ಕೊಹ್ಲಿ ಶತಕ, ಅಯ್ಯರ್ ಆಕರ್ಷಕ ಅರ್ಧಶತಕದೊಂದಿಗೆ ಭಾರತಕ್ಕೆ ಸರಣಿ ವಶ

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. 
ಕೊಹ್ಲಿ ಶತಕ, ಅಯ್ಯರ್ ಆಕರ್ಷಕ ಅರ್ಧಶತಕದೊಂದಿಗೆ ಭಾರತಕ್ಕೆ ಸರಣಿ ವಶ

ಪೋರ್ಟ್ ಆಫ್ ಸ್ಪೇನ್ : ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ (114 ) ಹಾಗೂ ಯುವ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ ಬೆರಗಿನ  65 ರನ್ ಗಳ ನೆರವಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು  2-0 ಅಂತರದಲ್ಲಿ ಸರಣಿಯನ್ನು ವಶ ಪಡಿಸಿಕೊಂಡಿತು.ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. 

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರೀಸ್  ಮಳೆಯಿಂದಾಗಿ 35 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತ್ತು. ಆರಂಭಿಕ ಆಟಗಾರರಾದ ಕ್ರೀಸ್ ಗೇಲ್ ಹಾಗೂ ಎವಿನ್ ಲೂವಿಸ್ ಬಿರುಸಿನ ಆರಂಭ ಒದಗಿಸಿದರು. 

ಈ ಸಂದರ್ಭದಲ್ಲಿ ಮಳೆ ಕಾಡಿದರೂ ಹೆಚ್ಚಿನ ತೊಂದರೆಉಂಟಾಗಲಿಲ್ಲ. ಬಳಿಕ ಪಂದ್ಯ ಮುಂದುವರೆಸಿದಾಗ ಕ್ರೀಸ್ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಪರಿಣಾಮ 6.1 ಓವರ್ ಗಳಲ್ಲಿಯೇ ತಂಡದ ಮೊತ್ತ 50 ಹಾಗೂ 9. 1 ಓವರ್ ಗಳಲ್ಲಿಯೇ 100ರ ಗಡಿ ದಾಟಿತು. ಗೇಲ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

 ಇಂತಹ ಸಂದರ್ಭದಲ್ಲಿ ಉತ್ತಮ ದಾಳಿ ನಡೆಸಿದ ಭಾರತದ ಬೌಲರ್ ಯಜುರ್ವೇಂದ್ರ  ಚಹಲ್ ಲೂವಿಸ್ ಅವರನ್ನು ಹೊರಗಟ್ಟಿದರೆ, ಖಲೀಲ್ ಅಹ್ಮದ್ ಕ್ರೀಸ್ ಗೇಲ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಕ್ರೀಸ್ ಗೇಲ್  41 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 72 ರನ್ ಗಳಿಸಿದರು. ಬಳಿಕ ಜತೆಗೊಡಿದ ಶಾಯ್ ಹೋಪ್ ಮತ್ತು ಹೆಟ್ಮಾಯೆರ್ ತಂಡವನ್ನು ಮುನ್ನಡೆಸಿದರು. 

ಈ ನಡುವೆ 22 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದ್ದ ಸಂದರ್ಭದಲ್ಲಿ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯುಂಟಾಯಿತು. ಇದರಿಂದಾಗಿ ಓವರ್ ಗಳ ಸಂಖ್ಯೆಯನ್ನು 35ಕ್ಕೆ ಇಳಿಸಲಾಯಿತು. ಬಳಿಕ ಬ್ಯಾಟಿಂಗ್ ಮುಂದುವರೆಸಿದ ವಿಂಡೀಸ್ ಏಳು ವಿಕೆಟ್ ನಷ್ಟಕ್ಕೆ 240 ರನ್ ಗಳ ಸವಾಲಿನ ಮೊತ್ತ ಪೇರಿಸಿತು.

ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ, ರೋಹಿತ್ ಶರ್ಮಾ 10 ರನ್ ಗಳಿಸಿ ಬೇಗನೆ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಧವನ್ ಹಾಗೂ ಕೊಹ್ಲಿ 66 ರನ್  ಕಲೆ ಹಾಕಿದರು. ಆದರೆ, ಧವನ್ ಹಾಗೂ ರಿಷಬ್ ಪಂತ್ ಹೆಚ್ಚಿನ ಹೊತ್ತು ಕ್ರೀಸ್ ನಲ್ಲಿ ನಿಲ್ಲಲಾಗಲಿಲ್ಲ. ಈ ಸಂದರ್ಭದಲ್ಲಿ ಬಿರುಸಿನ ಆಟವಾಡಿದ ಶ್ರೇಯಸ್ ಅಯ್ಯರ್  ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ಮೂಲಕ 65 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

 ಈ ಮೂಲಕ ಟೀಂ ಇಂಡಿಯಾ 32. 3 ಓವರ್ ಗಳಲ್ಲೇ ಗುರಿ ತಲುಪಿತು. 99 ಎಸೆತಗಳನ್ನು ಎದುರಿಸಿದ ಕೊಹ್ಲಿ 14 ಬೌಂಡರಿಗಳ ನೆರವಿನಿಂದ 114 ರನ್ ಗಳಿಸಿ ಅಜೇಯರಾಗುಳಿದರು. ಡೆಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್ ಅಂತರದಲ್ಲಿ ಗೆಲುವು ದಾಖಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com