ಸೋಲಿನ ಸುಳಿಯಲ್ಲಿದ್ದ ಭಾರತದ ನೆರವಿಗೆ ಧಾವಿಸಿದ 'ದಿ ವಾಲ್'; ಡ್ರೆಸಿಂಗ್ ರೂಂನಿಂದ ಓಡಿ ಬಂದು ದೀಪಕ್ ಚಹರ್ ಗೆ ದ್ರಾವಿಡ್ ಕಿವಿಮಾತು!
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಕೈ ತಪ್ಪಿ ಹೋಗಿದ್ದ ಜಯವನ್ನು ಅಕ್ಷರಶಃ ಮರಳಿಸಿದ್ದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ದೀಪಕ್ ಚಹರ್.. ಆದರೆ ದೀಪಕ್ ಚಹರ್ ರ ಈ ಭರ್ಜರಿ ಬ್ಯಾಟಿಂಗ್ ಗೆ ಕಾರಣ ಮಾತ್ರ ಕೋಚ್ ರಾಹುಲ್ ದ್ರಾವಿಡ್..
Published: 21st July 2021 01:07 PM | Last Updated: 21st July 2021 01:26 PM | A+A A-

ದೀಪಕ್ ಚಹರ್-ರಾಹುಲ್ ದ್ರಾವಿಡ್
ಕೊಲಂಬೋ: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಕೈ ತಪ್ಪಿ ಹೋಗಿದ್ದ ಜಯವನ್ನು ಅಕ್ಷರಶಃ ಮರಳಿಸಿದ್ದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ದೀಪಕ್ ಚಹರ್.. ಆದರೆ ದೀಪಕ್ ಚಹರ್ ರ ಈ ಭರ್ಜರಿ ಬ್ಯಾಟಿಂಗ್ ಗೆ ಕಾರಣ ಮಾತ್ರ ಕೋಚ್ ರಾಹುಲ್ ದ್ರಾವಿಡ್..
ಲಂಕಾ ನೀಡಿದ್ದ 276 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 36 ಓವರ್‌ಗಳಲ್ಲಿ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ಅತ್ಯಂತ ನಿರ್ಣಾಯಕ ಪ್ರದರ್ಶನ ಜೊತೆಯಾಟವನ್ನು ನೀಡಿದ್ದಲ್ಲದೆ ಅಸಾಧ್ಯವಾಗಿದ್ದ ಗೆಲುವನ್ನು ಸಾಧ್ಯವಾಗಿಸಿದ್ದರು. ಪ್ರಮುಖವಾಗಿ ಅಜೇಯ 69 ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ದೀಪಕ್ ಚಹರ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಇದನ್ನೂ ಓದಿ: ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್: ವಿಶ್ವದಾಖಲೆ ನಿರ್ಮಿಸಿದ ಭಾರತದ ದೀಪಕ್ ಚಾಹರ್
ಆದರೆ ದೀಪಕ್ ಚಹರ್ ರ ಈ ಅದ್ಭುತ ಇನ್ನಿಂಗ್ಸ್ ನ ಹಿಂದೆ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಶ್ರಮವಿದೆ. ಅತ್ತ ಭಾರತ ತಂಡದ ಬ್ಯಾಟ್ಸ್ ಮನ್ ಗಳು ನಿಯಮಿತವಾಗಿ ಔಟ್ ಆಗುತ್ತಿದ್ದಂತೆಯೇ ಡ್ರೆಸಿಂಗ್ ರೂಂ ನಿಂದ ನೇರವಾಗಿ ಆಟಗಾರರಿದ್ದ ಡಗೌಟ್ ಓಡಿ ಬಂದ ರಾಹುಲ್ ದ್ರಾವಿಡ್ ನೇರ ರಾಹುಲ್ ಚಹರ್ ಬಳಿ ಹೋಗಿ ಮಾತನಾಡಿದ್ದರು. ಇದನ್ನು ಅಲ್ಲಿದ್ದ ಕ್ಯಾಮೆರಾಗಳೂ ಕೂಡ ಸೆರೆ ಹಿಡಿದಿದ್ದವು. ಬಳಿಕ ರಾಹುಲ್ ಚಹರ್ ದ್ರಾವಿಡ್ ಹೇಳಿದ್ದನ್ನು ದೀಪಕ್ ಚಹರ್ ಗೆ ಹೇಳಿದ್ದರು.
