆ ಬಾಹ್ಯಾಕಾಶದಲ್ಲಿ ಇಂಧನ ಮರುಪೂರಣ ನಡೆಸಲಾಗಿದೆ. ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸಬಲ್ಲ ಒಂದು ಯಂತ್ರ, ಇನ್ನೊಂದರ ಮೇಲೆ ತೇಲಬಲ್ಲದು, ತಳ್ಳಬಲ್ಲದು, ಅಥವಾ ಸ್ಥಗಿತಗೊಳಿಸಬಲ್ಲದು. ಸೆಕ್ಯೂರ್ ವರ್ಲ್ಡ್ ಫೌಂಡೇಷನ್ನಿನ 2026ರ ಸಮೀಕ್ಷಾ ವರದಿಯ ಪ್ರಕಾರ, ಇದೇ ವಿಧಾನವನ್ನು 13 ದೇಶಗಳಲ್ಲಿ ಕಾಣಬಹುದಾಗಿದೆ. ಆ ವಿಧಾನಗಳೆಂದರೆ, ಹೆಚ್ಚಿನ ಅಂಗರಕ್ಷಕ ಉಪಗ್ರಹಗಳ ಬಳಕೆ, ಇನ್ನೊಂದು ಉಪಗ್ರಹಕ್ಕೆ ಹೆಚ್ಚು ಸನಿಹದಿಂದ ಸಾಗುವುದು, ಮತ್ತು ಯಾವುದೇ ಗೋಚರ ಅವಶೇಷಗಳನ್ನು ಉಳಿಸದಂತಹ 'ರಿವರ್ಸಿಬಲ್' ಟೂಲ್‌ಗಳಾಗಿವೆ.
ಇನ್ನು ಅಮೆರಿಕದ ಕ್ರಮಗಳು ಸಾಕಷ್ಟು ಹಳೆಯದಾಗಿವೆ. 2019ರಲ್ಲಿ ಆರಂಭಿಸಿದ ಸ್ಪೇಸ್ ಫೋರ್ಸ್ ಕೇವಲ ರಾಷ್ಟ್ರೀಯ ಬಾಹ್ಯಾಕಾಶ ಆಸ್ತಿಗಳ ರಕ್ಷಣೆಗೆ ಸೀಮಿತವಾಗಿರದೆ, ಆದೇಶ ನೀಡಿದಾಗ ದಾಳಿಗೂ ಬಳಕೆಯಾಗಲಿದೆ. ಗೋಲ್ಡನ್ ಡೋಮ್ ಯೋಜನೆ ಇಂಟರ್‌ಸೆಪ್ಟರ್‌ಗಳು ಮತ್ತು ವಾಯು ರಕ್ಷಣಾ ಕ್ಷಿಪಣಿಗಳನ್ನು ಒಂದೇ ಕವಚದೊಳಗೆ ಅಳವಡಿಸಿ, ಬಾಹ್ಯಾಕಾಶದಿಂದ ಬರುವ ಅಪಾಯಗಳನ್ನು ಎದುರಿಸಲು ಸಜ್ಜಾಗಿಸುತ್ತದೆ. ಈ ಇಂಟರ್‌ಸೆಪ್ಟರ್‌ಗಳ ಹಾರ್ಡ್‌ವೇರ್‌ಗಳು ಗುತ್ತಿಗೆಯ ಹಂತದಿಂದ ಹಾರಾಟ ಸಿದ್ಧ ಹಂತಕ್ಕೆ ವರ್ಷದೊಳಗೆ ತಲುಪುತ್ತವೆ. ಕಕ್ಷೆಯಿಂದಲೇ ಚಲಿಸುವ ಏರ್‌ಕ್ರಾಫ್ಟ್‌ಗಳನ್ನು ಗುರುತಿಸುವ ಉಪಗ್ರಹ ಸರಣಿಯ ಮೊದಲ ಉಪಗ್ರಹ ಈ ತಿಂಗಳು ಉಡಾವಣೆಗೊಳ್ಳಲಿದೆ. ಇವೆಲ್ಲದರ ತಳದಲ್ಲಿ, ಜಗತ್ತಿನ ಅತಿದೊಡ್ಡ ಮಿಲಿಟರಿ ಉಪಗ್ರಹ ಪುಂಜವಾದ ಜಿಪಿಎಸ್ ಟೈಮಿಂಗ್, ನ್ಯಾಷನಲ್ ರಿಕನಯಸೆನ್ಸ್ ಆಫೀಸ್ ಸ್ಪೈ ಕ್ರಾಫ್ಟ್, ಸುರಕ್ಷಿತ ಸಂವಹನ, ಕ್ಷಿಪಣಿ ಮುನ್ನೆಚ್ಚರಿಕಾ ಉಪಗ್ರಹಗಳು, ಮತ್ತು ಅಮೆರಿಕನ್ ವಾಚ್ ಉಪಗ್ರಹಗಳು ಸಮಭಾಜಕ ವೃತ್ತದ ಮೇಲ್ಭಾಗದಲ್ಲಿ ಅಳವಡಿತಗೊಂಡಿದ್ದು, ಅವು ಇತರ ದೇಶಗಳ ಬಾಹ್ಯಾಕಾಶ ನೌಕೆಗಳ ಮೇಲೆ ಕಣ್ಣಿಡಲಿವೆ.
