ವಿದೇಶಿ ನೆಲದಲ್ಲೂ ಪ್ರಶಸ್ತಿ ಗೆಲ್ಲಲು ಟೀಂ ಇಂಡಿಯಾ ಸಮರ್ಥ: ಕೋಚ್ ಅನಿಲ್ ಕುಂಬ್ಳೆ

ಪ್ರಸ್ತುತ ಟೀಂ ಇಂಡಿಯಾ ವಿದೇಶದಲ್ಲೂ ಸರಣಿ ಗೆಲ್ಲಲು ಸಮರ್ಥವಾಗಿದೆ ಎಂದು ಕೋಚ್ ಅನಿಲ್ ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಚ್ ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
ಕೋಚ್ ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)

ಧರ್ಮಶಾಲಾ: ಪ್ರಸ್ತುತ ಟೀಂ ಇಂಡಿಯಾ ವಿದೇಶದಲ್ಲೂ ಸರಣಿ ಗೆಲ್ಲಲು ಸಮರ್ಥವಾಗಿದೆ ಎಂದು ಕೋಚ್ ಅನಿಲ್ ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಧರ್ಮಶಾಲಾದಲ್ಲಿ ನಡೆದ ಅಂತಿಮ ಮತ್ತು ನಾಲ್ಕನೇ ನಿರ್ಣಾಯಕ ಟೆಸ್ಟ್ ನಲ್ಲಿ ಭಾರತ ಅಮೋಘ ಗೆಲುವು ಸಾಧಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ತನ್ನ ಕೈ ವಶ  ಮಾಡಿಕೊಂಡಿತು. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಅವರು, ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ ಟೀಂ ಇಂಡಿಯಾ ಪಾಲಿಗೆ ಅಮೋಘ  ಜಯವಾಗಿದ್ದು, ಈ ಗೆಲುವಿನ ಮೂಲಕ ಟೀಂ ಇಂಡಿಯಾ ವಿದೇಶದಲ್ಲೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಸೋತ ಬಳಿಕ ತಂಡದ ಮೇಲೆ ಸಾಕಷ್ಟು ಒತ್ತಡಗಳಿತ್ತು. ಒತ್ತಡಗಳ ನಡುವೆಯೂ ಎರಡನೇ ಮತ್ತು ಮೂರನೇ ಪಂದ್ಯದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿಕೊಂಡಿತು. ಆದರೆ ಅಂತಿಮ ಪಂದ್ಯಕ್ಕೂ ಮೊದಲೇ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡು ಹೊರಗುಳಿಯುವುದರೊಂದಿಗೆ ಮತ್ತೆ ಟೀಂ ಇಂಡಿಯಾ ಮೇಲೆ ಒತ್ತಡ ಬಿತ್ತು. ಆದರೆ ಅಂಜಿಕ್ಯಾ ರಹಾನೆ ನೇತೃತ್ವದ ತಂಡ  ನಾಲ್ಕನೇ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಮೇಲೆ ಮೇಲುಗೈ ಸಾಧಿಸಿ ಅಂತಿಮವಾಗಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಪ್ರಮುಖವಾಗಿ ನಿನ್ನೆ ಭಾರತ ತಂಡದ ಬೌಲರ್ ಗಳ ಪ್ರದರ್ಶನ ಅತ್ಯುತ್ತಮವಾಗಿತ್ತು. ಇಡೀ ಸರಣಿಯುದ್ದಕ್ಕೂ ವೇಗದ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡುವ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿದ್ದರು. ಪಿಚ್ ಗುಣ  ಬದಲಾಗುತ್ತಿದ್ದಂತೆಯೇ ತಮ್ಮ ಕಾರ್ಯತಂತ್ರಗಳಲ್ಲೂ ಬದಲಾವಣೆ ಮಾಡುವ ಮೂಲಕ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಇದು ತಂಡದ ಯಶಸ್ಸಿಗೆ ಕಾರಣವಾಯಿತು. ಅಲ್ಲದೆ ಕೆಳ ಕ್ರಮಾಂಕದ ಆಟಗಾರರೂ ಕೂಡ  ಉತ್ತಮ ಪ್ರದರ್ಶನ ತೋರಿ ತಂಡದ ಮೇಲುಗೈಗೆ ಕಾರಣರಾಗಿದ್ದರು. ಇಂತಹ ಉತ್ತಮ ತಂಡವಿದ್ದಾಗ ಭಾರತ ತಂಡ ದೇಶಿ ಪಿಚ್ ಗಳಲ್ಲಿ ಮಾತ್ರವಲ್ಲ ವಿದೇಶಿ ಪಿಚ್ ಗಳಲ್ಲೂ ಸರಣಿ ಜಯ ಸಾಧಿಸುತ್ತದೆ ಎಂದು ಕೋಚ್ ಕುಂಬ್ಳೆ  ಆಟಗಾರರ ಕುರಿತು ಸಂತಸ ವ್ಯಕ್ತಪಡಿಸಿದರು.

