
ನವದೆಹಲಿ: ಅಮೆರಿಕದ ಫ್ಲೋರಿಡಾದಲ್ಲಿ ಪುಟ್ಟ ಟಿ20 ಸರಣಿ ಆಯೋಜನೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳು ಸಮ್ಮತಿ ಸೂಚಿಸಿದ್ದು, ಇದೇ ಆಗಸ್ಟ್ 27 ಮತ್ತು 28ರಂದು ಸರಣಿ ಆಯೋಜನೆಗೆ ಸಿದ್ಧತೆ ನಡೆಸಲಾಗಿದೆ.
ಈ ಬಗ್ಗೆ ಮಂಗಳವಾರ ನಡೆದ ಉಭಯ ಕ್ರಿಕೆಟ್ ಮಂಡಳಿಗಳ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಅಮೆರಿಕದಲ್ಲಿ ಕ್ರಿಕೆಟ್ ಉತ್ತೇಜಿಸುವ ನಿಟ್ಟಿನಲ್ಲಿ ಈ ಸರಣಿ ಪ್ರಮುಖ ಪಾತ್ರವಹಿಸಲಿದೆ ಎಂದು ಅಭಿಪ್ರಾಯಪಡಲಾಗಿದೆ. ಸಭೆ ಬಳಿಕ ಮಾತನಾಡಿದ ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಮಾತನಾಡಿ, ಅಮೆರಿಕದಲ್ಲಿ ಪಂದ್ಯ ಆಯೋಜನೆ ಮಾಡಿರುವುದರಿಂದ ಕ್ರಿಕೆಟ್ ವೀಕ್ಷಕರ ಸಂಖ್ಯೆ ಏರಿಕೆಯಾಗಲಿದೆ. ಅಮೆರಿಕದಲ್ಲಿ ಭಾರತ ತಂಡ ಹಾಲಿ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ20 ಪಂದ್ಯ ಆಡುತ್ತಿದೆ ಎಂದ ಹೇಳಿದರು.
ಇನ್ನು ಠಾಕೂರ್ ಅವರ ಮಾತಿಗೆ ಧನಿಗೂಡಿಸಿದ ವಿಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಡೇವ್ ಕ್ಯಾಮರೂನ್ ಅವರು, ಕ್ರಿಕೆಟ್ನ ಬೆಳವಣಿಗೆ ವಿಚಾರವಾಗಿ ಅಮೆರಿಕದಲ್ಲಿ ಸರಣಿ ಆಯೋಜಿಸುವುದು ಉತ್ತಮ ಹೆಜ್ಜೆಯಾಗಿದೆ. ಭಾರತದ ವಿರುದ್ಧ ವಿಂಡೀಸ್ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ರಿಕೆಟ್ ನ ಗಂಧಗಾಳಿಯೇ ತಿಳಿಯದ ಅಮೆರಿಕ ಇತ್ತೀಚೆಗಷ್ಟೇ ಕ್ರಿಕೆಟ್ ರಂಗಕ್ಕೆ ಪ್ರವೇಶ ಮಾಡಿತ್ತು.
ಮಿನಿ ಐಪಿಎಲ್ ರದ್ದಾದ್ದರಿಂದ ಟಿ20 ಸರಣಿ
ಇನ್ನು ಈ ಹಿಂದೆ ಐಪಿಎಲ್ ಮಾದರಿಯಲ್ಲೇ ಮತ್ತೊಂದು ಮಿನಿ ಐಪಿಎಲ್ ನಡೆಸಲು ಬಿಸಿಸಿಐ ಉದ್ದೇಶಿಸಿತ್ತು. ಆದರೆ ಈ ಉದ್ದೇಶಿತ ಸರಣಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಪ್ರಮುಖ ತಂಡಗಳು ವಿರೋಧಿಸಿದ್ದವು. ಹೀಗಾಗಿ ಐಸಿಸಿಯಿಂದ ಈ ಸರಣಿಗೆ ಅನುಮೋದನೆ ದೊರೆಯದ ಕುರಿತು ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಬಿಸಿಸಿಐ ವಿಂಡೀಸ್ ನೊಂದಿಗೆ ಟಿ20 ಸರಣಿಯಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು.
Advertisement