
ನವದೆಹಲಿ: ಈಗಷ್ಟೇ ಕ್ರಿಕೆಟ್ ರಂಗಕ್ಕೆ ಪ್ರವೇಶ ಮಾಡಿರುವ ಅಮೆರಿಕದಲ್ಲಿ ಟಿ20 ಕ್ರಿಕೆಟ್ ಸರಣಿ ಆಯೋಜನೆ ಮಾಡುವ ಮೂಲಕ ಕ್ರಿಕೆಟ್ ಗೆ ಪ್ರಚಾರ ನೀಡುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ.
ಮೂಲಕಗಳ ಪ್ರಕಾರ ಅಮೆರಿಕದ ಫ್ಲೋರಿಡಾ ನಗರದಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ ಭಾರತ ಹಾಗೂ ವೆಸ್ಟ್ ಇ೦ಡೀಸ್ ತ೦ಡಗಳ ನಡುವೆ ಟಿ20 ಸರಣಿ ಆಯೋಜನೆ ಮಾಡುವ ಸಾಧ್ಯತೆ ಇದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ವಿಂಡೀಸ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲ್ಲಿವೆ. ಮುಂದಿನ ಬುಧವಾರ ಮತ್ತು ಗುರುವಾರ ಉಭಯ ಮಂಡಳಿಗಳ ಅಧಿಕಾರಿಗಳು ಸಭೆ ಸೇರಲಿದ್ದು, ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇನ್ನು ಒಂದು ವೇಳೆ ಫ್ಲೋರಿಡಾ ಟಿ20 ಸರಣಿ ಆಯೋಜನೆಗೆ ಉಭಯ ಮಂಡಳಿಗಳು ಒಪ್ಪಿಗೆ ನೀಡಿದ್ದೇ ಆದರೆ ಬಿಸಿಸಿಐ ಆಯೋಜಿಸಲು ಉದ್ದೇಶಿಸಿರುವ ಮಿನಿ ಐಪಿಎಲ್ ಟೂರ್ನಿ ರದ್ದಾಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಬಿಸಿಸಿಐನ ಉದ್ದೇಶಿತ ಮಿನಿ ಐಪಿಎಲ್ ಆಯೋಜನೆಗೆ ಐಸಿಸಿ ಹಿಂದೇಟು ಹಾಕುತ್ತಿದ್ದು, ಮಿನಿ ಐಪಿಎಲ್ ನಿಂದಾಗಿ ಐಸಿಸಿ ಆಯೋಜಿಸಿರುವ ವಿವಿಧ ಸರಣಿಗಳ ವೇಳಾಪಟ್ಟಿಯನ್ನು ಬದಲಿಸಬೇಕಾಗುತ್ತದೆ. ಹೀಗಾಗಿ ಮಿನಿಐಪಿಎಲ್ ಆಯೋಜನೆ ಬೇಡ ಎಂದು ಬಿಸಿಸಿಐಗೆ ಐಸಿಸಿ ಸಲಹೆ ನೀಡಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಮಿನಿ ಐಪಿಎಲ್ ಟೂರ್ನಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ವಿವಿಧ ಪ್ರಮುಖ ಕ್ರಿಕೆಟ್ ಮಂಡಳಿಗಳು ವಿರೋಧ ವ್ಯಕ್ತಪಡಿಸಿದ್ದವು.
ಇದೇ ಕಾರಣಕ್ಕೆ ಬಿಸಿಸಿಐ ಮಿನಿ ಐಪಿಎಲ್ ಬದಲಿಗೆ ಫ್ಲೋರಿಡಾದಲ್ಲಿ ಟಿ20 ಸರಣಿ ಆಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಈ ಹಿಂದೆ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಚ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಅಮೆರಿಕದಲ್ಲಿ ಆಯೋಜಿಸಿದ್ದ ಮಾಜಿ ಕ್ರಿಕೆಟ್ ಆಟಗಾರರ ಟಿ20 ಸರಣಿ ಕೂಡ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಕ್ರಿಕೆಟ್ ಎಂಬ ಕ್ರೀಡೆ ಇದೆ ಎಂದು ತಿಳಿಯದ ಅಮೆರಿಕದಲ್ಲಿ ಕ್ರಿಕೆಟ್ ಸರಣಿ ಆಯೋಜಿಸುವ ಮೂಲಕ ಈ ಜೋಡಿ ಯಶಸ್ಸು ಕಂಡಿತ್ತು. ಇದನ್ನೇ ಮಾದರಿಯಾಗಿಟ್ಟುಕೊಂಡು ಅಮೆರಿಕದಲ್ಲಿ ಬಿಸಿಸಿಐ ಫ್ಲೋರಿಡಾದಲ್ಲಿ ಕ್ರಿಕೆಟ್ ಸರಣಿ ಆಯೋಜಿಸುತ್ತಿದೆ ಎಂಬ ಮಾತುಗಳು ಕೂಡ ಕೇಳುಬರುತ್ತಿವೆ.
ಪ್ರಸ್ತುತ ವಿ೦ಡೀಸ್ ಪ್ರವಾಸದಲ್ಲಿರುವ ಭಾರತ ತ೦ಡ ಆಗಸ್ಟ್ 22 ರ೦ದು ನಾಲ್ಕು ಪ೦ದ್ಯಗಳ ಟೆಸ್ಟ್ ಸರಣಿಯನ್ನು ಪೂಣ೯ಗೊಳಿಸಲಿದೆ. ಆ ಬಳಿಕ 2 ಅಥವಾ ಮೂರು ಟಿ20 ಪ೦ದ್ಯಗಳ ಸರಣಿಯನ್ನು ಫ್ಲಾರಿಡಾದಲ್ಲಿ ಆಡುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
Advertisement