ಇನ್ನು ಯಾವುದೇ ರೀತಿಯ ಪಿಚ್ ಗುಣಕ್ಕೆ ಹೊಂದಿಕೊಳ್ಳುವ ಆಟಗಾರರ ಗುಣ ತಂಡದ ಯಶಸ್ಸಿಗೆ ಮತ್ತೊಂದು ಕಾರಣವಾಗಿದ್ದು, ವೆಸ್ಟ್ ಇಂಡೀಸ್ ಸರಣಿಯಿಂದ ಆರಂಭವಾಗಿ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯುದ್ದಕ್ಕೂ ಭಾರತೀಯ  ಆಟಗಾರರು ಒಟ್ಟು 25 ಹೊಸ ಪಿಚ್ ಗಳಲ್ಲಿ ಆಡಿದ್ದಾರೆ. ಕೆಲ ಆಟಗಾರರಿಗಂತೂ ಪಿಚ್ ಹೇಗಿದೆ ಎಂಬುದೇ ತಿಳಿದಿರಲಿಲ್ಲ. ಹೀಗಿದ್ದೂ ಪಿಚ್ ಗುಣಕ್ಕೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ಎಲ್ಲ ವಿಭಾಗಗಳಲ್ಲಿ ಟೀಂ  ಇಂಡಿಯಾ ಉತ್ತಮವಾಗಿದೆಯಾದರೂ, ಕ್ಯಾಚಿಂಗ್ ವಿಭಾಗದಲ್ಲಿ ಆಟಗಾರರು ಮತ್ತಷ್ಟು ಗಮನ ಕೇಂದ್ರೀಕರಿಸಬೇಕಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.

ಜಡ್ಡುಗೆ ಫುಲ್ ಮಾರ್ಕ್ಸ್ ನೀಡಿದ ಕೋಚ್
ಇನ್ನು ಬೌಲರ್ ಗಳ ಅಗ್ರ ಸ್ಥಾನಕ್ಕಾಗಿ ರವೀಂದ್ರ ಜಡೇಜಾ ಮತ್ತು ಅಶ್ವಿನ್ ನಡುವಿನ ಸ್ಪರ್ಧೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ಇದು ಉತ್ತಮ ಸ್ಪರ್ಧೆಯೇ ಆದರೂ, ಇಡೀ ಸರಣಿಯುದ್ದಕ್ಕೂ ಜಡೇಜಾ  ಅತ್ಯುತ್ತಮವಾಗಿ ಬೌಲ್ ಮಾಡಿದ್ದಾರೆ. ಅಶ್ವಿನ್ ಕೂಡ ತಮ್ಮ ನಂಬರ್ ಸ್ಥಾನಕ್ಕೆ ತಕ್ಕಂತೆ ಬೌಲ್ ಮಾಡಿದ್ದಾರೆ ಎಂದು ಕುಂಬ್ಳೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com