ಭುಜದ ಗಾಯ: ಕೊಹ್ಲಿ ಬಳಿಕ ಐಪಿಎಲ್ 2017 ಗೆ ರಾಹುಲ್ ಇಲ್ಲ!

ಅಭಿಮಾನಿಗಳ ಬಹು ನಿರೀಕ್ಷಿತ ಐಪಿಎಲ್ 2017ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡೆರಡು ಆಘಾತಗಳು ಎದುರಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಭಿಮಾನಿಗಳ ಬಹು ನಿರೀಕ್ಷಿತ ಐಪಿಎಲ್ 2017ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡೆರಡು ಆಘಾತಗಳು ಎದುರಾಗಿವೆ.

ಬಾರ್ಡರ್ ಗವಾಸ್ಕರ್ ಸರಣಿ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಕಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಿಂದ ಹೊರಗುಳಿಯುತ್ತಿದ್ದಂತೆಯೇ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಕೂಡ ಅದೇ ಸಮಸ್ಯೆಯಿಂದಾಗಿ  2017ರ ಐಪಿಎಲ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ರಾಹುಲ್ ತಮ್ಮ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಅದಾಗ್ಯೂ ಆಸಿಸ್ ವಿರುದ್ಧದ ಸರಣಿಯಲ್ಲಿ ಅವರು  ಮೈದಾನಕ್ಕಿಳಿದಿದ್ದರು. ಇದೀಗ ಅವರನ್ನು ಪರೀಕ್ಷಿಸಿರುವ ವೈದ್ಯರು ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕು ಎಂದು ಸೂಚಿಸಿದ್ದು, ಇದೇ ಕಾರಣಕ್ಕೆ ರಾಹುಲ್ ಐಪಿಎಲ್ ಸರಣಿಯಿಂದ ಹಿಂದಕ್ಕೆ ಸರಿದಿದ್ದಾರೆ.

ಇದೇ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಭುಜಕ್ಕೆ ಗಾಯ ಮಾಡಿಕೊಂಡಿದ್ದರು, ರಾಂಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕೊಹ್ಲಿ ಗಾಯದ ಸಮಸ್ಯೆಗೆ ಒಳಗಾಗಿ ನಾಲ್ಕನೇ ಪಂದ್ಯದಿಂದ ಹೊರಗೆ ಉಳಿದಿದ್ದರು,.  ಹೀಗಾಗಿ ಉಪನಾಯಕ ಅಜಿಂಕ್ಯಾ ರಹಾನೆ ನಾಲ್ಕನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೀಗ ವಿರಾಟ್ ಕೊಹ್ಲಿ ಮತ್ತು ರಾಹುಲ್ ಇಬ್ಬರೂ ಬಿಸಿಸಿಐ ನುರಿತ ವೈದ್ಯರ ಮುಂದೆ ಹಾಜರಾಗಿ ಚಿಕಿತ್ಸೆ ಪಡೆಯಬೇಕಿದ್ದು,  ಶೇ.100ರಷ್ಟು ಫಿಟ್ ಎಂದು ವೈದ್ಯರು ಹೇಳುವವರೆಗೂ ಈ ಇಬ್ಬರು ಆಟಗಾರರು ಕಣಕ್ಕಿಳಿಯುವುದಿಲ್ಲ ಎಂದು ಆರ್ ಸಿಬಿ ಕೋಚ್ ಡೇನಿಯಲ್ ವೆಟ್ಟೋರಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ರಾಹುಲ್ ಇದೇ ಏಪ್ರಿಲ್ ಮೊದಲ ವಾರದಲ್ಲಿ ಲಂಡನ್ ಹಾರಲಿದ್ದು, ಅಲ್ಲಿ ನುರಿತ ವೈದ್ಯರು ರಾಹುಲ್ ಅವರಿಗೆ ಭುಜದ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕೊಹ್ಲಿ ಬದಲಿಗೆ ಎಬಿಡಿವಿಲಿಯರ್ಸ್ ಆರ್ ಸಿಬಿ ತಂಡವನ್ನು ಮುನ್ನಡೆಸಲಿದ್ದು, ಸರ್ಫರಾಜ್ ಖಾನ್ ಸ್ಥಾನ ಪಡೆದಿದ್ದಾರೆ. ಇನ್ನು ರಾಹುಲ್ ಬದಲಿಗೆ ಯಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ  ವೆಟ್ಟೋರಿ, ಪ್ರಸ್ತುತ ರಾಹುಲ್ ಗೆ ಬದಲೀ ಆಟಗಾರನ ಆಯ್ಕೆ ಮಾಡಿಲ್ಲ. ಏಪ್ರಿಲ್ 2ರಂದು ದೈಹಿಕ ಸಾಮರ್ಥ್ಯ ಪರೀಕ್ಷೆ ಇದ್ದು ಆ ಬಳಿಕವಷ್ಟೇ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂದು ವೆಟ್ಟೋರಿ ಮಾಹಿತಿ ನೀಡಿದರು.

ಪ್ರಸ್ತುತ ಆರ್ ಸಿಬಿ ತಂಡದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡುವ ಆಟಗಾರರಿದ್ದಾರೆ. ಆರ್ ಸಿಬಿ ಬೆಂಚ್ ಸ್ಟ್ರೆಂಥ್ ಬಲಿಷ್ಚವಾಗಿದ್ದು, ಯಾವುದೇ ರೀತಿಯ ಸ್ಪರ್ಧೆಗೂ ತಂಡ ಸಿದ್ಧವಾಗಿದೆ. ಮಿಚೆಲ್ ಸ್ಟ್ರಾಕ್  ಅನುಪಸ್ಥಿತಿಯಲ್ಲಿ ಕೈಲ್ ಮೈಲ್ಸ್ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ ಎಂದು ವೆಟ್ಟೋರಿ ಅಭಿಪ್ರಾಯಪಟ್ಟರು.

ಸರ್ಫರಾಜ್ ಖಾನ್ ಮತ್ತು ಮನ್ ದೀಪ್ ರಂತಹ ಉದಯೋನ್ಮುಖ ಬ್ಯಾಟ್ಸಮನ್ ಗಳು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹಾತೊರೆಯುತ್ತಿದ್ದು, ಬೌಲಿಂಗ್ ವಿಭಾಗ ಕೂಡ ಸಾಕಷ್ಟು ಪ್ರಬಲವಾಗಿದೆ ಎಂದು ಹೇಳಿದರು. ರಾಹುಲ್ ಕುರಿತು  ಮಾತನಾಡಿದ ವೆಟ್ಟೋರಿ ನನ್ನ ಪ್ರಕಾರ ಭುಜದ ಗಾಯ ದೊಡ್ಡ ಸಮಸ್ಯೆ ಏನೂ ಅಲ್ಲ. ಒಂದಿಷ್ಟು ವಿಶ್ರಾಂತಿ ನೀಡಿದರೆ ಖಂಡಿತಾ ರಾಹುಲ್ ಕಣಕ್ಕಿಳಿಯಲು ಫಿಟ್ ಆಗುತ್ತಾರೆ. ರಾಹುಲ್ ಗೆ ಮಾನಸಿಕ ವಿಶ್ರಾಂತಿ ಮುಖ್ಯ ಎಂದು  ವೆಟ್ಟೋರಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com