
ನವದೆಹಲಿ: ಭಾರತೀಯ ಕ್ರಿಕೆಟ್ ಸಂಸ್ಥೆ ಹಾಗೂ ಲೋಧಾ ಸಮಿತಿ ನಡುವಿನ ತಿಕ್ಕಾಟ ತಾರರಕ್ಕೇರಿದ್ದು, ಈ ತಿಕ್ಕಾಟಕ್ಕೆ ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಸರಣಿಯೇ ರದ್ದಾಗುವ ಭೀತಿ ಎದುರಾಗಿದೆ.
ಸೆಪ್ಟೆಂಬರ್ 30ರಂದು ನಡೆದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿದ ಆರ್ಥಿಕ ನಿರ್ಧಾರಗಳಿಗೆ ಹಣ ಬಿಡುಗಡೆ ಮಾಡುವಂತಿಲ್ಲ ಎಂದು ಬಿಸಿಸಿಐ ಅಕೌಂಟ್ ಹೊಂದಿರುವ ಖಾಸಗಿ ಬ್ಯಾಂಕ್ಗೆ ಲೋಧಾ ಸಮಿತಿ ಸೂಚನೆ ನೀಡಿರುವುದೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಖಾತೆಗಳನ್ನು ಹೊಂದಿರುವ ಬ್ಯಾಂಕ್ ಗಳಿಗೆ ಲೋಧಾ ಸಮಿತಿ ಪತ್ರ ಬರೆದಿದ್ದು, "ಸೆ. 30ರಂದು ಬಿಸಿಸಿಐ ನಡೆಸಿದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಮುಖ ಆರ್ಥಿಕ ನಿರ್ಧಾರಗಳಿಗೆ ಅನುಮೋದನೆ ಸಿಕ್ಕ ಮಾಹಿತಿ ನಮಗೆ ಲಭಿಸಿದೆ. ಇದರನ್ವಯ ಸದಸ್ಯ ಕ್ರಿಕೆಟ್ ಮಂಡಳಿಗಳಿಗೆ ಬೃಹತ್ ಮೊತ್ತ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಅಲ್ಲದೆ "ಆಗಸ್ಟ್ 31ರಂದು ಸಮಿತಿ ನೀಡಿದ ಸೂಚನೆ ಅನ್ವಯ ದೈನಂದಿನ ಕೆಲಸಗಳಿಗೆ ಹೊರತಾಗಿ, ಭವಿಷ್ಯದ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಧಾರವನ್ನು ತಳೆಯ ಬಾರದು ಎನ್ನಲಾಗಿತ್ತು. ಹಾಗಾಗಿ ಈ ಹಣವನ್ನು ಬಿಡುಗಡೆ ಮಾಡುವುದು ದೈನಂದಿನ ಕಾರ್ಯವಾಗಿರಲಿಲ್ಲ ಹಾಗೂ ಬಿಸಿಸಿಐ ನಡೆದ ಸಭೆಯ ತುರ್ತಾಗಿರಲಿಲ್ಲ. ಬಿಸಿಸಿಐ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದೊಂದಿಗೆ ಲೋಧಾ ಸಮಿತಿಯ ಮೊದಲ ಡೆಡ್ಲೈನ್ಅನ್ನೂ ಮೀರಿದೆ. ಈ ಕುರಿತಾದ ವಿಚಾರಣೆ ಅ.6 ರಂದು ನಡೆಯಲಿದ್ದು, ಆವರೆಗೂ ಬಿಸಿಸಿಐ ಅನುಮೋದಿಸಿದ ಯಾವುದೇ ಹಣವನ್ನು ಬಿಡುಗಡೆ ಮಾಡುವಂತಿಲ್ಲ" ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪತ್ರದ ಪ್ರತಿಯನ್ನು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ, ಸಿಇಒ ರಾಹುಲ್ ಜೋಹ್ರಿ, ಖಜಾಂಚಿ ಅನಿರುದ್ಧ್ ಚೌಧರಿಗೂ ಕಳುಹಿಸಲಾಗಿದ್ದು, ಲೋಧಾ ಸಮಿತಿ ಈ ನಿರ್ಧಾರ ಬಿಸಿಸಿಐನ ಅಸಮಾಧಾನಕ್ಕೆ ಕಾರಣವಾಗಿದೆ.