ಇಲ್ಲಿ ನಿಜಕ್ಕೂ ಬದಲಾಗಿರುವುದೆಂದರೆ ನಿಷ್ಕಪಟ ಕಾರ್ಯಾಚರಣೆ. ಸೆಪ್ಟೆಂಬರ್ 14, 2026ರಂದು, ವಾಯು ಸೇನಾ ಕಾರ್ಯದರ್ಶಿ ಟ್ರಾಯ್ ಮೀಂಕ್ ಅವರು ಏರ್ ಆ್ಯಂಡ್ ಸ್ಪೇಸ್ ಫೋರ್ಸಸ್ ಅಸೋಸಿಯೇಷನ್ನಿನ ಏರ್, ಸ್ಪೇಸ್ ಆ್ಯಂಡ್ ಸೈಬರ್ ಕಾನ್ಫರೆನ್ಸ್ ಅನ್ನು ಮೇರಿಲ್ಯಾಂಡಿನ ನ್ಯಾಷನಲ್ ಹಾರ್ಬರ್‌ನಲ್ಲಿ ಉದ್ಘಾಟಿಸಿದರು. ಅಲ್ಲಿ ಮಾತನಾಡಿದ ಅವರು, ಅಮೆರಿಕ ಈಗಾಗಲೇ ಬಾಹ್ಯಾಕಾಶ ನಿಯಂತ್ರಿತ ಆಯುಧಗಳನ್ನು ಕಕ್ಷೆಯಲ್ಲಿ ಹೊಂದಿದ್ದು, ಅವು ಶತ್ರುಗಳ ದಾಳಿಯಿಂದ ಅಮೆರಿಕದ ಭೂ, ಸಮುದ್ರ ಮತ್ತು ವಾಯು ಪಡೆಗಳನ್ನು ರಕ್ಷಿಸಬಲ್ಲವು ಎಂದಿದ್ದಾರೆ. ಅವರು ಯಾವುದೇ ಸಿಸ್ಟಮ್, ವಿಧಾನ, ಅಥವಾ ದಿನಾಂಕವನ್ನು ಪ್ರಸ್ತಾಪಿಸಿಲ್ಲ. ಇನ್ನು ಅವರ ವಿಭಾಗ ಹೆಚ್ಚಿನ ಮಾಹಿತಿ ಒದಗಿಸಲು ನಿರಾಕರಿಸಿದೆ. ಬಳಿಕ ಮಾತನಾಡಿದ ಟ್ರಾಯ್, ತಾನು ಬಳಸಿದ ವಾಕ್ಯವನ್ನು ಬಹಳ ಜಾಗರೂಕವಾಗಿ ಆರಿಸಲಾಗಿತ್ತು ಎಂದಿದ್ದಾರೆ. ದಾಳಿ ನಡೆಸಬಲ್ಲ ಆಯುಧಗಳು ಈಗಾಗಲೇ ಭೂಮಿಯ ಪರಿಭ್ರಮಣೆ ನಡೆಸುತ್ತಿವೆ ಎನ್ನುವುದನ್ನು ಅಮೆರಿಕ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಅದಾದ ಒಂದು ದಿನದ ಬಳಿಕ, ನೂತನ ಬಾಹ್ಯಾಕಾಶ ಕಾರ್ಯಾಚರಣಾ ಮುಖ್ಯಸ್ಥರಾದ ಜನರಲ್ ಡಗ್ಲಾಸ್ ಶೀಸ್ ಅವರು ಚೀನಾ ಮತ್ತು ರಷ್ಯಾಗಳ ಮುಂದೊತ್ತುವಿಕೆಯ ಕಾರಣದಿಂದ ಅಮೆರಿಕ ಈ ವಿಚಾರವನ್ನು