
ನವದೆಹಲಿ: ಭಾರತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಆಟಗಾರ ರಷೀದ್ ಲತೀಫ್ ಇದೀಗ ಯೂಟರ್ನ್ ಹೊಡೆದಿದ್ದು, ಸೆಹ್ವಾಗ್ ಅವರ ಕ್ಷಮೆ ಕೋರಿದ್ದಾರೆ.
ಅಲ್ಲದೆ ಸೆಹ್ವಾಗ್ ರನ್ನು ಮಹಾನ್ ಬ್ಯಾಟ್ಸಮನ್ ಎಂದು ಬಣ್ಣಿಸಿರುವ ಲತೀಫ್, ವಿರಾಟ್ ಕೊಹ್ಲಿ ಅವರನ್ನು ಅತ್ಯುತ್ತಮ ಬ್ಯಾಟ್ಸಮನ್ ಎಂದು ಶ್ಲಾಘಿಸಿದ್ದಾರೆ.
ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯ ಭೇರಿ ಭಾರಿಸಿದ್ದ ವೇಳೆ ವೀರೇಂದ್ರ ಸೆಹ್ವಾಗ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾ ಟ್ವೀಟ್ ಮಾಡಿದ್ದರು. ಈ ವೇಳೆ ಪಾಕಿಸ್ತಾನದ ಕಾಲೆಳೆದಿದ್ದರು, ಇದನ್ನೇ ನೆಪವಾಗಿಸಿಕೊಂಡ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಷೀದ್ ಲತೀಫ್ ಸೆಹ್ವಾಗ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ತಮ್ಮ ವಿಡಿಯೋ ಸಂದೇಶದಲ್ಲಿ ಸೆಹ್ವಾಗ್ ಕುರಿತಂತೆ ಮನಸೋ ಇಚ್ಛೆ ತೆಗಳಿದ್ದ ರಷೀದ್ ಲತೀಫ್ ಅಪಮಾನಕಾರಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗಳು ಪಾಕಿಸ್ತಾನದ ಮಾಧ್ಯಮಗಳಲ್ಲೂ ವ್ಯಾಪಕ ಪ್ರಸರಾವಾಗಿತ್ತು. ಮತ್ತು ಸೆಹ್ವಾಗ್ ವಿರುದ್ಧ ಟೀಕೆಗೆ ಕಾರಣವಾಗಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ಯುವ ಕ್ರಿಕೆಟಿಗ ಮನೋಜ್ ತಿವಾರಿ ಕೂಡ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸೆಹ್ವಾಗ್, "ಅರ್ಥವಿಲ್ಲದ ಪದಗಳಿಗಿಂತ ಅರ್ಥಗರ್ಭಿತ ಮೌನ ಯಾವಾಗಲೂ ಉತ್ತಮ ಎಂದು ಟ್ವೀಟ್ ಮಾಡಿದ್ದರು. ಅಂತೇಯ ರಷೀದ್ ಲತೀಫ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು. ತಮ್ಮ ವಿಡಿಯೋ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಯೂಟರ್ನ್ ಹೊಡೆದಿರುವ ರಷೀದ್ ಲತೀಫ್ ಸೆಹ್ವಾಗ್ ರನ್ನು ಕ್ಷಮೆ ಕೋರಿದ್ದು, ಆತ ಮಹಾನ್ ಬ್ಯಾಟ್ಸಮನ್ ಎಂದು ಶ್ಲಾಘಿಸಿದ್ದಾರೆ. ಸೆಹ್ವಾಗ್ ಮಾತ್ರವಲ್ಲದೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಮಾಜಿ ಕ್ರಿಕೆಟ್ ದಿಗ್ಗಜರನ್ನು ನೆನಪಿಸಿಕೊಂಡಿದ್ದಾರೆ.
ಅಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಶುಭಕೋರಿದ್ದಾರೆ. ಒಟ್ಟಾರೆ ಕೆಟ್ಟಮೇಲೆ ಬುದ್ಧಿ ಬಂತು ಎಂಬಂತೆ ರಷೀದ್ ಲತೀಫ್ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ಅವರಿಗೆ ತಮ್ಮ ಪ್ರಮಾದ ಅರ್ಥವಾದಂತಿದೆ.
Advertisement