ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಸ್ಟ್ರೇಲಿಯಾ ತಂಡದ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಆಯ್ಕೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗೆ ಜಸ್ಟಿನ್ ಲ್ಯಾಂಗರ್ ರನ್ನು ಆಯ್ಕೆ ಮಾಡಲಾಗಿದೆ.
Published on
ಕ್ಯಾನ್ ಬೆರ್ರಾ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗೆ ಜಸ್ಟಿನ್ ಲ್ಯಾಂಗರ್ ರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮಾಜಿ ಕೋಚ್ ಡರೇನ್ ಲೆಹ್ಮನ್ ಅವರ ರಾಜಿನಾಮೆಯಿಂದ ತೆರವಾಗಿರುವ ಪ್ರಧಾನ ಕೋಚ್ ಹುದ್ದೆಗೆ ಆಸಿಸ್ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಲ್ಯಾಂಗರ್ ಆಯ್ಕೆ ಉತ್ತಮ ನಿರ್ಣಯ ಎಂದು ನಾವು ಭಾವಿಸಿದ್ದೇವೆ. ಲ್ಯಾಂಗರ್ ಅವರ ಇತ್ತೀಚೆಗಿನ ಕೋಚಿಂಗ್  ಮತ್ತು ಆಟಾಗಾರರ ಪ್ರದರ್ಶನ ಮಂಡಳಿಗೆ ತೃಪ್ತಿ ತಂದಿದೆ. ಹೀಗಾಗಿ ಅವರ ಆಯ್ಕೆ ಸೂಕ್ತವಾದದ್ದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯಕಾರಿ ನಿರ್ದೇಶಕ ಜೇಮ್ಸ್ ಸದರ್ಲೆಂಡ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಸುಮಾರು 2 ದಶಕಗಳ ಕಾಲ ಸುಧೀರ್ಘವಾಗಿ ಸೇವೆ ಸಲ್ಲಿಸಿದ್ದ ಲ್ಯಾಂಗರ್, ಆರಂಭಿಕ ಬ್ಯಾಟ್ಸಮನ್ ಆಗಿ ಕಣಕ್ಕಿಳಿಯುತ್ತಿದ್ದರು. ಏಕದಿನ, ಟೆಸ್ಟ್ ಮತ್ತು ಟಿ20 ಮೂರು ಮಾದರಿಯ ಕ್ರಿಕೆಟ್ ನಲ್ಲಿ ಲ್ಯಾಂಗರ್ ಅನುಭವ ಹೊಂದಿದ್ದಾರೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ಲ್ಯಾಂಗರ್ ಆಸಿಸ್ ತಂಡದ ಪ್ರಧಾನ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. 
ಇನ್ನು ಕೋಚ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಲ್ಯಾಂಗರ್, ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ. ಉತ್ತಮ ಪ್ರದರ್ಶನ ಮತ್ತು ಉತ್ತಮ ಆಟಾಗಾರರನ್ನು ಕಟ್ಟಬೇಕಿದ್ದು, 2019ರ ವಿಶ್ವಕಪ್ ಟೂರ್ನಿಗೆ ತಂಡ ಸಜ್ಜುಗೊಳಿಸುವುದು ನನ್ನ ಮೊದಲ ಗುರಿಯಾಗಿದೆ ಎಂದು ಹೇಳಿದರು. 
ಇನ್ನು ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌ ಹಾಗೂ ಉಪನಾಯಕರಾಗಿದ್ದ ಡೇವಿಡ್‌ ವಾರ್ನರ್‌ ಅವರು ಚೆಂಡು ವಿರೂಪ ಪ್ರಕರಣದಿಂದಾಗಿ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ. ಈ ಪ್ರಕರಣದ ನಂತರ ತಂಡದ ಕೋಚ್‌ ಹುದ್ದೆಗೆ ಡೇವಿಡ್‌ ಲೆಹ್ಮನ್‌ ಅವರು ರಾಜೀನಾಮೆ ನೀಡಿದ್ದರು. ಪ್ರಸ್ತುತ ಟೆಸ್ಟ್‌ ತಂಡದ ನಾಯಕನಾಗಿ ಟಿಮ್‌ ಪೇನ್ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com