ನಿಡಹಾಸ್ ಟ್ರೋಫಿ ಫೈನಲ್: ರೋಚಕ ಪಂದ್ಯದ ಹೀರೋ ಕಾರ್ತಿಕ್ ಸೇರಿ ಭಾರತ ತಂಡದಿಂದ ಹಲವು ದಾಖಲೆಗಳು!

ಬಾಂಗ್ಲಾದೇಶದ ಪರ ವಾಲಿದ್ದ ವಿಜಯಲಕ್ಷ್ಮಿಯನ್ನು ಮತ್ತೆ ಅಂತಿಮ ಓವರ್ ನಲ್ಲಿ ತಮ್ಮತ್ತ ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ನಿಡಹಾಸ್ ಟ್ರೋಫಿ ತಂದಿತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ:  ಬಾಂಗ್ಲಾದೇಶದ ಪರ ವಾಲಿದ್ದ ವಿಜಯಲಕ್ಷ್ಮಿಯನ್ನು ಮತ್ತೆ ಅಂತಿಮ ಓವರ್ ನಲ್ಲಿ ತಮ್ಮತ್ತ ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ನಿಡಹಾಸ್ ಟ್ರೋಫಿ ತಂದಿತ್ತಿದ್ದಾರೆ.
ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ  ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ನಿಡಹಾಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಬಾಂಗ್ಲಾದೇಶ ನೀಡಿದ್ದ 167 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಅಂತಿಮ ಎಸೆತದಲ್ಲಿ ಐದು ರನ್ ಗಳ ಅವಶ್ಯಕತೆ ಇತ್ತು. ಆಗ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ರೋಚಕ ಜಯ ದಾಖಲಿಸಿದರು.
ಇನ್ನು ಪಂದ್ಯ ಬಹುತೇಕ ಬಾಂಗ್ಲಾಪರ ವಾಲಿದ್ದ ಸಂದರ್ಭದಲ್ಲಿ ಅಂತಿಮ ಕ್ಷಣದಲ್ಲಿ ಕ್ರೀಸ್ ಗೆ ಆಗಮಿಸಿದ ದಿನೇಶ್ ಕಾರ್ತಿಕ್ ನಿಜಕ್ಕೂ ಮ್ಯಾಜಿಕ್ ಮಾಡಿ ತಂಡಕ್ಕೆ ಅಂತಿಮ ಎಸೆತದಲ್ಲಿ ಜಯ ತಂದಿತ್ತರು. ಆ ಮೂಲಕ ಮತ್ತೊಂದು ಸರಣಿ ಟೀಂ ಇಂಡಿಯಾ ಪಾಲಾಯಿತು. ಇನ್ನು ಈ ರೋಚಕ ಪಂದ್ಯದಲ್ಲಿ ಫೈನಲ್ ಹೀರೋ ಕಾರ್ತಿಕ್ ಸೇರಿದಂತೆ ತಂಡದ ಹಲವು ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸತತ 3 ಟಿ20 ಫೈನಲ್ ಗೆದ್ದ ಭಾರತ
ನಿಡಹಾಸ್ ತ್ರಿಕೋನ ಟಿ20 ಸರಣಿ ಪೈನಲ್ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸತತ ಮೂರು ಟಿ20 ಫೈನಲ್ ಗಳನ್ನು ಗೆದ್ದ ಮೊದಲ ತಂಡವಾಗಿದೆ. ಭಾರತಕ್ಕೆ ಇದು ಮೂರನೇ ಸರಣಿ ಜಯವಾಗಿದ್ದು, ವಿಶ್ವದ ಯಾವುದೇ ತಂಡ ಕೂಡ ಮೂರು ಟಿ20 ಸರಣಿ ಫೈನಲ್ ಪಂದ್ಯಗಳನ್ನು ಗೆದ್ದಿಲ್ಲ. 
ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ರನ್ ಬೇಕಿದ್ದಾಗ ಕೊನೆಯ ಎಸೆತದಲ್ಲಿ ಸಿಕ್ಕರ್ ಸಿಡಿಸುವ ಮೂಲಕ ಕಾರ್ತಿಕ್ ಭಾರತಕ್ಕೆ ಜಯ ತಂದಿತ್ತರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೂ ಕಾರ್ತಿಕ್ ಭಾಜನರಾದರು.
ಟಿ20ಯಲ್ಲಿ 7000 ರನ್ ಪೂರೈಸಿದ ಮೂರನೇ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾದರು. ಅಷ್ಟು ಮಾತ್ರವಲ್ಲ ಟಿ20 ಪೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ರೋಹಿತ್ ಭಾಜನರಾದರು.  
ಅತೀ ಚಿಕ್ಕ ವಯಸ್ಸಿನಲ್ಲಿ ಲಂಕಾ ನೆಲದಲ್ಲಿ ಟಿ20 ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಕೀರ್ತಿ ಭಾರತದ ವಾಷಿಂಗ್ಟನ್ ಸುಂದರ್ ಪಾಲಾಯಿತು. ನಿಡಹಾಸ್ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ 8 ವಿಕೆಟ್ ಗಳನ್ನು ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಹಿಂದೆ ಈ ದಾಖಲೆ ಶ್ರೀಲಂಕಾದ ಅಖಿಲ ಧನಂಜಯ ಅವರ ಹೆಸರಲ್ಲಿತ್ತು.
ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರಿಕೆ. ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಆಡಿದ ಕೊನೆಯ 8 ಪಂದ್ಯಗಳಲ್ಲಿ ಭಾರತಕ್ಕೆ ಜಯ.  
ಕೇವಲ 13 ಇನ್ನಿಂಗ್ಸ್ ಗಳಲ್ಲಿ 500 ಪೂರೈಕೆ ಮಾಡಿದೆ ಕೆಎಲ್ ರಾಹುಲ್,  ಟಿ20ಯಲ್ಲಿ ಕೊಹ್ಲಿ ಅರ್ಧಶತಕ ದಾಖಲೆ ಹಿಂಬಾಲಿಸುತ್ತಿರುವ ರೋಹಿತ್ ಶರ್ಮಾ, ಒಟ್ಟು 16 ಅರ್ಧಶತಕ. 18 ಅರ್ಧಶತಕ ಸಿಡಿಸಿರುವ ವಿರಾಟ್ ಕೊಹ್ಲಿ.
ಟಿ20ಯಲ್ಲಿ ಎರಡನೇ ಅತೀ ಹೆಚ್ಚು ಗೆಲುವ ದಾಖಲಿಸಿರುವ ಭಾರತ. ನಿಡಹಾಸ್ ಸರಣಿ ಫೈನಲ್ ಸೇರಿ ಭಾರತಕ್ಕೆ ಒಟ್ಟು 61 ಗೆಲುವು, ಪಟ್ಟಿಯಲ್ಲಿ 74 ಗೆಲುವುಗಳ ಮೂಲಕ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ.
ಟಿ20 ಫೈನಲ್ ಪಂದ್ಯದಸ್ಸಿ ಅತೀ ಹೆಚ್ಚು ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆನ್ನು ಹತ್ತಿದ ಭಾರತ. ಈ ಹಿಂದೆ ಕೋಲ್ಕತಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 156 ರನ್ ಗಳ ಗುರಿ ಬೆನ್ನು ಹತ್ತಿ ಗೆಲುವು ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ಭಾರತ 167 ರನ್ ಗಳ ಗುರಿ ಬೆನ್ನು ಹತ್ತಿ ಮುರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com