ಚೆಂಡು ವಿರೂಪ ಪ್ರಕರಣ: ಸ್ಟೀವ್ ಸ್ಮಿತ್, ವಾರ್ನರ್ ಗೆ 1 ವರ್ಷ; ಬ್ಯಾಂಕ್ರಫ್ಟ್ ಗೆ 9 ತಿಂಗಳ ನಿಷೇಧ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ ಹೇರಲಾಗಿದೆ.
ಈ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯಲ್ಲಿ ಇಂದು ನಡೆದ ಸಭೆಯಲ್ಲಿ ಕಠಿಣ ಶಿಸ್ತುಕ್ರಮ ಜರುಗಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಆಸಿಸ್ ನಾಯಕ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ ಹೇರಲಾಗಿದೆ. ಅಂತೆಯೇ ಚೆಂಡು ವಿರೂಪಗೊಳಿಸಿದ ಬ್ಯಾಂಕ್ರಫ್ಟ್ ಗೂ 9 ತಿಂಗಳ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ. 
ಮೂಲಗಳ ಪ್ರಕಾರ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮಾಜಿ ನಾಯಕನ ವಿರುದ್ಧ ಕೆಂಡಾಮಂಡಲವಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಗೆ ಆಜೀವ ನಿಷೇಧ ಹೇರಲು ಮುಂದಾಗಿತ್ತಾದರೂ, ಹಿರಿಯ ಮಾಜಿ ಕ್ರಿಕೆಟಿಗರ ಸಲಹೆ ಮೇರೆಗೆ ಸ್ಮಿತ್ ಗೆ ಒಂದು ವರ್ಷ ನಿಷೇಧ ಹೇರಲು ನಿರ್ಧರಿಸಿದೆ. ಅಲ್ಲದೆ ಉಪನಾಯಕ ಡೇವಿಡ್ ವಾರ್ನರ್ ಗೂ ಇದೇ ಶಿಕ್ಷೆ ನೀಡಿದೆ. 
ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ನಿರ್ಧರಿಸಿತ್ತು. ಸಿಎ ಸೌಹಾರ್ದ ಘಟಕದ ಮುಖ್ಯಸ್ಥ ಇಯಾನ್ ರಾಯ್‌ ಮತ್ತು ಹೈ ಪರ್ಫಾರ್ಮೆನ್ಸ್‌ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಸೋಮವಾರ ಕೇಪ್‌ಟೌನ್‌ ತಲುಪಿದ್ದ ಇವರು, ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಂತೆಯೇ ಅಧಿಕಾರಿಗಳು ನಾಲ್ಕನೇ ಟೆಸ್ಟ್‌ಗಾಗಿ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ಮಾಹಿತಿ ಕಲೆ ಹಾಕಿ, ಕ್ರಿಕೆಟ್ ಆಸ್ಟ್ರೇಲಿಯಾಗೆ ವರದಿ ಕೂಡ ನೀಡಿದ್ದರು. 
ಈ ವರದಿಯನ್ನಾಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಆಸಿಸ್ ನಾಯಕ ಸ್ಮಿತ್ ಹಾಗೂ ಉಪ ನಾಯಕ ವಾರ್ನರ್ ಗೆ 12 ತಿಂಗಳ ಕ್ರಿಕೆಟ್ ನಿಷೇಧ ಹೇರಿದೆ. 
ಈ ಹಿಂದೆ ಇದೇ ಪ್ರಕರಣ ಸಂಬಂಧ ಕ್ರಮ ಕೈಗೊಂಡಿದ್ದ ಐಸಿಸಿ, ಸ್ಮಿತ್ ಅವರಿಗೆ ಒಂದು ಪಂದ್ಯದ ನಿಷೇಧ, ಪಂದ್ಯದ ಶೇ.100ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿತ್ತು. ಅಂತೆಯೇ ಉಪನಾಯಕ ವಾರ್ನರ್ ಗೆ ಪಂದ್ಯ ಸಂಭಾವನೆಯ ಶೇ.75ರಷ್ಟು ಮತ್ತು ಬ್ಯಾಂಕ್ರಾಫ್ಟ್ ಗೆ ಸಂಭಾವನೆಯ ಶೇ.75ರಷ್ಚು ದಂಡ ಮತ್ತು ಮೂರು ಡಿಮೆರಿಟ್ ಅಂಕ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com