

ನವದೆಹಲಿ: ದೆಹಲಿಯಲ್ಲಿ ನಡೆಯಬೇಕಿದ್ದ ಎರಡು ರಣಜಿ ಪಂದ್ಯಗಳನ್ನು ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂದೂಡಿ ಮರುನಿಗದಿ ಮಾಡಿತ್ತು. ಆದರೆ ಈ ಕ್ರಮಕ್ಕೆ ಮುಂಬೈ ಕ್ರಿಕೆಟ್ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪಂದ್ಯಗಳನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಎರಡು ಪಂದ್ಯಗಳು ರದ್ದಾಗಿದ್ದೆ ಆದರೆ ಉಭಯ ತಂಡಗಳಿಗೂ ಸಮನಾಗಿ ಅಂಕ ಹಂಚಿಕೆ ಮಾಡಲಾಗುವುದು. ನವೆಂಬರ್ ಆರಂಭದಲ್ಲಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಗುಜರಾತ್-ಬಂಗಾಳ, ಹೈದರಾಬಾದ್-ತ್ರಿಪುರಾ ನಡುವಿನ ಪಂದ್ಯಗಳನ್ನು ಮುಂದೂಡಲಾಗುವುದು ಎಂದು ನವೆಂಬರ್ 6 ರಂದು ಬಿಸಿಸಿಐ ತಿಳಿಸಿತ್ತು.
ಅದರಂತೆ ಬಿಸಿಸಿಐ ಡಿಸೆಂಬರ್ 15 ರಿಂದ 18ರವರೆಗೆ ಪಂದ್ಯಗಳ ಮರು ನಿಗದಿ ಮಾಡಿತ್ತು. ಇದಕ್ಕೆ ಎರಡು ಕ್ರಿಕೆಟ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಬಿಸಿಸಿಐ ಪಂದ್ಯಗಳನ್ನು ರದ್ದು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.