ಉಭಯ ತಂಡಗಳ ನಾಯಕರು
ಉಭಯ ತಂಡಗಳ ನಾಯಕರು

ಐಪಿಎಲ್ 2019: ಮುಂಬೈ v/s ಚೆನ್ನೈ, ಯಾರಾಗುತ್ತಾರೆ ಫೈನಲ್ ಗೆ ‘ಕ್ವಾಲಿಫೈ’

ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಆವೃತ್ತಿ ಈಗ ರೋಚಕ ಘಟ್ಟ ತಲುಪಿದೆ. ಭರ್ಜರಿ ಲಯದಲ್ಲಿರುವ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಟ...
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಆವೃತ್ತಿ ಈಗ ರೋಚಕ ಘಟ್ಟ ತಲುಪಿದೆ. ಭರ್ಜರಿ ಲಯದಲ್ಲಿರುವ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಟ ನಡೆಸಲಿವೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿರುವ ಮುಂಬೈ ಇಂಡಿಯನ್ಸ್ ಹಾಗೂ ಎರಡನೇ ಸ್ಥಾನದಲ್ಲಿರುವ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಾದಾಟ ಎಲ್ಲರ ಚಿತ್ತ ಕದ್ದಿದೆ.
ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಕನಸು ಕಾಣುತ್ತಿದೆ. ಚೆನ್ನೈ ಸಹ ಈ ಪಂದ್ಯ ಗೆದ್ದು ನೇರವಾಗಿ ಫೈನಲ್ ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ.
ಈ ಲೀಗ್ ನಲ್ಲಿ ಈ ಮೊದಲು ಎರಡೂ ತಂಡಗಳು, ಎರಡು ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗಳಿಂದ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲೂ ರೋಹಿತ್ ಪಡೆಯ ಕೈ ಮೇಲಾಗಿತ್ತು. ಉಭಯ ತಂಡಗಳ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಬಲಿಷ್ಠವಾಗಿವೆ. 
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಆರಂಭಿಕ ಶೇನ್ ವ್ಯಾಟ್ಸನ್ (258) ಹಾಗೂ ಫಾಫ್ ಡುಪ್ಲೇಸಿಸ್ (314) ತಂಡಕ್ಕೆ ಉತ್ತಮ ಆರಂಭ ನೀಡಬಲ್ಲ ಆಟಗಾರರು. ಕಳೆದ ಕೆಲವು ಪಂದ್ಯಗಳಲ್ಲಿ ಶೇನ್ ಬ್ಯಾಟ್ ನಿಂದ ರನ್ ಹರಿದು ಬರದೇ ಇರುವುದು ತಂಡಕ್ಕೆ ಕೊಂಚ ತಲೆ ನೋವಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (359) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (368), ಅಂಬಟಿ ರಾಯುಡು (219) ತಂಡಕ್ಕೆ ಅಗತ್ಯ ಕಾಣಿಕೆ ನೀಡಬಲ್ಲ ಆಟಗಾರರು. 
ಚೆನ್ನೈ ತಂಡದ ಬೌಲಿಂಗ್ ನಲ್ಲಿ ಅನುಭವಿ ಬೌಲರ್ ಗಳು ಇದ್ದಾರೆ. ಇಮ್ರಾನ್ ತಾಹಿರ್ ಆಡಿರುವ 14 ಪಂದ್ಯಗಳಲ್ಲಿ 21 ವಿಕೆಟ್ ಪಡೆದು ಭರವಸೆ ಮೂಡಿಸಿದ್ದಾರೆ. ಇನ್ನು ಬಿಗುವಿನ ದಾಳಿ ನಡೆಸುವ ಯುವ ವೇಗಿ ದೀಪಕ್ ಚಹಾರ್ 16 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಶಾರ್ದುಲ್ ಠಾಕೂರ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ ತಂಡಕ್ಕೆ ನೆರವಾಗಬಲ್ಲರು. 
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಉತ್ತಮವಾಗಿದೆ. ಕ್ವಿಂಟನ್ ಡಿಕಾಕ್(492), ರೋಹಿತ್ ಶರ್ಮಾ(386) ರನ್ ಕಲೆ ಹಾಕಬಲ್ಲರು. ಸನ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ಲಯಕ್ಕೆ ಮರಳಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರನ್ ಕೊಳ್ಳೆ ಹೊಡೆಯುವ ಸೂರ್ಯಕುಮಾರ್ ಯಾದವ್(338), ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (373) ಕಿರನ್ ಪೋಲಾರ್ಡ್(238) ರನ್ ಕಲೆ ಹಾಕಬಲ್ಲ ಕ್ಷಮತೆ ಹೊಂದಿದ್ದಾರೆ. 
ಯಾರ್ಕರ್ ಸ್ಪೆಷಲಿಸ್ಟ್ ಗಳಾದ ಜಸ್ಪ್ರಿತ್ ಬೂಮ್ರಾ (17) ಹಾಗೂ ಲಸಿತ್ ಮಲಿಂಗ(15) ಆರಂಭದಲ್ಲಿ ಹಾಗೂ ಕೊನೆಯಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಕೃನಾಲ್ ಪಾಂಡ್ಯ, ದೀಪಕ್ ಚಹಾರ್ ಸ್ಪಿನ್ ಮೋಡಿ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು. 
ಇಂದಿನ ಪಂದ್ಯದಲ್ಲಿ ಯಾರು ಜಯ ಸಾಧಿಸಿ ಫೈನಲ್ ಗೆ ಅರ್ಹತೆ ಪಡೆಯುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. 
ಸಂಭಾವ್ಯ ಆಟಗಾರರು
ಚೆನ್ನೈ ಸೂಪರ್‌ ಕಿಂಗ್ಸ್‌: ಶೇನ್  ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಾಹರ್,  ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಂಟನರ್
ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ, ಕ್ವಿಂಟನ್ ಡೆ ಕೊಕ್, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲ್ಲಾರ್ಡ್, ಜಯಂತ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚಿಲ್ ಮ್ಯಾಕ್ಲೆನ್ ಗನ್, ರಾಹುಲ್ ಚಹಾರ್, ಲಸಿತ್ ಮಾಲಿಂಗ, ಜಸ್ಪ್ರಿತ್ ಬುಮ್ರಾ.
ಸಮಯ: ನಾಳೆ ರಾತ್ರಿ 07.30ಕ್ಕೆ
ಸ್ಥಳ: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ

Related Stories

No stories found.

Advertisement

X
Kannada Prabha
www.kannadaprabha.com