ಭಾರತ-ಲಂಕಾ ಮೊದಲ ಟಿ20 ಕದನ ನಾಳೆ: ಸಿಂಹಳಿಯರಿಗೆ ಕಂಟಕರಾಗ್ತಾರಾ ಬುಮ್ರಾ!

ಇದೇ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಅನಧೀಕೃತ ಪೂರ್ವ ತಯಾರಿಯಲ್ಲಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಸಿದ್ಧವಾಗಿದೆ. ಉಭಯ ತಂಡಗಳ ನಡುವೆ ನಾಳೆ ನಡೆಯುವ ಮೊದಲ ಹಣಾಹಣಿಗೆ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ವೇದಿಕ ಸಿದ್ಧವಾಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಗುವಾಹಟಿ: ಇದೇ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಅನಧೀಕೃತ ಪೂರ್ವ ತಯಾರಿಯಲ್ಲಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಸಿದ್ಧವಾಗಿದೆ. ಉಭಯ ತಂಡಗಳ ನಡುವೆ ನಾಳೆ ನಡೆಯುವ ಮೊದಲ ಹಣಾಹಣಿಗೆ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ವೇದಿಕ ಸಿದ್ಧವಾಗಿದೆ.

ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟಿ-20 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಲಘು ವಿರಾಮ ಪಡೆದಿದ್ದ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾ ವಿರುದ್ಧ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ.

ಈ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ಪ್ರವಾಸವನ್ನು ತಕ್ಷಣ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಲಂಕಾ ವಿರುದ್ಧದ ತವರು ಸರಣಿ ಅಷ್ಟೊಂದು ಗಮನ ಸೆಳೆದಿಲ್ಲ ಎಂದು ಹೇಳಲಾಗಿದೆ.

ದೀರ್ಘ ಕಾಲ ಗಾಯದಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುತ್ತಿರುವ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರ ಪಾಲಿಗೆ ಈ ಸರಣಿ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಐಸಿಸಿ ವಿಶ್ವಕಪ್‌ ಬಳಿಕ, ಕೆರಿಬಿಯನ್ ಪ್ರವಾಸ ಮುಗಿದ ದಿನದಿಂದಲೂ ಸ್ಟ್ರೆಸ್ ಬ್ಯಾಕ್ ಫ್ರಾಕ್ಚರ್ ಗೆ ಬುಮ್ರಾ  ಒಳಗಾಗಿದ್ದರು.

ಈ ಸರಣಿ ಬಳಿಕ ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗೂ ಅವಕಾಶ ಪಡೆದಿದ್ದಾರೆ. ಮತ್ತೊಂದು ಮುಖ್ಯ ಅಂಶವೆಂದರೆ, ಈ ಸರಣಿಯಲ್ಲಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಅವರ ಬ್ಯಾಟಿಂಗ್ ಕಡೆಯೂ  ಹೆಚ್ಚು ಗಮನ ಹರಿಸಲಾಗುತ್ತದೆ.

ಸೈಯದ್‌ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಮೊಣಕಾಲು ಗಾಯಕ್ಕೆ ಒಳಗಾಗಿದ್ದ ಶಿಖರ್ ಧವನ್ ಅವರು ಕಳೆದ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗುಳಿದಿದ್ದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಚುಟುಕು ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ಪರ ಧವನ್ ಶತಕ ಸಿಡಿಸಿ ಲಯಕ್ಕೆ ಮರಳಿರುವುದಾಗಿ ಸಾರಿ ಹೇಳಿದ್ದರು. ಅದ್ಭುತ ಲಯದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಅವರ ಜತೆ ಶಿಖರ್ ಧವನ್ ಲಂಕಾ ವಿರುದ್ಧ ಮೂರು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಲಿದ್ದಾರೆ.

ಲಂಕಾ ಸರಣಿಗೆ ವಿಶ್ರಾಂತಿ ಪಡೆದಿರುವ ಹಿಟ್ಮನ್ ರೋಹಿತ್ ಶರ್ಮಾ ಅವರ ಟಿ-20 ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿರುವ ದಾಖಲೆಯನ್ನು ನಾಯಕ ವಿರಾಟ್ ಕೊಹ್ಲಿ ಮುರಿಯುವ ಸಾಧ್ಯತೆ ಇದೆ. 

ಇದುವರೆಗೂ ಭಾರತದ ವಿರುದ್ಧ ದ್ವಿಪಕ್ಷೀಯ ಟಿ-20 ಸರಣಿ ಗೆಲ್ಲುವಲ್ಲಿ ವಿಫಲರಾಗಿರುವ ಶ್ರೀಲಂಕಾ ತಂಡಕ್ಕೆ ಆತಿಥೇಯರ ವಿರುದ್ಧ ಸವಾಲು ಕಠಿಣವಾಗಿದೆ.

ಹಿರಿಯ ವೇಗಿ ಹಾಗೂ ನಾಯಕ ಲಸಿತ್ ಮಲಿಂಗಾ ಜತೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಅನುಭವ ಹೊಂದಿರುವ ಏಂಜೆಲೊ ಮ್ಯಾಥ್ಯೂಸ್, ಇಸುರು ಉದನ, ಕುಸಾಲ್ ಮೆಂಡಿಸ್ ಸೇರಿದಂತೆ ಇನ್ನಿತರು ಆಟಗಾರರಿಂದ ಭಾರತದ ವಿರುದ್ಧ ಕಠಿಣ ಪೈಪೋಟಿ ನಿರೀಕ್ಷಿಸಬಹುದು. ಆದರೆ, ಪ್ರಸ್ತುತ ಲಂಕಾ ತಂಡ ತೋರುತ್ತಿರುವ ಪ್ರದರ್ಶನ ಗಮನಿಸಿದರೆ ಕೊಹ್ಲಿ ಪಡೆಯನ್ನು ನಿಯಂತ್ರಿಸುವುದು ಸುಲಭವಲ್ಲ.

16 ಬಾರಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 11 ರಲ್ಲಿ ಜಯ ಸಾಧಿಸಿ ಮೇಲುಗೈ ಸಾಧಿಸಿದೆ. ಗುವಾಹಟಿ ಅಂಗಳ ನಿಧಾನಗತಿಯಿಂದ ಕೂಡಿದ್ದು, ಸ್ಪಿನ್‌ಗೆ ಹೆಚ್ಚು ಸಹಕಾರಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ತಂಡಗಳು
ಭಾರತ: 

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಶಿವಮ್ ದುಬೆ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್.

ಶ್ರೀಲಂಕಾ: 
ಲಸಿತ್ ಮಲಿಂಗಾ(ನಾಯಕ), ಧನುಷ್ಕ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸೂನ್ ಶನಕ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್, ಧನಂಜಯ್ ಡಿ ಸಿಲ್ವಾ, ಇಸುರು ಉದನ, ಭನುಕ ರಾಜಪಕ್ಸ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂಡಕನ್, ಕಸೂನ್ ರಜಿತಾ

ಸಮಯ: ನಾಳೆ ಸಂಜೆ 07:00
ಸ್ಥಳ: ಬಾರಬತಿ ಕ್ರೀಡಾಂಗಣ, ಗುವಾಹಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com