ಮುಂಬೈ: ವಿಶ್ವಕಪ್ ಟಿ20 ಪಂದ್ಯಾವಳಿಯ ಎರಡನೇ ಸೆಮಿ ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಸೆಮಿ ಫೈನಲ್ ಗೆಲ್ಲಲು ವೆಸ್ಟ್ ಇಂಡೀಸ್ ಗೆ 193 ರನ್ ಗಳ ಟಾರ್ಗೆಟ್ ನೀಡಿದೆ.
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(43) ಹಾಗೂ ಅಜಿಂಕ್ಯಾ ರಹಾನೆ(40) ಅವರ ಉತ್ತಮ ಬ್ಯಾಟಿಂಗ್ ಮತ್ತು ವಿರಾಟ್ ಕೊಹ್ಲಿ ಅಮೋಘ 89ರನ್ ಗಳ ನೆರವಿನಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 192ರನ್ ಗಳಿಸಿ, ವಿಂಡೀಸ್ ಗೆಲ್ಲಲು 193ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಇನ್ನು ವೆಸ್ಟ್ ಇಂಡೀಸ್ ಪರ ಸ್ಯಾಮುಯೆಲ್ ಬದ್ರಿ ಹಾಗೂ ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾ ಬೃಹತ್ ಟಾರ್ಗೆಟ್ ನೀಡಿದರೂ ವಿಂಡೀಸ್ ಸಹ ಬಲಿಷ್ಠ ತಂಡವಾಗಿರುವುದರಿಂದ ಫೈನಲ್ ಪ್ರವೇಶಿಸಲು ತೀವ್ರ ಹಣಾಹಣಿ ನಡೆಸುವ ಸಾಧ್ಯತೆ ಇದೆ. ಆದರೆ ಪ್ರಮುಖ ಟೂರ್ನಿಗಳ ಅಂಕಿ ಅಂಶಗಳು ಭಾರತದ ಪರವಾಗಿದ್ದು, ವೆಸ್ಟ್ ಇಂಡೀಸ್ ಎದುರು ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಲಾಗುತ್ತಿದೆ.