ಇಡೀ ಪಂದ್ಯದ ಗತಿಯನ್ನೇ ಬದಲಿಸಿದ್ದ ಕೆಲವೇ ನಿಮಿಷಗಳ ದಿನೇಶ್ ಕಾರ್ತಿಕ್ ಆಟ!

ನಿಡಹಾಸ್ ಟ್ರೋಫಿ ಫೈನಲ್ ಪಂದ್ಯದ ಗೆಲುವಿನ ಮೂಲಕ ಬಾಂಗ್ಲಾ ಹುಲಿಗಳ ಬಾಯಿಂದ ಭಾರತ ಮತ್ತೊಂದು ಗೆಲುವನ್ನು ಕಸಿದಿದ್ದು, ಈ ಬಾರಿಯೂ ಬಾಂಗ್ಲಾದೇಶಕ್ಕೆ ಭಾರತದ ವಿರುದ್ಧದ ಜಯ ಮರೀಚಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ನಿಡಹಾಸ್ ಟ್ರೋಫಿ ಫೈನಲ್ ಪಂದ್ಯದ ಗೆಲುವಿನ ಮೂಲಕ ಬಾಂಗ್ಲಾ ಹುಲಿಗಳ ಬಾಯಿಂದ ಭಾರತ ಮತ್ತೊಂದು ಗೆಲುವನ್ನು ಕಸಿದಿದ್ದು, ಈ ಬಾರಿಯೂ ಬಾಂಗ್ಲಾದೇಶಕ್ಕೆ ಭಾರತದ ವಿರುದ್ಧದ ಜಯ ಮರೀಚಿಕೆಯಾಗಿದೆ.
ಪಂದ್ಯದ 18ನೇ ಓವರ್ ನ ಓವರ್ ನ ವರೆಗೂ ಪಂದ್ಯ ಬಾಂಗ್ಲಾದೇಶದ ಪರವಾಗಿತ್ತು. ಆದರಲ್ಲೂ ಉತ್ತಮವಾಗಿ ಆಡುತ್ತಿದ್ದ ಮನೀಷ್ ಪಾಂಡೆ ಔಟ್ ಆಗುತ್ತಿದ್ದಂತೆಯೇ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಬಾಂಗ್ಲಾದೇಶ ಅಭಿಮಾನಿಗಳು ಸಂಭ್ರಮಪಡುತ್ತಿದ್ದರು. ಆದರೆ ಬಾಂಗ್ಲಾ ಅಭಿಮಾನಿಗಳ ಸಂಭ್ರಮ ಅಷ್ಟಕ್ಕೇ ಸಿಮಿತವಾಗಿತ್ತು. ಏಕೆಂದರೆ ಪಾಂಡೆ ಔಟ್ ಆದ ಬಳಿಕ ಕ್ರೀಸ್ ಗೆ ಆಗಮಿಸಿದ್ದ ದಿನೇಶ್ ಕಾರ್ತಿಕ್ ಅಕ್ಷರಶಃ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್ ಆಗಿ ಕಂಡರು.
ಪಂದ್ಯ ಮುಕ್ತಾಯವಾಗಲು ಇನ್ನು ಕೆಲವೇ ಕ್ಷಣಗಳು ಬಾಕಿ ಇರುವಂತೆ ಕ್ರೀಸ್ ಗೆ ಆಗಮಿಸಿದ್ದ ಕಾರ್ತಿಕ್ ಅಕ್ಷರಶಃ ಮೈದಾನದಲ್ಲಿ ರೋಚಕತೆ ಸೃಷ್ಟಿ ಮಾಡಿದ್ದರು. ಇದಕ್ಕೂ ಮೊದಲು 18ನೇ ಓವರ್ ಎಸೆದಿದ್ದ ಮುಸ್ತಫಿಜುರ್ ಭಾರತದಿಂದ ಗೆಲುವನ್ನು ಕಸಿಯುವ ಪ್ರಯತ್ನ ಮಾಡಿದ್ದರು. ಕೊನೆಯ 3 ಓವರ್ ಗಳಲ್ಲಿ ಭಾರತಕ್ಕೆ ಗೆಲಲ್ಲು 35 ರನ್ ಗಳ ಅವಶ್ಯಕತೆ ಇತ್ತು. ಆಗ 18ನೇ ಓವರ್ ಎಸೆದಿದ್ದ ಮುಸ್ತಫಿಜುರ್ ಆ ಓವರ್ ನಲ್ಲಿ ಕೇವಲ 1 ರನ್ ನೀಡಿದ್ದು ಮಾತ್ರವಲ್ಲದೇ ಉತ್ತಮವಾಗಿ ಆಡುತ್ತಿದ್ದ ಮನೀಷ್ ಪಾಂಡೆ ಅವರ ವಿಕೆಟ್ ಕೂಡ ಕಬಳಿಸಿದ್ದರು. 
