ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟ; ಒಂದೇ ಸಮಯದಲ್ಲಿ 2 ದೇಶಗಳ ವಿರುದ್ಧ ಸೆಣಸಾಟ, ಕ್ರಿಕೆಟ್ ಇತಿಹಾಸದಲ್ಲೇ ಇದು ಅಪರೂಪ!

ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಜುಲೈ 13ರಿಂದ 25ರವರೆಗೆ ಏಕದಿನ ಮತ್ತು ಟಿ20 ಸರಣಿ ನಡೆಯಲಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಜುಲೈ 13ರಿಂದ 25ರವರೆಗೆ ಏಕದಿನ ಮತ್ತು ಟಿ20 ಸರಣಿ ನಡೆಯಲಿದೆ.

ಮುಂಬರುವ ಜುಲೈ 13 ರಿಂದ 25ರವರೆಗೆ ಈ ಸರಣಿ ನಡೆಯಲಿದ್ದು, ಸರಣಿ ವೇಳೆ 3 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ಸೆಣಸಲಿವೆ. ಜುಲೈ 13, 16 ಮತ್ತು 18ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಜುಲೈ 21, 23 ಮತ್ತು 25ರಂದು ಟಿ20 ಪಂದ್ಯಗಳು  ನಡೆಯಲಿವೆ. ಈ ಸರಣಿ ಸೋನಿ ಸ್ಪೋರ್ಟ್ಟ್ ನಲ್ಲಿ ಪ್ರಸಾರವಾಗಲಿದೆ. ಈ ಸರಣಿಗೆ ಸೋನಿ ಸಂಸ್ಥೆ ಪ್ರಾಯೋಜಕತ್ವ ವಹಿಸಿದೆ.

ಒಂದೇ ಸಮಯದಲ್ಲಿ 2 ದೇಶಗಳ ವಿರುದ್ಧ ಸೆಣಸಾಟ
ಅಂದಹಾಗೆ ಟೀಂ ಇಂಡಿಯಾ ಇದೇ ಜೂನ್ 18 ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲ್ಲಿದ್ದು, ಬಳಿಕ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದೆ. ಇಂಗ್ಲೆಂಡ್ ನಲ್ಲಿ ಭಾರತ ತಂಡ ಆಗಸ್ಚ್ 4ರಿಂದ ಏಕದಿನ, ಟಿ20 ಮತ್ತು ಟೆಸ್ಟ್  ಸರಣಿಗಳನ್ನು ಆಡಲಿದೆ. ಅರೆ ಇದೇನಿದು ಜುಲೈನಲ್ಲಿ ಒಂದೆಡೆ ಇಂಗ್ಲೆಂಡ್ ಪ್ರವಾಸ ಮತ್ತೊಂದೆಡೆ ಶ್ರೀಲಂಕಾ ಪ್ರವಾಸ. ಇದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಇದು ಸತ್ಯ.

ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಂತೆಯೇ ಇತ್ತ ಟೀಂ ಇಂಡಿಯಾದ ಮತ್ತೊಂದು ತಂಡ ಲಂಕಾ  ಪ್ರವಾಸದಲ್ಲಿ ಪಾಲ್ಗೊಳ್ಳಲಿದೆ. ಈ ತಂಡವನ್ನು ಶಿಖರ್ ಧವನ್ ಅಥವಾ ಹಾರ್ದಿಕ್ ಪಾಂಡ್ಯಾ ಮುನ್ನಡೆಸುವ ಸಾಧ್ಯತೆ ಇದೆ. ಅಂತೆಯೇ ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಕೂಡ ಸರಣಿಗೆ ಆಯ್ಕೆಯಾಗಿದ್ದು, ಅವರಿಗೂ ಕೂಡ ಲಂಕಾ ಪ್ರವಾಸದ ನಾಯಕತ್ವ ನೀಡುವ ಸಾಧ್ಯತೆ ಇದೆ.

ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ!
ಇನ್ನು ಒಂದೇ ಸಮಯದಲ್ಲಿ ಒಂದು ತಂಡ ಎರಡು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯಾಗಿದೆ. 
 

Related Stories

No stories found.

Advertisement

X
Kannada Prabha
www.kannadaprabha.com