
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಸುಪ್ರೀಂ ಕೋರ್ಟ್ ನೇಮಿಸಿದ್ದ ಲೋಧಾ ಸಮಿತಿ ನೀಡಿದ್ದ ವರದಿಗಳನ್ನು ಕ್ರಿಕೆಟ್ ಆಡಳಿತದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ.
ಬಿಸಿಸಿಐ ಅಧಿಕಾರಿಗಳು ಈ ಹಿಂದೆ ವಿರೋಧ ವ್ಯಕ್ತಪಡಿಸುತ್ತಿದ್ದ ಐದು ಅಂಶಗಳನ್ನು ಹೊರತುಪಡಿಸಿ ಉಳಿದೆಲ್ಲ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ಮಂಡಳಿಯ ವಿಶೇಷ ಮಹಾಸಭೆಯಲ್ಲಿ (ಎಸ್ಜಿಎಂ) ಸರ್ವಾನುಮತದ ಒಪ್ಪಿಗೆ ದೊರೆತಿದೆ ಎಂದು ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ. ಬುಧವಾರ ಮುಂಬೈನಲ್ಲಿ ನಡೆದ ಎಸ್ಜಿಎಂನಲ್ಲಿ ಬಿಸಿಸಿಐನ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಚುನಾಯಿತ ಅಧಿಕಾರಿಗಳು ಮಾತ್ರವೇ ಭಾಗವಹಿಸಿದ್ದರು.
ಸಭೆಯ ಬಳಿಕ ಲೋಧಾ ಶಿಫಾರಸಿನ ಐದು ಅಂಶಗಳ ಹೊರತಾಗಿ ಉಳಿದೆಲ್ಲವುಗಳನ್ನು ಜಾರಿ ಮಾಡಲು ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ ಎಂದು ಚೌಧರಿ ಮಾಧ್ಯಮಗಳಿಗೆ ತಿಳಿಸಿದರು. ರೈಲ್ವೇಸ್ ಹಾಗೂ ಸರ್ವೀಸಸ್ ತಂಡಗಳು ಪೂರ್ಣ ಸದಸ್ಯತ್ವದೊಂದಿಗೆ ಮತದಾನದ ಹಕ್ಕನ್ನು ಹೊಂದಿರಬೇಕಾದಲ್ಲಿ ಈ ಸಂಸ್ಥೆಗಳನ್ನು ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿ ಅಥವಾ ಸಚಿವರೇ ಪ್ರತಿನಿಧಿಸಬೇಕಾಗುತ್ತದೆ. ಇನ್ನು ಅಪೆಕ್ಸ್ ಕೌನ್ಸಿಲ್ ಸ್ಥಾಪನೆ ಆಗಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಈ ಕೌನ್ಸಿಲ್ ನಲ್ಲಿ ಕೇವಲ 5 ಮಂದಿಗೆ ಮಾತ್ರವೇ ಸ್ಥಾನವಿರಬೇಕು ಎಂದಿದೆ. ಆದರೆ, ದೇಶದ ಕ್ರಿಕೆಟ್ ವ್ಯಾಪ್ತಿಯನ್ನು ಪರಿಗಣನೆ ಮಾಡಿದಲ್ಲಿ, ಸದಸ್ಯ ಬಲ ಬಹಳ ಕಡಿಮೆ ಎನಿಸುತ್ತದೆ ಎಂದು ಅಮಿತಾಭ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.
ಇದಲ್ಲದೆ ಹಿತಾಸಕ್ತಿ ಸಂಘರ್ಷದ ಕುರಿತಾದ ಶಿಫಾರಸಿನ ಬಗ್ಗೆಯೂ ಕೆಲ ಸಮಸ್ಯೆಗಳಿವೆ ಎಂದು ಹೇಳಿರುವ ಜೌದರಿ ಆ ಸಮಸ್ಯೆಗಳನ್ನು ಸದಸ್ಯರು ಕಂಡುಹಿಡಿದು ಕೋರ್ಟ್ನ ಗಮನಕ್ಕೆ ತರಲಿದ್ದಾರೆ ಎಂದು ತಿಳಿಸಿದ್ದಾರೆ.
