ಸೇಂಟ್ ಲೂಸಿಯಾ: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರನ್ನು ಸಲಿಂಗ ಕಾಮಿ ಎಂದು ನಿಂದಿಸಿದ್ದ ವೆಸ್ಟ್ ಇಂಡೀಸ್ ತಂಡದ ವೇಗಿ ಶನ್ನೋನ್ ಗ್ಯಾಬ್ರಿಯಲ್ ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ.
ಸೇಂಟ್ ಲೂಸಿಯಾದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶನ್ನೋನ್ ಗ್ಯಾಬ್ರಿಯಲ್, ರೂಟ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ '' ಸಲಿಂಗ ಕಾಮಿ'' ಎಂದು ನಿಂದಿಸಿದ್ದರು. ಇದು ಸ್ಟಂಪ್ಸ್ ಬಳಿಯಿರುವ ಮೈಕ್ರೋಫೋನ್‌ನಲ್ಲಿ ದಾಖಲಾಗಿತ್ತು.
ಈ ಸಂಬಂಧ ಐಸಿಸಿ ನಿನ್ನೆ ವೆಸ್ಟ್ ಇಂಡೀಸ್ ವೇಗಿಗೆ ನಾಲ್ಕು ಏಕದಿನ ಪಂದ್ಯಗಳಿಗೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಇದೀಗ ಗ್ಯಾಬ್ರಿಯಲ್ ಇಂಗ್ಲೆಂಡ್ ನಾಯಕನಿಗೆ ಕ್ಷಮೆಯಾಚಿಸಿದ್ದಾರೆ.
" ತಮ್ಮ ತಂಡದ ಸದಸ್ಯರಿಗೆ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ವಿಶೇಷವಾಗಿ ನಾಯಕ ಜೋ ರೂಟ್ ಅವರಿಗೆ ಮೈದಾನದಲ್ಲಿ ತಾವಾಡಿದ ನಿಂದನೆ ಮಾತುಗಳಿಗೆ ಕ್ಷಮೆ ಕೋರುತ್ತೇನೆ. ಅನಿರೀಕ್ಷಿತವಾಗಿ ಆ ರೀತಿ ಹೇಳಬೇಕಾಯಿತು. ಇದೀಗ ತಾವು ಮಾಡಿದ್ದು ತಪ್ಪು ಎಂದು ಅನಿಸಿದೆ. ಹಾಗಾಗಿ ಕ್ಷಮೆಯಾಚಿಸುತ್ತೇನೆ." ಎಂದು ಹೇಳಿದ್ದಾರೆ.