
ಬೆಂಗಳೂರು: ಐಪಿಎಲ್ ಸೀಸನ್ 9ನ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ನಾಲ್ಕು ವಿಕೆಟ್ ಗಳ ಅಂತರಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದೆ.
ಗುಜರಾತ್ ನೀಡಿದ 159ರನ್ ಗಳ ಸವಾಲಿನ ಮೊತ್ತ ಬೆನ್ನುಹತ್ತಿದ ಬೆಂಗಳೂರು ತಂಡ ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ (ಅಜೇಯ 79) ಮತ್ತು ಕೆಳ ಕ್ರಮಾಂಕದ ಆಟಗಾರರಾದ ಸ್ಟುವರ್ಟ್ ಬಿನ್ನಿ (21 ರನ್), ಅಬ್ದುಲ್ಲಾ (ಅಜೇಯ 33 ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
159 ರನ್ ಗಳ ಸವಾಲಿನ ಮೊತ್ತವನ್ನು ಸಕಾರಾತ್ಮಕವಾಗಿಯೇ ಬೆನ್ನು ಹತ್ತಿದ ಬೆಂಗಳೂರು ತಂಡಕ್ಕೆ ಗುಜರಾತ್ ತಂಡದ ಕುಲಕರ್ಣಿ ತಮ್ಮ ಮಾರಕ ಬೌಲಿಂಗ್ ಮೂಲಕ ಕಾಡಿದರು. ಆರಂಭಿಕರಾದ ಕ್ರಿಸ್ ಗೇಯ್ಲ್ 9 ರನ್ ಗೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ
ಮತ್ತು ಕೆಎಲ್ ರಾಹುಲ್ ಶೂನ್ಯಕ್ಕೇ ನಿರ್ಗಮಿಸಿದರು. ವಾಟ್ಸನ್ ಕೂಡ ಕೇವಲ 1 ರನ್ ಗಳಿಸಿ ಔಟ್ ಆದರೆ, ಬಳಿಕ ಬಂದ ಸಚಿನ್ ಬೇಬಿ ಶೂನ್ಯಕ್ಕೆ ಔಟ್ ಆದರು.
ಈ ಹಂತದಲ್ಲಿ ಆರ್ ಸಿಬಿ ಬಳಗದಲ್ಲಿ ಸೋಲಿನ ಭೀತಿ ಉಂಟಾಯಿತು. ಆದರೆ ಈ ಹಂತದಲ್ಲಿ ಎಬಿಡಿ ಜೊತೆಗೂಡಿದ ಕನ್ನಡಿಗ ಸ್ಟುವರ್ಟ್ ಬಿನ್ನಿ ಆರ್ ಸಿಬಿ ಎನ್ನಿಂಗ್ಸ್ ಗೆ ಜೀವ ತುಂಬಿದರು. ಒಂದೆಡೆ ಎಬಿಡಿ ಭರ್ಜರಿ ಹೊಡೆತಗಳ ಮೂಲಕ ರನ್ ಮಳೆಗರೆದರೆ, ಬಿನ್ನಿ ಕೂಡ ಸತತ ಬೌಂಡರಿಗಳ ಮೂಲಕ ಆರ್ ಸಿಬಿ ಇನ್ನಿಂಗ್ಸ್ ಗೆ ಜೀವ ತುಂಬಿದರು. ಈ ಹಂತದಲ್ಲಿ ಜಡೇಜಾ ಬೌಲಿಂಗ್ ನಲ್ಲಿ ಅಂಪೈರ್ ನೀಡಿದ ಅನುಮಾನಾಸ್ಪದ ತೀರ್ಪಿಗೆ ಬಲಿಯಾದ ಬಿನ್ನಿ ಪೆವಲಿಯನ್ ನತ್ತ ಹೆಜ್ಜೆ ಹಾಕಿದರು.
ಆದರೆ ಬಳಿಕ ಎಬಿಡಿ ಜೊತೆ ಗೂಡಿದ ಬೌಲಿಂಗ್ ನಲ್ಲಿ ಮಿಂಚಿದ್ದ ಅಬ್ದುಲ್ಲಾ ಬ್ಯಾಟಿಂಗ್ ನಲ್ಲೂ ಮಿಂಚಿದರು. ಸ್ಫೋಟಕ ಬ್ಯಾಟ್ಸಮ್ ಎಬಿಡಿಗೆ ಭರ್ಜರಿ ಸಾಥ್ ನೀಡಿದ ಅಬ್ಲುಲ್ಲಾ 33 ರನ್ ಗಳಿಸಿದರು. ಅತ್ತ ಮತ್ತೊಂದು ತುದಿಯಲ್ಲಿ ತಮ್ಮ ಎಂದಿನ ಸ್ಫೋಟಕ ಆಟವಾಡಿದ ಎಬಿಡಿ ನೋಡ-ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದರು. ಇನ್ನಿಂಗ್ಸ್ ನ 18ನೇ ಓವರ್ ಅಂತಿಮ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ ಅಬ್ದುಲ್ಲಾ ಆರ್ ಸಿಬಿ ಗೆಲುವನ್ನು ಖಚಿತ ಪಡಿಸದರು. 19ನೇ ಓವರ್ ನ 2ನೇ ಎಸೆತದಲ್ಲಿ ಅಬ್ದುಲ್ಲಾ ಪ್ರವೀಣ್ ಕುಮಾರ್ ಎಸೆದ ಲೋ ಫುಲ್ ಟಾಸ್ ಎಸೆತವನ್ನು ಫ್ಲಿಕ್ ಮಾಡುವ ಮೂಲಕ 2 ರನ್ ಕದಿಯುವುದರೊಂದಿಗೆ ಆರ್ ಸಿಬಿ ಜಯಭೇರಿ ಮೊಳಗಿಸಿತು.
ಅತ್ತ ಅಬ್ದುಲ್ಲಾ ಗೆಲುವಿನ ರನ್ ಭಾರಿಸುತ್ತಿದ್ದಂತೆಯೇ ಇತ್ತ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರು ಕ್ರೀಡಾಂಗಣಕ್ಕೆ ನುಗ್ಗಿ ಎಬಿಡಿ ಮತ್ತು ಆಬ್ದುಲ್ಲಾರ ಮೈಮೇಲೆ ಬಿದ್ದು ಗೆಲುವಿನ ಸಂಭ್ರಮಾಚರಣೆ ಮಾಡಿದರು.
ಗುಜರಾತ್ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಧವಳ್ ಕುಲಕರ್ಣಿ ಕೇವಲ 14 ರನ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಆರ್ ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಬಿಡಿವಿಲಿಯರ್ಸ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement