3ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 76 ರನ್ ಗಳ ಹೀನಾಯ ಸೋಲು
ಲೀಡ್ಸ್: ಮತ್ತೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಕೈ ಕೊಟ್ಟ ಹಿನ್ನಲೆಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 76 ರನ್ ಗಳ ಹೀನಾಯ ಸೋಲು ಕಂಡಿದೆ.
ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿರುವ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಪಡೆ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 76 ರನ್ ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನ 320 ರನ್ ಗಳ ಮುನ್ನಡೆಯನ್ನು ಮೆಟ್ಟಿ ನಿಲ್ಲುವಲ್ಲಿ ವಿರಾಟ್ ಕೊಹ್ಲಿ ಪಡೆ ವಿಫಲವಾಗಿದೆ. ರೋಹಿತ್ ಶರ್ಮಾ (59 ರನ್), ಚೇತೇಶ್ವರ ಪೂಜಾರ (91 ರನ್) ಮತ್ತು ನಾಯಕ ಕೊಹ್ಲಿ (55 ರನ್) ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 278 ರನ್ ಗಳಿಗೇ ಆಲೌಟ್ ಆಗಿದೆ. ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ಮತ್ತೆ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು, ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲ ಕೆಳಕ್ರಮಾಂಕದ ಆಟಗಾರರು ಎರಡಂಕಿ ಮೊತ್ತ ದಾಟುವಲ್ಲಿ ವಿಫಲರಾಗಿದ್ದಾರೆ.
ಅಜಿಂಕ್ಯಾ ರಹಾನೆ 10, ರಿಷಬ್ ಪಂತ್ 1, ಶಮಿ 6, ಇಶಾಂತ್ ಶರ್ಮಾ 2, ಸಿರಾಜ್ ಶೂನ್ಯ ಸಾಧನೆ ಭಾರತ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸುವಲ್ಲಿ ತೊಡಕಾಗಿ ಪರಿಣಮಿಸಿತು. ಅಂತಿಮವಾಗಿ ಭಾರತ ತಂಡ 278 ರನ್ ಗಳಿಗೇ ಆಲೌಟ್ ಆಗಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 76 ರನ್ ಗಳ ಹೀನಾಯ ಸೋಲು ಕಂಡಿದೆ.
ಇನ್ನು ಇಂಗ್ಲೆಂಡ್ ಪರ ಒಲಿ ರಾಬಿನ್ಸನ್ 5 ವಿಕೆಟ್ ಕಬಳಿಸಿದರೆ, ಕ್ರೇಗ್ ಓವರ್ಟನ್ 3 ವಿಕೆಟ್ ಪಡೆದರು. ಜೇಮ್ಸ್ ಆ್ಯಂಡರ್ಸನ್ ಮತ್ತು ಮೊಯಿನ್ ಅಲಿ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