ಹೀಗಾಗಿ ಭಾರತ ಸೋಲುವುದು ಬಹುತೇಕ ಖಚಿತ ಎಂದು ಭಾವಿಸಲಾಗಿದ್ದು. ಆಗ ಕ್ರೀಸ್ ಗೆ ಬಂದ ಕಾರ್ತಿಕ್ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ ಮೈದಾನದಲ್ಲಿ ರೋಮಾಂಚನಕಾರಿ ಅನುಭವ ನೀಡಿದರು. ಬಳಿಕ ರುಬೆಲ್ ಹುಸೇನ್ ಎಸೆದ ಎರಡನೇ ಎಸೆತವನ್ನು ಬೌಂಡರಿ ತಳ್ಳಿದ ಕಾರ್ತಿಕ್, ಮೂರನೇ ಎಸೆತವನ್ನು ಮತ್ತೆ ಸಿಕ್ಸರ್ ಗೆ ಎತ್ತಿದರು. ಓವರ್ ನ ಅಂತಿಮ ಎಸೆತದಲ್ಲೂ ಬೌಂಡರಿ ಗಿಟ್ಟಿಸಿದ ಕಾರ್ತಿಕ್ ಭಾರತೀಯ ಅಭಿಮಾನಿಗಳಲ್ಲಿ ಗೆಲುವಿನ ಆಶಾಭಾವನೆ ಚಿಗುರಿಸಿದರು. 
ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 11 ರನ್ ಗಳ ಅವಶ್ಯಕತೆ ಇದ್ದಾಗ, ಬ್ಯಾಟಿಂಗ್ ಮಾಡುತ್ತಿದ್ದ ವಿಜಯ್ ಶಂಕರ್ 1 ರನ್ ಗಿಟ್ಟಿಸಿ ಕಾರ್ತಿಕ್ ಗೆ ಅವಕಾಶ ಮಾಡಿಕೊಟ್ಟರು. ಬಳಿಕದ ಎಸೆತದಲ್ಲಿ ಕಾರ್ತಿಕ್ ಕೂಡ ಸಿಂಗಲ್ ರನ್ ಪಡೆದರು. ಆದರೆ ಮುಂದಿನ ಎಸೆತದಲ್ಲಿ ವಿಜಯ್ ಶಂಕರ್ ಸೌಮ್ಯ ಸರ್ಕಾರ್ ಬೌಲಿಂಗ್ ನಲ್ಲಿ ಹಸನ್ ಗೆ ಕ್ಯಾಚಿತ್ತು ಹೊರ ನಡೆದರು. ಆಗ ತಂಡಕ್ಕೆ ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್ ಗಳ ಅವಶ್ಯಕತೆ ಇತ್ತು. ಕ್ರೀಸ್ ಗೆ ಬಂದಿದ್ದ ಕಾರ್ತಿಕ್ ಬಹುಶಃ ಬೌಂಡರಿಗೆ ಪ್ರಯತ್ನಿಸಬಹುದು ಎಂದೇ ಎಲ್ಲರೂ ಭಾವಿಸಿದ್ದರು. ತಮ್ಮತ್ತ ಬಂದ ಎಸೆತವನ್ನು ಕಾರ್ತಿಕ್ ಎಕ್ಸ್ ಟ್ರಾ ಕವರ್ ನತ್ತ ಭಾರಿಸಿದ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಜಯ ತಂದಿತ್ತರು. ಆ ಮೂಲಕ ಮತ್ತೊಮ್ಮೆ ಬಾಂಗ್ಲಾದೇಶದ ಕೈಯಿಂದ ಭಾರತ ಗೆಲುವನ್ನು ಕಸಿಯಿತು.
ಸರಣಿಯುದ್ದಕ್ಕೂ ಉತ್ತ ಪ್ರದರ್ಶನ ನೀಡಿ. ಲಂಕಾ ವಿರುದ್ಧ ಆಕ್ರಮಣಕಾರಿ ಆಟವಾಡಿದ್ದ ಬಾಂಗ್ಲಾದೇಶಕ್ಕೆ ಈ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಗೆಲುವಿನ ಆಸೆಯಲ್ಲಿದ್ದ ಬಾಂಗ್ಲಾದೇಶ ಆಟಗಾರರು ಸೋಲಿನಿಂದಾಗಿ ಮೈದಾನದಲ್ಲೇ ಭಾವೋದ್ವೇಗಕ್ಕೆ ತುತ್ತಾದರು. ಇತ್ತ ಪೆವಿಯನ್ ನಲ್ಲಿ ಇದೇ ಕ್ಷಣಕ್ಕಾಗಿ ಕಾದು ಕುಳಿತಿದ್ದ ಲಂಕಾ ಅಭಿಮಾನಿಗಳು ಮಾತ್ರ ನಾಗಿನ್ ಡ್ಯಾನ್ಸ್ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com