'ಕಿಂಗ್' ಕೊಹ್ಲಿಯನ್ನು ಮಿಯಾಂದಾದ್‌ಗೆ ಹೋಲಿಸಿದ ಪಾಕ್ ಮಾಜಿ ನಾಯಕ ಸೊಹೇಲ್!

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್‌ಮನ್‌ ಜಾವೆದ್‌ ಮಿಯಾಂದಾದ್‌ಗೆ ಹೋಲಿಸಿರುವ ಪಾಕ್‌ ತಂಡದ ಮಾಜಿ ನಾಯಕ ಆಮಿರ್‌ ಸೊಹೇಲ್‌, ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಕ್ಕೆ ಬಹುದೊಡ್ಡ ಸ್ಪೂರ್ತಿ ಎಂದು ಕರೆದಿದ್ದಾರೆ.
ಕೊಹ್ಲಿ
ಕೊಹ್ಲಿ

ಲಾಹೋರ್‌: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್‌ಮನ್‌ ಜಾವೆದ್‌ ಮಿಯಾಂದಾದ್‌ಗೆ ಹೋಲಿಸಿರುವ ಪಾಕ್‌ ತಂಡದ ಮಾಜಿ ನಾಯಕ ಆಮಿರ್‌ ಸೊಹೇಲ್‌, ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಕ್ಕೆ ಬಹುದೊಡ್ಡ ಸ್ಪೂರ್ತಿ ಎಂದು ಕರೆದಿದ್ದಾರೆ.

"ಪಾಕಿಸ್ತಾನ ಕ್ರಿಕೆಟ್‌ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರ ಕಡೆಗೆ ಗಮನ ಹರಿಸಿದಾಗ ಮೊದಲ ಹೆಸರು ಬರುವುದು ಜಾವೆದ್‌ ಮಿಯಾಂದಾದ್‌ ಅವರದ್ದು, ಅವರನ್ನು ಈಗಲೂ ಶ್ರೇಷ್ಠರೆಂದು ಕರೆಯಲಾಗುತ್ತದೆ. 

ಏಕೆಂದರೆ, ಕೇವಲ ಅವರ ಪ್ರದರ್ಶನವನ್ನು ಮಾತ್ರವಲ್ಲ ತಂಡದ ಉಳಿದ ಆಟಗಾರರನ್ನು ಅವರು ಮೇಲೆತ್ತಿದ್ದರು. ಅವರೊಟ್ಟಿಗೆ ದೊಡ್ಡ ಜೊತೆಯಾಟ ಒಂದರಲ್ಲಿ ನೀವು ಪಾಲ್ಗೊಂಡರೆ ಅದರಿಂದ ಬಹಳಷ್ಟು ಕಲಿಯುತ್ತೀರಿ. ಈ ಮೂಲಕ ನೀವು ಮತ್ತಷ್ಟು ಅಭಿವೃದ್ಧಿಯಾಗುವ ಸ್ಫೂರ್ತಿ ಪಡೆದುಕೊಳ್ಳುತ್ತೀರಿ," ಎಂದು ಆಮಿರ್‌ ಸೊಹೇಲ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹೇಳಿದ್ದಾರೆ.

ಇದನ್ನು ವಿರಾಟ್‌ ಕೊಹ್ಲಿ ಕೂಡ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ಕೊಹ್ಲಿಯ ಸುತ್ತ ಮುತ್ತ ಗಮನಿಸಿದರೆ ಅವರೊಟ್ಟಿಗೆ ಆಡಿದ ಪ್ರತಿಯೊಬ್ಬ ಆಟಗಾರನೂ ಅಭಿವೃದ್ಧಿ ಕಂಡಿದ್ದಾರೆ. ಆದ್ದರಿಂದಲೇ ವಿರಾಟ್‌ ಇಂದು ಶ್ರೇಷ್ಠ ಆಟಗಾರನ ಪಟ್ಟ ಪಡೆದಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಪಾಕ್‌ ತಂಡದ ಯಶಸ್ವಿ ನಾಯಕ ಹಾಗೂ ನಿವೃತ್ತಿ ನಂತರ ಉತ್ತಮ ಕೋಚ್‌ ಆಗಿದ್ದ ಜಾವೆದ್‌ ಮಿಯಾಂದಾದ್‌ 124 ಟೆಸ್ಟ್‌ ಮತ್ತು 233 ಏಕದಿನ ಪಂದ್ಯಗಳ್ನು ಆಡಿದ್ದು, ಕ್ರಮವಾಗಿ 8832 ಮತ್ತು 7381 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಕಂಡ ಸಾರ್ವಕಾಲಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಮತ್ತೊಂದೆಡೆ ಬ್ಯಾಟಿಂಗ್‌ನ ಬಹುತೇಕ ಎಲ್ಲ ದಾಖಲೆಗಳನ್ನು ಮುರಿಯುತ್ತಾ ಬಂದು ಕಿಂಗ್‌ ಕೊಹ್ಲಿಯೆಂದೇ ಖ್ಯಾತಿ ಪಡೆದಿರುವ ವಿರಾಟ್‌, ಈವರೆಗೆ 86 ಟೆಸ್ಟ್‌, 248 ಒಡಿಐ ಮತ್ತು 82 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಪರ ಬ್ಯಾಟ್‌ ಬೀಸಿದ್ದು, 7240, 11867 ಮತ್ತು 2021 ರನ್‌ಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವ ಮೂಲಕ ಕ್ರಿಕೆಟ್‌ ಇತಿಹಾಸದ ಬೆಸ್ಟ್‌ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com