ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅಜರುದ್ದೀನ್, '1993ರಿಂದಲೂ ಭಾರತದಲ್ಲಿ ಎಸ್ ಜಿ ಬಾಲ್ ಗಳನ್ನು ಬಳಸುತ್ತಿದ್ದೇವೆ. ಬಾಲ್ ನಲ್ಲಿರುವ ಸೀಮ್ ಸ್ಪಿನ್ನರ್ ಗಳು ಬಾಲ್ ಅನ್ನು ಗ್ರಿಪ್ ಆಗಿ ಹಿಡಿಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಸ್ವದೇಶದಲ್ಲಿ ಸ್ಪಿನ್ನರ್ ಗಳು ಹೆಚ್ಚು ಯಶಸ್ಸು ಸಾಧಿಸುತ್ತಿದ್ದಾರೆ ಮತ್ತು ಸ್ವದೇಶದಲ್ಲಿ ಭಾರತದ ಟ್ರ್ಯಾಕ್ ರೆಕಾರ್ಡ್ ಕೂಡ ಉತ್ತಮವಾಗಿದೆ. 1984-85ರಲ್ಲಿ ಭಾರತದಲ್ಲಿ ಡ್ಯೂಕ್ ಬಾಲ್ ಗಳನ್ನು ಬಳಸಲಾಗಿತ್ತು. ಅಂದಿನ ಸರಣಿ ಫಲಿತಾಂಶವೇ ಆ ಬಾಲ್ ಭಾರತೀಯ ಬೌಲರ್ ಗಳಿಗೆ ಎಷ್ಟು ನೆರವಾಗುತ್ತದೆ ಎಂಬುದನ್ನು ತೋರಿಸುತ್ತದೆ. ವಿದೇಶಗಳಲ್ಲಿ ಡ್ಯೂಕ್ ಬಾಲ್ ಗಳನ್ನು ಬಳಕೆ ಮಾಡುತ್ತಿದ್ದು, ಅಲ್ಲಿನ ಸರಣಿ ಫಲಿತಾಂಶವನ್ನೂ ಕೂಡ ನಾವು ನೋಡಬಹುದು. ಹೀಗಿದ್ದೂ ಭಾರತೀಯ ಬೌಲರ್ ಗಳೇಕೆ ಡ್ಯೂಕ್ ಬಾಲ್ ನ ಹಿಂದೆ ಬಿದ್ದಿದ್ದಾರೆ ಎಂದು ತಿಳಿಯುತ್ತಿಲ್ಲ. ನನ್ನ ಪ್ರಕಾರ ಭಾರತೀಯ ಪರಿಸ್ಥಿತಿಯಲ್ಲಿ ಎಸ್ ಜಿ ಬಾಲ್ ಗಳು ಅತ್ಯುತ್ತಮ ಆಯ್ಕೆಯಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆಯ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.