ಕ್ರೀಡಾಂಗಣದಲ್ಲಿ ಜಗಳವಾಡಿದ ಆಟಗಾರನಿಗೆ ಸ್ನೇಹದ ಹಸ್ತ ಚಾಚಿ ಕ್ರೀಡಾ ಸ್ಫೂರ್ತಿ ಮೆರೆದ ವಾರ್ನರ್!

ಎದುರಾಳಿ ತಂಡದ ಬೌಲರ್ ಇಮ್ರಾನ್ ತಾಹಿರ್ ಕೆಣಕಿದಾಗ ಆತನೊಂದಿಗೆ ಜಗಳಕ್ಕೇ ಇಳಿದಿದ್ದ ವಾರ್ನರ್ ಬಳಿಕ ತಾವು ಔಟಾದ ಬಳಿಕ ಅದೇ ಬೌಲರ್ ಹೆಗಲ ಮೇಲೆ ಕೈ ಹಾಕಿ ಕ್ರೀಡಾಸ್ಪೂರ್ತಿ ಮೆರೆದು ಎಲ್ಲರ ಮೆಚ್ಚುಗೆಗೆ ಕಾರಣರಾದರು.
ಡೇವಿಡ್ ವಾರ್ನರ್ ಹಾಗೂ ಇಮ್ರಾನ್ ತಾಹಿರ್ (ಸಂಗ್ರಹ ಚಿತ್ರ)
ಡೇವಿಡ್ ವಾರ್ನರ್ ಹಾಗೂ ಇಮ್ರಾನ್ ತಾಹಿರ್ (ಸಂಗ್ರಹ ಚಿತ್ರ)

ಕೇಪ್ ಟೌನ್: ಸ್ಲೆಡ್ಜಿಂಗ್ ನಿಂದ ಸದಾ ಸುದ್ದಿಯಲ್ಲಿರುವ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಶುಕ್ರವಾರದ ಮಟ್ಟಿಗೆ ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದ್ದರು. ಎದುರಾಳಿ ತಂಡದ ಬೌಲರ್ ಇಮ್ರಾನ್ ತಾಹಿರ್ ಕೆಣಕಿದಾಗ ಆತನೊಂದಿಗೆ ಜಗಳಕ್ಕೇ ಇಳಿದಿದ್ದ ವಾರ್ನರ್ ಬಳಿಕ ತಾವು ಔಟಾದ ಬಳಿಕ ಅದೇ ಬೌಲರ್ ಹೆಗಲ ಮೇಲೆ ಕೈ ಹಾಕಿ ಕ್ರೀಡಾಸ್ಪೂರ್ತಿ ಮೆರೆದು ಎಲ್ಲರ ಮೆಚ್ಚುಗೆಗೆ ಕಾರಣರಾದರು.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಹೊರತಾಗಿ ನಿಜಕ್ಕೂ ರೋಚಕ ಅನುಭವ ನೀಡಿದ ಪಂದ್ಯವಾಗಿತ್ತು. ಸತತ 4  ಪಂದ್ಯಗಳನ್ನು ಸೋತು ವೈಟ್ ವಾಶ್ ಭೀತಿ ಒಂದೆಡೆಯಾದರೆ ಎದುರಾಳಿ ತಂಡದ ಆಟಗಾರ ಕಾಲುಕೆರೆದು ಜಗಳಕ್ಕೆ ಆಹ್ವಾನ ನೀಡಿದರೆ ಸುಮ್ಮನಿರುವುದಾದರೂ ಹೇಗೆ. ಸದಾ ಕಾಲ ಎದುರಾಳಿ ತಂಡದ ಆಟಗಾರರನ್ನು ಆಸ್ಟ್ರೇಲಿಯಾ ಆಟಗಾರರು ಕೆಣಕಿ ಸುದ್ದಿ ಮಾಡುತ್ತಿದ್ದರೆ ಕೊನೆಯ ಏಕದಿನ ಪಂದ್ಯದಲ್ಲಿ ಅದು ಉಲ್ಟಾ-ಪಲ್ಟಾ ಆಗಿತ್ತು.

