
ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಿಂದ ಕೈ ಬಿಟ್ಟಿರುವ ರೋಹಿತ್ ಶರ್ಮಾ ಅವರ ಫಿಟ್ನೆಸ್ ಸಮಸ್ಯೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲವೆಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ನಾಯುಸೆಳೆತದ ಗಾಯಕ್ಕೆ ತುತ್ತಾಗಿದ್ದ ರೋಹಿತ್ ಕೆಲ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ, ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದ ಆಯ್ಕೆ ಮಾಡುವ ದಿನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದರ ಹೊರತಾಗಿಯೂ ರೋಹಿತ್ ಶರ್ಮಾ ಅವರನ್ನು ಮೂರೂ ಮಾದರಿಯ ಭಾರತ ತಂಡದಿಂದ ಕೈ ಬಿಡಲಾಗಿತ್ತು.
ರೋಹಿತ್ ಶರ್ಮಾ ಆಯ್ಕೆ ಮಾಡದ ಬಗ್ಗೆ ಆಯ್ಕೆದಾರರು ಬಲಗೈ ಬ್ಯಾಟ್ಸ್‌ಮನ್‌ಗೆ ಗಾಯ ಹಾಗೂ ಫಿಟ್ನೆಸ್ ಸಮಸ್ಯೆ ಇದೆ ಎಂದು ಹೇಳಿದ್ದರು. ಆದರೂ, ರೋಹಿತ್ ಶರ್ಮಾ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ ಆಡಿದ್ದರು. ಅಲ್ಲದೆ, ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದರು.
ಇದೇ ವಿಚಾರವಾಗಿ ಪಾಕಿಸ್ತಾನ ಯೂಟ್ಯೂಬ್ ಚಾನೆಲ್ ಕ್ರಿಕ್ ಕಾಸ್ಟ್ ಜೊತೆ ಮಾತನಾಡಿರುವ ಸಂಜಯ್ ಮಂಜ್ರೇಕರ್ ಅವರು, ರೋಹಿತ್ ಶರ್ಮಾ ಫಿಟ್ನೆಸ್ ಕುರಿತಂತೆ ಯಾರಿಗೂ ಸ್ಪಷ್ಟತೆಯೇ ಇಲ್ಲ. ಬಹುಶಃ ಇದು ಬಿಸಿಸಿಐ ನಿರ್ಧಾರವಾಗಿರಬಹುದು. ಆದರೆ ಜನರಿಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದಾಗ ಸಾಮಾನ್ಯವಾಗಿಯೇ ಪ್ರಶ್ನೆಗಳು ಉದ್ಭವಿಸುತ್ತದೆ. ಆದರೆ ನನಗಂತೂ ಆಯ್ಕೆ ಸಮಿತಿಯಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ.
Advertisement