ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಆಘಾತ: ಟಿ20 ಸರಣಿಯಿಂದ ಬುಮ್ರಾ, ವಾಷಿಂಗ್ಟನ್ ಸುಂದರ್ ಔಟ್!

ಟೀಂ ಇಂಡಿಯಾದ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಕೊಹ್ಲಿ ಪಡೆಗೆ ಆಘಾತ ಎದುರಾಗಿದ್ದು, ತಂಡ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಟೀಂ ಇಂಡಿಯಾದ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಕೊಹ್ಲಿ ಪಡೆಗೆ ಆಘಾತ ಎದುರಾಗಿದ್ದು, ತಂಡ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಫುಟ್ಬಾಲ್ ಆಡುವ ವೇಳೆ ಇಬ್ಬರೂ ಆಟಗಾರರು ಗಾಯಮಾಡಿಕೊಂಡಿದ್ದು, ಜಸ್ ಪ್ರೀತ್ ಬುಮ್ರಾ ಕೈ ಬೆರಳು ಮುರಿದಿದ್ದು. ವಾಷಿಂಗ್ಟನ್ ಸುಂದರ್ ಅವರ ಕಾಲಿನ ಹಿಮ್ಮಡಿಗೆ ನೋವಾಗಿದೆ. ಹೀಗಾಗಿ ಈ ಇಬ್ಬರೂ ಆಟಗಾರರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಲಿದ್ದಾರೆ. ಪ್ರಸ್ತುತ ಬುಮ್ರಾ ಇಂಗ್ಲೆಂಡ್ ನಿಂದ ಭಾರತಕ್ಕೆ ವಾಪಸ್ ಆಗಿದ್ದು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಹೊತ್ತಿಗೆ ಚೇತರಿಸಿಕೊಂಡು ಟೀಂ ಇಂಡಿಯಾ ಸೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ವೈದ್ಯರು ಬುಮ್ರಾಗೆ ಕಡ್ಡಾಯ 3 ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬುಮ್ರಾ ಮತ್ತು ಸುಂದರ್ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದ್ದು, ಫಾರ್ಮ್ ನಲ್ಲಿರುವ ಇಬ್ಬರು ಆಟಗಾರರ ಜಾಗ ತುಂಬಲು ಪರ್ಯಾಯ ಆಟಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಪ್ರಸ್ತುತ ಭಾರತ ಎ ತಂಡದ ಪರವಾಗಿ ಇಂಗ್ಲೆಂಡ್ ಎ ತಂಡದ ವಿರುದ್ಧ ಸರಣಿಯಲ್ಲಿ ಆಡುತ್ತಿರುವ ಆಟಗಾರರನ್ನೇ ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಶಾರ್ದೂಲ್ ಠಾಕೂರ್ ಅಥವಾ ರಾಜಸ್ಥಾನ ಮೂಲದ ಉದಯೋನ್ಮುಖ ಆಟಗಾರ ದೀಪಕ್ ಚಾಹರ್ ಅವರು ಬುಮ್ರಾ ಅವರ ಸ್ಥಾನಕ್ಕೆ, ಅಕ್ಸರ್ ಪಟೇಲ್ ಸುಂದರ್ ಸ್ಥಾನ ತುಂಬುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂರು ಬೌಲರ್ ಗಳು ಪ್ರಸ್ತುತ ಇಂಗ್ಲೆಂಡ್ ನಲ್ಲಿದ್ದು, ಭಾರತ ಎ ತಂಡದ ಪರ ಆಡುತ್ತಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 1ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com