Finally Rahul Dravid pic.twitter.com/qfOmB8BhWC
— Wellu (@Wellutwt) July 20, 2021
ಇದಾದ ಬಳಿಕ ಕ್ರೀಸ್ ಗೆ ಇಳಿದಿದ್ದ ಚಹರ್ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರಾದರೂ, ಬಳಿಕ ಕ್ರೀಸ್ ಗೆ ಅಂಟಿಕೊಂಡು ನಿಧಾನವಾಗಿ ಲಂಕಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ನೋಡ ನೋಡುತ್ತಲೇ ಅರ್ಧಶತಕ ಸಿಡಿಸಿದ ಚಹರ್ ಅಂತಿಮ ಓವರ್ ನ ಮೊದಲ ಎಸೆತದಲ್ಲೇ ಬೌಂಡರಿ ಗಿಟ್ಟಿಸಿ ತಂಡಕ್ಕೆ ರೋಚಕ ಗೆಲುವು ತಂದಿತ್ತರು. ಚಹರ್ 82 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ ಅಜೇಯ 69 ರನ್ ಗಳಿಸಿದರು.
ಇಷ್ಟಕ್ಕೂ ರಾಹುಲ್ ದ್ರಾವಿಡ್ ಚಹರ್ ಗೆ ಹೇಳಿದ್ದೇನು?
ದೀಪಕ್ ಚಹರ್ ಬ್ಯಾಟಿಂಗ್‌ನಲ್ಲಿ ತಮ್ಮ ಅಮೋಘ ಪ್ರದರ್ಶನದ ಬಳಿಕ ಮಾತನಾಡಿ, ತಮ್ಮ ಈ ಪ್ರದರ್ಶನಕ್ಕೆ ಕೋಚ್ ರಾಹುಲ್ ದ್ರಾವಿಡ್ ಅವರು ನನ್ನ ಬ್ಯಾಟಿಂಗ್ ಮೇಲೆ ಇಟ್ಟಿದ್ದ ನಂಬಿಕೆಯೇ ಕಾರಣ ಎಂದಿದ್ದಾರೆ. ದ್ರಾವಿಡ್ ಅವರು ಇಟ್ಟಿದ್ದ ಭರವಸೆಯ ಕಾರಣದಿಂದಾಗಿ ತಾನು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಎಲ್ಲಾ ಎಸೆತಗಳನ್ನು ಆಡು
"ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸುವುದಕ್ಕಿಂತ ಸಂತಸದ ಸಂಗತಿ ಮತ್ತೊಂದಿಲ್ಲ. ರಾಹುಲ್ ಸರ್ ನನಗೆ ಎಲ್ಲಾ ಎಸೆತಗಳನ್ನು ಕೂಡ ಆಡುವಂತೆ ಹೇಳಿದ್ದರು. ನಾನು ಅವರೊಂದಿಗೆ ಭಾರತ ಎ ತಂಡದಲ್ಲಿ ಕೆಲ ಪಂದ್ಯಗಳನ್ನು ಆಡಿದ್ದೆ. ಅವರಿಗೆ ನನ್ನ ಮೇಲೆ ಭರವಸೆಯಿತ್ತೆಂಬ ನಂಬಿಕೆಯಿದೆ. ನಾನು ಏಳನೇ ಕ್ರಮಾಂಕದಲ್ಲಿ ಇಳಿಯುವಷ್ಟು ಉತ್ತಮ ಬ್ಯಾಟಿಂಗ್ ಹೊಂದಿದ್ದೇನೆ ಎಂದು ಅವರು ನನಗೆ ಹೇಳಿದ್ದರು. ಈ ಪಿಚ್‌ನಲ್ಲಿ ಬೆನ್ನಟ್ಟಲು ಇದು ಉತ್ತಮವಾದ ಸ್ಕೋರ್ ಆಗಿತ್ತು. ಆಗ ನನ್ನ ತಲೆಯಲ್ಲಿ ಓಡುತ್ತಿದ್ದ ಒಂದೇ ಸಂಗತಿಯೆಂದರೆ ಇದೇ ರೀತಿಯ ಇನ್ನಿಂಗ್ಸ್‌ಗಾಗಿ ನಾನು ಕನಸು ಕಾಣುತ್ತಿದ್ದೆ ಎಂದು. 50 ರನ್‌ಗಳಿಗಿಂತ ಕಡಿಮೆ ಅಂತರಕ್ಕೆ ಬಂದಾಗ ನಾವು ಗೆಲ್ಲಬಹುದು ಎಂಬ ಭರವಸೆ ಮೂಡಿತ್ತು. ಅದಕ್ಕೂ ಮುನ್ನ ಪ್ರತಿ ಎಸೆತವನ್ನೂ ಎಚ್ಚರಿಕೆಯಿಂದ ಎದುರಿಸುತ್ತಿದ್ದೆವು. ಅದಾದ ಬಳಿಕ ನಾನು ಕೆಲ ಸವಾಲಿನ ಹೊಡೆತಗಳನ್ನು ಬಾರಿಸಿದೆ" ಎಂದು ದೀಪಕ್ ಚಹರ್ ಹೇಳಿದ್ದಾರೆ.