
ನವದೆಹಲಿ: ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತವನ್ನು ಸೆಮೀಸ್ ಗೆ ಕರೆದೊಯ್ದ ವಿರಾಟ್ ಕೊಹ್ಲಿ ಪ್ರದರ್ಶನವನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಶ್ಲಾಘಿಸಿ ಲೇಖನಗಳನ್ನು ಪ್ರಕಟಿಸಿವೆ.
ಚೇಸಿಂಗ್ ಕಿಂಗ್, ಚೇಸ್ ಮಾಸ್ಟರ್, ಕ್ರಿಕೆಟ್‌ನ ಮತ್ತೊಬ್ಬ ದೇವರು... ಹೀಗೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ಆಡಿದ ಇನಿಂಗ್ಸ್ ವಿಶ್ವದ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಆಸ್ಟ್ರೇಲಿಯಾ ಯಾವುದೇ ಪಂದ್ಯ ಸೋತರೂ ತನ್ನ ಆಟಗಾರರನ್ನು ಬಿಟ್ಟುಕೊಡದ ಆಸೀಸ್ ಪತ್ರಿಕೆಗಳೂ ವಿರಾಟ್ ಪ್ರದರ್ಶನವನ್ನು ಮನಸಾರೆ ಹೊಗಳಿ ಅಕ್ಷರದಲ್ಲಿ ಬಣ್ಣಿಸಿವೆ.
ಸಿಡ್ನಿ ಹೆರಾಲ್ಡ್, ಡೈಲಿ ಟೆಲಿಗ್ರಾಫ್ ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳು ವಿರಾಟ್ ಕೊಹ್ಲಿ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿ ತಮ್ಮ ಕ್ರೀಡಾಸ್ಫೂರ್ತಿ ಮೆರೆದಿವೆ. "ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪತ್ರಿಕೆಯ ಕ್ರಿಸ್ ಬ್ಯಾರಟ್, ನಿಜಕ್ಕೂಆಸಿಸ್ ನಾಯಕ ಸ್ಮಿತ್ ನಿಜವನ್ನೇ ಹೇಳಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅದ್ಬುತವಾಗಿತ್ತು. ಇದು ಟಿ-20 ಚರಿತ್ರೆಯ ಅತ್ಯಮೋಘ ಇನ್ನಿಂಗ್ಸ್. ಭಾರತದ ಬ್ಯಾಟಿಂಗ್ ಶ್ರೇಷ್ಠನೊಬ್ಬನೇ ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದ ಹೊರದಬ್ಬಿದರು...' ಎಂದು ಬ್ಯಾರಟ್ ಬರೆದಿದ್ದಾರೆ.
ಇನ್ನು "ಡೈಲಿ ಟೆಲಿಗ್ರಾಫ್'ನ ಕ್ರೀಡಾ ಅಂಕಣಕಾರ ಬೆನ್ ಹಾರ್ನ್ ಅವರು "ಇದು ಏಕ ವ್ಯಕ್ತಿಯಿಂದ ಒಲಿದ ಗೆಲುವು. ನನ್ನ ಪ್ರಕಾರ ಸಮಕಾಲೀನ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರಂಥ ಮತ್ತೂಂದು ಕ್ರಿಕೆಟ್ ಪ್ರತಿಭೆ ಖಂಡಿತಾ ಇಲ್ಲ...' ಎಂದು ಅವರು ಹೊಗಳಿದ್ದಾರೆ. ಆಸ್ಟ್ರೇಲಿಯದ ಪತ್ರಿಕೆಯೊಂದರ ಅಂಕಣಕಾರ ಗಿಡೋನ್ ಹೇಗ್, "ಗುರಿಯ ಕಾಠಿಣ್ಯವನ್ನು ಕರಗುವಂತೆ ಮಾಡಿತು' ಎಂದು ಕೊಹ್ಲಿ ಸಾಹಸವನ್ನು ಕೊಂಡಾಡಿದ್ದಾರೆ. ಅಲ್ಲದೆ ನಾನಾ ಕಳಂಕಗಳಿಗೆ ತುತ್ತಾಗಿರುವ ಕ್ರಿಕೆಟ್ ಅನ್ನು ಕೊಹ್ಲಿ ಮತ್ತೆ ಎದ್ದು ಕಾಣುವಣಂತೆ ಮಾಡಿದರು ಎಂದೂ ಹಾರ್ನ್ ತಮ್ಮ ಅಂಕಣದಲ್ಲಿ ಸೇರಿಸಿದ್ದಾರೆ.