ಸುಮಾರು ಒಂದು ವರ್ಷಗಳ ಹಿಂದೆಯೇ ನಿವೃತ್ತ ನ್ಯಾಯಮೂರ್ತಿ ಆರ್ಎಂ ಲೋಧಾ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಒಪ್ಪಿಕೊಂಡಿದ್ದ ಸುಪ್ರೀಂ ಕೋರ್ಟ್, ಅದನ್ನು ಸಂಪೂರ್ಣವಾಗಿ ಬಿಸಿಸಿಐನಲ್ಲಿ ಜಾರಿ ಮಾಡುವಂತೆ ಆದೇಶ ನೀಡಿತ್ತು. ಆದರೆ, ಬಿಸಿಸಿಐ ಈವರೆಗೂ ಶಿಫಾರಸುಗಳಿಗೆ ವಿರೋಧ ವ್ಯಕ್ತಪಡಿಸುತ್ತ ಜಾರಿಯನ್ನು ಮುಂದೂಡುತ್ತಲೇ ಬಂದಿತ್ತು. ಈ ವಾರದ ಆರಂಭದಲ್ಲಿ ಅನರ್ಹ ಸದಸ್ಯರಾದ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಹಾಗೂ ನಿರಂಜನ್ ಷಾ, ವಿಶೇಷ ಮಹಾಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತಲ್ಲದೆ, ಎಷ್ಟು ಪ್ರಮಾಣದಲ್ಲಿ ಲೋಧಾ ಸಮಿತಿಯ ವರದಿಯನ್ನು ಜಾರಿ ಮಾಡಲು ಸಾಧ್ಯವೋ ಅಷ್ಟನ್ನು ಜಾರಿ ಮಾಡುವಂತೆ ಹೇಳಿತ್ತು.
ಬಿಸಿಸಿಐ ಎಸ್ಜಿಎಂನಲ್ಲಿ ಪದಾಧಿಕಾರಿಗಳು ಮಾತ್ರ ಪಾಲ್ಗೊಳ್ಳಬೇಕೆಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿಗೂ ಅವಕಾಶ ನೀಡಲಿಲ್ಲ. ಅಲ್ಲದೆ ಪಂಜಾಬ್ ಮತ್ತು ಒಡಿಶಾ ಕ್ರಿಕೆಟ್ ಸಂಸ್ಥೆಯಿಂದ ಬಂದಿದ್ದ ಪದಾಧಿಕಾರಿಗಳಲ್ಲದ ಪ್ರತಿನಿಧಿಗಳಿಗೂ ಸಭೆಯಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ.
ಅದರಂತೆ ಲೋಧಾ ಸಮಿತಿ ನೀಡಿದ್ದ ಐದು ಶಿಫಾರಸ್ಸುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಿದ್ಧ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಜಾರಿಯಾಗದೆ ಇರುವ ಲೋಧಾ ಶಿಫಾರಸುಗಳು
1. ರೈಲ್ವೇಸ್, ಸರ್ವೀಸಸ್ ತಂಡಗಳ ಸದಸ್ಯತ್ವಕ್ಕೆ ಅಗೌರವ ನೀಡುವ ‘ಒಂದು ರಾಜ್ಯ, ಒಂದು ಮತ’ ಶಿಫಾರಸು.
2. ಬಿಸಿಸಿಐನ ವೇತನ ಪಡೆಯುವ ಅಧಿಕಾರಿಗಳ ಅಧಿಕಾರ ವ್ಯಾಪ್ತಿ ಕುರಿತಾದ ಶಿಫಾರಸು.
3. ಅಪೆಕ್ಸ್ ಕೌನ್ಸಿಲ್ನ ಪ್ರಮಾಣ ಹಾಗೂ ಅದರ ಸಂವಿಧಾನ.
4. ಕೂಲಿಂಗ್ ಆಫ್ ಅವಧಿ, ವಯೋಮಿತಿ, ಸರ್ಕಾರಿ ಹುದ್ದೆಯಲ್ಲಿರುವ ಹಾಗೂ ಸಚಿವರಾಗಿರುವ ಬಿಸಿಸಿಐ ಅಧಿಕಾರಿಗಳನ್ನು ಅನರ್ಹ ಮಾಡುವ ಕುರಿತಾದ ಶಿಫಾರಸು.
5. ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಬಲ ಇಳಿಸುವ ಕುರಿತಾದ ಶಿಫಾರಸು.
Advertisement