
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೈದರಾಬಾದ್ ತಂಡ 209 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಾರ್ನರ್ ಪಡೆ ಉತ್ತಮ ಆರಂಭ ಪಡೆಯಿತು. ನಾಯಕ ಡೇವಿಡ್ ವಾರ್ನರ್ (69 ರನ್) ಹಾಗೂ ಶಿಖರ್ ಧವನ್ (28 ರನ್) ತಂಡಕ್ಕೆ ಅರ್ಧಶತಕದ ಜೊತೆಯಾಟ ನೀಡಿದರು. ಧವನ್ ಚಾಹಲ್ ಬೌಲಿಂಗ್ ನಲ್ಲಿ ಔಟ್ ಆದರೆ ಬಳಿಕ ಬಂದ ಹೆನ್ರಿಕ್ಸ್ ಬಂದಷ್ಟೇ ವೇಗವಾಗಿ 4 ರನ್ ಗಳಿಸಿ ಜೋರ್ಡಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ವಾರ್ನರ್ ಜೊತೆಗೂಡಿದ ಯುವರಾಜ್ ಸಿಂಗ್ ಎರಡು ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ ಭರ್ಜರಿ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದರು. ಈ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ವಾರ್ನರ್ ಅರವಿಂದ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಹೂಡಾ ಕೂಡ ಕೇವಲ 3 ರನ್ ಗಳಿಸಿ ಅರವಿಂದ್ ಬೌಲಿಂಗ್ ನಲ್ಲಿ ಔಟ್ ಆದರು. ತಂಡದ ಮೊತ್ತ 148 ರನ್ ಗಳಾಗಿದ್ದಾಗ ಜೋರ್ಡಾನ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ್ದ ಯುವಿ ವಾಟ್ಸನ್ ಹಿಡಿದ ಅದ್ಬುತ ಕ್ಯಾಚ್ ಗೆ ಬಲಿಯಾದರು. ಬಳಿಕ ಬಂದ ಕಟ್ಟಿಂಗ್ ಕೇವಲ 15 ಎಸೆತಗಳಲ್ಲಿ 39 ರನ್ ಸಿಡಿಸುವ ಮೂಲಕ ಹೈದರಾಬಾದ್ ತಂಡ 200ರ ಗಡಿ ದಾಟಲು ನೆರವಾದರು.
ಬೆಂಗಳೂರು ತಂಡದ ಪರ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರೆ, ಅರವಿಂದ್ 2 ವಿಕೆಟ್ ಮತ್ತು ಚಾಹಲ್ 1 ವಿಕೆಟ್ ಪಡೆದರು. ಕೇವಲ 4 ಓವರ್ ನಲ್ಲಿ 61 ರನ್ ನೀಡಿದ ಶೇನ್ ವಾಟ್ಸನ್ ಇನ್ನಿಂಗ್ಸ್ ನ ದುಬಾರಿ ಬೌಲರ್ ಎನಿಸಿಕೊಂಡರು.
Advertisement