ಜೋಧ್ ಪುರ(ರಾಜಸ್ಥಾನ): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಪ.ಜಾತಿ/ಪ.ಪಂಗಡಗಳ ವಿಶೇಷ ನ್ಯಾಯಾಲಯ ಪೋಲೀಸರಿಗೆ ಆದೇಶ ನಿಡಿದೆ.
ಕ್ರಿಕೆಟಿಗ ಪಾಂಡ್ಯ ಡಿಸೆಂಬರ್ 26, 2017 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹಾ ಕಮೆಂಟ್ ಒಂದನ್ನು ಹಾಕಿದ್ದರು. ಇದು ತಮ್ಮ ಸಮುದಾಯದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ಅರ್ಜಿದಾರರಾದ ಡಿ.ಆರ್. ಮೇಘವಾಲ್ ದೂರಿನಲ್ಲಿ ಹೇಳಿದ್ದಾರೆ.
"ಯಾವ ಅಂಬೇಡ್ಕರ್??? ಅಡ್ಡ ಕಾನೂನುಗಳಿರುವ ಸಂವಿಧಾನವನ್ನು ರಚಿಸಿದವರೊ ಅಥವಾ ದೇಶದ ತುಂಬೆಲ್ಲಾ ಮೀಸಲಾತಿ ಎನ್ನುವ ರೋಗ ಹರಡಲು ಕಾರಣರಾದವರೆ?" ಎಂದು ಪಾಂಡ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿನ ರಾಷ್ಟ್ರೀಯ ಭೀಮ್ ಸೇನೆಯ ಸದಸ್ಯರಾಗಿರುವ ಮೇಘವಾಲ್ ಕ್ರಿಕೆಟ್ ಆಟಗಾರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.