ಹೌದು... ಕೇಪ್ ಟೌನ್ ಏಕದಿನ ಪಂದ್ಯದಲ್ಲಿ ಇಂತಹುದೊಂದು ಅಚ್ಚರಿ ಘಟನೆ ನಡೆದಿದ್ದು, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ತಮ್ಮ ಸ್ನೇಹಮಯಿ  ವರ್ತನೆಯಿಂದ ಇಡೀ ಕ್ರೀಡಾ ಜಗತ್ತಿನ ಮೆಚ್ಚುಗೆಗೆ ಕಾರಣರಾಗಿದ್ದಾರೆ. ದಕ್ಷಿಣ ಆಫ್ರಿಕಾ ನೀಡಿದ್ದ ಮೊತ್ತವನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾಗೆ ನೆರವಾಗಿ ನಿಂತ ಡೇವಿಡ್ ವಾರ್ನರ್, ಏಕಾಂಗಿ  ಹೋರಾಟ ನಡೆಸುತ್ತಿದ್ದರು. ಪಂದ್ಯದ 37ನೇ ಓವರ್ ನಲ್ಲಿ ಆಫ್ರಿಕಾದ ಇಮ್ರಾನ್ ತಾಹಿರ್ ಬೌಲಿಂಗ್ ಮಾಡುವಾಗ ಏಕಾಏಕಿ ವಾರ್ನರ್ ಬಳಿ ಬಂದು ಅದೇನೋ ಹೇಳಿದರು. ಬಳಿಕ ಇಬ್ಬರ  ನಡುವೆ ದೊಡ್ಡ ಪ್ರಮಾಣದ್ದೇ ಎನ್ನಬಹುದಾದ ವಾಗ್ವಾದ ನಡೆಯಿತು.

ಅಚ್ಚರಿಯೆಂದರೆ ಬಳಿಕ ಔಟಾದ ವಾರ್ನರ್ ಅದೇ ಇಮ್ರಾನ್ ತಾಹಿರ್ ಬಳಿ ತೆರಳಿ ಅವರ ಭುಜದ ಮೇಲೆ ಕೈಹಾಕಿ ನಗುತ್ತಲೇ ಮಾತನಾಡಿಸಿದರು. ಬಳಿಕ ನಗುತ್ತಲೇ ಪೆಲಿಯನ್ ನತ್ತ ಬರುತ್ತಿದ್ದ ವಾರ್ನರ್ ಗೆ ಪ್ರೇಕ್ಷಕರಿಂದ ಚಪ್ಪಾಳೆಯ ಗೌರವ ದೊರೆಯಿತು. ಮೈದಾನದಲ್ಲಿ ನಡೆದ ಜಗಳವನ್ನು ಅಲ್ಲೇ ಕೊನೆಗಾಣಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದ ವಾರ್ನರ್ ನಡೆಗೆ ಕೇವಲ ಆಸಿಸ್  ಕ್ರೀಡಾಪ್ರೇಮಿಗಳಿಂದಷ್ಟೇ ಅಲ್ಲ ಆಫ್ರಿಕಾ ತಂಡದ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ನರ್, ನನ್ನ ವೃತ್ತಿ ಜೀವನದಲ್ಲಿಯೇ ಎದುರಾಳಿ ಆಟಗಾರ ಕೆಣಕಿದಾಗ ಸುಮ್ಮನ್ನಿದ್ದ ಸಂದರ್ಭ ಇದೇ ಮೊದಲು ಎಂದೆನಿಸುತ್ತದೆ. ಆದರೆ ಇಮ್ರಾನ್  ತಾಹಿರ್ ರನ್ನು ಕೆಣಕುವ ಅಥವಾ ಅವರ ಕೋಪಕ್ಕೆ ಕಾರಣವಾದ ಪರಿಸ್ಥಿತಿ ಏನು ಎಂಬುದು ನನಗೆ ಈಗಲೂ ತಿಳಿಯುತ್ತಿಲ್ಲ ಎಂದು ನಗುತ್ತಲೇ ಹೇಳಿದರು.

ಕ್ರೀಡಾಕ್ಷೇತ್ರದಲ್ಲಿ ಇಂತಹ ಘಟನೆಗಳು ಸಾಮಾನ್ಯವೇ ಆದರೂ ಆಸ್ಟ್ರೇಲಿಯಾ ತಂಡದ ಮಟ್ಟಿಗೆ ಇಂತಹ ಘಟನೆಗಳು ಅಪರೂಪ ಎಂದೇ ಹೇಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com