ಭಾರತದ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ವಿಧಿವಶ

ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ಅವರು ಗುರುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಬಿ ಚಂದ್ರಶೇಖರ್
ವಿಬಿ ಚಂದ್ರಶೇಖರ್

ಹೃದಯಾಘಾತದಿಂದ ಚೆನ್ನೈನ ನಿವಾಸದಲ್ಲಿ ಚಂದ್ರಶೇಖರ್ ಕೊನೆಯುಸಿರು

ಚೆನ್ನೈ: ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ವಿಬಿ ಚಂದ್ರಶೇಖರ್ ಅವರು ಗುರುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ತಂಡದ, ತಮಿಳುನಾಡು ತಂಡದ ಮಾಜಿ ಆರಂಭಿಕ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ ಗುರುವಾರ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಚಂದ್ರಶೇಖರ್ ಅವರಿಗೆ 57 ವರ್ಷ ವಯಸ್ಸಾಗಿತ್ತು.

ಕ್ರಿಕೆಟ್ ವಲಯದಲ್ಲಿ ವಿಬಿ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಮ್ಮ ಆಕ್ರಮಣಕಾರಿ ಆಟದಿಂದಲೇ ಖ್ಯಾತಿ ಗಳಿಸಿದ್ದ ಚಂದ್ರಶೇಖರ್ ಅವರು ಆರಂಭಿಕ ಆಟಗಾರನಾಗಿದ್ದರು. ಭಾರತದ ಪರ ಚಂದ್ರಶೇಖರ್ 7 ಏಕದಿನ ಪಂದ್ಯಗಳನ್ನು ಆಡಿದ್ದರು. 57 ರನ್ ಅವರ ಗರಿಷ್ಠ ವೈಯಕ್ತಿಕ ರನ್ ಗಳಿಕೆಯಾಗಿತ್ತು.

1988ರಲ್ಲಿ ರಣಜಿ ಟ್ರೋಫಿ ಜಯಿಸಿದ್ದ ತಮಿಳುನಾಡು ತಂಡದ ಆಟಗಾರರಾಗಿದ್ದ ಚಂದ್ರಶೇಖರ್ ಕೋಚಿಂಗ್ ಹಾಗೂ ವೀಕ್ಷಕ ವಿವರಣೆಯತ್ತ ಹೆಚ್ಚು ಗಮನ ನೀಡಿದ್ದರು. ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಇದೀಗ ಅವರ ಅಕಾಲಿಕ ಮರಣಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.

ಸಾಲದ ಶೂಲಕ್ಕೆ ಬಲಿಯಾದರೇ ಮಾಜಿ ಕ್ರಿಕೆಟಿಗ?
ಇನ್ನು ಚಂದ್ರಶೇಖರ್ ಅವರ ಸಾವಿನ ಹಿಂದೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಅವರದ್ದು ಸಾಮಾನ್ಯ ಸಾವಲ್ಲ. ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಚಂದ್ರಶೇಖರ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com