

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್, ಟಿಎನ್ ಪಿಎಲ್ ನಂತಹ ಟಿ20 ಸರಣಿಗಳಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.
ಭಾರತ ತಂಡದ ಮತ್ತೋರ್ವ ವೇಗಿ ಇರ್ಫಾನ್ ಪಠಾಣ್ ರೊಂದಿಗೆ ಜುಗುಲ್ ಬಂದಿಯಂತಿದ್ದ ಬಾಲಾಜಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಬಾಲಾಜಿ, 16 ವರ್ಷಗಳ ನನ್ನವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಈಗ ಕುಟುಂಬಕ್ಕೆ ಹೆಚ್ಚಿನ ಕಾಲ ನೀಡಬೇಕಿದ್ದು, ಪ್ರಥಮ ದರ್ಜೆ ಕ್ರಿಕೆಟ್ ನಿಂದ ದೂರವುಳಿಯಲು ನಿರ್ಧರಿಸಿದ್ದೇನೆ. ನಿವೃತ್ತಿ ಸಂಬಂಧ ಈಗಾಗಲೇ ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ನಾನು ಸ್ಪಷ್ಟನೆ ನೀಡಿದ್ದು, ಮುಂದಿನ ಯಾವುದೇ ಸರಣಿಗೂ ತಮ್ಮನ್ನು ಪರಿಗಣಿಸದಂತೆ ಮನವಿ ಮಾಡಿದ್ದೇನೆ. ಸದ್ಯಕ್ಕೆ ಟಿ20 ಪಂದ್ಯಗಳನ್ನಾಡಲು ಬಯಸಿದ್ದು, ಟಿಎನ್ ಪಿಎಲ್ ಹಾಗೂ ಐಪಿಎಲ್ ನಲ್ಲಿ ಆಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ವೃತ್ತಿ ಜೀವನದಲ್ಲಿ ನೆರವಾದ ಎಲ್ಲರನ್ನೂ ನೆನೆದ ಬಾಲಾಜಿ, "ಮಾರ್ಗದರ್ಶನ ನೀಡಿದ ಎಲ್ಲ ತರಬೇತುದಾರರು, ಕ್ರಿಕಟರ್‌ಗಳು ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ನಾನು ಧನ್ಯವಾದಗಳನ್ನು ಹೇಳಬಯಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತ ತಂಡದ ಮಾಜಿನಾಯಕ ಅನಿಲ್ ಕುಂಬ್ಳೆ ಅವರನ್ನು ನೆನೆದ ಬಾಲಾಜಿ, ಕುಂಬ್ಳೆ ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗ. ತಂಡದಲ್ಲಿದ್ದಾಗ ಜಹೀರ್ ಖಾನ್ ಅವರ ಬೆಂಬಲವನ್ನು ನಾನು ಎಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
2001-2002ರಲ್ಲಿ ತಮಿಳುನಾಡಿನಲ್ಲಿ ಕೊಲಂಬೋ ಜಿಲ್ಲಾ ಕ್ರಿಕೆಟ್ ಸಂಸ್ಥೆ ವಿರುದ್ಧದ ಸರಣಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಬಾಲಾಜಿ, ತಮ್ಮ ಮೊದಲ ಕ್ರಿಕೆಟ್ ಸೀಸನ್ ನಲ್ಲಿಯೇ ಬರೊಬ್ಬರಿ 37 ವಿಕೆಟ್ ಕಬಳಿಸಿದ್ದರು. ಇದೇ ಪ್ರದರ್ಶನದ ಆಧಾರದ ಮೇಲೆ ರಣಜಿ ಕ್ರಿಕೆಟ್ ಗೂ ಆಯ್ಕೆಯಾಗಿದ್ದ ಬಾಲಾಜಿ, ಆ ಸೀಸನ್ ನಲ್ಲಿ 47 ವಿಕೆಟ್ ಗಳಿಸಿ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದಿದ್ದರು. ಬಳಿಕ 2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಾಲಾಜಿ ಪದಾರ್ಪಣೆ ಮಾಡಿದ್ದರು. 2004ರ ಪಾಕಿಸ್ತಾನ ಪ್ರವಾಸದ ವೇಳೆ ಭಾರತದ ಯಶಸ್ಸಿನಲ್ಲಿ ಬಾಲಾಜಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ರಾವಲ್ಪಿಂಡಿಯಲ್ಲಿ ನಡೆದ ಆ ಸರಣಿಯ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಬಾಲಾಜಿ 7 ವಿಕೆಟ್ ಪಡೆದಿದ್ದರು. ಆ ಪಂದ್ಯದ ಜತೆಗೆ ಭಾರತ ತಂಡ ಮೊದಲ ಬಾರಿಗೆ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿತ್ತು.
2000 ನವೆಂಬರ್ 18 ರಂದು ವಡೋದರಾದಲ್ಲಿ ಬಾಲಾಜಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಈವರೆಗೂ ತಮಿಳುನಾಡು ಪರ 106 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ 35 ವರ್ಷದ ಹರೆಯದ ಬಾಲಾಜಿ 330 ವಿಕೆಟ್ ಪಡೆದಿದ್ದಾರೆ. ತಮಿಳುನಾಡು ತಂಡದ ಬೌಲಿಂಗ್ ಕೋಚ್ ಹಾಗೂ ಆಟಗಾರನಾಗಿದ್ದ ಬಾಲಾಜಿ ಇದೀಗ ನಿವೃತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.
Advertisement