ಲೋಧಾ ಸಮಿತಿ ಶಿಫಾರಸ್ಸಿನಿಂದಾಗಿ ಬಿಸಿಸಿಐಗೆ ಭಾರಿ ಆರ್ಥಿಕ ನಷ್ಟ
ಬಿಸಿಸಿಐ ಮೂಲಗಳು ತಿಳಿಸಿರುವಂತೆ ಲೋಧಾ ಸಮಿತಿ ಐಪಿಎಲ್ ಬಗ್ಗೆ ನೀಡಿರುವ ಶಿಫಾರಸುಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಎದುರಾಗಲಿದೆಯಂತೆ. ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಮಾತನಾಡಿದ್ದು, "ಭಾರತ ತಂಡದ ಅಂತಾರಾಷ್ಟ್ರೀಯ ಕ್ಯಾಲೆಂಡರ್ ಹಾಗೂ ಐಪಿಎಲ್ ನಡುವೆ 15 ದಿನಗಳ ಅಂತರವಿರಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಐಪಿಎಲ್ ಕ್ಯಾಲೆಂಡರ್ ಗಮನಿಸಿದಾಗ ಇದು ಸಾಧ್ಯವೇ ಇಲ್ಲ. ಒತ್ತಾಯಪೂರ್ವಕವಾಗಿ ಅಳವಡಿಸಿದಲ್ಲಿ ನೂರಾರು ಕೋಟಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಭಾರತ-ನ್ಯೂಜಿಲೆಂಡ್ ಸರಣಿ ರದ್ದು
ಇನ್ನು ಲೋಧಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಬ್ಯಾಂಕ್ ಗಳು ಬಿಸಿಸಿಐನ ಖಾತೆಗಳಿಂದ ಹಣ ಬಿಡುಗಡೆ ಮಾಡದಿದ್ದರೆ ಪ್ರಸ್ತುತ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಸರಣಿ ರದ್ದಾಗಲಿದೆ. ಒಂದು ವೇಳೆ ಚಾಲ್ತಿಯಲ್ಲಿರುವ ಸರಣಿ ರದ್ದಾದರೆ ಅಂತಾರಾಷ್ಟ್ರೀಯವಾಗಿ ಭಾರತ ಗೌರವಕ್ಕೆ ಧಕ್ಕೆಯಾಗಲಿದೆ. ಇಂತಹ ಕಠಿಣ ನಿರ್ಧಾರಕ್ಕೆ ಲೋಧಾ ಸಮಿತಿ ಅನುವು ಮಾಡಿಕೊಡುವುದಿಲ್ಲ ಎಂಬ ವಿಶ್ವಾಸ ತಮಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಪರಿಹಾರ ಕಂಡುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ.
2017ರಲ್ಲಿ ಐಪಿಎಲ್ ಅಥವಾ ಐಸಿಸಿ ಚಾಂಪಿಯನ್ಸ್ ಟ್ರೋಫಿ!
ಲೋಧಾ ಶಿಫಾರಸುಗಳನ್ನು ಸಂಪೂರ್ಣವಾಗಿ ಬಿಸಿಸಿಐ ಅಳವಡಿಸಿಕೊಂಡಲ್ಲಿ, 2017ರಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಚಾಂಪಿಯನ್ಸ್ ಟ್ರೋಫಿ ಅಥವಾ ಐಪಿಎಲ್ ಈ ಎರಡು ಸರಣಿಗಳಲ್ಲಿ ಯಾವುದಾದರೂ ಒಂದು ಸರಣಿಯನ್ನು ಮಾತ್ರ ಆಡಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಶಿಫಾರಸಿನ ಪ್ರಕಾರ ಐಪಿಎಲ್ ಆರಂಭ ಹಾಗೂ ಅಂತ್ಯದ ಬಳಿಕ 15 ದಿನಗಳ ಬಿಡುವು ಇರಬೇಕು ಎನ್ನಲಾಗಿದೆ. 2017ರ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ 18ರವರೆಗೆ ನಡೆಯಲಿದೆ. ಇನ್ನು ಐಪಿಎಲ್ ಟೂರ್ನಿ ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಮುಗಿಯಲಿರುವ ಕಾರಣ ಈ ಸಮಸ್ಯೆ ತಲೆದೋರಿದೆ. ಯಾವುದಾದರೂ ಒಂದು ಟೂರ್ನಿಯಲ್ಲಿ ಮಾತ್ರವೇ ಭಾರತ ತಂಡದ ಆಟಗಾರರು ಆಡಲಿದ್ದಾರೆ ಎಂದು ಅನುರಾಗ್ ವಿವರಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಸಭೆ ನಡೆಸಿ ನಿರ್ಧಾರ ಮಾಡಲಿದೆ ಎಂದಿದ್ದಾರೆ.
Advertisement