ಬಹಿರಂಗಪಡಿಸಬೇಕಾಯಿತು ಎಂದಿದ್ದು, ಈಗ ಯಾವುದೇ ದಾಳಿಯನ್ನು ತಡೆಯಬೇಕಾದರೆ, ಅದು ಶಕ್ತಿ ಪ್ರದರ್ಶನದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಅಮೆರಿಕನ್ ಬಾಹ್ಯಾಕಾಶ ಪಡೆಗಳು ಈಗಾಗಲೇ ಕಕ್ಷೀಯ ಆಯುಧಗಳನ್ನು ಬಳಸುತ್ತಿದ್ದು, ಅವು ಜಂಟಿ ಪಡೆಗಳನ್ನು ಬಾಹ್ಯಾಕಾಶ ಆಧಾರಿತ ಯಾವುದೇ ದಾಳಿಯಿಂದ ರಕ್ಷಿಸಬಲ್ಲವು ಎಂದಿದ್ದಾರೆ.
ಚೀನಾದ ವಿದೇಶಾಂಗ ಸಚಿವಾಲಯ ಬಾಹ್ಯಾಕಾಶದ ಆಯುಧ ಸ್ಪರ್ಧೆಯನ್ನು ಚೀನಾ ವಿರೋಧಿಸುತ್ತದೆ ಎಂದಿದ್ದಾರೆ. ಇದೇ ವೇಳೆ ರಷ್ಯಾ ದೀರ್ಘಕಾಲೀನ ಸ್ಥಿರತೆಯ ಕುರಿತು ಮಾತನಾಡಿದೆ. ಇವೆರಡೂ ದೇಶಗಳು ತಾವು ಇಂದು ಖಂಡಿಸುತ್ತಿರುವ ಬಾಹ್ಯಾಕಾಶ ಆಯುಧಗಳ ನಿರ್ಮಾಣಕ್ಕಾಗಿ ವರ್ಷಗಳ ಕಾಲ ಪ್ರಯತ್ನ ನಡೆಸಿವೆ!
ಭಾರತ ಪ್ರತಿಯೊಂದು ವಿದೇಶೀ ಕ್ರಮಗಳನ್ನು ನಕಲು ಮಾಡುವ ಅಗತ್ಯವಿಲ್ಲ. ಹೆಚ್ಚಿನ ಸ್ಥಿರತೆ ಹೊಂದುವುದು ಮತ್ತು ಮಾನವತೆಯನ್ನು ಅನುಸರಿಸುವುದು ಭಾರತದ ಕರ್ತವ್ಯವಾಗಿದೆ. ಭಾರತ ತನ್ನ ಕಾವಲುಗಾರರನ್ನು ಜಾಗೃತರಾಗಿಸಬೇಕು. ಯಾರು ಹೆಚ್ಚು ತನ್ನ ಸನಿಹಕ್ಕೆ ಸುಳಿಯುತ್ತಾರೆ ಎನ್ನುವುದನ್ನು ಗಮನಿಸಿ, ಯಾವುದೇ ಎದುರಾಳಿ ಭಾರತೀಯ ಉಪಗ್ರಹವನ್ನು ಸುಲಭ ತುತ್ತು ಎಂದು ಭಾವಿಸುವ ತಪ್ಪು ಮಾಡಲು ಸಾಧ್ಯವಿಲ್ಲದಂತಹ ಸಾಮರ್ಥ್ಯವನ್ನು ಗಳಿಸಬೇಕು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)