ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾರಣಕ್ಕಾಗಿಯೇ ಅನಿಲ್ ಕಂಬ್ಳೆ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೊಹ್ಲಿ ಒಂದು ವರ್ಷದ ಹಿಂದೆ ಕುಂಬ್ಳೆ ಅವರನ್ನು ಸ್ವಾಗತಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಅನಿಲ್ ಕುಂಬ್ಳೆ ಅವರು ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾದ ಬಳಿಕ 2016ರ ಜೂನ್ 23ರಂದು ಕೊಹ್ಲಿ ಅವರನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರು. ಈಗ ಆ ಟ್ವೀಟ್ ಡಿಲೀಟ್ ಆಗಿದೆ.
ಅಂದು ವಿರಾಟ್ ಕೊಹ್ಲಿ, ನಿಮಗೆ ನಮ್ಮ ತಂಡಕ್ಕೆ ಹೃದಯಪೂರ್ವಕ ಸ್ವಾಗತಗಳು, ಭಾರತೀಯ ಕ್ರಿಕೆಟ್ ತಂಡದ ಜೊತೆ ನೀವು ಇರುವುದು ದೊಡ್ಡ ವಿಚಾರ ಎಂದು ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಅವರನ್ನು ಸ್ವಾಗತಿಸಿದ್ದರು.
ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆಗೆ ಕೊಹ್ಲಿಯೇ ನೇರ ಕಾರಣ ಎಂದು ಹಲವರು ಹೇಳುತ್ತಿದ್ದಾರೆ.