ದಿ ಆಸ್ಟ್ರೇಲಿಯನ್ ಪತ್ರಿಕೆ, ವಿರಾಟ್ ಕೊಹ್ಲಿ ತಮ್ಮ ಮಾಸ್ಟರ್ ಕ್ಲಾಸ್ ನಿರ್ವಹಣೆಯಿಂದ ಚೇಸಿಂಗ್‌ಅನ್ನು ತೀರಾ ಸುಲಭ ಮಾಡಿಬಿಟ್ಟರು’ ಎಂದು ಬರೆದಿದೆ. ಆಸ್ಟ್ರೇಲಿಯಾ ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಾದ ಗುರಿ ನೀಡಿತ್ತು. ಆದರೆ, ಕೊಹ್ಲಿ ಇದನ್ನು ಬಹಳ ಸುಲಭ ಮಾಡಿಬಿಟ್ಟರು. ಟೆಸ್ಟ್ ಪಂದ್ಯಗಳಲ್ಲಿ ಬಾರಿಸುವಂಥ ಪರಿಪಕ್ವ ಶಾಟ್‌ಗಳನ್ನು ಕೊಹ್ಲಿ ಬಾರಿಸಿದ್ದರು. ಇಂಥ ಇನಿಂಗ್ಸ್‌ಗಳಿಂದಲೇ ಕ್ರಿಕೆಟ್‌ನ ಜೀವಂತಿಕೆ ಉಳಿದಿದೆ ಎಂದು ಗಿಡಿಯಾನ್ ಹೇಗ್ ಬರೆದಿದ್ದಾರೆ.
"ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್'ನ ಜೆಫ್ ಲೆಮನ್, "ನಮಗೆ ಈ ಸೋಲು ಹೇಗೆ ಎದುರಾಯಿತು ಎಂದು ಪ್ರಶ್ನಿಸಿಕೊಂಡಾಗ ಅಲ್ಲಿ ಕೊಹ್ಲಿ ಬ್ಯಾಟಿಂಗ್ ಬೆರಗಿನ ಹೊರತಾಗಿ ಬೇರೇನೂ ಗೋಚರಿಸುತ್ತಿಲ್ಲ...' ಎಂದಿದ್ದಾರೆ. ಇನ್ನು ಕೊಹ್ಲಿ ಬ್ಯಾಟಿಂಗ್ ಅನ್ನು ಶ್ಲಾಘಿಸಿ ಆಸ್ಟ್ರೇಲಿಯಾದ ಮಾಜಿ ಆಟಗಾರರೂ ಕೂಡ ಟ್ವೀಟ್ ಮಾಡಿದ್ದು, "ಕೊಹ್ಲಿ ಅವರದು ಕ್ಲಾಸ್ ಬ್ಯಾಟಿಂಗ್. ಭಾರತದ ಗೆಲುವಿಗೆ ಅಭಿನಂದನೆಗಳು' ಎಂದು ಆಸೀಸ್ ಮಾಜಿ ಆಟಗಾರರಾದ ಶೇನ್ ವಾರ್ನ್ ಮತ್ತು ಮೈಕಲ್ ಕ್ಲಾರ್ಕ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್‌ನ ಬಲಿಷ್ಠ ದೇಶಗಳಾದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಪತ್ರಿಕೆಗಳಲ್ಲೂ ವಿರಾಟ್ ಕೊಹ್ಲಿ ಇನಿಂಗ್ಸ್ ಅನ್ನು ವಿಮರ್ಶೆಯ ಮೂಲಕ ಹೈಲೈಟ್ ಮಾಡಲಾಗಿದ್ದು, ಜಗತ್ತಿನೆಲ್ಲೆಡೆ ಕ್ರಿಕೆಟ್ ಆಡುವ ದೇಶಗಳಲ್ಲಿ ಕೊಹ್ಲಿ ಬ್ಯಾಟಿಂಗ್ ಪತ್ರಿಕೆಗಳ ಶ್ಲಾಘನೆಗೆ ಒಳಗಾಗಿದೆ.
Advertisement