
ನವದೆಹಲಿ: ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ನ್ಯಾಯಾಂಗ ನಿಂದನೆ ತೂಗುಗತ್ತಿ ಎದುರಿಸುತ್ತಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕೊನೆಗೂ ಸುಪ್ರೀಂ ಕೋರ್ಟ್ ನಲ್ಲಿ ಬೇಷರತ್ ಕ್ಷಮೆ ಕೋರಿದ್ದಾರೆ.
ಈ ಹಿಂದೆ ಅಂದರೆ ಏಪ್ರಿಲ್ 17ರಂದು ಸುಪ್ರೀಂಕೋರ್ಟ್ ಅಫಿಡವಿಟ್ ಸಲ್ಲಿಸಿದ್ದ ಠಾಕೂರ್ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದಿಪಾಕ್ ಮಿಶ್ರಾ ಮತ್ತು ಜಸ್ಟಿಸ್ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಯಾಚಿಸುವಂತೆ ಆದೇಶ ಹೊರಡಿಸಿತ್ತು. ಜುಲೈ 14ರೊಳಗೆ ಖುದ್ಧ ನ್ಯಾಯಾಲಯಕ್ಕೆ ಆಗಮಿಸಿ ಕ್ಷಮೆ ಯಾಚಿಸುವಂತೆ ಇಲ್ಲದಿದ್ದರೆ ಶಿಕ್ಷೆ ಎದುರಿಸುವಂತೆ ಸೂಚನೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅನುರಾಗ್ ಠಾಕೂರ್, ಇದು ನನ್ನು ವೈಯಕ್ತಿಕ ಸಂಘರ್ಷವಲ್ಲ. ಇದು ಕ್ರೀಡಾ ಇಲಾಖೆಯ ಸ್ವಾಯತ್ತತೆಯ ಸಂಘರ್ಷವಾಗಿತ್ತು. ನನಗೆ ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವವಿದೆ. ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಬಿಸಿಸಿಐ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆ ಸುಪ್ರೀಂಕೋರ್ಟ್ ಇರುವುದಾದರೆ ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದರು.
ಇದೀಗ ನ್ಯಾಯಾಲಯದ ಸೂಚನೆ ಹಿನ್ನಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement