ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ-ರೋಹಿತ್ ಜೋಡಿಗೆ ಬೇಕಿದೆ 27 ರನ್, ಆ ದಾಖಲೆ ಯಾವುದು ಗೊತ್ತ?

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್‌ ಶರ್ಮಾ...
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್‌ ಶರ್ಮಾ ಜೋಡಿ ಇಂದು ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆಯುವ ಸಾಧ್ಯತೆ ಇದೆ. 

ವೆಸ್ಟ್‌ ಇಂಡೀಸ್‌ ವಿರುದ್ಧ ಇನ್ನೂ ಕೇವಲ 27 ರನ್‌ ಗಳಿಸಿದರೆ, 1000 ರನ್‌ ಜತೆಯಾಟವಾಗಲಿದೆ. ಆ ಮೂಲಕ ಕೆರಿಬಿಯನ್ ತಂಡದ ವಿರುದ್ಧ ಏಕದಿನ ಮಾದರಿಯಲ್ಲಿ ಸಾವಿರ ರನ್‌ ಜತೆಯಾಟವಾಡಿದ ವಿಶ್ವದ ಮೊದಲ ಜೋಡಿ ಎಂಬ ಸಾಧನೆಗೆ ಕೊಹ್ಲಿ-ರೋಹಿತ್‌ ಜೋಡಿ ಭಾಜನವಾಗಲಿದೆ.

ರೋಹಿತ್‌ ಶರ್ಮಾ ಮತ್ತೊಂದು ವೈಯಕ್ತಿಕ ದಾಖಲೆಯ ಹೊಸ್ತಿಲಲ್ಲಿ ಇದ್ದಾರೆ. ಇನ್ನೂ 26 ರನ್‌ ಗಳಿಸಿದರೆ, ಮಾಜಿ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಏಳನೇ ಬ್ಯಾಟ್ಸ್‌ಮನ್‌ ಆಗಲಿದ್ದಾರೆ. ಯುವರಾಜ್‌ ಸಿಂಗ್‌ ತಮ್ಮ ವೃತ್ತಿ ಜೀವನದಲ್ಲಿ 8,701 ರನ್‌ ಗಳಿಸಿದ್ದಾರೆ. ರೋಹಿತ್‌ ಸದ್ಯ 8,676 ರನ್‌ ಗಳಿಸಿದ್ದಾರೆ. 

ಇದೇ ಪಂದ್ಯದಲ್ಲಿ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಸದ್ಯ 53 ಏಕದಿನ ಪಂದ್ಯಗಳಿಂದ 96 ವಿಕೆಟ್‌ ಕಿತ್ತಿದ್ದಾರೆ.  ಇಂದಿನ ಪಂದ್ಯದಲ್ಲಿ  ನಾಲ್ಕು ವಿಕೆಟ್‌ ಪಡೆದರೆ, ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 100 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಆಗಲಿದ್ದಾರೆ. ಇದಕ್ಕೂ ಮುನ್ನ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರು 56 ಪಂದ್ಯಗಳಿಂದ 100 ವಿಕೆಟ್‌ ಪಡೆದು ಸಾಧನೆ ಮಾಡಿದ್ದರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಪಡೆದಿದೆ. ಮೊದಲನೇ ಪಂದ್ಯ ಮಳೆಗೆ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಪಡೆದಿತ್ತು. ಇಂದು ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದರೆ ಏಕದಿನ ಸರಣಿ ತನ್ನದಾಗಿಸಿಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com