ನೋ ಬಾಲ್ ಗಳಿಂದ ನಿರಾಸೆಯಾಗಿದೆ: ಎಂಎಸ್ ಧೋನಿ
ಮುಂಬೈ: ಸಿಮಾನ್ಸ್ ವಿರುದ್ಧದ ಎರಡು ನೋ ಬಾಲ್ ಗಳು ಪಂದ್ಯವನ್ನು ನಮ್ಮಿಂದ ವಿಂಡೀಸ್ ಕಿತ್ತುಕೊಳ್ಳುವಂತೆ ಮಾಡಿತು ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ವಿಂಡೀಸ್ ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ನಾಯಕ ಧೋನಿಗೆ ಸೋತಿದ್ದಕ್ಕಿಂತ ತಂಡ ಸೋತ ರೀತಿ ನಿಜಕ್ಕೂ ಅಸಮಾಧಾನ ತರಿಸಿದೆ. ಪಂದ್ಯದ ಬಳಿಕ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಯಕ ಧೋನಿ ತಂಡದ ಸೋಲಿಗೆ ಬೌಲರ್ ಗಳೇ ನೇರ ಹೊಣೆ ಎಂದರು.
"ನಿರ್ಣಾಯಕವಾಗಿದ್ದ ಟಾಸ್ ನಮ್ಮೊಂದಿಗಿರಲಿಲ್ಲ. ಪಂದ್ಯ ಕೂಡ ಅರ್ಧ ಗಂಟೆ ಮುಂಚೆ ಅಂದರೆ 7 ಗಂಟೆಗೇ ಆರಂಭವಾಯಿತು. ಹೀಗಾಗಿ ಎರಡನೇ ಬ್ಯಾಟಿಂಗ್ ಅರ್ಧ ಗಂಟೆ ಮೊದಲೇ ಆರಂಭವಾಯಿತು. ನಾವು ಬೌಲಿಂಗ್ ಮಾಡಲು ಆರಂಭಿಸಿದಾಗ ಪರಿಸ್ಥಿತಿ ನಮ್ಮ ಕೈಯಲ್ಲೇ ಇತ್ತು. ಪಿಚ್ ನಲ್ಲಿ ಇಬ್ಬನಿ ಇದ್ದರಿಂದ ಪಿಚ್ ಸ್ಪಿನ್ನರ್ ಗಳಿಗೆ ಅಷ್ಟೊಂದು ಸಹಕಾರಿಯಾಗಿರಲಿಲ್ಲ. ತೇವದಿಂದ ಕೂಡಿದ ಬಾಲ್ ನಲ್ಲಿ ಬೌಲಿಂಗ್ ಮಾಡುವುದು ನಿಜಕ್ಕೂ ಸವಾಲೇ ಆಗಿತ್ತು. ಆದರೂ ಸಿಮಾನ್ಸ್ ವಿರುದ್ಧ ಅಶ್ವಿನ್ ಮತ್ತು ಪಾಂಡ್ಯಾ ಎಸೆದ 2 ನೋಬಾಲ್ ಗಳು ತುಂಬಾ ದುಬಾರಿಯಾಗಿತ್ತು. ಸಿಮಾನ್ಸ್ 18 ರನ್ ಗಳಿದ್ದಾಗ ಮತ್ತು 50 ರನ್ ಗಳಿದ್ದಾಗ 2 ಬಾರಿ ಔಟ್ ಆಗಿದ್ದರು.
ಆದರೆ ನೋ ಬಾಲ್ ಆಗಿದ್ದರಿಂದ ಅವರು ಬಚಾವ್ ಆಗಿದ್ದರು. ಇದು ನಿಜಕ್ಕೂ ನಮ್ಮಲ್ಲಿ ನಿರಾಶೆ ಮೂಡಿಸಿದೆ. ರಸೆಲ್ ರಂತಹ ದೊಡ್ಡ ಸಿಕ್ಸರ್ ಗಳನ್ನು ಭಾರಿಸುವ ರಸೆಲ್ ರಂತಹ ಆಟಗಾರರನ್ನು ತಡೆಯಲು ಮತ್ತು ಪಂದ್ಯ ಸ್ಪಿನ್ನರ್ ಗಳ ಕೈಮೀರಿ ಹೋಗಿತ್ತಿದೆ ಎಂದಾಗ ನಾವು ವೇಗದ ಬೌಲರ್ ಗಳ ಮೊರೆ ಹೋಗಬೇಕಾಯಿತು ಎಂದು ಧೋನಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