ಕೋಲ್ಕತಾ: ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರೆ ಆರ್ ಸಿಬಿ ತಂಡ ಗೆಲ್ಲುವುದಿಲ್ಲ ಎಂಬ ಅಭಿಮಾನಿಗಳ ನಂಬಿಕೆ ಮತ್ತೆ ಸಾಬೀತಾಗಿದ್ದು, ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲೂ ಕೂಡ ಕೊಹ್ಲಿ ಶೂನ್ಯಕ್ಕೆ ಔಟಾದ ಈ ಪಂದ್ಯದಲ್ಲಿ ಆರ್ ಸಿಬಿ ಹೀನಾಯ ಸೋಲು ಕಂಡಿದೆ.
ಮೊದಲ ಓವರ್ ನ ಮೂರನೇ ಎಸೆತದಲ್ಲೇ ಕೊಹ್ಲಿ ಕೋಲ್ಕತಾದ ಕಾಲ್ಟರ್ ನೈಲ್ ಬೌಲಿಂಗ್ ನಲ್ಲಿ ಪಾಂಡೆಗೆ ಕ್ಯಾಚಿತ್ತು ಹೊರ ನಡೆದರು. ಆಗ ಆರ್ ಸಿಬಿ ಮೊತ್ತ ಕೇವಲ 1 ರನ್ ಆಗಿತ್ತು. ಈ ಆಘಾತದಿಂದ ಹೊರ ಬರದ ಆರ್ ಸಿಬಿ ಅಂತಿಮವಾಗಿ ಕೇವಲ 49 ರನ್ ರನ್ ಗಳಿಗೇ ಆಲ್ ಔಟ್ ಆಗುವ ಮೂಲಕ ಕೋಲ್ಕತಾ ವಿರುದ್ಧ ಬರೊಬ್ಬರಿ 82 ರನ್ ಗಳ ಹೀನಾಯ ಸೋಲು ಕಂಡಿದೆ. ಆರ್ ಸಿಬಿ ಪರ ಜಾದವ್ ಗಳಿಸಿದ 9 ರನ್ ಗಳೇ ತಂಡದ ಬ್ಯಾಟ್ಸಮನ್ ಓಬ್ಬನ ವೈಯುಕ್ತಿಕ ಗರಿಷ್ಠ ಗಳಿಕೆ ರನ್ ಗಳೆಂದರೆ ಆರ್ ಸಿಬಿ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎಂಬುದನ್ನು ಊಹಿಸಬಹುದು.
ಐಪಿಎಲ್ ಇತಿಹಾಸದಲ್ಲೇ 2ನೇ ಬಾರಿಗೆ ಪಂದ್ಯವೊಂದರಲ್ಲಿ 20 ವಿಕೆಟ್ ಪತನ
ಇಂದಿನ ಕೋಲ್ಕತಾ ಮತ್ತು ಬೆಂಗಳೂರು ನಡುವಿನ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು. ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 20 ವಿಕೆಟ್ ಗಳು ಪತನವಾಗಿದ್ದು ಇದು ಎರಡನೇ ಬಾರಿಯಾಗಿದೆ.