ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶೇನ್‌ ವಾಟ್ಸನ್‌ ವಿದಾಯ, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ, ವಿಡಿಯೋ!

ಆಸ್ಟ್ರೇಲಿಯಾ ತಂಡದ ಮಾಜಿ ಆಲ್ ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಶೇನ್ ವಾಟ್ಸನ್
ಶೇನ್ ವಾಟ್ಸನ್

ದುಬೈ: ಆಸ್ಟ್ರೇಲಿಯಾ ತಂಡದ ಮಾಜಿ ಆಲ್ ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

2020ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನದೊಂದಿಗೆ ಗುಂಪು ಹಂತದಲ್ಲಿಯೇ ಹೊರ ನಡೆಯಿತು. ಇದರಿಂದ ಸಾಕಷ್ಟಯ ಟೀಕೆಗೆ ತಂಡ ಒಳಗಾಯಿತು. ಇದರ ನಡುವೆ ಶೇನ್ ವಾಟ್ಸನ್ ಕೂಡ ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ ಟೀಕಿಗೆ ಗುರಿಯಾಗಿದ್ದರು. 

ಹೀಗಾಗಿ ನಿವೃತ್ತಿ ಘೋಷಿಸಿದ ಅವರು, ಯೆಲ್ಲೋ ಆರ್ಮಿಯ ಎಲ್ಲರಿಗೂ ಹಲೋ. ಕಳೆದ ಮೂರು ವರ್ಷಗಳಿಂದಲೂ ಒಳ್ಳೆಯ ಕ್ರಿಕೆಟ್ ಆಡುತ್ತಿದ್ದೆ. ಆದರೆ ಈಗಿನಿಂದಲೇ ನಾನು ನಿೃವತ್ತಿ ಘೋಷಿಸುತ್ತಿದ್ದೇನೆ. ಇದು ಭಾವನಾತ್ಮಕ ಸಂಗತಿ ಎಂದು ಭಾವುಕರಾಗಿ ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ. 

ಕಳೆದ ಮೂರು ವರ್ಷಗಳಿಂದಲೂ ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಋಣಿ. ಈಗ ಮಂದುವರೆಯಲು ಸಮಯವಾಗಿದೆ ಎಂದು ಹೇಳಿದ್ದಾರೆ.

ಐಪಿಎಲ್ 2020 ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದ 39 ವರ್ಷದ ಅನುಭವಿ ಬಲಗೈ ದಾಂಡಿಗ ವಾಟ್ಸನ್ 29.00ರ ಸರಾಸರಿಯಲ್ಲಿ 299 ರನ್ ಗಳನ್ನು ಮಾತ್ರವೇ ಗಳಿಸಲು ಶಕ್ತರಾದರು.

ಅಂದಹಾಗೆ ವಾಟ್ಸನ್ ಈಗಾಗಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಬಿಗ್ ಬ್ಯಾಷ್ ಲೀಗ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿಯಾಗಿದ್ದು, ಐಪಿಎಲ್ ನಲ್ಲಿ ಮಾತ್ರವೇ ಆಟ ಮುಂದುವರಿಸಿದ್ದರು. ಇನ್ನು ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್ ಕೆ ತನ್ನ 14ನೇ ರೌಂಡ್ ರಾಬಿನ್ ಕದನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿ ಐಪಿಎಲ್ 2020 ಟೂರ್ನಿಗೆ ಗುಡ್ ಬೈ ಹೇಳಿತು. ಈ ಸಂದರ್ಭದಲ್ಲಿ ವಾಟ್ಸನ್ ಇದೇ ತಮ್ಮ ಕೊನೆಯ ಐಪಿಎಲ್ ಎಂದು ಹೇಳಿಕೊಂಡಿದ್ದ. ಇದೀಗ ಟ್ವೀಟ್ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

ಸಿಎಸ್ ಕೆ ತಂಡದ ಕೊನೆಯ ಪಂದ್ಯದ ಬಳಿಕ ವಾಟ್ಸನ್ ತಾವು ನಿವೃತ್ತಿ ಹೊಂದುತ್ತಿರುವ ವಿಚಾರ ತಿಳಿಸಿ ಭಾವುಕರಾದರು. ಸೂಪರ್ ಕಿಂಗ್ಸ್ ಪರ ಆಡಿದ್ದು ತಮಗೆ ಸಿಕ್ಕ ಬಹುದೊಡ್ಡ ಗೌರವ ಎಂದು ಹೇಳಿಕೊಂಡರು ಎಂದು ಪಂದ್ಯದ ಬಳಿಕ ಸಿಎಸ್ ಕೆ ಮೂಲಗಳು ಹೇಳಿವೆ. 2018ರ ಸಾಲಿನಲ್ಲಿ ಸೂಪರ್ ಕಿಂಗ್ಸ್ ತಂಡ ಸೇರಿದ ವಾಟ್ಸನ್ ಅದೇ ವರ್ಷ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 2018ರ ಫೈನಲ್ ನಲ್ಲಿ ಶತಕ ಬಾರಿಸಿದ ವಾಟ್ಸನ್ ತಂಡಕ್ಕೆ 3ನೇ ಕಿರೀಟ ಕೊಡಿಸಿದ್ದರು. ಬಳಿಕ 2019ರ ಫೈನಲ್ ನಲ್ಲೂ ಮುಂಬೈ ಇಂಡಿಯನ್ಸ್ ಎದುರು 80 ರನ್ ಸಿಡಿಸಿ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. ಆದರೆ ಸಿಎಸ್ ಕೆ 1 ರನ್ ಅಂತರದಲ್ಲಿ ವೀರೋಚಿತ ಸೋಲುಂಡಿತ್ತು.

ಐಪಿಎಲ್ ಇತಿಹಾಸದ ಶ್ರೇಷ್ಠ ಆಲ್ ರೌಂಡರ್ ಗಳಲ್ಲಿ ಒಬ್ಬರಾದ ವಾಟ್ಸನ್ ಆಡಿದ 145 ಪಂದ್ಯಗಳಿಂದ 3874 ರನ್ ಮತ್ತು 92 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ. ಅಷ್ಟೇ ಅಲ್ಲದೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಆಡಿದ ನಂತರ ಸಿಎಸ್ ಕೆ ಬಳಗ ಸೇರಿದ್ದರು. 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ಗೆದ್ದಾಗ ವಾಟ್ಸನ್ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com