ಸರಣಿ ಗೆದ್ದಿದ್ದು ಭಾರತ ಆದ್ರೂ, ಶ್ರೀಲಂಕಾ ಅಭಿಮಾನಿಗಳಿಗೆ ಖುಷಿಯಾಗಿದ್ದು ಯಾಕೆ?

ನಿಡಹಾಸ್ ಟ್ರೋಫಿ ತ್ರಿಕೋನ ಟಿ20 ಸರಣಿ ಫೈನಲ್ ಪಂದ್ಯವನ್ನು ಭಾರತ ವರ್ಸಸ್ ಬಾಂಗ್ಲಾದೇಶ ಎನ್ನುವುದಕ್ಕಿಂತ.. ಬಾಂಗ್ಲಾದೇಶ ವರ್ಸಸ್ ಶ್ರೀಲಂಕಾ ಅಭಿಮಾನಿಗಳು ಎನ್ನಬಹುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ನಿಡಹಾಸ್ ಟ್ರೋಫಿ ತ್ರಿಕೋನ ಟಿ20 ಸರಣಿ ಫೈನಲ್ ಪಂದ್ಯವನ್ನು ಭಾರತ ವರ್ಸಸ್ ಬಾಂಗ್ಲಾದೇಶ ಎನ್ನುವುದಕ್ಕಿಂತ.. ಬಾಂಗ್ಲಾದೇಶ ವರ್ಸಸ್ ಶ್ರೀಲಂಕಾ ಅಭಿಮಾನಿಗಳು ಎನ್ನಬಹುದು.
ಏಕೆಂದರೆ ನಿನ್ನೆ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ರೋಚಕ ಜಯ ಸಾಧಿಸಿತು. ಅತ್ತ ಭಾರತ ಜಯ ಸಾಧಿಸುತ್ತಿದ್ದಂತೆಯೇ ಇತ್ತ ಪೆವಿಲಿಯನ್ ನಲ್ಲಿ ಕುಳಿತಿದ್ದ ಶ್ರೀಲಂಕಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಅರೆ ಶ್ರೀಲಂಕಾ ತಂಡ ಫೈನಲ್ ಪ್ರವೇಶ ಮಾಡದೇ ಇದ್ದರೂ ಲಂಕಾ ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಲಂಕಾ ಅಭಿಮಾನಿಗಳಿಗೆ ಭಾರತ ಗೆಲ್ಲಬೇಕು ಎಂಬ ಆಶಯಕ್ಕಿಂತ ಬಾಂಗ್ಲಾದೇಶ ಸೋಲಬೇಕು ಎನ್ನುವ ಆಸೆಯೇ ಹೆಚ್ಚಾಗಿದ್ದಂತಿತ್ತು.
ಬಾಂಗ್ಲಾದೇಶದ ವಿಕೆಟ್ ಬಿದ್ದಾಗ, ಅಥವಾ ಬಾಂಗ್ಲಾ ವಿರುದ್ಧ ಭಾರತೀಯ ಬ್ಯಾಟ್ಸಮನ್ ಬೌಂಡರಿ ಸಿಕ್ಸರ್ ಸಿಡಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಲಂಕಾ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಅಲ್ಲದೆ ಬಾಂಗ್ಲಾ ಕ್ರಿಕೆಟ್ ನ ಟ್ರೇಡ್ ಮಾರ್ಕ್ ನಾಗಿನ್ ಡ್ಯಾನ್ಸ್ ಮಾಡುವ ಮೂಲಕ ಅವರಿಗೆ ತಿರುಗೇಟು ನೀಡಿದ್ದರು. ಅಲ್ಲದೇ ಕೊನೆಯ ಎಸೆತದಲ್ಲಿ ಭಾರತದ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಾಗಲಂತೂ ಲಂಕಾ ಅಭಿಮಾನಿಗಳ ಸಂಭ್ಪಮ ಮುಗಿಲು ಮುಟ್ಟಿತ್ತು. ಕುಳಿತ ಜಾಗದಿಂದಲೇ ನಾಗಿನ್ ಡ್ಯಾನ್ಸ್ ಆರಂಭಿಸಿದ್ದರು.
ಲಂಕಾ ಅಭಿಮಾನಿಗಳ ಈ ವರ್ತನೆ ಕಾರಣವಾದರೂ ಏನು?
ಲಂಕಾ ತಂಡ ಗೆಲ್ಲದೇ ಇದ್ದರೂ ಬಾಂಗ್ಲಾಜದೇಶ ವಿರುದ್ಧ ಲಂಕಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣ ಕಳೆದ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಬಾಂಗ್ಲಾ ಕ್ರಿಕೆಟಿಗರು ತೋರಿದ್ದ ಅನುಚಿತ ವರ್ತನೆ, ಹಾಗೂ ಅಪಹಾಸ್ಯ ಮಾಡಿದ್ದ ರೀತಿ. ಹೌದು ಶ್ರೀಲಂಕಾ ವಿರುದ್ಧದ ಪಂದ್ಯದ ಅಂತಿಮ ಕ್ಷಣ ಕೆಲ ಗೊಂದಲಗಳಿಗೆ ಕಾರಣವಾಗಿತ್ತು. ಈ ವೇಳೆ ಬಾಂಗ್ಲಾ ಕ್ರಿಕೆಟಿಗರು ಲಂಕಾ ಆಟಗಾರರ ವಿರುದ್ಧ ಅನುಚಿತ ವರ್ಚನೆ ತೋರಿದ್ದರು. ಅಲ್ಲದೆ ಪಂದ್ಯ ಗೆದ್ದ ಬಳಿಕ ಮೈದಾನದಲ್ಲೇ ಸಾಮೂಹಿಕ ನಾಗಿನ್ ಡ್ಯಾನ್ಸ್ ಮಾಡಿ ಲಂಕಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೇ ಕಾರಣಕ್ಕೆ ನಿನ್ನೆ ಫೈನಲ್ ಪಂದ್ಯದ ವೇಳೆ ಲಂಕಾ ಅಭಿಮಾನಿಗಳು ಭಾರತ ಬೆಂಬಲಕ್ಕೆ ನಿಂತಿದ್ದರು. ಲಂಕಾ ಅಭಿಮಾನಿಗಳು ತಮ್ಮ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದರು. 
ಲಂಕಾ ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಟೀಂ ಇಂಡಿಯಾ ಆಟಗಾರರು ಕ್ರೀಡಾಂಗಣದಲ್ಲಿ ಲಂಕಾದ ಧ್ವಜದೊಂದಿಗೆ ಹೆಜ್ಜೆ ಹಾಕುವ ಮೂಲಕ ಲಂಕಾ ಅಭಿಮಾನಿಗಳಿಗೆ ಮತ್ತಷ್ಟು ಸಂತಸ ತಂದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯ ಮುಕ್ತಾಯದ ಬಳಿಕ ಶ್ರೀಲಂಕಾ ಅಭಿಮಾನಿಗಳಿಗೆ ಧನ್ಯವಾದ ಸೂಚಿಸುವ ವೇಳೆ ಅವರ ಪಕ್ಕದಲ್ಲಿಯೇ ಲಂಕಾ ಧ್ವಜ ಹಾರಾಡುತ್ತಿತ್ತು.  ಅಂತೆಯೇ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಯೋರ್ವ ಭಾರತದ ಅಭಿಮಾನಿಯನ್ನು ಎತ್ತಿಕೊಂಡು ಸಂಭ್ರಮಿಸಿದ್ದು, ಅಪೂರ್ವ ಕ್ಷಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com