ಐಪಿಎಲ್-2021: ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು

ಕೊರೋನಾ ಕಾರಣದಿಂದಾಗಿ ಸ್ಥಗಿತವಾಗಿ ಬಳಿಕ ಮತ್ತೆ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್ ಗಳ ಅಂತರದಲ್ಲಿ ಬಗ್ಗುಬಡಿದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲುವು
ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲುವು
Updated on

ದುಬೈ: ಅನುಭವಿ ವೇಗಿ ಡ್ವೇನ್ ಬ್ರಾವೋ (25ಕ್ಕೆ 3) ಹಾಗೂ ಯುವ ಆಟಗಾರ ರುತುರಾಜ್ ಗಾಯಕ್ವಾಡ್ (ಅಜೇಯ 88) ಇವರುಗಳ ಭರ್ಜರಿ ಆಟದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಚರಣದ ಮೊದಲ ಪಂದ್ಯದಲ್ಲಿ 20 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ ಸೇರಿಸಿ ಸೋಲು ಕಂಡಿತು. ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 12 ಅಂಕ ಕಲೆ ಹಾಕಿದ್ದು ಮೊದಲ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಎಂಟು ಪಂದ್ಯಗಳಿಂದ 10 ಅಂಕ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದೆ.

ಗುರಿ ಹಿಂಬಾಲಿಸಿದ ಮುಂಬೈ ತಂಡದ ಆರಂಭಿಕರಾದ ಕ್ವಿಂಟನ್ ಡಿಕಾಕ್ (17) ಹಾಗೂ ಅನ್ ಮೋಲ್ಪ್ರೀತ್ ಸಿಂಗ್ (16) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಸೂರ್ಯಕುಮಾರ್ ಯಾದವ್ (3) ಠಾಕೂರ್ ತೋಡಿದ ಖೆಡ್ಡಾಗೆ ಬಲಿಯಾದರು. ಇಶಾನ್ ಕಿಶನ್ (11) ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ.

ಸ್ಟಾರ್ ಆಲ್ ರೌಂಡರ್ ಕೀರನ್ ಪೋಲಾರ್ಡ್ ಒತ್ತಡವನ್ನು ಮೆಟ್ಟಿ ನಿಂತು ಆಡಲಿಲ್ಲ. ಉಳಿದ ಬ್ಯಾಟ್ಸ್ ಮನ್ ಗಳು ರನ್ ಬರ ಅನುಭವಿಸಿದರು. ಆದರೆ ಒಂದು ಬದಿಯಲ್ಲಿ ನಿಂತು ರನ್ ಗಳನ್ನು ಬಾರಿಸುತ್ತಾ ಸಾಗಿದ ಸೌರಭ್ ತಿವಾರಿ ಅಬ್ಬರಿಸಿದರು. 40 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 50 ರನ್ ಸಿಡಿಸಿ ಸೋಲಿನಲ್ಲಿ ಮಿಂಚಿದರು.

ಚೆನ್ನೈ ಪರ 100ನೇ ಪಂದ್ಯವನ್ನು ಆಡಿದ ಬ್ರಾವೋ ನಾಲ್ಕು ಓವರ್ ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ದೀಪಕ್ ಚಾಹರ್ ಎರಡು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಮುಂಬೈ ತಂಡ ಮುನ್ನಡೆಸಲಿದ್ದಾರೆ. ಅನ್ ಮೋಲ್ಪ್ರೀತ್ ಸಿಂಗ್ ಈ ಪಂದ್ಯದಿಂದ ಮುಂಬೈ ಪರ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಮುಂಬೈ ಪರ ಜಸ್ಪ್ರಿತ್ ಬುಮ್ರಾ ಅವರಿಗೆ ಇದು ನೂರನೇ ಪಂದ್ಯವಾಗಿತ್ತು.

ಇನ್ನಿಂಗ್ಸ್ ಆರಂಭಿಸಿದ ಚೆನ್ನೈ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಟಗಾರ ಫಾಫ್ ಅವರನ್ನು ಮೊದಲ ಓವರ್ ನಲ್ಲಿ ಪೆವಿಲಿಯನ್ ಗೆ ಕಳುಹಿಸುವಲ್ಲಿ ಬೋಲ್ಟ್ ಸಫಲರಾದರು. ಆಲ್ ರೌಂಡರ್ ಮೋಯಿನ್ ಅಲಿ ಮಿಲ್ನೆ ತೋಡಿದ ಖೆಡ್ಡಾಗೆ ಬಲಿಯಾದರು. ಅಂಬಟಿ ರಾಯುಡು ಗಾಯದ ಸಮಸ್ಯೆಯಿಂದ ಅಂಗಳದಿಂದ ಹೊರ ನಡೆದರು.

ಮುಂಬೈ ಬೌಲರ್ ಗಳು ಪವರ್ ಪ್ಲೇ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳದರು. ಮೊದಲ ಆರು ಓವರ್ ಗಳಲ್ಲಿ ಚೆನ್ನೈ ಸ್ಟಾರ್ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ನೆರವಾದವರು. ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ರವೀಂದ್ರ ಜಡೇಜಾ. ಈ ಜೋಡಿ ಮುಂಬೈ ಬೌಲರ್ ಗಳನ್ನು ಕಾಡುತ್ತಾ ಇನ್ನಿಂಗ್ಸ್ ಕಟ್ಟಿತು. ಸುಮಾರ 11 ಓವರ್ ವಿಕೆಟ್ ಬೀಳದಂತೆ ಬ್ಯಾಟ್ ಮಾಡಿದ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು. ಈ ಜೋಡಿ 79 ರನ್ ಗಳ ಕಾಣಿಕೆ ನೀಡಿತು. ಜಡೇಜಾ 33 ಎಸೆತಗಳಲ್ಲಿ 26 ರನ್ ಸಿಡಿಸಿದರು.

ಇನ್ನು ಡ್ವೇನ್ ಬ್ರಾವೊ ತಮ್ಮ ಅನುಭವ ಬಳಸಿ ಬ್ಯಾಟ್ ಮಾಡಿದರು. ಅಲ್ಲದೆ 8 ಎಸೆತಗಳಲ್ಲಿ 23 ರನ್ ಬಾರಿಸಿದರು.

ಯುವ ಆಟಗಾರ ರುತುರಾಜ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 58 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 88 ಬಾರಿಸಿ ಅಜೇಯರಾಗುಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com